Site icon Vistara News

Karnataka Drought : ಕರ್ನಾಟಕದಲ್ಲಿ ಈ ವರ್ಷ ಎದುರಾಗಲಿದೆ ಆಹಾರ ಕೊರತೆ!

Food Scarcity in Karnataka and Krishna Byregowda

ಬೆಂಗಳೂರು: ರಾಜ್ಯದಲ್ಲಿ ಈ ಬಾರಿಯ ಬರದಿಂದಾಗಿ (Karnataka Drought) ನಮಗೆ ಆಹಾರ ಕೊರತೆ (Food Scarcity) ಎದುರಾಗಲಿದೆ. ಯಾವ ಬೆಳೆ? ಎಷ್ಟು ಪ್ರಮಾಣ? ಎಂಬ ನಿಟ್ಟಿನಲ್ಲಿ ಇನ್ನೂ ಲೆಕ್ಕ ಸಿಕ್ಕಿಲ್ಲ. ಇದರ ಸಂಬಂಧ ಅಂಕಿ-ಅಂಶಗಳನ್ನು ಪಡೆಯಲು ಸೂಚನೆ ನೀಡಿದ್ದೇವೆ. ಆ ನಿಟ್ಟಿನಲ್ಲಿ ಲೆಕ್ಕಾಚಾರ ಹಾಕಲಾಗುವುದು ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ (Revenue Minister Krishna ByreGowda) ಹೇಳಿದ್ದಾರೆ.

ವಿಧಾನಸೌಧದಲ್ಲಿ ಗುರುವಾರ (ಅಕ್ಟೋಬರ್‌ 5) ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಕಂದಾಯ ಸಚಿವ ಕೃಷ್ಣ ಬೈರೇಗೌಡ, ಈ ವರ್ಷ ಮುಂಗಾರು ಕೈಕೊಟ್ಟಿದೆ. ಅಲ್ಲದೆ, ಹಿಂಗಾರು ಮಳೆ ಕೂಡ ವಾಡಿಕೆಗಿಂತ ಕಡಿಮೆ ಆಗಲಿದೆ. ರಾಜ್ಯದಲ್ಲಿ ಶೇಕಡಾ 28ರಷ್ಟು ಮಳೆ ಕೊರತೆಯಾಗಿದೆ. ನಾವು ಕೊಟ್ಟ ಬರದ ವರದಿ ಬಗ್ಗೆ ಕೇಂದ್ರ ಬರ ಅಧ್ಯಯನ ಅಧಿಕಾರಿಗಳು ಧನಾತ್ಮಕವಾಗಿ ಪ್ರತಿಕ್ರಿಯೆ ನೀಡಿದ್ದಾರೆ. ಅವರು ಕೇಳಿದ ಎಲ್ಲ ಅಂಕಿ ಅಂಶಗಳನ್ನು ‌ನಾವು ಕೊಟ್ಟಿದ್ದೇವೆ. ಮಳೆ ಅಳತೆ‌ ಮಾಡುವ ವ್ಯವಸ್ಥೆ ನಮ್ಮಲ್ಲಿ ಚೆನ್ನಾಗಿದೆ. ನಿಖರವಾದ ಅಂಕಿ-ಅಂಶಗಳನ್ನು ‌ನಾವು ಕೊಟ್ಟಿದ್ದೇವೆ ಎಂದು ತಿಳಿಸಿದರು.

ಇದನ್ನೂ ಓದಿ: Shivamogga Violence : ನಾವೇನು ಟೆರರಿಸ್ಟಾ? ಬಿಜೆಪಿ ಸತ್ಯಶೋಧನ ತಂಡದ ಮುಂದೆ ಗಾಯಾಳು ಅಳಲು!

4800 ಕೋಟಿ ರೂಪಾಯಿ ಪರಿಹಾರಕ್ಕೆ ಮನವಿ

ನಾವು ಕೇಂದ್ರ ಸರ್ಕಾರದ ಬಳಿ 4800 ಕೋಟಿ ರೂಪಾಯಿ ಪರಿಹಾರ ನೀಡುವಂತೆ ಮನವಿ ಮಾಡಿದ್ದೇವೆ. ಮಾರ್ಗಸೂಚಿ ಪ್ರಕಾರ ನಾವು ಇಷ್ಟೇ ಪರಿಹಾರ ಕೇಳಲು ಆಗುತ್ತದೆ. ರಾಜ್ಯದಲ್ಲಿ ನಾವು ಮೊದಲು ಬರ ಘೋಷಣೆ ‌ಮಾಡಿದ್ದೇವೆ. ನಮಗಿಂತ ಹೆಚ್ಚು ಮಳೆ ಕೊರತೆ ಬೇರೆ ರಾಜ್ಯದಲ್ಲಿ ಇದೆ. ಆದರೆ ಬರ ಘೋಷಣೆಯನ್ನು ನಾವೇ ಮೊದಲಿಗೆ ಮಾಡಿದ್ದೇವೆ. ನಾವು ಬರದ ಬಗ್ಗೆ ಹೆಚ್ಚು ಗಮನ ಹರಿಸಿದ್ದೇವೆ. ನ್ಯಾಯಯುತವಾಗಿ ಕೇಂದ್ರ ಸರ್ಕಾರ ಸ್ಪಂದಿಸುವ ಕೆಲಸ ಕೇಂದ್ರ ಮಾಡುತ್ತದೆ ಎಂಬ ಭರವಸೆ ನಮಗೆ ಇದೆ ಎಂದು ಸಚಿವ ಕೃಷ್ಣಬೈರೇಗೌಡ ಹೇಳಿದರು.

13 ಜಿಲ್ಲೆಗಳಿಗೆ ಕೇಂದ್ರ ಅಧಿಕಾರಿಗಳ ತಂಡ ಭೇಟಿ‌

ಈಗಾಗಲೇ 195 ತಾಲೂಕನ್ನು ಬರ (Drought Taluk) ಅಂತ ಘೋಷಣೆ ಮಾಡಿದ್ದೇವೆ. ಸಚಿವ ಸಂಪುಟದಲ್ಲಿ ಅನುಮೋದನೆ ಕೂಡ ಆಗಿತ್ತು. ಕೇಂದ್ರ ಸರ್ಕಾರಕ್ಕೆ ಬರದ ಮನವಿ ಸಲ್ಲಿಸಿದ್ದೆವು. ಆನ್‌ಲೈನ್ ಮುಖಾಂತರ ಸಲ್ಲಿಕೆ ಮಾಡಿದ್ದೇವೆ. ಸೆಪ್ಟೆಂಬರ್ 23ರಂದು ಕೇಂದ್ರ ಗೃಹ ಸಚಿವರು, ಕೃಷಿ ಸಚಿವರ ಸಮಯ ಕೇಳಿದ್ದೆವು. ನಮಗೆ ಸಮಯ ಕೊಟ್ಟಿಲ್ಲ. ನಮ್ಮ ಮನವಿ ಮೇಲೆ ಕೇಂದ್ರ ಬರ ತಂಡ ರಾಜ್ಯಕ್ಕೆ ಬಂದಿದೆ. ಕೇಂದ್ರದ ಅಧಿಕಾರಿ ಅಜಿತ್ ಕುಮಾರ್ ಸಾಹೂ‌ ನೇತೃತ್ವದಲ್ಲಿ ತಂಡ ಬಂದಿದೆ. ರಾಜ್ಯದ ಬರ ಸ್ಥಿತಿ ಬಗ್ಗೆ ವಿವರಣೆ ನೀಡಿದ್ದೇವೆ. ರೈತರಿಗೆ ಆಗಿರುವ ಸಂಕಷ್ಟ ಗಮನಕ್ಕೆ ತಂದಿದ್ದೇವೆ. ಅಂಕಿ ಅಂಶಗಳ ಮನವರಿಕೆ ಮಾಡಿದ್ದೇವೆ. ಇವತ್ತಿನಿಂದ ಮೂರು ತಂಡಗಳಾಗಿ 13 ಜಿಲ್ಲೆಗಳಿಗೆ ಭೇಟಿ‌ ಮಾಡುತ್ತಾರೆ. ಇವರ ಜತೆಗೆ ಹೋಗಲು ರಾಜ್ಯದ ಕೃಷಿ ವಿವಿ ಅಧಿಕಾರಿಗಳನ್ನೂ ನೇಮಕ ಮಾಡಿದ್ದೇವೆ ಎಂದು ಸಚಿವ ಕೃಷ್ಣ ಬೈರೇಗೌಡ ಮಾಹಿತಿ ನೀಡಿದರು.

ಆಗಸ್ಟ್‌ ತಿಂಗಳ ಮಳೆ ಕೊರತೆಯಿಂದ ಕೃಷಿಗೆ ಪೆಟ್ಟು

ಆಗಸ್ಟ್ ತಿಂಗಳಲ್ಲಿ ಶೇಕಡಾ 73ರಷ್ಟು ಮಳೆ ಕೊರತೆ ಆಗಿದೆ. ಇದರಿಂದಾಗಿ ಕೃಷಿ ಚಟುವಟಿಕೆಗೆ ತೀವ್ರ ಪೆಟ್ಟು‌ ಬಿದ್ದಿದೆ. ಈಗ ಬೆಳೆ ಇಳುವರಿ ನಿರೀಕ್ಷೆ ಮಾಡಲು‌ ಸಾಧ್ಯವಿಲ್ಲ. ಹಸಿರು ಬರ ನಮಗೆ ಬಂದಿದೆ. ರೈತರು ಮತ್ತು ತಜ್ಞರ ಜತೆ ಮಾತನಾಡಿ ಬರ ಅಧ್ಯಯನ ಮಾಡಲಾಗಿದೆ. ಜೋಳ, ತೊಗರಿ, ಶೇಂಗಾ ಎಲ್ಲ ಬೆಳೆ ಇದೆ. ಆದರೆ, ಇಳುವರಿ ಮಾತ್ರ ಇಲ್ಲ. ಆಳವಾಗಿ ಅಧ್ಯಯನ ಮಾಡಲು‌ ಕೇಂದ್ರದ ತಂಡಕ್ಕೆ ಮನವಿ ಮಾಡಿದ್ದೇವೆ ಎಂದು ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು.

ಮೂರು ದಿನಗಳ ಕಾಲ ಅಧ್ಯಯನ

ಮೂರು ದಿನಗಳ ಕಾಲ ರಾಜ್ಯದ ಅಧ್ಯಯನ ನಡೆಯುತ್ತದೆ. ಬಳಿಕ ಮತ್ತೆ ಸಭೆ ನಡೆಯಲಿದೆ. ಬರದ ಮಾರ್ಗಸೂಚಿ ಬದಲಾವಣೆಗೆ ಮನವಿ ಮಾಡಿದ್ದೇವೆ. 195 ತಾಲೂಕುಗಳ ಬರ ಘೋಷಣೆ ಅಂತಿಮವಲ್ಲ. ಮತ್ತೆ 32 ತಾಲೂಕಿನಲ್ಲಿ ಮಳೆ ಕೊರತೆ ಇದೆ. ಮತ್ತೆ ಸಭೆ ಸೇರಿ ಎರಡನೇ ಪಟ್ಟಿ ಬಿಡುಗಡೆ ‌ಮಾಡುತ್ತೇವೆ ಎಂದು ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು.

ನಮಗೆ ಹಸಿರು ಬರ ಬಂದಿದೆ

ಕೃಷಿ ಸಚಿವ ಚಲುವರಾಯಸ್ವಾಮಿ‌ ಮಾತನಾಡಿ, ಮಳೆ ಕೊರತೆ ಇದೆ. ಈ ನಡುವೆ ಬೆಳೆ ಕಾಣುತ್ತದೆ. ಆದರೆ, ಇಳುವರಿ ಇಲ್ಲ. ಹಸಿರು ಬರ ನಮಗೆ ಬಂದಿದೆ. ಕೇಂದ್ರದ ಅಧಿಕಾರಿಗಳ ‌ಮುಂದೆ ನಾವು ಮನವಿ‌ ಮಾಡಿದ್ದೇವೆ. ದಾರಿಯಲ್ಲಿ ನೋಡಿದರೆ ಹಸಿರು ಕಾಣಿಸುತ್ತದೆ. ಇಳುವರಿ ಕೊರತೆ ಇದೆ. ಅದರ ಬಗ್ಗೆ ಮಾಹಿತಿ‌ ಹಂಚಿಕೊಂಡಿದ್ದೇವೆ ಎಂದು ಹೇಳಿದರು.

ಈ 13 ಜಿಲ್ಲೆಗಳಲ್ಲಿ ಕೇಂದ್ರ ತಂಡದ ಪ್ರವಾಸ

ಇದನ್ನೂ ಓದಿ: Karnataka Drought : ಕಾಡುತ್ತಿದೆ ಹಸಿರು ಬರ; ರೈತರ ಹಿತ ಕಾಪಾಡಿ: ಕೇಂದ್ರ ತಂಡಕ್ಕೆ ಸಿಎಂ ಸಿದ್ದರಾಮಯ್ಯ ಸಲಹೆ

ಈ ಜಿಲ್ಲೆಗಳಲ್ಲಿ ಕೇಂದ್ರದ ಅಧ್ಯಯನ ತಂಡವು ಪ್ರವಾಸ ಮಾಡಲಿದ್ದು, ನೀರಿನ ಸ್ಥಿತಿಗತಿಗಳು ಹೇಗಿವೆ? ಹಸಿರಿನ ವಾತಾವರಣ ಇದೆಯೇ? ಬೆಳೆಗಳು ಒಣಗಿವೆಯೇ? ಎಷ್ಟು ಬೆಳೆಗಳು ನಾಶವಾಗಿವೆ? ಎಂಬಿತ್ಯಾದಿ ಅಂಶಗಳನ್ನು ಅಧ್ಯಯನ ಮಾಡಲಿವೆ.

Exit mobile version