ಬೆಳಗಾವಿ: ಭೀಕರ ಬರಕ್ಕೆ ರಾಜ್ಯದ ಬಹುತೇಕ ಭಾಗ (Karnataka Drought) ತುತ್ತಾಗಿದೆ. ಅಲ್ಲದೆ, 236 ತಾಲೂಕುಗಳಲ್ಲಿ 223 ತಾಲೂಕುಗಳನ್ನು ಈಗಾಗಲೇ ಬರಪೀಡಿತ ತಾಲೂಕುಗಳು ಎಂದು ಘೋಷಿಸಲಾಗಿದೆ. ಮಳೆ ಇಲ್ಲದೆ ಬೆಳೆದ ಬೆಳೆ ಕೈಗೆ ಸಿಗದೆ ರೈತ ಕಂಗಾಲಾಗಿದ್ದಾನೆ. ಈ ಹಿನ್ನೆಲೆಯಲ್ಲಿ ರೈತರಿಗೆ ಅವರ ಜಮೀನಿಗೆ ಅನುಗುಣವಾಗಿ 2 ಸಾವಿರ ರೂಪಾಯಿವರೆಗೆ ಬೆಳೆ ಪರಿಹಾರ ಹಣವನ್ನು (Crop Compensation Money) ಡಿಬಿಟಿ ಮೂಲಕ ನೇರವಾಗಿ ಜಮೆ ಮಾಡುವುದಾಗಿ ಈಚೆಗೆ ಸಿಎಂ ಸಿದ್ದರಾಮಯ್ಯ (CM Siddaramaiah) ಘೋಷಣೆ ಮಾಡಿದ್ದರು. ಈಗ ಈ ಬಗ್ಗೆ ಕಂದಾಯ ಸಚಿವ ಕೃಷ್ಣ ಬೈರೇಗೌಡ (Revenue Minister Krishna Byre Gowda) ಸ್ಪಷ್ಟನೆ ನೀಡಿದ್ದು, ಮುಂದಿನ ವಾರದಲ್ಲಿ ಭಾಗಶಃ ರೈತರಿಗೆ ನೇರವಾಗಿ 2 ಸಾವಿರ ರೂಪಾಯಿ ವರೆಗೆ ಪರಿಹಾರದ ಹಣವನ್ನು ವರ್ಗಾವಣೆ ಮಾಡಲಾಗುವುದು ಎಂದು ಹೇಳಿದ್ದಾರೆ.
ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಬಿಜೆಪಿ ಸದಸ್ಯ ಎನ್. ರವಿಕಮಾರ್ ಅವರು ಬರದ ಪರಿಹಾರದ ಬಗ್ಗೆ ಪ್ರಶ್ನೆ ಕೇಳಿದ್ದರು. ರೈತರಿಗೆ ಯಾವಾಗ ಬರ ಪರಿಹಾರ ನೀಡಲಾಗುತ್ತದೆ ಎಂದು ಪ್ರಶ್ನಿಸಿದ್ದರು. ಇದಕ್ಕೆ ಉತ್ತರಿಸಿದ ಸಚಿವ ಕೃಷ್ಣ ಬೈರೇಗೌಡ, ಈ ವರ್ಷ ಬರದಿಂದ ಜನರು ಸಾಕಷ್ಟು ಸಮಸ್ಯೆಯನ್ನು ಎದುರಿಸಿದ್ದಾರೆ. ಇದು ನಮ್ಮ ಗಮನಕ್ಕೆ ಬಂದಿದೆ. ರೈತರಿಗೆ ಅನುಕೂಲವಾಗುವಂತೆ ಸರ್ಕಾರ ಏನೆಲ್ಲ ಮಾಡಬೇಕೋ? ಯಾವೆಲ್ಲ ಕ್ರಮಗಳನ್ನು ತೆಗೆದುಕೊಳ್ಳಬೇಕೋ? ಅದನ್ನು ನಾವು ನಿರಂತರವಾಗಿ ಮಾಡುತ್ತಾ ಬಂದಿದ್ದೇವೆ ಎಂದು ಹೇಳಿದರು.
ಇದನ್ನೂ ಓದಿ: Veer Savarkar: ನನಗೆ ಬಿಟ್ಟರೆ ಇವತ್ತೇ ಸಾವರ್ಕರ್ ಫೋಟೊ ತೆಗೆದು ಹಾಕ್ತೇನೆ: ಸಚಿವ ಪ್ರಿಯಾಂಕ್ ಖರ್ಗೆ
ಸಿಎಂ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ರಾಜ್ಯ ವಿಪತ್ತು ಪ್ರಾಧಿಕಾರ ಮೂರು ಸಭೆಯನ್ನು ನಡೆಸಿದೆ. ಸಂಪುಟ ಉಪ ಸಮಿತಿ ಸಹ ಇದಕ್ಕಾಗಿ ಕೆಲಸ ಮಾಡಿದೆ. ಈಗಾಗಲೇ 10 ಸಭೆಗಳನ್ನು ಬರದ ಸಲುವಾಗಿ ಮಾಡಿದ್ದೇವೆ. ದೇಶದ 12 ರಾಜ್ಯಗಳಲ್ಲಿ ಮುಂಗಾರು ಅವಧಿಯ ಬರಗಾಲ ಇದೆ. 18 ರಾಜ್ಯಗಳಲ್ಲಿ ಹಿಂಗಾರು ಅವಧಿಯಲ್ಲಿ ಬರಗಾಲ ಆವರಿಸಿದೆ. ಮುಂಗಾರು ಅವಧಿಯಲ್ಲಿ ಸೆಪ್ಟೆಂಬರ್ 13 ರಂದೇ ರಾಜ್ಯದಲ್ಲಿ ಬರಗಾಲ ಘೋಷಣೆ ಆಗಿತ್ತು. ಬೇರೆ ರಾಜ್ಯಗಳು ನಾವು ಘೋಷಿಸಿದ 2 ತಿಂಗಳ ನಂತರ ಘೋಷಣೆ ಮಾಡಿವೆ. ನಾವು ಎಲ್ಲರಿಗಿಂತ ಮೊದಲೇ ಬರವನ್ನು ಘೋಷಣೆ ಮಾಡಿದ್ದೇವೆ ಎಂದು ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು.
ಗೋಶಾಲೆ ಆರಂಭಕ್ಕೆ ಸೂಚಿಸಲಾಗಿದೆ
ಸೆಪ್ಟೆಂಬರ್ 22 ರಂದು ಮೊದಲ ಮನವಿಯನ್ನು ಕೇಂದ್ರಕ್ಕೆ ಮಾಡಿದ್ದೇವೆ. ಮೇವಿನ ಕೊರತೆ ಬರಬಹುದು ಎಂದು 7 ಲಕ್ಷ ಬಿತ್ತನೆ ಬೀಜದ ಕಿಟ್‌ಗಳನ್ನು ಬರಪೀಡಿತ ತಾಲೂಕುಗಳಲ್ಲಿ ರೈತರಿಗೆ ಕೊಟ್ಟಿದ್ದೇವೆ. 90 ವಸತಿ ಪ್ರದೇಶಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ. ಅದರಲ್ಲಿ 60 ಕಡೆ ಖಾಸಗಿ ಬೋರ್ವೆಲ್ ಬಾಡಿಗೆ ಪಡೆದಿದ್ದು, 25 ಕಡೆ ಟ್ಯಾಂಕರ್ ವ್ಯವಸ್ಥೆ ಮಾಡಲಾಗಿದೆ. ಚಿತ್ರದುರ್ಗ ಸೇರಿ ಕೆಲವಡೆ ಹೆಚ್ಚಿನ ಸಮಸ್ಯೆ ಇದೆ, ಅಲ್ಲಿ ಗೋಶಾಲೆ ಆರಂಭಕ್ಕೆ ಸೂಚಿಸಲಾಗಿದೆ. ಜಿಲ್ಲಾಡಳಿತಗಳ ಬಳಿ 894 ಕೋಟಿ ಹಣವನ್ನು ಸಿದ್ಧವಿಟ್ಟಿದ್ದೇವೆ. ಕುಡಿಯುವ ನೀರಿನ ಸಮಸ್ಯೆ ಆದ 24 ಗಂಟೆಯ ಒಳಗೆ ಟ್ಯಾಂಕರ್ ಮೂಲಕವಾದರೂ ಪೂರೈಸಿ ಸಮಸ್ಯೆ ಪರಿಹಾರಕ್ಕೆ ಸೂಚಿಸಿದ್ದೇವೆ ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು.
ಇದನ್ನೂ ಓದಿ: Belagavi Winter Session: ಮುಂದಿನ ವರ್ಷ 8ನೇ ತರಗತಿಗೆ ಉಚಿತ ಸೈಕಲ್: ಸಚಿವ ಮಧು ಬಂಗಾರಪ್ಪ
ಕೇಂದ್ರದಿಂದ ನಮಗೆ ಹಣ ಬರಬೇಕು
ರಾಜ್ಯದ ರೈತರ ಸ್ಥಿತಿಗತಿ ಕಷ್ಟವಿದೆ. ಈ ಬಗ್ಗೆ ನಾವು ಬರ ಅಧ್ಯಯನಕ್ಕೆ ಬಂದ ತಂಡಕ್ಕೂ ಮನವರಿಕೆ ಮಾಡಿದ್ದೇವೆ. ರಾಜ್ಯಕ್ಕೆ ಬರಬೇಕಾದ ಹಣವನ್ನು ಬೇಗ ಬಿಡುಗಡೆ ಮಾಡಿ ಎಂದು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದೆವು, ಅವರು ಇನ್ನೂ ಈ ಬಗ್ಗೆ ಯಾವುದೇ ತೀರ್ಮಾನವನ್ನು ಮಾಡಿಲ್ಲ. ಹೀಗಾಗಿ ಭಾಗಶಃ ಪರಿಹಾರವಾಗಿ 2 ಸಾವಿರ ರೂಪಾಯಿವರೆಗೆ ಕೊಡಲು ಸಿಎಂ ಸಿದ್ದರಾಮಯ್ಯ ಅವರು ತೀರ್ಮಾನಿಸಿದ್ದಾರೆ. ಡಿಬಿಟಿ ಮೂಲಕ ಮುಂದಿನ ವಾರ ಭಾಗಶಃ ಪರಿಹಾರದ ಮೊದಲ ಕಂತನ್ನು ಹಾಕಲಿದ್ದೇವೆ. ಕೇಂದ್ರ ಸರ್ಕಾರದಿಂದ ಪರಿಹಾರದ ಹಣ ಬರುತ್ತಿದ್ದಂತೆ ಬಾಕಿ ಪರಿಹಾರದ ಹಣವು ರೈತರ ಖಾತೆಗೆ ಜಮೆ ಆಗುತ್ತದೆ ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು.