ಬೆಂಗಳೂರು: ಮುಕ್ತ, ಪಾರದರ್ಶಕ ಹಾಗೂ ಶಾಂತಿಯುತ ವಿಧಾನಸಭಾ ಚುನಾವಣೆ ನಡೆಸಲು ಸಕಲ ಕ್ರಮ ತೆಗೆದುಕೊಳ್ಳುತ್ತಿರುವ ಚುನಾವಣಾ ಆಯೋಗವು, ಕುಂಟು ನೆಪ ಹೇಳಿ ಚುನಾವಣಾ ಕರ್ತವ್ಯದಿಂದ ನುಣುಚಿಕೊಳ್ಳುವ ಸರ್ಕಾರಿ ನೌಕರರ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾಗಿ ಎಂದು ಜಿಲ್ಲಾ ಚುನಾವಣಾ ಅಧಿಕಾರಿಗಳೂ ಆಗಿರುವ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದೆ.
ಬೇಸಿಗೆ ರಜೆಯಲ್ಲಿ ಚುನಾವಣೆ ನಡೆಯುತ್ತಿರುವುದರಿಂದ ಅನೇಕ ಸರ್ಕಾರಿ ನೌಕರರು ಕುಂಟು ನೆಪ, ಇಲ್ಲ ಸಲ್ಲದ ಕಾರಣ ಹೇಳಿ ಚುನಾವಣಾ ಕರ್ತವ್ಯದಿಂದ ತಪ್ಪಿಸಿಕೊಳ್ಳಲು ಯತ್ನಿಸುತ್ತಿದ್ದಾರೆ ಎಂಬ ವರದಿಗಳ ಹಿನ್ನೆಲೆಯಲ್ಲಿ ಆಯೋಗ ಈ ಸೂಚನೆ ನೀಡಿದೆ.
ಚುನಾವಣಾ ಆಯೋಗ ಸ್ವತಂತ್ರವಾದ ಸಾಂವಿಧಾನಿಕ ಸಂಸ್ಥೆ. ಇದಕ್ಕೆ ಚುನಾವಣೆ ನಡೆಸಲು ಬೇಕಾದಷ್ಟು ಸಿಬ್ಬಂದಿ ಇಲ್ಲದೇ ಇರುವುದರಿಂದ ರಾಜ್ಯ ಸರ್ಕಾರಿ ನೌಕರರನ್ನೇ ಚುನಾವಣಾ ಆಯೋಗದ ಕೆಲಸಕ್ಕೆ ಬಳಸಿಕೊಳ್ಳಲಾಗುತ್ತದೆ. ಚುನಾವಣಾ ಅಧಿಕಾರಿ ಹುದ್ದೆಯಿಂದ ಹಿಡಿದು, ಮತ ಕೇಂದ್ರದಲ್ಲಿನ ಸಿಬ್ಬಂದಿಯವರೆಗೆ ಎಲ್ಲ ಕೆಲಸವನ್ನು ಸರ್ಕಾರಿ ನೌಕರರೇ ಮಾಡುತ್ತಾರೆ. ಸರ್ಕಾರಿ ನೌಕರರಿಗೆ ಚುನಾವಣಾ ಆಯೋಗ ವಹಿಸುವ ಕರ್ತವ್ಯವನ್ನು ನಿರ್ವಹಿಸುವುದು ಕಡ್ಡಾಯವಾಗಿದ್ದು, ಇದನ್ನು ಮ್ಯಾನ್ಯೂಲ್‌ನಲ್ಲಿಯೇ ಹೇಳಲಾಗಿದೆ.
ಕರ್ತವ್ಯಕ್ಕೆ ಬಾರದಿದ್ದರೆ ಅರೆಸ್ಟ್!
ನಿಮಯಗಳ ಪ್ರಕಾರ ಸುಳ್ಳು ಅಥವಾ ಕುಂಟು ನೆಪ ಹೇಳಿ ಚುನಾವಣಾ ಕರ್ತವ್ಯಕ್ಕೆ ಗೈರಾಗುವ ಸರ್ಕಾರಿ ನೌಕರರ ವಿರುದ್ಧ ಎಫ್‌ಐಆರ್ ದಾಖಲಿಸಲು, ಬಂಧಿಸಲು ಅವಕಾಶವಿದೆ. ಅಗತ್ಯ ಬಿದ್ದರೆ ಈ ಅವಕಾಶವನ್ನು ಬಳಸಿಕೊಳ್ಳಿ ಎಂದು ಆಯೋಗವು ಜಿಲ್ಲಾ ಚುನಾವಣಾಧಿಕಾರಿಗಳಿಗೆ ಸೂಚಿಸಿದೆ.
ಗರ್ಭಿಣಿಯರಿಗೆ ಮತ್ತು ನಿವೃತ್ತಿಗೆ ಇನ್ನು ಕೇವಲ ಮೂರ್ನಾಲ್ಕು ತಿಂಗಳು ಇರುವವರಿಗೆ ಹಾಗೂ ಗಂಭೀರವಾದ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿರುವವರಿಗೆ ಮಾತ್ರ ಚುನಾವಣಾ ಕರ್ತವ್ಯದಿಂದ ವಿನಾಯಿತಿ ನೀಡಲಾಗಿರುತ್ತದೆ. ಉಳಿದಿರುವ ನೌಕರರು ಕಡ್ಡಾಯವಾಗಿ ಈ ಕರ್ತವ್ಯವನ್ನು ನಿರ್ವಹಿಸಲೇಬೇಕಿರುತ್ತದೆ. ಆದರೆ ಅನೇಕರು ಇಲ್ಲದ ನೆಪ ಹೇಳಿ ಕರ್ತವ್ಯದಿಂದ ವಿನಾಯಿತಿ ಪಡೆಯುತ್ತಿರುವುದು ಚುನಾವಣಾ ಆಯೋಗದ ಗಮನಕ್ಕೆ ಬಂದಿದೆ. ಹೀಗಾಗಿಯೇ ಈ ಕಠಿಣ ಕ್ರಮದ ಸೂಚನೆ ನೀಡಿದೆ ಎನ್ನಲಾಗುತ್ತಿದೆ.
ಹುದ್ದೆಗೆ ತಕ್ಕಂತೆ ಕರ್ತವ್ಯ ನೀಡಿ
ಶಿಕ್ಷಣ ಇಲಾಖೆಯ ಅಧಿಕಾರಿಗಳನ್ನು ಹುದ್ದೆಗೆ ತಕ್ಕಂತೆ ಚುನಾವಣಾ ಕರ್ತವ್ಯಗಳಿಗೆ ನಿಯೋಜಿಸಲಾಗಿಲ್ಲ ಎಂದು ಇಲಾಖೆಯ ಅಧಿಕಾರಿಗಳು ದೂರಿದ್ದಾರೆ. ಸಾಮಾನ್ಯವಾಗಿ ಪ್ರಿಸೈಡಿಂಗ್ ಆಫೀಸರ್ ಹೊಣೆಯನ್ನು ಬಿ ಮತ್ತು ಸಿ ದರ್ಜೆಯ ನೌಕರರಿಗೆ ನೀಡಲಾಗುತ್ತದೆ. ಅಂದರೆ ಪ್ರೌಢ ಶಾಲಾ ಶಿಕ್ಷಕರು, ಉಪನ್ಯಾಸಕರು, ಮುಖ್ಯ ಶಿಕ್ಷಕರು ಈ ಕರ್ತವ್ಯ ನಿಭಾಯಿಸಬೇಕು. ಆದರೆ ಈ ಬಾರಿ ಕ್ಷೇತ್ರ ಶಿಕ್ಷಣಾಧಿಕಾರಿ, ಜಂಟಿ ನಿರ್ದೇಶಕರು ಹಾಗೂ ನಿರ್ದೇಶಕರಿಗೂ ಪ್ರಿಸೈಡಿಂಗ್ ಆಫೀಸರ್ ಜವಾಬ್ದಾರಿಯನ್ನು ನೀಡಲಾಗಿದೆ ಎಂದು ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.
ಚುನಾವಣಾ ಆಯೋಗ ಈ ರೀತಿ ಮಾಡುವ ಮೂಲಕ ತಪ್ಪು ಮಾಡಿದೆ. ಇದರಿಂದ ಇಲಾಖೆಯ ಅಧಿಕಾರಿಗಳು ಕಿರಿಕಿರಿ ಅನುಭವಿಸುವಂತಾಗಿದೆ. ಕೂಡಲೇ ಆಯೋಗ ಈ ಲೋಪವನ್ನು ಸರಿಪಡಿಸಿಕೊಡಬೇಕು ಎಂದು ಹಿರಿಯ ಅಧಿಕಾರಿಗಳು ಮನವಿ ಮಾಡಿದ್ದಾರೆ.
ಕೆಲವು ನೌಕರರು ಮೇಲಧಿಕಾರಿಗಳ ಮತ್ತು ಪ್ರಭಾವಿಗಳ ಸಹಾಯ ಪಡೆದು ಚುನಾವಣಾ ಕರ್ತವ್ಯದಿಂದ ವಿನಾಯಿತಿ ಪಡೆಯುತ್ತಿದ್ದಾರೆ. ಈ ಬಗ್ಗೆಯೂ ಆಯೋಗ ಈ ಬಾರಿ ಕಣ್ಣಿಟ್ಟಿದ್ದು, ಹೀಗಾಗದಂತೆ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳುವಂತೆ ಹಿರಿಯ ಅಧಿಕಾರಿಗಳಿಗೆ ಸೂಚಿಸಿದೆ ಎಂದು ಆಯೋಗದ ಮೂಲಗಳು ತಿಳಿಸಿವೆ.
ಇದನ್ನೂ ಓದಿ: Karnataka Election 2023 : ಕಾಂಗ್ರೆಸ್‌ನಿಂದ ಒಟ್ಟು 209 ಕ್ಷೇತ್ರಗಳ ಅಭ್ಯರ್ಥಿ ಆಯ್ಕೆ; ಯಾವ ಜಾತಿಗೆ ಎಷ್ಟು ಟಿಕೆಟ್?