Site icon Vistara News

Karnataka Election 2023 : ಸಂಸದೆ ಸುಮಲತಾ ಟೀಕೆ; ದೊಡ್ಡವರ ಹೆಸರು ಪ್ರಸ್ತಾಪ ಮಾಡಲ್ಲ ಎಂದು ಗೌಡರ ತಿರುಗೇಟು

ex prime minister devegowda hits out sumalatha

#image_title

ಬೆಂಗಳೂರು: ಜೆಡಿಎಸ್‌ ವಿರುದ್ಧ ಮಂಡ್ಯ ಸಂಸದೆ, ನಟಿ ಸುಮಲತಾ ತೀವ್ರ ವಾಗ್ದಾಳಿ ನಡೆಸುತ್ತಿರುವುದಕ್ಕೆ (Karnataka Election 2023) ಪ್ರತಿಕ್ರಿಯೆ ನೀಡಲು ಪಕ್ಷದ ವರಿಷ್ಠ, ಮಾಜಿ ಪ್ರಧಾನಿ ದೇವೇಗೌಡ ನಿರಾಕರಿಸಿದ್ದಾರೆ. ʻದೊಡ್ಡವರʼ ಹೆಸರನ್ನು ಪ್ರಸ್ತಾಪ ಮಾಡಿ ಯಾವುದೇ ಗೊಂದಲ ಮೂಡಿಸಲು ನಾನು ಇಷ್ಟ ಪಡುವುದಿಲ್ಲ ಎಂದು ಅವರು ತಿರುಗೇಟು ನೀಡಿದ್ದಾರೆ.

ಬಿಜೆಪಿಯನ್ನು ಬೆಂಬಲಿಸಿರುವ ಸಂಸದೆ ಸುಮಲತಾ ಬಿಜೆಪಿ ಅಭ್ಯರ್ಥಿಗಳ ಪರ ಮತ ಯಾಚಿಸುವಾಗ ʻʻರಾಜ್ಯದಲ್ಲಿ ಅತಂತ್ರ ಸರ್ಕಾರ ಬರಲಿ ಎಂದು ಕೆಲವರು ಕಾಯುತ್ತಿದ್ದಾರೆ. ಒಬ್ಬರು ನಾನು ಮುಖ್ಯಮಂತ್ರಿಯಾಗುತ್ತೇನೆ ಎಂದು ಕನಸು ಕಾಣುತ್ತಿದ್ದಾರೆʼʼ ಎಂದು ಪರೋಕ್ಷವಾಗಿ ಜೆಡಿಎಸ್‌ ಅನ್ನು ಟೀಕಿಸುತ್ತಲೇ ಬಂದಿದ್ದಾರೆ. ಈ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ದೇವೇಗೌಡರು, ʻʻಎಲ್ಲರಿಗೂ ವ್ಯಕ್ತಿ ಸ್ವಾತಂತ್ರ್ಯವಿದೆ. ಯಾರು ಏನು ಹೇಳಿದ್ರೂ ಅದಕ್ಕೂ ನನಗೂ ಸಂಬಂಧವಿಲ್ಲʼʼ ಎಂದು ಅವರ ಟೀಕೆಯನ್ನು ನಿರ್ಲಕ್ಷಿಸುವ ಮೂಲಕ ತಿರುಗೇಟು ನೀಡಿದ್ದಾರೆ.

ಬಹಳ ದಿನಗಳ ನಂತರ ಪಕ್ಷದ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ದೇವೇಗೌಡರು, ಪಕ್ಷದ ಪ್ರಚಾರ ತಂತ್ರ, ಸದ್ಯದ ಪರಿಸ್ಥಿತಿ ಕುರಿತು ಮಾಹಿತಿ ನೀಡಿದ್ದಾರೆ. ನಾಳೆಯಿಂದ ಮೇ 8 ರವರೆಗೂ 42 ಕಡೆಗಳಲ್ಲಿ ತಾವು ಪ್ರಚಾರ ನಡೆಸುವುದಾಗಿ ಹೇಳಿದ್ದಾರೆ. ಪಕ್ಷ 207 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಮಾನವೀಯ ದೃಷ್ಟಿಯಿಂದ ನಮ್ಮ ಪಕ್ಷ ದರ್ಶನ್ ಧೃವನಾರಯಣ್ ವಿರುದ್ದ ಅಭ್ಯರ್ಥಿ ಹಾಕಿಲ್ಲ ಎಂದು ತಿಳಿಸಿದ್ದಾರೆ.

ಸುಮಲತಾ ಹೇಳಿಕೆಗೆ ದೇವೇಗೌಡರ ಪ್ರತಿಕ್ರಿಯೆ

ನಾನು ಬರೀ ರೈತರಿಗಾಗಿ ಕೆಲಸ ಮಾಡಿದ್ದೇನೆ ಎಂದು ಗುರುತಿಸಲಾಗುತ್ತಿದೆ. ಆದರೆ ನನ್ನ ಅಧಿಕಾರದ ಅವಧಿಯಲ್ಲಿ ಬೆಂಗಳೂರು ಅಭಿವೃದ್ಧಿಗೆ ಬಹಳಷ್ಟು ಕೊಡುಗೆ ನೀಡಿದ್ದೇನೆ ಎಂದು ವಿವರಿಸಿದ ದೇವೇಗೌಡರು, ಬೆಂಗಳೂರಿಗೆ ಕುಡಿಯುವ ನೀರು ಒದಗಿಸುವ ಯೋಜನೆ ಜಾರಿಗೆ ಬಂದಿದ್ದು ಕೂಡ ನನ್ನ ಅಧಿಕಾರದ ಅವಧಿಯಲ್ಲಿ ಎಂದರಲ್ಲದೆ, ನನ್ನ ಕಡುವೈರಿ ಕೂಡ ಇಂತಹ ಕೆಲಸ ಮಾಡಿಲ್ಲ ಅಂತ ಹೇಳೊಕೆ ಆಗಲ್ಲ. ಅಷ್ಟು ಅಭಿವೃದ್ಧಿ ಕಾರ್ಯಗಳನ್ನು ನಾನು ಮಾಡಿದ್ದೇನೆ ಎಂದರು.

ರಾಜ್ಯದ ಅಭಿವೃದ್ಧಿಗಾಗಿ ಈಗ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ವಿನೂತನವಾದ ʻಪಂಚರತ್ನʼ ಯೋಜನೆ ರೂಪಿಸಿದ್ದಾರೆ. ಪ್ರತಿ ವಿಧಾನಸಭಾ ಕ್ಷೇತ್ರಗಳಿಗೂ ತೆರಳಿ ಈ ಯೋಜನೆಯ ಬಗ್ಗೆ ತಿಳಿಸಿದ್ದಾರೆ. ಇದರಿಂದಾಗಿ ಈ ಬಾರಿ ಕುಮಾರಸ್ವಾಮಿ ಸ್ವತಂತ್ರವಾಗಿ ಸರ್ಕಾರ ಮಾಡಬಹುದು ಎಂಬ ಪ್ರಾಮಾಣಿಕ ಭಾವನೆ ನನಗಿದೆ ಎಂದು ದೇವೇಗೌಡರು ಹೇಳಿದ್ದಾರೆ.

ನಾನು ಮುಖ್ಯಮಂತ್ರಿಯಾಗಿದ್ದಾಗ 11 ರಲ್ಲಿ 9 ಕ್ಷೇತ್ರ ಗೆಲ್ಲಿಸಿಕೊಟ್ಟ ಜಿಲ್ಲೆ ತುಮಕೂರು ಎಂದು ತುಮಕೂರು ಜಿಲ್ಲೆಯ ರಾಜಕಾರಣದ ಕುರಿತು ಪ್ರಸ್ತಾಪಿಸಿದ ಅವರು, ಕೋಲಾರದಲ್ಲಿಯೂ ಪಕ್ಷ ಗಟ್ಟಿಯಾದ ನೆಲೆ ಹೊಂದಿದೆ ಎಂದು ವಿವರಿಸಿದರು. ಉತ್ತರ ಕರ್ನಾಟಕ, ಕಲ್ಯಾಣ ಕರ್ನಾಟಕದಲ್ಲಿ ದೇವೆಗೌಡರಿಗೆ ಶಕ್ತಿ ಇಲ್ಲ ಅಂತ ಹೇಳ್ತಾರೆ. ಆದರೆ ಅದು ತಪ್ಪು ಕಲ್ಪನೆ, ಅಲ್ಲಿಯ ಅಭಿವೃದ್ಧಿಗೂ ತಾವು ಅಧಿಕಾರದಲ್ಲಿದ್ದಾಗ ಕೊಡುಗೆ ನೀಡಿದ್ದಾಗಿ ಸ್ಮರಿಸಿದರು.

ಪ್ರಚಾರಕ್ಕೆ ಬೇರೆ ರಾಜ್ಯಗಳ ಸಿಎಂ

ಜೆಡಿಎಸ್‌ ಪಕ್ಷದ ಪರವಾಗಿ ಪ್ರಚಾರಕ್ಕೆ ತೆಲಂಗಾಣದ ಮುಖ್ಯಮಂತ್ರಿ ಚಂದ್ರಶೇಖರ್‌, ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆಗಮಿಸುವ ನಿರೀಕ್ಷೆ ಇದೆ. ಕುಮಾರಸ್ವಾಮಿ ಅವರೊಂದಿಗೆ ಅವರು ಸಂಪರ್ಕದಲ್ಲಿದ್ದು, ಈ ಚುನಾವಣೆಯ ನಂತರ ರಾಷ್ಟ್ರ ರಾಜಕಾರಣದಲ್ಲಿಯೂ ಮಹತ್ವದ ಬದಲಾವಣೆಗಳಾಗಲಿವೆ ಎಂದು ದೇವೇಗೌಡರು ಹೇಳಿದ್ದಾರೆ.

ಫಲಿತಾಂಶಕ್ಕಾಗಿ ಕಾಯಿರಿ

ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಈ ಬಾರಿಯ ಚುನಾವಣೆಯಲ್ಲಿ ಜೆಡಿಎಸ್‌ ಗೆ ಕೇವಲ 10 ರಿಂದ 15 ಸ್ಥಾನ ಬರುತ್ತದೆ ಎಂದು ಹೇಳಿಕೆ ನೀಡಿರುವ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ದೇವೇಗೌಡರು, ʻʻಈ ರೀತಿಯ ಹೇಳಿಕೆ ನೀಡಲು ಅವರಿಗೆ ಸ್ವಾತಂತ್ರ್ಯವಿದೆ. ಕಾಂಗ್ರೆಸ್‌ನವರು 25 ಸ್ಥಾನ ಬರುತ್ತದೆ ಎಂದು ಹೇಳುತ್ತಿದ್ದಾರೆ. ನಮಗೆ ಎಷ್ಟು ಸ್ಥಾನ ನೀಡಬೇಕೆಂದು ಜನರು ತೀರ್ಮಾನ ಮಾಡುತ್ತಾರೆ. ಇದಕ್ಕಾಗಿ ಮೇ 13 ನೇ ತಾರೀಖಿನವರೆಗೂ ಕಾದು ನೋಡೋಣ ಎಂದರು.

ಮಂಡ್ಯ ವಿಧಾನಸಭಾ ಕ್ಷೇತ್ರದಲ್ಲಿ ಬಂಡಾಯ ಎದ್ದಿರುವ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ದೇವೇಗೌಡರು, ಮಂಡ್ಯದ ನಮ್ಮ ಪಕ್ಷದ ಅಭ್ಯರ್ಥಿ ನನ್ನನ್ನು ಭೇಟಿ ಮಾಡಿ ಸಮಾಲೋಚನೆ ನಡೆಸಿದ್ದಾರೆ. ನಾವು ನಿನ್ನನ್ನು ಕೈಬಿಡಲ್ಲ ಎಂದು ಹೇಳಿದ್ದೇವೆ. ಅಲ್ಲಿನ ಬಂಡಾಯವನ್ನು ಶಮನಗೊಳಿಸುವ ನಿಟ್ಟಿನಲ್ಲಿ ಪ್ರಯತ್ನ ನಡೆಯುತ್ತಿದೆ ಎಂದರು.

ಇದನ್ನೂ ಓದಿ : Karanataka Elections : ಮಾಡಾಳ್‌ ಮುಜುಗರ; ಅಮಿತ್‌ ಶಾ ಕಾರ್ಯಕ್ರಮ ಹೊನ್ನಾಳಿಯಿಂದ ಚಿತ್ರದುರ್ಗಕ್ಕೆ ಶಿಫ್ಟ್‌ ಮಾಡಿದ ಬಿಜೆಪಿ!

Exit mobile version