Site icon Vistara News

Karnataka Election 2023 : ಜೆಡಿಎಸ್‌ ಪರ ಪ್ರಚಾರಕ್ಕೆ ಮಮತಾ ಬ್ಯಾನರ್ಜಿ, ಚಂದ್ರಶೇಖರ ರಾವ್‌ ಏಕೆ ಬರಲಿಲ್ಲ?

third front leaders not come to campaign for jds in karnataka

ರಾಮಸ್ವಾಮಿ ಹುಲಕೋಡು
ಬೆಂಗಳೂರು: ಈ ಬಾರಿಯ ಚುನಾವಣೆಯಲ್ಲಿ (Karnataka Election 2023) ಬಿಜೆಪಿ ಮತ್ತು ಕಾಂಗ್ರೆಸ್‌ ಪರವಾಗಿ ರಾಷ್ಟ್ರನಾಯಕರು ಆಗಮಿಸಿ ಪ್ರಚಾರ ನಡೆಸಿದ್ದಾರೆ. ಸ್ಯಾಂಡಲ್‌ವುಡ್‌ನ ನಟ-ನಟಿಯರೂ ಈ ಎರಡೂ ಪಕ್ಷಗಳ ಪರವಾಗಿ ಬಿರುಸಿನ ಪ್ರಚಾರ ಕೈಗೊಂಡಿದ್ದರು. ಆದರೆ ಜೆಡಿಎಸ್‌ ತಾರಾ ಪ್ರಚಾರಕರಿಲ್ಲದೇ, ಪ್ರಚಾರವನ್ನು ಕೊನೆಗೊಳಿಸಿದೆ.

ಜೆಡಿಎಸ್‌ ಪರವಾಗಿ ಪ್ರಚಾರ ನಡೆಸಲು ಪಶ್ಚಿಮ ಬಂಗಾಲದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ತೆಲಂಗಾಣದ ಮುಖ್ಯಮಂತ್ರಿ ಕೆ. ಚಂದ್ರಶೇಖರ್‌ ರಾವ್‌ ಸೇರಿದಂತೆ ತೃತೀಯ ರಂಗದ ಕೆಲವು ನಾಯಕರು ಪ್ರಚಾರಕ್ಕೆ ಆಗಮಿಸುತ್ತಾರೆ ಎಂದು ನಿರೀಕ್ಷಿಸಲಾಗುತ್ತಿತ್ತು. ಆದರೆ ಮಾಜಿ ಪ್ರಧಾನಿ ದೇವೇಗೌಡರ ಕುಟುಂಬದ ಸದಸ್ಯರೇ ತಾರಾ ಪ್ರಚಾರಕರಾಗಿ ರಾಜ್ಯ ಸುತ್ತಿದ್ದಾರೆ.

ತೃತೀಯ ರಂಗದ ನಾಯಕರು ತಲೆ ಹಾಕಲಿಲ್ಲ!

ಬಿಜೆಪಿ ಪರವಾಗಿ ಪ್ರಚಾರ ನಡೆಸಲು ಪ್ರಧಾನಿ ನರೇಂದ್ರ ಮೋದಿ, ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌, ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್‌ ಸಿಂಗ್‌ ಚೌಹಾಣ್‌, ಮಹಾರಾಷ್ಟ್ರದ ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್, ಕೇಂದ್ರ ಸಚಿವರಾದ ರಾಜನಾಥ್‌ ಸಿಂಗ್‌, ನಿರ್ಮಲಾ ಸೀತಾರಾಮನ್‌ ಸೇರಿದಂತೆ ಕೇಂದ್ರ ಸಚಿವ ಸಂಪುಟದ ಬಹುತೇಕ ಸಚಿವರು ಆಗಮಿಸಿ ಪ್ರಚಾರ ನಡೆಸಿದ್ದಾರೆ. ಇನ್ನು ಕಾಂಗ್ರೆಸ್‌ ಪರವಾಗಿ ಪಕ್ಷದ ಅಧಿನಾಯಕಿ ಸೋನಿಯಾ ಗಾಂಧಿ, ನಾಯಕ ರಾಹುಲ್‌ ಗಾಂಧಿ, ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ, ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್‌ ಸೇರಿದಂತೆ ಅನೇಕ ರಾಷ್ಟ್ರ ಮಟ್ಟದ ನಾಯಕರು ಪ್ರಚಾರಕ್ಕೆ ಆಗಮಿಸಿದ್ದರು.

ಮಮತಾ ಬ್ಯಾನರ್ಜಿ ಅವರೊಂದಿಗೆ ಎಚ್‌ ಡಿ ಕುಮಾರಸ್ವಾಮಿ.

ಆದರೆ ಜೆಡಿಎಸ್‌ ಪರವಾಗಿ ಪ್ರಚಾರಕ್ಕೆ ಯಾವ ರಾಷ್ಟ್ರ ನಾಯಕರೂ ಬರಲಿಲ್ಲ. ದೇವೇಗೌಡರು ಗುರುತಿಸಿಕೊಂಡೇ ಬಂದಿರುವ ತೃತೀಯ ರಂಗದ ನಾಯಕರು ಕೂಡ ಪ್ರಚಾರದಿಂದ ದೂರ ಉಳಿದರು. ಜೆಡಿಎಸ್‌ನ ನಾಯಕ ಮಾಜಿ ಮುಖ್ಯಮಂತ್ರಿ ಎಚ್‌ ಡಿ ಕುಮಾರಸ್ವಾಮಿ (HD Kumaraswamy) ಕಳೆದ ಮಾರ್ಚ್‌ 24ರಂದು ಕೋಲ್ಕೊತಾಗೆ ತೆರಳಿ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರನ್ನು ಭೇಟಿಯಾಗಿ, ಪ್ರಚಾರಕ್ಕೆ ಆಹ್ವಾನಿಸಿದ್ದರು. ತೃತೀಯ ರಂಗವನ್ನು ಹುಟ್ಟುಹಾಕಲು ಹೊರಟಿರುವ ಮಮತಾ ಬ್ಯಾನರ್ಜಿ ಜೆಡಿಎಸ್‌ ಪರವಾಗಿ ಪ್ರಚಾರಕ್ಕೆ ಆಗಮಿಸಲು ಒಪ್ಪಿಕೊಂಡಿದ್ದರೆನ್ನಲಾಗಿದೆ. ಈ ವಿಷಯವನ್ನು ಆಗ ಕುಮಾರಸ್ವಾಮಿಯವರೇ ಬಹಿರಂಗಪಡಿಸಿದ್ದರು.

ಇವರಲ್ಲದೆ ತೆಲಂಗಾಣದ ಮುಖ್ಯಮಂತ್ರಿ ಚಂದ್ರಶೇಖರ ರಾವ್‌ ನೇತೃತ್ವದ ಭಾರತ್‌ ರಾಷ್ಟ್ರ ಸಮಿತಿ (BRS) ಜೆಡಿಎಸ್‌ಗೆ ಸಂಪೂರ್ಣ ಬೆಂಬಲ ನೀಡಲಿದೆ ಎಂದು ನಿರೀಕ್ಷಿಸಲಾಗುತ್ತಿತ್ತು. ಒಂದು ಹಂತದಲ್ಲಿ ಚಂದ್ರಶೇಖರ್‌ ರಾವ್‌ ಮತ್ತು ಕುಮಾರಸ್ವಾಮಿ ಒಟ್ಟಾಗಿ ವಿಧಾನಸಭಾ ಚುನಾವಣೆ ಎದುರಿಸುವ ಕುರಿತು ಮಾತುಕತೆ ನಡೆಸಿದ್ದರು. ಚಂದ್ರಶೇಖರ್‌ ರಾವ್‌ ಕೂಡ ಈ ಬಾರಿಯ ಚುನಾವಣೆಯಲ್ಲಿ ಪ್ರಚಾರ ನಡೆಸಿ ತೆಲುಗು ಭಾಷಿಕರ ಬೆಂಬಲ ಜೆಡೆಎಸ್‌ಗೆ ದೊರೆಯುವಂತೆ ಮಾಡುವ ಭರವಸೆ ನೀಡಿದ್ದರೆನ್ನಲಾಗಿದೆ. ಹೀಗಾಗಿಯೇ ಕಳೆದ ಡಿಸೆಂಬರ್‌ನಲ್ಲಿ ಹೈದರಾಬಾದ್‌ನಲ್ಲಿ ನಡೆದ ಬಿಆರ್‌ಎಸ್‌ನ ಸಂಸ್ಥಾಪನಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಕುಮಾರಸ್ವಾಮಿ ಚಂದ್ರಶೇಖರ್‌ ರಾವ್‌ಗೆ ಪ್ರಚಾರಕ್ಕೆ ಆಹ್ವಾನ ನೀಡಿ ಬಂದಿದ್ದರು. ಕಳೆದ ಮಾರ್ಚ್‌ನಲ್ಲಿಯೂ ಪ್ರಚಾರದ ಕುರಿತು ಈ ನಾಯಕರು ಮಾತುಕತೆ ನಡೆಸಿದ್ದರು.

ಇವರಿಬ್ಬರಲ್ಲದೇ, ಬಿಜೆಪಿಯ ಸಖ್ಯ ತೊರೆದಿರುವ ಸಂಯುಕ್ತ ಜನತಾದಳದ ನಾಯಕ, ಬಿಹಾರದ ಮುಖ್ಯಮಂತ್ರಿ ನಿತೀಶ್‌ ಕುಮಾರ್‌, ಸಮಾಜವಾದಿ ಪಕ್ಷದ ಅಖಿಲೇಶ್‌ ಯಾದವ್‌ ಕೂಡ ಜೆಡಿಎಸ್‌ ಪರವಾಗಿ ಪ್ರಚಾರ ನಡೆಸಲಿದ್ದಾರೆ ಎಂದು ನಿರೀಕ್ಷಿಸಲಾಗುತ್ತಿತ್ತು. ಆದರೆ ತೃತೀಯ ರಂಗದ ಯಾವ ನಾಯಕರೂ ರಾಜ್ಯದತ್ತ ತಲೆ ಹಾಕಲಿಲ್ಲ. ಸಮಾಜವಾದಿ ಪಕ್ಷದ ಅಖಿಲೇಶ್‌ ಯಾದವ್‌ ಕರ್ನಾಟಕಕ್ಕೆ ಬಂದಿದ್ದರೂ ತಮ್ಮ ಪಕ್ಷದಿಂದ ಸ್ಪರ್ಧಿಸಿದ್ದ ಓರ್ವ ಅಭ್ಯರ್ಥಿಯ ಪರವಾಗಿ ಮಾತ್ರ ಪ್ರಚಾರ ನಡೆಸಿ ಹಿಂದಿರುಗಿದ್ದಾರೆ.

ಜೆಡಿಎಸ್‌ನಿಂದ ದೂರ ಉಳಿಯಲು ಕಾರಣವೇನು?

ಚುನಾವಣೆ ಘೋಷಣೆಯಾದ ನಂತರ ಜೆಡಿಎಸ್‌ನ ವರಿಷ್ಠ ನಾಯಕ ಎಚ್‌ ಡಿ ದೇವೇಗೌಡ ನಡೆಸಿದ ಮೊದಲ ಪತ್ರಿಕಾಗೋಷ್ಠಿಯಲ್ಲಿ ʻಈ ಎಲ್ಲ ನಾಯಕರು ಪ್ರಚಾರಕ್ಕೆ ಬರುತ್ತಾರೆಯೇʼ ಎಂದು ಪತ್ರಕರ್ತರು ಕೇಳಿದ ಪ್ರಶ್ನೆಗೆ, “ಈ ಎಲ್ಲ ನಾಯಕರೊಂದಿಗೆ ಕುಮಾರಸ್ವಾಮಿ ಸಂಪರ್ಕದಲ್ಲಿದ್ದಾರೆ. ಯಾರೆಲ್ಲಾ ಪ್ರಚಾರಕ್ಕೆ ಬರುತ್ತಾರೆ ಎಂದು ಅವರನ್ನೇ ಕೇಳಿʼʼ ಎಂದು ಉತ್ತರಿಸಿದ್ದರು. ಇದೇ ಪ್ರಶ್ನೆಯನ್ನು ಎಚ್‌ ಡಿ ಕುಮಾರಸ್ವಾಮಿಯವರನ್ನು ಕೇಳಿದಾಗ, ʻʻನಮ್ಮ ಪ್ರಚಾರಕ್ಕೆ ಹೊರಗಿನ ಯಾವ ನಾಯಕರೂ ಬರುವುದಿಲ್ಲ. ದೊಡ್ಡ ನಾಯಕರನ್ನು ಕರೆಸಿ ನೂರಾರು ಕೋಟಿ ಖರ್ಚು ಮಾಡುವುದರ ಬದಲು, ಅದೇ ದುಡ್ಡನ್ನು ಅಭ್ಯರ್ಥಿಗೆ ಕೊಟ್ಟರೆ ಚುನಾವಣೆಯಲ್ಲಿ (Karnataka Election) ಗೆಲ್ಲಲು ಅನುಕೂಲ ಆಗುತ್ತದೆʼʼ ಎಂದು ಹೇಳಿ ಜಾರಿಕೊಂಡಿದ್ದರು.

ಆದರೆ ಈ ಎಲ್ಲ ನಾಯಕರು ಚುನಾವಣಾ ಪ್ರಚಾರಕ್ಕೆ ಬಾರದಿರಲು ರಾಜ್ಯದಲ್ಲಿ ಅತಂತ್ರ ವಿಧಾನಸಭೆ ರಚನೆಯಾಗಲಿದೆ ಎಂಬ ವರದಿಯೇ ಕಾರಣ ಎಂದು ಹೇಳಲಾಗುತ್ತಿದೆ. ಜೆಡಿಎಸ್‌ ಈಗಾಗಲೇ ರಾಜ್ಯದಲ್ಲಿ ಕಾಂಗ್ರೆಸ್‌ ಮತ್ತು ಬಿಜೆಪಿ ಜತೆಗೆ ಹೊಂದಾಣಿಕೆ ಮಾಡಿಕೊಂಡು ಸರ್ಕಾರ ರಚಿಸಿದೆ. ಈ ಬಾರಿ ಕೂಡ ಅತಂತ್ರ ವಿಧಾನಸಭೆ ರಚನೆಯಾದಲ್ಲಿ ಜೆಡಿಎಸ್‌ ಈ ಎರಡು ರಾಷ್ಟ್ರೀಯ ಪಕ್ಷಗಳಲ್ಲಿ ಒಂದರ ಜತೆಗೆ ಸೇರಿ ಸರ್ಕಾರ ರಚಿಸುವುದು ಅನಿವಾರ್ಯವಾಗಲಿದೆ. ಆದರೆ ಮಮತಾ ಬ್ಯಾನರ್ಜಿ, ಚಂದ್ರಶೇಖರ್‌ ರಾವ್‌ ಮತ್ತಿತರರು ಈ ಎರಡೂ ರಾಷ್ಟ್ರೀಯ ಪಕ್ಷಗಳನ್ನು ದೂರ ಇಟ್ಟವರು. ನಾವು ಪ್ರಚಾರಕ್ಕೆ ಬಂದು ನಂತರ ಜೆಡಿಎಸ್‌ ಈ ಎರಡೂ ಪಕ್ಷಗಳಲ್ಲಿ ಒಂದರ ಜತೆ ಹೋದರೆ ತಮಗೆ ಮುಂದೆ ಉತ್ತರ ನೀಡುವುದು ಕಷ್ಟವಾಗುತ್ತದೆ ಎಂಬ ಕಾರಣಕ್ಕೆ ಇವರೆಲ್ಲರೂ ಪ್ರಚಾರದಿಂದಲೇ ದೂರ ಉಳಿದಿದ್ದಾರೆ ಎಂದು ವಿಶ್ಲೇಷಿಸಲಾಗುತ್ತಿದೆ.

ಸ್ಯಾಂಡಲ್‌ವುಡ್‌ನ ನಟರೂ ತೆನೆ ಪರವಾಗಿರಲಿಲ್ಲ!
ಜೆಡಿಎಸ್‌ನ ಮುಖ್ಯಮಂತ್ರಿ ಅಭ್ಯರ್ಥಿ ಎಚ್‌ ಡಿ ಕುಮಾರಸ್ವಾಮಿ ಕನ್ನಡ ಚಲನಚಿತ್ರ ನಿರ್ಮಾಪಕರು. ಅವರ ಮಗ, ರಾಮನಗರದ ಜೆಡಿಎಸ್‌ ಅಭ್ಯರ್ಥಿ ನಿಖಿಲ್‌ ಕುಮಾರಸ್ವಾಮಿ ಕೂಡ ಹೀರೋ. ಆದರೂ ಸ್ಯಾಂಡಲ್‌ವುಡ್‌ನ ಹೆಸರಾಂತ ನಟ-ನಟಿಯರು ಜೆಡಿಎಸ್‌ ಪರವಾಗಿ ಪ್ರಚಾರಕ್ಕೆ ಬರಲಿಲ್ಲ.
ಮುಖ್ಯವಾಗಿ ಕಿಚ್ಚ ಸುದೀಪ್‌ ಬಿಜೆಪಿ ಪರವಾಗಿ ರಾಜ್ಯ ಸುತ್ತಿದರೆ, ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಕೂಡ ಪ್ರಚಾರ ಕಣಕ್ಕಿಳಿದಿದ್ದರು. ಇತ್ತ ಹ್ಯಾಟ್ರಿಕ್‌ ಹೀರೋ ಶಿವರಾಜ್‌ಕುಮಾರ್‌ ಕಾಂಗ್ರೆಸ್‌ ಅಭ್ಯರ್ಥಿಯ ಪರವಾಗಿ ಪ್ರಚಾರ ನಡೆಸಿದರು. ಆದರೆ ಯಾವ ನಟ-ನಟಿಯರೂ ಕರ್ನಾಟಕದ ಪ್ರಾದೇಶಿಕ ಪಕ್ಷವಾದ ಜೆಡಿಎಸ್‌ನೊಂದಿಗೆ ಗುರುತಿಸಿಕೊಳ್ಳಲೂ ಇಲ್ಲ, ಪ್ರಚಾರ ನಡೆಸಲೂ ಇಲ್ಲ.

ಸ್ಪಷ್ಟ ಸೈದ್ಧಾಂತಿಕ ನಿಲುವು ಹೊಂದಿರದ ಜೆಡಿಎಸ್‌ನೊಂದಿಗೆ ತೃತೀಯ ರಂಗದ ನಾಯಕರು ಎಚ್ಚರಿಕೆಯಿಂದ ವ್ಯವಹಾರ ನಡೆಸುತ್ತಿದ್ದಾರೆ ಎಂಬುದು ಈ ಬೆಳವಣಿಗೆಯಿಂದ ಸ್ಪಷ್ಟವಾಗಿದೆ. ಈ ಬಾರಿಯ ಚುನಾವಣೆಯ ನಂತರ ಜೆಡಿಎಸ್‌ (ಅತಂತ್ರ ವಿಧಾನಸಭೆ ರಚನೆಯಾದರೂ ರಚನೆಯಾಗದಿದ್ದರೂ) ಯಾವ ನಿಲುವು ತಾಳಲಿದೆ ಎಂಬುದರ ಮೇಲೆ ಮುಂದೆ ನಡೆಯಲಿರುವ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್‌ ಯಾರೊಂದಿಗಿರಲಿದೆ ಎಂಬುದು ಸ್ಪಷ್ಟವಾಗಲಿದೆ.

ಇದನ್ನೂ ಓದಿ : Karnataka Election 2023 : ನಿರೀಕ್ಷೆ ಹುಸಿಗೊಳಿಸಿದ ಆಪ್‌; ಕೇಜ್ರಿವಾಲ್‌ ಪ್ರಚಾರಕ್ಕೆ ಬಂದಿಲ್ಲ ಏಕೆ?

Exit mobile version