ಬೆಂಗಳೂರು: ವಿಧಾನಸಭೆ ಚುನಾವಣೆಗಳ (Karnataka Election) ಹೊಸ್ತಿಲಲ್ಲೇ ಫೆಬ್ರವರಿ ಮೊದಲ ವಾರದಲ್ಲಿ ಸಚಿವರಾಗುತ್ತಾರೆ ಎನ್ನಲಾಗುತ್ತಿರುವ ರಮೇಶ್ ಜಾರಕಿಹೊಳಿ ವಿರುದ್ಧ ಕಾಂಗ್ರೆಸ್ ದಾಳಿ ಆರಂಭಿಸಿದೆ. ಫೆಬ್ರವರಿ ಮೊದಲ ವಾರದಲ್ಲಿ ಸಚಿವ ಸಂಪುಟ ವಿಸ್ತರಣೆಯನ್ನು ರಾಜ್ಯ ಸರ್ಕಾರ ಮಾಡುತ್ತದೆ ಎನ್ನಲಾಗುತ್ತಿದ್ದು, ಕೆ.ಎಸ್. ಈಶ್ವರಪ್ಪ, ಸಿ.ಪಿ. ಯೋಗೇಶ್ವರ್ ಜತೆಗೆ ರಮೇಶ್ ಜಾರಕಿಹೊಳಿ ಅವರೂ ಪ್ರಮಾಣವಚನ ಸ್ವೀಕರಿಸುವ ಸಾಧ್ಯತೆಯಿದೆ.
ಇತ್ತೀಚೆಗೆ ಬೆಳಗಾವಿಯ ಸುಳೇಭಾವಿಯಲ್ಲಿ ಜನವರಿ 21ರಂದು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಜಾರಕಿಹೊಳಿ, ಕಾಂಗ್ರೆಸ್ ನಾಯಕಿ ಲಕ್ಷ್ಮೀ ಹೆಬ್ಬಾಳ್ಕರ್ ಅವರನ್ನು ಟೀಕಿಸಿದ್ದರು. ಅವರು ಈಗ ಅನೇಕ ಉಡುಗೊರೆ ನೀಡಿದ್ದಾರೆ ಅದೆಲ್ಲದರ ಒಟ್ಟು ಮೌಲ್ಯ ಮೂರು ಸಾವಿರ ರೂ. ಆಗಬಹುದು. ನಾವು ಆರು ಸಾವಿರ ಕೊಟ್ಟರೆ ನಮಗೆ ಮತ ಹಾಕಿ ಎಂದು ಮತದಾರರಿಗೆ ತಿಳಿಸಿದ್ದರು.
ಈ ಘಟನೆ ಕುರಿತು ಕೆಪಿಸಿಸಿ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲ ಟ್ವೀಟ್ ಮಾಡಿದ್ದಾರೆ. ʼಇದು ಬಿಜೆಪಿ ಸರ್ಕಾರದ ಹೊಸ ಹಗರಣ. ಪ್ರತಿ ಮತಕ್ಕೆ 6 ಸಾವಿರ ರೂ. ನೀಡುವುದಾಗಿ ಬಿಜೆಪಿ ಹೇಳುತ್ತಿದೆ. ಚುನಾವಣಾ ಆಯೋಗ ಏಕೆ ಕ್ರಮ ಕೈಗೊಳ್ಳುತ್ತಿಲ್ಲ? ನಳಿನ್ ಕುಮಾರ್ ಕಟೀಲ್, ಬಸವರಾಜ ಬೊಮ್ಮಾಯಿ ಹಾಗೂ ಜೆ.ಪಿ. ನಡ್ಡಾ ವಿರುದ್ಧ ಏಕೆ ಎಫ್‌ಐಆರ್ ದಾಖಲಾಗಿಲ್ಲ? ಮಾಧ್ಯಮಗಳು ಏಕೆ ಸುಮ್ಮನಿವೆ? ಲಂಚ +ಭ್ರಷ್ಟಾಚಾರ = ಬಿಜೆಪಿʼ ಎಂದಿದ್ದಾರೆ.
“ಮತದಾರರಿಗೆ ಲಂಚದ ಆಮಿಷ ನೀಡುವ ಬಿಜೆಪಿ ನಡೆಯು ಅಚಾನಕ್ಕಾಗಿ ಬಹಿರಂಗವಾಗಿದೆ. ಜೆ.ಪಿ. ನಡ್ಡಾ ಹಾಗೂ ಬಸವರಾಜ ಬೊಮ್ಮಾಯಿ ಅವರು ಈ ಬಗ್ಗೆ ಮೌನವಾಗಿರುವುದು, ಒಪ್ಪಿಗೆಯನ್ನು ಸೂಚಿಸಿದಂತಿದೆ. ರಮೇಶ್ ಜಾರಕಿಹೊಳಿ ಹೇಳಿದ್ದು ತಪ್ಪಾಗಿದ್ದರೆ ಅವರನ್ನು ಇಷ್ಟೊತ್ತಿಗೆ ಪಕ್ಷದಿಂದ ತೆಗೆದುಹಾಕುತ್ತಿದ್ದರು” ಎಂದು ತಿಳಿಸಿದ್ದಾರೆ.
ಇದನ್ನೂ ಓದಿ : Karnataka Election | ನನಗೂ, ರಮೇಶ್ ಜಾರಕಿಹೊಳಿಗೂ ಮಂತ್ರಿ ಪದವಿ ಕೊಡಲೇಬೇಕು: ಈಶ್ವರಪ್ಪ ಪಟ್ಟು
ಸದ್ಯದಲ್ಲೆ ಸಚಿವರಾಗುವ ಕನಸು ಕಾಣುತ್ತಿರುವ ರಮೇಶ್ ಜಾರಕಿಹೊಳಿ ಅವರ ವಿರುದ್ಧ ಕಾಂಗ್ರೆಸ್ ದಾಳಿ ನಡೆಸಲು ಆರಂಭಿಸಿದೆ. ಸಚಿವರಾದರೆ ಇಡೀ ಸರ್ಕಾರದ ಮೇಲೆ ಭ್ರಷ್ಟಾಚಾರದ ಆರೋಪಕ್ಕೆ ಉತ್ತಮ ಅಸ್ತ್ರ ಸಿಕ್ಕಂತಾಗುತ್ತದೆ ಎಂಬ ಚಿಂತನೆಯಲ್ಲಿ ಕಾಂಗ್ರೆಸ್ ಇದೆ.