ಬೆಂಗಳೂರು: ರಾಜ್ಯದಲ್ಲಿ ವಿಧಾನಸಭೆ ಚುನಾವಣೆ (Karnataka Election) ಹತ್ತಿರವಾಗುತ್ತಿರುವಂತೆ ಪಕ್ಷಗಳ ನಡುವಿನ ವಾಗ್ದಾಳಿ ತೀವ್ರವಾಗಿದ್ದು, ಬಿಜೆಪಿಯ ವಿರುದ್ಧ ಕಾಂಗ್ರೆಸ್ ಸರಣಿ ಟ್ವೀಟ್ ಮಾಡಿದೆ. ಕಾಂಗ್ರೆಸ್ ಘೋಷಣೆ ಮಾಡುತ್ತಿರುವ ಗ್ಯಾರಂಟಿ ಯೋಜನೆಗಳ ರೀತಿಯಲ್ಲೇ ಬಿಜೆಪಿಯ ಕುರಿತು ಪೋಸ್ಟರ್ ಮಾಡಿ ಹರಿಬಿಡಲಾಗಿದೆ.
ಕಾಂಗ್ರೆಸ್ ಚಿಂತನೆಗಳ ಜನಪರವಾಗಿದ್ದರೆ, ಬಿಜೆಪಿ ಚಿಂತನೆಗಳು ಭ್ರಷ್ಟಾಚಾರದ್ದಾಗಿರುತ್ತದೆ. ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದಲ್ಲಿ 40% ಇರುವ ಕಮಿಷನ್ 80% ಆಗಬಹುದು, ಭ್ರಷ್ಟಾಚಾರ ದುಪ್ಪಟ್ಟಾಗಲಿದೆ. ಒಟ್ಟಿನಲ್ಲಿ ಕಮಿಷನ್ ಕಡ್ಡಾಯಗೊಳಿಸುತ್ತೇವೆ ರಾಜ್ಯದ ಜನತೆಗೆ ಬಿಜೆಪಿ ಕೊಡುವ ಆಶ್ವಾಸನೆಗಳು ಹೀಗಿರುತ್ತವೆ! ಎಂದಿದೆ. ಈ ಎಲ್ಲ ಟ್ವೀಟ್‌ಗಳಿಗೆ #bjpಪಾಪದಪುರಾಣ ಎಂದು ಹ್ಯಾಷ್ ಟ್ಯಾಗ್ ನೀಡಿದೆ.
ಬಿಜೆಪಿ ಆಡಳಿತ ಹೇಗಿದೆ ಎಂದು ನೋಡಿರುವಾಗ ಮುಂದೆ ಅವರ ಆಶ್ವಾಸನೆಗಳು ಹೇಗಿರಲಿವೆ ಎಂಬುದನ್ನು ಊಹಿಸಬಹುದು! ಕನ್ನಡಿಗರ ಮೇಲೆ ಹಿಂದಿ ಹೇರಿಕೆಯ ನಾಗಪುರದ ಗುಪ್ತ ಅಜೆಂಡಾ ಜಾರಿಗೊಳಿಸುತ್ತಿರುವಬಿಒಜೆಪಿ ಮುಂದೆ ಹಿಂದಿಯನ್ನೇ ಕರ್ನಾಟಕದ ಅಧಿಕೃತ ಭಾಷೆ ಎಂದು ಘೋಷಿಸುತ್ತದೆ ಎಂಬುದರಲ್ಲಿ ಯಾವುದೇ ಅತಿಶಯೋಕ್ತಿ ಇಲ್ಲ.
ಬಿಜೆಪಿ ಭರವಸೆಗಳಲ್ಲಿ ಪ್ರಮುಖವಾದುದು ಸರ್ಕಾರಿ ಹುದ್ದೆಗಳ ಮಾರಾಟ, ಈಗಾಗಲೇ ಪ್ರತಿ ಇಲಾಖೆಯಲ್ಲಿ ಹಲವು ಹುದ್ದೆಗಳನ್ನು ಮಾರಾಟ ಮಾಡಿರುವ ಬಿಜೆಪಿ ಮುಂದೆ ಅಧಿಕಾರಕ್ಕೆ ಬಂದರೆ ಬಾಕಿ ಉಳಿದ 2.5 ಲಕ್ಷ ಹುದ್ದೆಗಳನ್ನು ಉತ್ತಮ ದರದಲ್ಲಿ ಮಾರಾಟ ಮಾಡುವುದು ಬಿಜೆಪಿ ಯೋಜನೆಯಾಗಿರುತ್ತದೆ! ಹೆಚ್ಚಿನ ಬಿಡ್‌ಗೆ ಹರಾಜು ಕೂಡ ನಡೆಸಬಹುದು!
ಬಿಜೆಪಿ ಪಕ್ಷ ಹುಟ್ಟಿದ್ದೇ ಸುಳ್ಳಿನಲ್ಲಿ, ಸುಳ್ಳೇ ಬಿಜೆಪಿಯ ತಂದೆ ತಾಯಿ, ಸುಳ್ಳೇ ಬಿಜೆಪಿಯ ಬಂಧು ಬಳಗ! ಸುಳ್ಳುಗಳನ್ನು ಅಧಿಕೃತಗೊಳಿಸಲು, ಸುಳ್ಳುಗಳನ್ನು ವ್ಯಾಪಕವಾಗಿ ಹಬ್ಬಿಸಲು ಸಿಟಿ ರವಿ ನೇತೃತ್ವದಲ್ಲಿ ವಾಟ್ಸಾಪ್ ಯೂನಿವರ್ಸಿಟಿ ಸ್ಥಾಪನೆ ಮಾಡುವುದು ಬಿಜೆಪಿ ಪ್ರಣಾಳಿಕೆ, ಭರವಸೆ ಆಗಬಹುದು!
ಬಿಜೆಪಿ ಜನತೆಗೆ ಬೆಲೆ ಏರಿಕೆಯನ್ನಲ್ಲದೆ ಬೇರೇನು ಕೊಡಬಲ್ಲದು. ಜನಾಭಿಪ್ರಾಯದಿಂದಂತೂ ಅಧಿಕಾರಕ್ಕೆ ಬರುವುದಿಲ್ಲ, ಆಪರೇಷನ್ ಕಮಲದ ಮೂಲಕ ಅಧಿಕಾರ ಹಿಡಿದಿದ್ದೇ ಆದರೆ ಪೆಟ್ರೋಲ್, ಡೀಸೆಲ್ ಸೇರಿದಂತೆ ಎಲ್ಲಾ ಅಗತ್ಯ ವಸ್ತುಗಳ ಬೆಲೆಗಳನ್ನು ಇನ್ನಷ್ಟು ಏರಿಸುವುದೇ ಬಿಜೆಪಿ ಅಜೆಂಡವಾಗಿರುತ್ತದೆ.
ಸಿಡಿ ಸರ್ಕಾರ ಎಂದು ಕುಖ್ಯಾತಿ ಗಳಿಸಿರುವ ಬಿಜೆಪಿ ನಾಯಕರ ಸಾಲು ಸಾಲು ಸಿಡಿಗಳು ಹೊರಬಂದಿದ್ದವು. ಮುಂದೆ ಅಧಿಕಾರಕ್ಕೆ ಬಂದಲ್ಲಿ ಶಾಸಕರ ಸಿಡಿಗಳಿಗೆ ಇಸ್ರೇಲ್ ತಂತ್ರಜ್ಞಾನದ ರಕ್ಷಣೆಯ ಯೋಜನೆ ರೂಪಿಸಬಹುದು! ಸ್ಯಾಂಟ್ರೋ ರವಿ ನೇತೃತ್ವದ ಸಮಿತಿ ರಚಿಸಿ ಪೈರಸಿ ನಿಷೇಧವನ್ನು ಗಟ್ಟಿಗೊಳಸಬಹುದು!
ಬಿಜೆಪಿ ಜನಾದೇಶದ ಮೂಲಕ ಅಧಿಕಾರಕ್ಕೆ ಬರುವುದಿಲ್ಲ ಎಂದು ಬಿಜೆಪಿಗರೇ ತೀರ್ಮಾನಕ್ಕೆ ಬಂದಿದ್ದಾರೆ, ಅದನ್ನ ಬಹಿರಂಗಪಡಿಸಿದ್ದಾರೆ. ಅಧಿಕಾರಕ್ಕಾಗಿ ಬಿಜೆಪಿಗಿರುವ ತಂತ್ರ ಒಂದೇ – ಆಪರೇಷನ್ ಕಮಲ. ಆಪರೇಷನ್ ಕಮಲಕ್ಕಾಗಿ ಐಷಾರಾಮಿ ರೆಸಾರ್ಟ್‌ಗಳ ನಿರ್ಮಾಣ ಬಿಜೆಪಿಯ ಭರವಸೆಗಳಾಗಬಹುದು! ಕದ್ದ ಮಾಲುಗಳಿಗೆ ಸುರಕ್ಷಿತ ತಾಣ ಬೇಕಲ್ಲವೇ!
ಸತ್ಯದ ತಲೆ ಒಡೆಯುವಂತೆ ಸುಳ್ಳು ಹೇಳುವ ಬಿಜೆಪಿ ಈಗಾಗಲೇ ಪಠ್ಯಪುಸ್ತಕಗಳಲ್ಲಿ ಅಂಬೇಡ್ಕರ್, ಗಾಂಧಿಯವರನ್ನು ಅವಮಾನಿಸಿದೆ. ಮುಂದೆ ಆಪರೇಷನ್ ಕಮಲದ ಮೂಲಕ ಅಧಿಕಾರಕ್ಕೆ ಬಂದರೆ ಗಾಂಧಿ, ಅಂಬೇಡ್ಕರ್ ಬದಲು ಗೋಡ್ಸೆ, ಬಿಜೆಪಿಗರ ಕಾಲ್ಪನಿಕ ಪಾತ್ರಗಳಾದ ಉರಿಗೌಡ, ನಂಜೇಗೌಡರ ಪ್ರತಿಮೆ ನಿರ್ಮಿಸಿದರೂ ಆಶ್ಚರ್ಯವಿಲ್ಲ!
ವರ್ಷಕ್ಕೆ 6 ಬಾರಿ ವಿದ್ಯುತ್ ದರ ಏರಿಕೆಯ ಶಾಕ್ ನೀಡಿದ ಬಿಜೆಪಿ ಸರ್ಕಾರ ಇನ್ನೊಮ್ಮೆ ವಿದ್ಯುತ್ ದರ ಏರಿಸಲು ಸಜ್ಜಾಗಿದೆ. ನಾವು 200 ಯೂನಿಟ್ ಉಚಿತ ವಿದ್ಯುತ್ ನೀಡುತ್ತೇವೆ ಎಂದರೆ ಬಿಜೆಪಿ200 ಯೂನಿಟ್ ಬಳಸಿದರೆ 200 ರೂಪಾಯಿ ದಂಡದ ಶುಲ್ಕ ವಿಧಿಸುವ ಸಾಧ್ಯತೆ ಇದೆ! ಜನರ ಸುಲಿಗೆಗೆ ಬಿಜೆಪಿಯೇ ಬ್ರಾಂಡ್ ಅಂಬಾಸಿಡರ್!