ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆಗಳು ಹತ್ತಿರವಾಗುತ್ತಿರುವಂತೆಯೇ ಚುನಾವಣಾ ಕಣ ರಂಗೇರುತ್ತಿದ್ದು, ಇದಕ್ಕೆ ಕಿಚ್ಚ ಸುದೀಪ್ ಎಂಟ್ರಿ ಕೊಟ್ಟು ಧೂಳೆಬ್ಬಿಸುತ್ತಾರೆಯೇ ಎಂಬ ಮಾತುಗಳು ಕೇಳಿಬರುತ್ತಿವೆ.
ಕಿಚ್ಚ ಸುದೀಪ್ ಅವರನ್ನು ಕಾಂಗ್ರೆಸ್‌ಗೆ ಕರೆತಂದು ಕಣಕ್ಕಿಳಿಸುವ ಪ್ರಯತ್ನಗಳು ನಡೆಯುತ್ತಿವೆ.
ಈಗಾಗಲೆ ಕರ್ನಾಟಕದ ಚುನಾವಣೆಗಳಲ್ಲಿ ಅನೇಕ ಚಿತ್ರನಟರು ಸ್ಪರ್ಧೆ ಮಾಡಿ ಯಶಸ್ಸು ಕಂಡ ಉದಾಹರಣೆಗಳಿವೆ. ರಾಮಕೃಷ್ಣ ಹೆಗಡೆ ಆಹ್ವಾನದ ಮೇರೆಗೆ ರಾಜಕೀಯಕ್ಕಿಳಿದ ಅನಂತನಾಗ್, ನಂತರ ರೆಬಲ್ ಸ್ಟಾರ್ ಅಂಬರೀಶ್, ನವರಸ ನಾಯಕ ಜಗ್ಗೇಶ್ ಸೇರಿ ಅನೇಕರು ಯಶ ಕಂಡಿದ್ದಾರೆ.
ಇದೀಗ ಸರ್ಕಾರದ ವಿರುದ್ಧ ವಿವಿಧ ಅಭಿಯಾನಗಳ ಮೂಲಕ ಕಾಂಗ್ರೆಸ್ ವಿಶ್ವಾಸ ಹೆಚ್ಚಾಗಿದ್ದು, ಅದಕ್ಕೆ ಕಿಚ್ಚ ಸುದೀಪ್ ಬಲ ಸೇರಿದರೆ ಮತ್ತೂ ಶಕ್ತಿ ಸಿಗುತ್ತದೆ. ತಮ್ಮ ಸಿನಿಮಾಗಳ ಮೂಲಕ ರಾಜಕೀಯ ವ್ಯವಸ್ಥೆಯನ್ನು ಸ್ವಚ್ಛಗೊಳಿಸುವ ಸಂದೇಶ ನೀಡುವ ಸುದೀಪ್, ಕಾಂಗ್ರೆಸ್‌ಗೆ ಆಗಮಿಸುವುದು ಒಳ್ಳೆಯದು ಎಂದು ಕಾಂಗ್ರೆಸ್ ನಾಯಕರು ಚಿಂತನೆ ನಡೆಸಿದ್ದಾರೆ.
ಸುದೀಪ್ ಅವರನ್ನು ಕರೆತರು ಖ್ಯಾತ ಚಿತ್ರನಟಿ ರಮ್ಯಾ ಹಾಗೂ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮೂಲಕ ಪ್ರಯತ್ನ ನಡೆಯುತ್ತಿದೆ. ರಾಜ್ಯಾದ್ಯಂತ ಖ್ಯಾತ ನಟನಾಗಿ ಪ್ರಸಿದ್ಧಿಯಾಗಿರುವ ಸುದೀಪ್, ವಾಲ್ಮೀಕಿ ಸಮುದಾಯಕ್ಕೆ ಸೇರಿದವರು ಎಂಬುದನ್ನೂ ಕಾಂಗ್ರೆಸ್ ಗಂಭೀರವಾಗಿ ಪರಿಗಣಿಸಿದೆ.
ಪ್ರಮುಖವಾಗಿ ಉತ್ತರ ಕರ್ನಾಟಕದಲ್ಲಿ ವಾಲ್ಮೀಕಿ ಸಮುದಾಯ ಬೃಹತ್ ಸಂಖ್ಯೆಯಲ್ಲಿದೆ. ಬಿಜೆಪಿಯಲ್ಲಿ ವಾಲ್ಮೀಕಿ ಸಮುದಾಯದಿಂದ ಶ್ರೀರಾಮುಲು ಮುಂಚೂಣಿಯಲ್ಲಿದ್ದಾರೆ. ಇತ್ತೀಚೆಗೆ ಮೀಸಲಾತಿ ಪ್ರಮಾಣ ಹೆಚ್ಚಳದಿಂದ ಸಮುದಾಯದ ಮತಗಳು ಬಿಜೆಪಿಯತ್ತ ದೃವೀಕರಣವಾಗಿವೆ. ಕಾಂಗ್ರೆಸ್‌ಗೆ ಸುದೀಪ್ ಆಗಮಿಸಿದರೆ ವಾಲ್ಮೀಕಿ ಮತಗಳನ್ನು ತನ್ನತ್ತ ಸೆಳೆಯಲು ಸಹಕಾರವಾಗುತ್ತದೆ ಎಂಬ ಲೆಕ್ಕಾಚಾರವಿದೆ.
ಉತ್ತರ ಕರ್ನಾಟಕ ಅಥವಾ ದಕ್ಷಿಣ ಕರ್ನಾಟಕದ ಯಾವ ಕ್ಷೇತ್ರದಿಂದ ಸ್ಪರ್ಧೆ ಮಾಡಿದರೆ ಉತ್ತಮ ಎನ್ನುವವರೆಗೆ ತಂತ್ರಗಾರಿಕೆ ನಡೆದಿದೆ. ಪ್ರಮುಖವಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರಿಗೆ ಉತ್ತರ ಕರ್ನಾಟಕ ಭಾಗದಲ್ಲೂ ಶಕ್ತಿ ಹೆಚ್ಚಾಗುತ್ತದೆ. ಆದರೆ ಇಲ್ಲಿವರೆಗೂ ಸುದೀಪ್ ಕಡೆಯಿಂದ ಗ್ರೀನ್ ಸಿಗ್ನಲ್ ಬಂದಿಲ್ಲ. ರಾಜಕೀಯ ಕ್ಷೇತ್ರಕ್ಕೆ ಆಗಮಿಸಿದರೆ ತಮ್ಮ ಪ್ರಸಿದ್ಧಿಗೆ ಹೊಡೆ ಬೀಳುತ್ತದೆಯೇ? ಅಥವಾ ಸಾಮಾಜಿಕ ಸೇವೆಗೆ ಇದೇ ಉತ್ತಮ ವೇದಿಕೆಯೇಗಲಿದೆಯೇ? ಎನ್ನುವ ಕುರಿತು ಸುದೀಪ್ ಆಲೋಚನೆ ಮಾಡುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಇದನ್ನೂ ಓದಿ | Reservation in Karnataka | ವಾಲ್ಮೀಕಿ ಶ್ರೀಗಳ ಕೈಗೆ ಸುಗ್ರೀವಾಜ್ಞೆ ಪ್ರತಿಯಿತ್ತ ಸರ್ಕಾರ; 257 ದಿನದ ಪ್ರತಿಭಟನೆ ಅಂತ್ಯ