Site icon Vistara News

Power Point with HPK : ಸಿದ್ದರಾಮಯ್ಯ ಮೊದಲು ಭ್ರಷ್ಟಾಚಾರವನ್ನು ಮಟ್ಟ ಹಾಕಲಿ: ಬಸವರಾಜ ರಾಯರೆಡ್ಡಿ

Basavaraj Rayareddy in Power point with HPK

ಬೆಂಗಳೂರು: ಕರ್ನಾಟಕವು ವರ್ಗಾವಣೆ ದಂಧೆಯ (Transfer racket) ಕೂಪವಾಗಿದೆ. ಇದು ಮೊದಲು ನಿಲ್ಲಬೇಕು. ಅಲ್ಲದೆ, ಭ್ರಷ್ಟ ರಾಜ್ಯ ಎಂಬ ಹಣೆಪಟ್ಟಿಯನ್ನೂ ಹೊಂದಿದೆ. ಇದು ಈ ನಮ್ಮ ಕಾಂಗ್ರೆಸ್‌ ಸರ್ಕಾರ (Congress Government) ಮಾತ್ರವಲ್ಲ. ದಶಕಗಳಿಂದ ಕಾಡುತ್ತಾ ಬಂದಿರುವ ಸಮಸ್ಯೆಯಾಗಿದೆ. ಇದಕ್ಕೆ ಕಡಿವಾಣ ಹಾಕುವುದು. ವರ್ಗಾವಣೆಗೆ ಕಾನೂನು ಚೌಕಟ್ಟನ್ನು ನೀಡುವುದು ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಅವರಿಂದ ಮಾತ್ರವೇ ಸಾಧ್ಯ ಎಂದು ಹಿರಿಯ ರಾಜಕಾರಣಿ, ಯಲಬುರ್ಗಾ ಶಾಸಕ ಬಸವರಾಜ ರಾಯರೆಡ್ಡಿ (MLA Basavaraj Rayareddy) ಅವರು ಪವರ್‌ ಪಾಯಿಂಟ್‌ ವಿತ್ ಎಚ್‌ಪಿಕೆ (Power Point with HPK) ಸಂದರ್ಶನದಲ್ಲಿ ಹೇಳಿದರು.

ವಿಸ್ತಾರ ನ್ಯೂಸ್‌ ಪ್ರಧಾನ ಸಂಪಾದಕ ಹರಿಪ್ರಕಾಶ್‌ ಕೋಣೆಮನೆ (Hariprakash Konemane) ಅವರು ನಡೆಸಿಕೊಡುವ “ಪವರ್‌ ಪಾಯಿಂಟ್‌ ವಿತ್‌ ಎಚ್‌ಪಿಕೆ” ವಿಶೇಷ ಸಂದರ್ಶನದಲ್ಲಿ ಮಾತನಾಡಿದ ಶಾಸಕ ಬಸವರಾಜ ರಾಯರೆಡ್ಡಿ, ರಾಜ್ಯದಲ್ಲಿ ಮೊದಲು ವರ್ಗಾವಣೆ ದಂಧೆ ನಿಲ್ಲಬೇಕು. ಕ್ಲಾಸ್‌ ಒನ್‌ ಬಿಟ್ಟು, ಕ್ಲಾಸ್‌ 2, ಕ್ಲಾಸ್‌ 3, ಕ್ಲಾಸ್‌ 4 ವರ್ಗದವರ ವರ್ಗಾವಣೆಗೆ ಪ್ರತ್ಯೇಕ ನೀತಿ ರೂಪಿಸಬೇಕು. ಕೌನ್ಸೆಲಿಂಗ್‌ ಮಾದರಿ (Counselling Model) ಇಲ್ಲವೇ ಬೇರೆ ಯಾವುದಾದರೂ ಮಾದರಿಯನ್ನು ಅನುಸರಿಸಿ ವರ್ಗಾವಣೆಗೆ ಒಂದು ಚೌಕಟ್ಟನ್ನು ನೀಡಬೇಕು. ಈ ಬಗ್ಗೆ ಸಚಿವ ಕೃಷ್ಣ ಬೈರೇಗೌಡ (Minister Krishna ByreGowda) ಅವರಿಗೂ ಹೇಳಿದ್ದೇನೆ. ಅವರು ಒಬ್ಬ ಒಳ್ಳೆಯ ಸಚಿವರಾಗಿದ್ದಾರೆ ಎಂದು ಶಾಸಕ ಬಸವರಾಜ ರಾಯರೆಡ್ಡಿ ಹೇಳಿದರು.

ಈ ಬಗ್ಗೆ ನಾನು ಸಹ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಹೇಳುತ್ತೇನೆ. ಸಾಧ್ಯವಾದರೆ ಮುಂದಿನ ವರ್ಷದಿಂದ ಕ್ಲಾಸ್‌ 1 (ತಹಸೀಲ್ದಾರ್‌, ಜಿಲ್ಲಾಧಿಕಾರಿಯಂತಹ ಅಧಿಕಾರಿಗಳು) ವರ್ಗದವರನ್ನು ಬಿಟ್ಟು ಉಳಿದವರೆಲ್ಲರ ವರ್ಗಾವಣೆಯನ್ನು ಕೌನ್ಸೆಲಿಂಗ್‌ ಮುಖಾಂತರ ಮಾಡುವ ಕಾನೂನು ತನ್ನಿ ಎಂದು ಹೇಳಿದ್ದೇನೆ. ಈ ವರ್ಗಾವಣೆ ದಂಧೆ ನಿಲ್ಲಬೇಕು ಎಂದು ಶಾಸಕ ಬಸವರಾಜ ರಾಯರೆಡ್ಡಿ ಅಭಿಪ್ರಾಯಪಟ್ಟರು.

ಭ್ರಷ್ಟಾಚಾರಕ್ಕೆ ಬೀಳಲಿ ಕಡಿವಾಣ

ಇನ್ನು ಎರಡನೆಯದಾಗಿ ಭ್ರಷ್ಟಾಚಾರಕ್ಕೆ (Corruption in Karnataka) ಕಡಿವಾಣ ಬೀಳಬೇಕಿದೆ. ಕರ್ನಾಟಕವು ಭ್ರಷ್ಟ ರಾಜ್ಯ ಎಂಬ ಹಣೆಪಟ್ಟಿಯನ್ನು ಹೊಂದಿದೆ. ಈ ಕಳಂಕ ಹೋಗಬೇಕಿದೆ. ಈ ವಿಚಾರವನ್ನು ಸಿಎಂ ಸಿದ್ದರಾಮಯ್ಯ ಅವರು ಗಂಭೀರವಾಗಿ ತೆಗೆದುಕೊಳ್ಳಬೇಕು. ಹಾಗಂತ ಇದರಲ್ಲಿ ಸಿದ್ದರಾಮಯ್ಯ ಅವರು ಇದ್ದಾರೆ ಎಂದು ನಾನು ಹೇಳುತ್ತಿಲ್ಲ. 2000ನೇ ಇಸವಿಯಿಂದ ಇದು ಜಾಸ್ತಿಯಾಗುತ್ತಾ ಬಂದಿದೆ. ಕೊನೇ ಪಕ್ಷ ಈಗ ಸಿದ್ದರಾಮಯ್ಯ ಅವರಾದರೂ ಇದಕ್ಕೆ ಕಡಿವಾಣ ಹಾಕಬೇಕು. ಈಗ ವ್ಯವಸ್ಥೆ ಹಾಳಾಗಿದ್ದು, ಇದನ್ನು ಸರಿ ಮಾಡುವುದಿದ್ದರೆ ಸಿದ್ದರಾಮಯ್ಯ ಅವರಿಂದ ಮಾತ್ರವೇ ಸಾಧ್ಯ. ಕಾರಣ, ಅವರು ಬದ್ಧತೆ ಇರುವ ಮನುಷ್ಯ. ಅವರು ಧೈರ್ಯ ಮಾಡಿ ಭ್ರಷ್ಟತೆಯನ್ನು ತಡೆಯುತ್ತಾರೆ ಎಂಬ ವಿಶ್ವಾಸ ಇದೆ ಎಂದು ಶಾಸಕ ಬಸವರಾಜ ರಾಯರೆಡ್ಡಿ ಹೇಳಿದರು.

ಕಳೆದ 10 ವರ್ಷದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಂದ ಹೇಳಿಕೊಳ್ಳುವಂತಹ ಅಭಿವೃದ್ಧಿಯಾಗಿಲ್ಲ. ಜನರು ಸಹ ಇದನ್ನು ನೋಡಿದ್ದಾರೆ. ಸಾಕಷ್ಟು ಸಾಲವನ್ನೂ ಮಾಡಿಕೊಂಡಿದ್ದಾರೆ. ಮೋದಿಯಿಂದ ಮಾತ್ರ ಭಾರತ ಸುಧಾರಣೆ ಆಗಿದೆ ಎಂದು ಹೇಳಲಾಗದು. ನರೇಂದ್ರ ಮೋದಿ ಅವರು ಜಾಹೀರಾತುಗಳ ಮೂಲಕ ಹೆಚ್ಚು ಪ್ರಚಾರವನ್ನು ಪಡೆದುಕೊಂಡಿದ್ದಾರೆ. ಅವರ ಆಡಳಿತ ಆಕರ್ಷಣೀಯ ಎಂದು ನನಗೆ ಅನ್ನಿಸಿಲ್ಲ ಎಂದು ಶಾಸಕ ಬಸವರಾಜ ರಾಯರೆಡ್ಡಿ ಅಭಿಪ್ರಾಯ ವ್ಯಕ್ತಪಡಿಸಿದರು.

ಇದನ್ನೂ ಓದಿ: Power Point with HPK : ಜಾತಿ ವ್ಯವಸ್ಥೆಯಿಂದ ನನಗೆ ಸಚಿವ ಸ್ಥಾನ ಕೈತಪ್ಪಿದೆ: ಬಸವರಾಜ ರಾಯರೆಡ್ಡಿ ಬೇಸರ

ಮಲ್ಲಿಕಾರ್ಜುನ ಖರ್ಗೆಯೇ ಪ್ರಧಾನಿ ಆಗಬಹುದು

ಇನ್ನು ಸೈಕಾಲಾಜಿಕಲಿ ಕಾಂಗ್ರೆಸ್‌ನಲ್ಲಿ ನಾಯಕತ್ವ ಇಲ್ಲ ಎಂಬ ಭಾವನೆ ಜನರಲ್ಲಿ ಬಂದಿದೆ. ಆದರೆ, ಇತ್ತೀಚಿನ ದಿನಗಳಲ್ಲಿ ರಾಹುಲ್‌ ಗಾಂಧಿ ಅವರು ಪ್ರಬಲ ನಾಯಕರಾಗಿ ಬೆಳೆಯುತ್ತಿದ್ದಾರೆ. ಇದೇ ಸಂದರ್ಭದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೂ ಸಹ ಒಳ್ಳೆ ಅವಕಾಶ ಇದೆ. ಅವರು ಗುಣಮಟ್ಟದ, ಬದ್ಧತೆಯುಳ್ಳ ನಾಯಕರಾಗಿದ್ದಾರೆ. ಖರ್ಗೆ ಅವರೇ ಮುಂದಿನ ಪ್ರಧಾನಿ ಆಗಬಹುದು. ಒಬ್ಬ ದಲಿತ ಪ್ರಧಾನಿ ಹುದ್ದೆಗೆ ಏಕೆ ಏರಬಾರದು? ಎಂದು ಶಾಸಕ ಬಸವರಾಜ ರಾಯರೆಡ್ಡಿ ಹೇಳಿದರು.

Exit mobile version