Site icon Vistara News

Belagavi Winter Session: ವಿಧೇಯಕ ಮಂಡನೆ; ಆನ್‌ಲೈನ್‌ ಗೇಮಿಂಗ್‌ ಆಡ್ತೀರಾ? ಇನ್ಮುಂದೆ ತೆರಿಗೆ ಕಟ್ಟಿ!

Karnataka Goods and Services Tax Amendment 2023 Bill on Karnataka Goods and Services Tax Amendment 2023 Bill

ಬೆಳಗಾವಿ: ಲಂಗು – ಲಗಾಮುಗಳಿಲ್ಲದೆ ನಡೆಯುತ್ತಿದ್ದ ಆನ್‌ಲೈನ್‌ ಗೇಮಿಂಗ್‌ (online gaming), ಜೂಜುಗಳಿಗೆ ಕಡಿವಾಣ ಹಾಕಲು ರಾಜ್ಯ ಸರ್ಕಾರ ಮುಂದಾಗಿದೆ. ಈ ನಿಟ್ಟಿನಲ್ಲಿ ಕರ್ನಾಟಕ ಸರಕು ಮತ್ತು ಸೇವೆಗಳ ತೆರಿಗೆ (ತಿದ್ದುಪಡಿ ವಿದೇಯಕ) 2023 (Karnataka Goods and Services Tax (Amendment) 2023) ಅನ್ನು ವಿಧಾನ ಮಂಡಲ ಅಧಿವೇಶನದಲ್ಲಿ (Belagavi Winter Session) ರಾಜ್ಯ ಸರ್ಕಾರ ಮಂಡಿಸಿದೆ. ಬೆಟ್ಟಿಂಗ್, ಕ್ಯಾಸಿನೋ, ಜೂಜು, ಕುದುರೆ ರೇಸ್ ಆಡುವವರಿಗೆ ಇದು ಅನ್ವಯವಾಗಲಿದೆ.

ಈ ಮೂಲಕ ರಾಜ್ಯ ಸರ್ಕಾರ ಆನ್‌ಲೈನ್ ಗೇಮುಗಳಿಗೆ ತೆರಿಗೆ ವಿಧಿಸಲು ಮುಂದಾಗಿದೆ. ಅಲ್ಲದೆ, ಆನ್‌ಲೈನ್ ಗೇಮ್‌ ಮತ್ತು ಜೂಜುಗಳ ಮೇಲೆ ನಿಯಂತ್ರಣ ಸಾಧಿಸಲು ಈ ವಿಧೇಯಕ ಅಧಿಕಾರ ನೀಡಿದೆ. ಆನ್‌ಲೈನ್‌ ಜೂಜಿನಲ್ಲಿ ಹಣ ಕಳೆದುಕೊಂಡು ಹಲವಾರು ವ್ಯಕ್ತಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೆಲವರು ಡಿಪ್ರೆಶನ್‌ಗೆ ಒಳಗಾಗಿದ್ದಾರೆ. ಕೆಲವು ಸಂಸಾರಗಳು ಬೀದಿಗೆ ಬಂದಿವೆ. ಆದರೆ, ಇದಕ್ಕೆ ಯಾವುದೇ ರೀತಿಯಾದಂತಹ ಕಡಿವಾಣ ಇರಲಿಲ್ಲ. ಇನ್ನು ಮುಂದೆ ರಾಜ್ಯ ಸರ್ಕಾರ ಕಠಿಣ ನಿರ್ಣಯವನ್ನು ಕೈಗೊಳ್ಳಬಹುದಾಗಿದೆ.

ಪರೀಕ್ಷೆ ಅಕ್ರಮ ತಡೆ ವಿಧೇಯಕ ಮಂಡನೆ

ಕರ್ನಾಟಕ ಸಾರ್ವಜನಿಕ ಪರೀಕ್ಷೆ (Karnataka Public Examination) (ನೇಮಕಾತಿಯಲ್ಲಿನ ಭ್ರಷ್ಟಾಚಾರ ಮತ್ತು ಅನುಸೂಚಿತ ವಿಧಾನಗಳ ಪ್ರತಿಬಂಧಕ ಕ್ರಮಗಳು) ವಿಧೇಯಕ 2023 ಅನ್ನು ವಿಧಾನ ಮಂಡಲ ಅಧಿವೇಶನದಲ್ಲಿ (Belagavi Winter Session) ಮಂಡನೆ ಮಾಡಲಾಯಿತು. ಈ ಮೂಲಕ ನೇಮಕಾತಿ ಪರೀಕ್ಷೆ (Exam Scam) ವೇಳೆ ಆಗುತ್ತಿರುವ ಅಕ್ರಮದಂತಹ ಪ್ರಕರಣಗಳಿಗೆ ತಡೆಯೊಡ್ಡಲು ಕಠಿಣ ಕಾನೂನನ್ನು ರಾಜ್ಯ ಸರ್ಕಾರ ರೂಪಿಸಿದಂತಾಗಿದೆ.

ಕಳೆದ ಕೆಲವು ವರ್ಷಗಳಿಂದ ರಾಜ್ಯದಲ್ಲಿ ಪಿಎಸ್‌ಐ, ಸಹಾಯಕ ಪ್ರಾಧ್ಯಾಪಕರ ಹುದ್ದೆ, ಎಫ್.ಡಿ.ಎ ಸೇರಿದಂತೆ ಸರ್ಕಾರದ ಹಲವು ನೇಮಕಾತಿಗಳಲ್ಲಿ ವ್ಯಾಪಕವಾಗಿ ಅಕ್ರಮಗಳು ನಡೆದಿದ್ದವು. ಇದರಿಂದ ವರ್ಷಾನುಗಟ್ಟಲೆಯಿಂದ ಪರೀಕ್ಷೆಗೆ ತಯಾರಿ ನಡೆಸಿ, ಪ್ರಾಮಾಣಿಕವಾಗಿ ಪರೀಕ್ಷೆ ಎದುರಿಸಿದ್ದ ಸಾವಿರಾರು ಅಭ್ಯರ್ಥಿಗಳು ಉದ್ಯೋಗದಿಂದ ವಂಚಿತರಾಗಿದ್ದರು. ಇಂತಹ ಅಕ್ರಮ, ಅವ್ಯವಹಾರವನ್ನು ತಡೆಗಡ್ಡಿ, ಅರ್ಹರಿಗೆ ಸರ್ಕಾರಿ ಉದ್ಯೋಗಗಳು ದೊರಕುವಂತೆ ಮಾಡಲು ಕಟ್ಟುನಿಟ್ಟಿನ ಪರೀಕ್ಷಾ ವಿಧಾನ, ಪಾರದರ್ಶಕ ನೇಮಕಾತಿ ಪ್ರಕ್ರಿಯೆಯ ಅಳವಡಿಕೆ ಮಾಡಲು ಈ ನೂತನ ಮಸೂದೆಯನ್ನು ಮಂಡಿಸಲಾಗಿದೆ.

ಇದನ್ನೂ ಓದಿ: CM Siddaramaiah: ಮುಸ್ಲಿಂ ಸಮಾವೇಶದಲ್ಲಿ ಸಿಎಂ ಪಕ್ಕ ಕುಳಿತಿದ್ದ ಐಸಿಸ್‌ ಸಂಪರ್ಕಿತ; ಸಾಕ್ಷಿ ಕೊಡುವೆನೆಂದ ಯತ್ನಾಳ್‌

ಅರ್ಹರಿಗೆ ಮಾತ್ರ ಉದ್ಯೋಗ ಎಂದಿದ್ದ ಸಿಎಂ ಸಿದ್ದರಾಮಯ್ಯ

ಖಾಲಿ ಹುದ್ದೆಗಳನ್ನು ಭರ್ತಿ ಮಾಡುವುದಷ್ಟೇ ಅಲ್ಲ, ಅರ್ಹರಿಗೆ ಮಾತ್ರ ಉದ್ಯೋಗ ಸಿಗಬೇಕು ಎಂಬ ನಿಟ್ಟಿನಲ್ಲಿ ಈ ವಿಧೇಯಕವನ್ನು ಮಂಡನೆ ಮಾಡುತ್ತಿರುವುದಾಗಿ ಈಚೆಗೆ ಸಿಎಂ ಸಿದ್ದರಾಮಯ್ಯ ಹೇಳಿದ್ದರು.

ಕರ್ನಾಟಕ ಸಾರ್ವಜನಿಕ ಪರೀಕ್ಷೆ (ನೇಮಕಾತಿಯಲ್ಲಿನ ಭ್ರಷ್ಟಾಚಾರ ಮತ್ತು ಅನುಸೂಚಿತ ವಿಧಾನಗಳ ಪ್ರತಿಬಂಧಕ ಕ್ರಮಗಳು) ವಿಧೇಯಕ 2023 ಮಂಡನೆಯಾಗಿದ್ದರಿಂದ ಇನ್ನು ಅಕ್ರಮ ಎಸಗುವವರ ಮೇಲೆ ಕಠಿಣ ಕಾನೂನು ಕ್ರಮಗಳನ್ನು ಕೈಗೊಳ್ಳುವ ಅವಕಾಶ ಸಿಕ್ಕಂತೆ ಆಗಿದೆ. ಒಂದು ವೇಳೆ ಇಂತಹ ಸಾರ್ವಜನಿಕ ಪರೀಕ್ಷೆಯಲ್ಲಿ ಅಕ್ರಮ ಮಾಡಿ ಸಾಬೀತಾದಲ್ಲಿ ಅಂಥವರ ಆಸ್ತಿಯನ್ನು ಜಪ್ತಿ ಮಾಡುವ ಅಧಿಕಾರವನ್ನು ರಾಜ್ಯ ಸರ್ಕಾರ ಹೊಂದಿದೆ. ಅಲ್ಲದೆ, ಅವರಿಗೆ 8ರಿಂದ 12 ವರ್ಷದ ವರೆಗೆ ಜೈಲು ಶಿಕ್ಷೆಯನ್ನೂ ವಿಧಿಸಿ ದಂಡ ಹಾಕುವ ಅವಕಾಶವನ್ನೂ ಸಹ ನೀಡಲಾಗಿದೆ.

ಏನೇನು ಕಠಿಣ ನಿಯಮಗಳು ಜಾರಿ?

  1. ಪರೀಕ್ಷೆ ಅಕ್ರಮದಲ್ಲಿ ಭಾಗಿಯಾದ ವ್ಯಕ್ತಿಯ ಆಸ್ತಿ ಜಪ್ತಿಗೆ ಅವಕಾಶ
  2. 8- 12 ವರ್ಷದ ವರೆಗೆ ಜೈಲು ಶಿಕ್ಷೆ ವಿಧಿಸುವ ಅಧಿಕಾರ
  3. 15 ಲಕ್ಷ ರೂಪಾಯಿಯಿಂದ 10 ಕೋಟಿ ರೂಪಾಯಿವರೆಗೂ ದಂಡ ವಿಧಿಸಲು ಅವಕಾಶ

ಇದನ್ನೂ ಓದಿ: BJP Karnataka: ನನ್ನ ಬಾಯಿ ಮುಚ್ಚಿಸಲು ಆಗಲ್ಲ; ಉಪ ನಾಯಕನಿಗೆ ಪವರ್‌ ಇಲ್ಲ: ಬಿಜೆಪಿ ವಿರುದ್ಧ ಯತ್ನಾಳ್‌ ಕಿಡಿ

ಆರ್‌.ಡಿ. ಪಾಟೀಲ್‌ಗೆ ಎದುರಾಗುವುದೇ ಸಂಕಷ್ಟ?

ಈಗಾಗಲೇ ಪಿಎಸ್‌ಐ ನೇಮಕಾತಿ ಅಕ್ರಮ ಹಾಗೂ ಕೆಇಎ ನಡೆಸಿದ ನಿಗಮ ಮಂಡಳಿ ನೇಮಕಾತಿಗೆ ಸಂಬಂಧಪಟ್ಟ ಪರೀಕ್ಷೆಯಲ್ಲಿ ಪ್ರಮುಖ ಆರೋಪಿಯಾಗಿ ಪೊಲೀಸ್‌ ಕಸ್ಟಡಿಯಲ್ಲಿರುವ ಆರ್‌.ಡಿ. ಪಾಟೀಲ್‌ಗೆ ಈ ವಿಧೇಯಕದಿಂದ ಸಂಕಷ್ಟ ಎದುರಾಗಲಿದೆ. ಒಂದು ವೇಳೆ ಪ್ರಕರಣ ಸಾಬೀತಾದರೆ ಅವರಿಗೆ ಈ ಎಲ್ಲ ರೀತಿಯ ಶಿಕ್ಷೆ ವಿಧಿಸುವ ಅಧಿಕಾರ ರಾಜ್ಯ ಸರ್ಕಾರಕ್ಕೆ ಇದೆ.

Exit mobile version