ಬೆಂಗಳೂರು: ರಾಜ್ಯದಲ್ಲಿ ಲೂಟಿ ಹೊಡೆದ ಹಣವನ್ನು ತೆಲಂಗಾಣದಲ್ಲಿ ವಿಧಾನಸಭಾ ಚುನಾವಣೆಗೆ (Assembly Elections 2023) ವೆಚ್ಚ ಮಾಡಿ ಕಾಂಗ್ರೆಸ್ ಪಕ್ಷ (Congress Karnataka) ಗೆಲುವು ಸಾಧಿಸಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ (HD Kumaraswamy) ಹೇಳಿದರು.
ಬೆಂಗಳೂರಿನಲ್ಲಿ ಚುನಾವಣೆ ಫಲಿತಾಂಶದ ಬಗ್ಗೆ ಮಾಧ್ಯಮಗಳು ಕೇಳಿದ ಪ್ರಶ್ನೆಗಳಿಗೆ ಪ್ರತಿಕ್ರಿಯೆ ನೀಡಿದ ಎಚ್.ಡಿ. ಕುಮಾರಸ್ವಾಮಿ, ಪಂಚರಾಜ್ಯಗಳನ್ನೂ ಆವರಿಸಿಕೊಂಡೇ ಬಿಟ್ಟೆವು ಎಂದು ಬೀಗುತ್ತಿದ್ದ ಕಾಂಗ್ರೆಸ್ ಗರ್ವಭಂಗ ಆಗಿದೆ. ತೆಲಂಗಾಣದ ಗೆಲುವು ಅದರ ಸ್ವಶಕ್ತಿಯಿಂದ ಪಡೆದ ಗೆಲುವಲ್ಲ. ದೇಶದ ಎಲ್ಲ ಕಡೆ ಕಾಂಗ್ರೆಸ್ ಪ್ರಭಾವ ಕುಗ್ಗಿದೆ ಎಂಬುದಕ್ಕೆ ಈ ಫಲಿತಾಂಶ ಸಾಕ್ಷಿ ಎಂದು ಎಚ್.ಡಿ. ಕುಮಾರಸ್ವಾಮಿ ಅಭಿಪ್ರಾಯಪಟ್ಟರು.
ಇದನ್ನೂ ಓದಿ: Assembly Session: ಅಧಿವೇಶನಕ್ಕೆ ಬೇಗ ಬಂದವರಿಗೆ ಟೀ ಕಪ್; ತಡವಾಗಿ ಬಂದವರಿಗೂ ಪ್ರಶಸ್ತಿ: ಯು.ಟಿ. ಖಾದರ್
ಆಸೆ, ಆಮಿಷಗಳನ್ನು ಮುಂದೊಡ್ಡಿ ಕಾಂಗ್ರೆಸ್ ಅಧಿಕಾರಕ್ಕೆ
ಹಲವಾರು ಮತಗಟ್ಟೆ ಸಮೀಕ್ಷೆಗಳು ಜನರ ಮುಂದೆ ಇದ್ದವು. ಎರಡು ರಾಜ್ಯಗಳಲ್ಲಿ ಬಿಜೆಪಿ, ಎರಡು ರಾಜ್ಯಗಳಲ್ಲಿ ಕಾಂಗ್ರೆಸ್ ಅಂತ ಈ ಸಮೀಕ್ಷೆಗಳು ಭವಿಷ್ಯ ಹೇಳಿದ್ದವು. ಎಲ್ಲವೂ ಉಲ್ಟಾ ಆಗಿದೆ. ಪ್ರಧಾನಿ ನರೇಂದ್ರ ಮೋದಿಯವರ ನಾಯಕತ್ವಕ್ಕೆ ಬೆಂಬಲದ ರೂಪದಲ್ಲಿ ಜನತೆ ತೀರ್ಮಾನ ಕೈಗೊಂಡಿದ್ದಾರೆ. ತೆಲಂಗಾಣದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೂ ಆ ಪಕ್ಷದ ಮುಂದೆ ಸಾಕಷ್ಟು ಸವಾಲುಗಳು ಇವೆ. ಅನೇಕ ಆಸೆ, ಆಮಿಷಗಳನ್ನು ಮುಂದೊಡ್ಡಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ ಎಂದು ಎಚ್.ಡಿ. ಕುಮಾರಸ್ವಾಮಿ ಆರೋಪಿಸಿದರು.
ಆರ್ಥಿಕ ಥೈಲಿಗಳು, ಚೀಲಗಳು ತೆಲಂಗಾಣದ ಗೆಲುವಿಗೆ ಕಾರಣ
ಕರ್ನಾಟಕದ ನಾಯಕರ ಪ್ರಚಾರದಿಂದ ತೆಲಂಗಾಣದಲ್ಲಿ ಕಾಂಗ್ರೆಸ್ ಗೆದ್ದಿಲ್ಲ. ಕರ್ನಾಟಕದಿಂದ ಅಲ್ಲಿಗೆ ರವಾನೆಯಾದ ಆರ್ಥಿಕ ಥೈಲಿಗಳು, ಚೀಲಗಳು ಈ ಗೆಲುವಿಗೆ ಕಾರಣ. ಇವರ ಸಮಾಜ ಸೇವೆ, ಅಭಿವೃದ್ಧಿಗೆ ಪೂರಕವಾಗಿ ಜನಸೇವೆ ನೋಡಿ ಜನರು ತೆಲಂಗಾಣದಲ್ಲಿ ತೀರ್ಮಾನ ಮಾಡಿದ್ದಲ್ಲ. ತೆಲಂಗಾಣದಲ್ಲಿ ಕಾಂಗ್ರೆಸ್ ಗೆಲ್ಲಲು ನಾನಾ ಕಾರಣಗಳಿವೆ, ಕುತಂತ್ರಗಳು ಕೆಲಸ ಮಾಡಿವೆ. ಲೋಕಸಭೆ ಚುನಾವಣೆ ಬಳಿಕ ಏನೇನಾಗುತ್ತದೆ ಎಂಬುದನ್ನು ನೋಡಬೇಕಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಮಾರ್ಮಿಕವಾಗಿ ತಿವಿದರು.
ರಾಜ್ಯಪಾಲರಿಗೆ ಬರ ಅಧ್ಯಯನ ವರದಿ ಸಲ್ಲಿಸಿದ ಜೆಡಿಎಸ್
ರಾಜ್ಯಾದ್ಯಂತ ಜೆಡಿಎಸ್ ಪಕ್ಷ ನಡೆಸಿದ್ದ ಬರ ಅಧ್ಯಯನ ವರದಿಯನ್ನು (JDS Drought Study) ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ (HD Kumaraswamy) ಅವರು ಭಾನುವಾರ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರಿಗೆ ಸಲ್ಲಿಸಿದರು. ಪಕ್ಷದ ಶಾಸಕರು, ಮಾಜಿ ಸಚಿವರು, ಮಾಜಿ ಶಾಸಕರು ಹಾಗೂ ಜಿಲ್ಲಾ ಘಟಕಗಳ ಅಧ್ಯಕ್ಷರ ಜತೆ ರಾಜಭವನಕ್ಕೆ ನಿಯೋಗದಲ್ಲಿ ತೆರಳಿದ ಅವರು, ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.
ಕೂಡಲೇ ತಾವು ರಾಜ್ಯದಲ್ಲಿ ಬರ ಪರಿಹಾರ ಕಾರ್ಯಗಳನ್ನು ಕೈಗೊಳ್ಳಲು ಕೇಂದ್ರದಿಂದ ಅನುದಾನ ಕೊಡಿಸಲು ಮಧ್ಯಪ್ರದೇಶ ಮಾಡಬೇಕೆಂದು ಮಾಜಿ ಮುಖ್ಯಮಂತ್ರಿಗಳು ರಾಜ್ಯಪಾಲರಲ್ಲಿ ಮನವಿ ಮಾಡಿದರು. ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ ರಾಜ್ಯಪಾಲರು, ನಿಮ್ಮ ಅಹವಾಲನ್ನು ಕೇಂದ್ರ ಸರ್ಕಾರದ ಗಮನಕ್ಕೆ ತರುವುದಾಗಿ ಭರವಸೆ ನೀಡಿದರು. ರಾಜ್ಯ ಎದುರಿಸುತ್ತಿರುವ ತೀವ್ರ ಪರಿಸ್ಥಿತಿಯನ್ನು ಕೇಂದ್ರದ ಗಮನಕ್ಕೆ ತರುವುದಾಗಿ ತಿಳಿಸಿದರು.
ಮಾನ್ಸೂನ್ ವೈಫಲ್ಯದಿಂದ ರಾಜ್ಯದಲ್ಲಿ ಒಟ್ಟು 48.15 ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿಯಾಗಿದೆ. ಈ ಪೈಕಿ 46.09 ಲಕ್ಷ ಹೆಕ್ಟೇರ್ ಕೃಷಿ ಬೆಳೆ ಹಾಗೂ 2.06 ಲಕ್ಷ ಹೆಕ್ಟೇರ್ ತೋಟಗಾರಿಕೆ ಬೆಳೆ ನಾಶವಾಗಿದೆ. ರಾಜ್ಯ ಸರ್ಕಾರವೇ ಅಂದಾಜು ಮಾಡಿರುವಂತೆ ರಾಜ್ಯದಲ್ಲಿ ಒಟ್ಟು 35.162.02 ಕೋಟಿ ರೂಪಾಯಿಯಷ್ಟು ಬೆಳೆ ಹಾನಿ ಆಗಿದ್ದು, ಎನ್ಡಿಆರ್ಎಫ್ ಮಾನದಂಡದ ಅಡಿಯಲ್ಲಿ ಕೇಂದ್ರ ಸರ್ಕಾರದಿಂದ 18,171.44 ಕೋಟಿ ರೂಪಾಯಿ ಪರಿಹಾರವನ್ನು ರಾಜ್ಯ ಸರ್ಕಾರ ಕೋರಿದೆ. ಆದರೆ, ಇಷ್ಟು ಮೊತ್ತದ ಪರಿಹಾರದಿಂದ ರಾಜ್ಯದ ರೈತರ ಬವಣೆ ನೀಗುವುದಿಲ್ಲ. ಕೃಷಿಕರು ಅನುಭವಿಸಿರುವ ಒಟ್ಟಾರೆ ನಷ್ಟದಲ್ಲಿ ಶೇ.10ರಷ್ಟು ಪರಿಹಾರವೂ ಅವರಿಗೆ ಸಿಗುವುದಿಲ್ಲ. ಆದ್ದರಿಂದ ಈ ಹಿಂದೆ ನೀಡದಂತೆ ಪ್ರತಿ ಹೆಕ್ಟೇರ್ ಬೆಳೆ ನಾಶಕ್ಕೆ ಹೆಚ್ಚುವರಿ ಪರಿಹಾರವಾಗಿ 17,500 ರೂಪಾಯಿ ನೀಡಬೇಕು. ಈ ನಿಟ್ಟಿನಲ್ಲಿ ತಾವು ರಾಜ್ಯ ಸರಕಾರಕ್ಕೆ ಕಟ್ಟುನಿಟ್ಟಿನ ನಿರ್ದೇಶನ ನೀಡಬೇಕು ಎಂದು ಕುಮಾರಸ್ವಾಮಿ ಅವರು ರಾಜ್ಯಪಾಲರಲ್ಲಿ ಮನವಿ ಮಾಡಿದರು.
ಬರ ಪರಿಹಾರ ನಿರ್ವಹಣೆಯಲ್ಲಿ ಸರ್ಕಾರ ಪೂರ್ಣ ವಿಫಲ
ರಾಜ್ಯದಲ್ಲಿ ಬರ ಪರಿಸ್ಥಿತಿ ನಿರ್ವಹಣೆ ಹಾಗೂ ಪರಿಹಾರ ಕ್ರಮ ಕೈಗೊಳ್ಳುವಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದೆ. ಅನೇಕ ಜಿಲ್ಲೆಗಳಲ್ಲಿ ಕುಡಿಯುವ ಸಮಸ್ಯೆ ಇದೆ. ಜಾನುವಾರುಗಳು ಕೂಡ ಸಂಕಷ್ಟದಲ್ಲಿವೆ. ರಾಜಧಾನಿ ಬೆಂಗಳೂರಿನಲ್ಲಿಯೂ ನೀರಿನ ಸಂಕಷ್ಟ ಎದುರಾಗಿದೆ ಎಂದು ರಾಜ್ಯಪಾಲರಿಗೆ ಕುಮಾರಸ್ವಾಮಿ ಅವರು ದೂರಿದರು.
ರಾಜ್ಯ ಸರ್ಕಾರ ಬರ ಪರಿಸ್ಥಿತಿಯನ್ನು ಬಹಳ ಅಸಡ್ಡೆಯಿಂದ ನೋಡುತ್ತಿದೆ. ತೀವ್ರ ನಷ್ಟ ಅನುಭವಿಸಿದ ರೈತರಿಗೆ ಬರ ಪರಿಹಾರ ನೀಡದೆ ರಾಜ್ಯ ಸರ್ಕಾರ ತನ್ನ ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿದೆ ಎಂಬ ಅಂಶವನ್ನು ಅವರು ರಾಜ್ಯಪಾಲರ ಗಮನಕ್ಕೆ ತಂದರು.
ರಾಜ್ಯದಲ್ಲಿ ರೈತರ ಆತ್ಮಹತ್ಯೆ ಸರಣಿ ಆರಂಭವಾಗಿದೆ. ಕಳೆದ ಆರು ತಿಂಗಳಿನಿಂದ ರಾಜ್ಯ ಸರ್ಕಾರ ರೈತರ ಬಗ್ಗೆ ಎಳ್ಳಷ್ಟೂ ಕಾಳಜಿ ವಹಿಸಿಲ್ಲ. ರಾಜಕೀಯದಲ್ಲಿ ಮೈ ಮರೆತಿದೆ ಎಂದು ಮಾಜಿ ಮುಖ್ಯಮಂತ್ರಿ ಅವರು ಹೇಳಿದರು.
ರಾಜ್ಯಪಾಲರಿಂದ ಸಕಾರಾತ್ಮಕ ಸ್ಪಂದನೆ
ರಾಜ್ಯಪಾಲರ ಭೇಟಿ ನಂತರ ಮಾಧ್ಯಮಗಳ ಜತೆ ಮಾತನಾಡಿದ ಕುಮಾರಸ್ವಾಮಿ ಅವರು, ನಮ್ಮ ಮನವಿಗೆ ರಾಜ್ಯಪಾಲರು ಅತ್ಯಂತ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಮನವಿ ಬಗ್ಗೆ ಕೇಂದ್ರ ಸರ್ಕಾರದ ಗಮನ ಸೆಳೆದು ನಾಡಿನ ಜನರ ಹಿತ ಕಾಪಾಡುವ ಭರವಸೆ ನೀಡಿದ್ದಾರೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಜೆಡಿಎಸ್ ರಾಜ್ಯ ಕೋರ್ ಕಮಿಟಿ ಅಧ್ಯಕ್ಷ ಜಿಟಿ ದೇವೇಗೌಡರು ಸೇರಿದಂತೆ ಎಲ್ಲಾ ಶಾಸಕರು, ವಿಧಾನ ಪರಿಷತ್ ಸದಸ್ಯರು, ಮಾಜಿ ಸಚಿವರು, ಮಾಜಿ ಶಾಸಕರು ಹಾಗೂ ಜಿಲ್ಲಾ ಘಟಕಗಳ ಅಧ್ಯಕ್ಷರು ಮಾಜಿ ಮುಖ್ಯಮಂತ್ರಿ ಅವರ ಜತೆಯಲ್ಲಿ ಇದ್ದರು.
ಇದನ್ನೂ ಓದಿ | Assembly Elections 2023 : ದಕ್ಷಿಣ ಭಾರತದಲ್ಲಿ ಕಾಂಗ್ರೆಸ್ ಪ್ರಾಬಲ್ಯ ಮುಂದುವರಿಕೆಯ ಸಂಕೇತ: ಡಿಕೆಶಿ
ಮನವಿಯ ಪ್ರಮುಖ ಅಂಶಗಳು
- ಕೇಂದ್ರ ಸರ್ಕಾರದಿಂದ ಎನ್ಡಿಆರ್ಎಫ್ ಮಾನದಂಡದ ಅನ್ವಯ ಕೂಡಲೇ ರಾಜ್ಯಕ್ಕೆ 17,181.44 ಕೋಟಿ ರೂಪಾಯಿ ಬಿಡುಗಡೆ ಮಾಡಿಸಲು ರಾಜ್ಯಪಾಲರು ಮನವೊಲಿಸಬೇಕು.
- ಕುಡಿಯುವ ನೀರು, ಜಾನುವಾರುಗಳ ಸಂರಕ್ಷಣೆ, ಕೃಷಿ ಕಾರ್ಮಿಕರಿಗೆ ನೆರವು, ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ನೆರವು ನೀಡುವ ಉದ್ದೇಶದಿಂದ ಎಲ್ಲ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ 10,000 ಕೋಟಿ ರೂಪಾಯಿ ಬಿಡುಗಡೆ ಮಾಡಲು ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಬೇಕು.
- ವಿಮಾ ಕಂಪನಿಗಳು ಬೆಳೆ ನಷ್ಟ ಅನುಭವಿಸಿದ ರೈತರಿಗೆ ಪರಿಹಾರ ನೀಡಲು ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ರಾಜ್ಯಪಾಲರು ಕ್ರಮ ವಹಿಸಬೇಕು.
- ಬೆಂಗಳೂರು ನಗರ ಕುಡಿಯುವ ನೀರಿನ ತೀವ್ರ ಬಿಕ್ಕಟ್ಟು ಎದುರಿಸುತ್ತಿದೆ. ಇದಕ್ಕೆ ಏಕೈಕ ಪರಿಹಾರ ಆಗಿರುವ ಮೇಕೆದಾಟು ಯೋಜನೆಗೆ ಕೇಂದ್ರ ಸರ್ಕಾರದ ಒಪ್ಪಿಗೆ ಕೊಡಿಸುವ ನಿಟ್ಟಿನಲ್ಲಿ ರಾಜ್ಯಪಾಲರು ಕ್ರಮ ವಹಿಸಬೇಕು.