Site icon Vistara News

Karnataka Legislative Council: ಪರಿಷತ್ ಚುನಾವಣೆಯಲ್ಲಿ ಬಿಜೆಪಿಗೆ ಐದಲ್ಲ 4 ಕ್ಷೇತ್ರ; ಜೆಡಿಎಸ್‌ಗೆ 2 ಕ್ಷೇತ್ರ ಬಿಟ್ಟುಕೊಡಲು ತೀರ್ಮಾನ?

six seats of Karnataka Legislative Council Elections to be held on June 3

ಬೆಂಗಳೂರು: ಸಂಸದ ಪ್ರಜ್ವಲ್‌ ರೇವಣ್ಣ ಅವರದ್ದು ಎನ್ನಲಾದ ಅಶ್ಲೀಲ ವಿಡಿಯೊ ಪ್ರಕರಣದಿಂದಾಗಿ ಬಿಜೆಪಿ – ಜೆಡಿಎಸ್‌ ಮೈತ್ರಿ ಮುಗಿದೇ ಹೋಯಿತು ಎಂದೇ ಹೇಳಲಾಗುತ್ತಿತ್ತು. ಆದರೆ, ಮುಂಬರುವ ವಿಧಾನ ಪರಿಷತ್‌ ಚುನಾವಣೆಯಲ್ಲಿ (Karnataka Legislative Council Election) ಮೈತ್ರಿ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಬಿಜೆಪಿ ತೀರ್ಮಾನ ಮಾಡಿದ್ದು, ಆರು ಕ್ಷೇತ್ರಗಳ ಪೈಕಿ 5 ಕ್ಷೇತ್ರವನ್ನು ತಾನಿಟ್ಟುಕೊಂಡು ಇನ್ನೊಂದನ್ನು ಜೆಡಿಎಸ್‌ಗೆ ಬಿಟ್ಟುಕೊಟ್ಟಿತ್ತು. ಆದರೆ, ಈಗ ಈ ಸೀಟು ಹಂಚಿಕೆಯಲ್ಲಿಯೂ ಬದಲಾವಣೆ ಮಾತುಗಳು ಕೇಳಿಬಂದಿದ್ದು, ದಕ್ಷಿಣ ಶಿಕ್ಷಕರ‌ ಕ್ಷೇತ್ರದ ಅಭ್ಯರ್ಥಿಯನ್ನು ಬದಲಾವಣೆ ಮಾಡುವ ತೀರ್ಮಾನಕ್ಕೆ ಬಿಜೆಪಿ ಬಂದಿದೆ ಎನ್ನಲಾಗಿದೆ.

ಹೀಗಾಗಿ ಕರ್ನಾಟಕ ವಿಧಾನ ಪರಿಷತ್‌ ಚುನಾವಣೆಯಲ್ಲೂ ಬಿಜೆಪಿ ಹಾಗೂ ಜೆಡಿಎಸ್‌ ಮೈತ್ರಿ ಮಾಡಿಕೊಂಡಿದ್ದು, ಆರು ಕ್ಷೇತ್ರಗಳ ಪೈಕಿ ಈ ಮೊದಲು ಐದು ಕ್ಷೇತ್ರಗಳನ್ನು ಬಿಜೆಪಿ (BJP) ಇಟ್ಟುಕೊಂಡರೆ, ಒಂದು ಕ್ಷೇತ್ರವನ್ನು ಜೆಡಿಎಸ್‌ಗೆ (JDS Karnataka) ಬಿಟ್ಟುಕೊಟ್ಟಿತ್ತು. ಲೋಕಸಭೆ ಚುನಾವಣೆಯಲ್ಲಿ ಮೈತ್ರಿ ಮಾಡಿಕೊಂಡಿದ್ದ ಉಭಯ ಪಕ್ಷಗಳು ವಿಧಾನ ಪರಿಷತ್‌ ಚುನಾವಣೆಯಲ್ಲೂ ಜಂಟಿ ಹೋರಾಟ ನಡೆಸಲಿದೆ. ಜೂನ್‌ 3ರಂದು ಮೇಲ್ಮನೆಗೆ ಚುನಾವಣೆ ನಡೆಯಲಿದೆ. ಈಗ 4+2 ಮೈತ್ರಿ ಸೂತ್ರಕ್ಕೆ ಬಿಜೆಪಿ ಹೈಕಮಾಂಡ್ ಒಪ್ಪಿಗೆ ಸೂಚಿಸಿದೆ ಎಂದು ತಿಳಿದುಬಂದಿದೆ.

ಬಿಜೆಪಿಯಿಂದ ಈಶಾನ್ಯ ಪದವೀಧರರ ಕ್ಷೇತ್ರದಲ್ಲಿ ಅಮರನಾಥ ಪಾಟೀಲ್, ನೈಋತ್ಯ ಪದವೀಧರರ ಕ್ಷೇತ್ರದಲ್ಲಿ ಡಾ. ಧನಂಜಯ ಸರ್ಜಿ, ಬೆಂಗಳೂರು ಪದವೀಧರರ ಕ್ಷೇತ್ರದಲ್ಲಿ ಅ. ದೇವೇಗೌಡ, ಆಗ್ನೇಯ ಶಿಕ್ಷಕರ ಕ್ಷೇತ್ರದಲ್ಲಿ ವೈ.ಎ. ನಾರಾಯಣಸ್ವಾಮಿ, ದಕ್ಷಿಣ ಶಿಕ್ಷಕರ ಕ್ಷೇತ್ರದಲ್ಲಿ ಇ.ಸಿ. ನಿಂಗರಾಜು ಹೆಸರುಗಳನ್ನು ಪ್ರಕಟಿಸಲಾಗಿದೆ. ನೈಋತ್ಯ ಶಿಕ್ಷಕರ ಕ್ಷೇತ್ರವು ಜೆಡಿಎಸ್ ಪಾಲಾಗಿದ್ದು, ಎಸ್.ಎಲ್ ಭೋಜೆಗೌಡ ಕಣಕ್ಕೆ ಇಳಿದಿದ್ದಾರೆ. ಆದರೆ, ಈಗ ದಕ್ಷಿಣ ಶಿಕ್ಷಕರ ಕ್ಷೇತ್ರವನ್ನು ಜೆಡಿಎಸ್‌ಗೆ ಬಿಟ್ಟುಕೊಡುವ ತೀರ್ಮಾನಕ್ಕೆ ಬರಲಾಗಿದೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಅಂತಿಮ ನಿರ್ಧಾರ ಹೊರಬರಬೇಕಿದೆ. ಮೇ 16 ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿದೆ.

ಬಿಜೆಪಿಗೆ ನಾಲ್ಕು ಕ್ಷೇತ್ರ ಎಂದಿದ್ದ ಬಿಎಸ್‌ವೈ; ಆ ಮಾತೇ ನಿಜವಾಯ್ತು

ವಿಧಾನ ಪರಿಷತ್‌ ಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್‌ ಮೈತ್ರಿ ಕುರಿತು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರು ಸ್ಪಷ್ಟನೆ ನೀಡಿದ್ದರು. ಬಿಜೆಪಿ ನಾಲ್ಕು ಹಾಗೂ ಜೆಡಿಎಸ್‌ ಎರಡು ಕ್ಷೇತ್ರದಲ್ಲಿ ಸ್ಪರ್ಧೆ ಎಂದಿದ್ದರು. ಮೈಸೂರಿನಲ್ಲಿ ಮಾತನಾಡಿದ್ದ ಅವರು, “ಕರ್ನಾಟಕದಲ್ಲಿ ಯಾವುದೇ ಕಾರಣಕ್ಕೂ ಬಿಜೆಪಿ ಹಾಗೂ ಜೆಡಿಎಸ್‌ ನಡುವಿನ ಹೊಂದಾಣಿಕೆಯ ಮೈತ್ರಿಗೆ ಧಕ್ಕೆ ಬರುವುದಿಲ್ಲ. ಮುಂದೆಯೂ ಎರಡೂ ಪಕ್ಷಗಳ ನಡುವಿನ ಮೈತ್ರಿ ಮುಂದುವರಿಯುತ್ತದೆ. ವಿಧಾನ ಪರಿಷತ್‌ ಚುನಾವಣೆಯಲ್ಲೂ ಮೈತ್ರಿ ಇರುತ್ತದೆ. ಪರಿಷತ್‌ನ 6 ಸ್ಥಾನಗಳ ಪೈಕಿ ಜೆಡಿಎಸ್‌ಗೆ 2 ಹಾಗೂ ನಾವು 4 ಸ್ಥಾನಗಳಿಗೆ ಸ್ಪರ್ಧಿಸುತ್ತೇವೆ. ಎಲ್ಲಿ ಬಿಟ್ಟುಕೊಡಬೇಕು ಎಂಬುದರ ಬಗ್ಗೆ ತೀರ್ಮಾನ ಆಗಿಲ್ಲ” ಎಂದಿದ್ದರು.

ಇದಾದ ಬಳಿಕ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ನೇತೃತ್ವದಲ್ಲಿ ಸಭೆಯೂ ನಡೆದಿತ್ತು. ವಿಧಾನ ಪರಿಷತ್‌ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಆಯ್ಕೆ ಸಂಬಂಧ ನಾಯಕರ ಜತೆ ವಿಜಯೇಂದ್ರ ಚರ್ಚೆ ಮಾಡಿದ್ದರು. ಆದರೆ, ಬಿಜೆಪಿ ಹೈಕಮಾಂಡ್‌ ಐವರು ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿತ್ತು. ಆದರೆ, ಈಗ ಇಲ್ಲಿ ಕೊಂಚ ಬದಲಾವಣೆಗೆ ಬಿಜೆಪಿ ಹೈಕಮಾಂಡ್‌ ಮುಂದಾಗಿದೆ ಎನ್ನಲಾಗಿದೆ. ಒಂದು ವೇಳೆ ಬದಲಾವಣೆಯಾದರೆ, ಬಿ.ಎಸ್.‌ ಯಡಿಯೂರಪ್ಪ ಅವರ ಮಾತು ನಿಜವಾದಂತೆ ಆಗುತ್ತದೆ.

ಇದನ್ನೂ ಓದಿ: HD Revanna: 3 ದಿನದಿಂದ ಕುಟುಂಬಸ್ಥರನ್ನು ಭೇಟಿಯಾಗದೆ ಜೈಲಲ್ಲಿ ರೇವಣ್ಣ ಪರದಾಟ; ಪತ್ರಿಕೆಯೇ ಸಂಗಾತಿ!

ದಕ್ಷಿಣ ಶಿಕ್ಷಕರ‌ ಕ್ಷೇತ್ರದ ಅಭ್ಯರ್ಥಿ ಬದಲಾವಣೆ?

ದಕ್ಷಿಣ ಶಿಕ್ಷಕರ‌ ಕ್ಷೇತ್ರದ ಅಭ್ಯರ್ಥಿಯನ್ನು ಬದಲಾವಣೆ ಮಾಡಲು ಚಿಂತನೆ ನಡೆಸಲಾಗಿದೆ. ಈಗಾಗಲೇ ಇ.ಸಿ ನಿಂಗರಾಜು ಅವರ ಹೆಸರನ್ನು ಬಿಜೆಪಿ ಘೋಷಣೆ ಮಾಡಿತ್ತು. ಆದರೆ, ಈ ನಿರ್ಧಾರದಿಂದ ಬಿಜೆಪಿ ಹಿಂದೆ ಸರಿಯುತ್ತಿದ್ದು, ಜೆಡಿಎಸ್‌ಗೆ ಬಿಟ್ಟು‌ ಕೊಡುವ ಸಾಧ್ಯತೆ ಹೆಚ್ಚಿದೆ. ಗೆಲ್ಲುವ ಮಾನದಂಡದ ಆಧಾರದ ಮೇಲೆ ಜೆಡಿಎಸ್‌‌ಗೆ ಬಿಟ್ಟು ಕೊಡಲು ನಿರ್ಧಾರ ಮಾಡಲಾಗಿದೆ ಎನ್ನಲಾಗಿದೆ.

Exit mobile version