ಬೆಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ (Congress Government) 135 ಸ್ಥಾನಗಳನ್ನು ಪಡೆಯುವ ಮೂಲಕ ಸಂಪೂರ್ಣ ಬಹುಮತದಿಂದ ಅಧಿಕಾರಕ್ಕೆ ಬಂದಿದೆ. ಆದರೆ, ಆರಂಭದಿಂದಲೇ ಹಲವಾರು ವಿಘ್ನಗಳನ್ನು ಎದುರಿಸುತ್ತಿದೆ. ರಾಜ್ಯ ರಾಜಕೀಯದಲ್ಲಿ (Karnataka Politics) ಹೆಜ್ಜೆ ಹೆಜ್ಜೆಗೂ ಸಮಸ್ಯೆಗಳು ಎದುರಾಗುತ್ತಿವೆ. ಗ್ಯಾರಂಟಿ ಯೋಜನೆಯ (Congress Guarantee Scheme) ಸವಾಲು ಒಂದು ಕಡೆ ಇದ್ದರೆ, ಮತ್ತೊಂದೆಡೆ ಸಚಿವರ ವರ್ತನೆಗೆ ಹಿರಿಯ ಸಚಿವರು ಅಸಮಾಧಾನವನ್ನು ವ್ಯಕ್ತಪಡಿಸಿದ್ದರು. ಬಳಿಕ ಸಿಎಂ ಸಿದ್ದರಾಮಯ್ಯ (CM Siddaramaiah) ಹಾಗೂ ಕೆಪಿಸಿಸಿ ಅಧ್ಯಕ್ಷ, ಡಿಸಿಎಂ ಡಿ.ಕೆ. ಶಿವಕುಮಾರ್ (DCM DK Shivakumar) ಮಧ್ಯ ಪ್ರವೇಶ ಮಾಡಿ ಪರಿಸ್ಥಿತಿಯನ್ನು ತಣ್ಣಗಾಗಿಸಿದ್ದರು. ಈ ನಡುವೆ ಪಕ್ಷದ ವಿರುದ್ಧ ಮತ್ತೊಂದು ಟೀಂ ಸೆಟೆದು ನಿಂತಿದೆ. ಕೆಪಿಸಿಸಿಯ ಮೂರನೇ ಹಂತದ ನಾಯಕರು ಪ್ರತ್ಯೇಕವಾಗಿ ಸಭೆ ನಡೆಸಿ, ತಮ್ಮ ಹಕ್ಕು ಸಿಗದ ಬಗ್ಗೆ ಅಸಮಾಧಾನ ಹೊರಹಾಕಿದ್ದಾಗಿ ತಿಳಿದುಬಂದಿದೆ.
ಇದಕ್ಕಾಗಿ ಅಸಮಾಧಾನಿತ ಕಾಂಗ್ರೆಸ್ ನಾಯಕರು (Disgruntled Congress leaders) ಬ್ಯಾಡ್ಮಿಂಟನ್ ಕ್ಲಬ್‌ನಲ್ಲಿ ಸಭೆ ಸೇರಿ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ. ಹೈಕಮಾಂಡ್ (Congress High Command) ವಿರುದ್ಧ ಮುನಿಸು ತೋರಿದ್ದಾರೆ. ಪಕ್ಷಕ್ಕಾಗಿ ದುಡಿಯುವ ನಮಗೆ ಬೆಲೆಯೇ ಇಲ್ಲವೇ ಎಂದು ಪ್ರಶ್ನೆ ಮಾಡಿದ್ದಾರೆ. ನಾವು ಕೇಳದೇ ಇದ್ದರೆ ಏನೂ ಸಿಗುವುದಿಲ್ಲ ಎಂದು ಆಕ್ರೋಶವನ್ನು ಹೊರಹಾಕಿದ್ದಾರೆ.
ಇದನ್ನೂ ಓದಿ: Agriculture APP : ರೈತರಿಗಾಗಿ AI ಆಧಾರಿತ ಆ್ಯಪ್ ಶೀಘ್ರ; ಕೃಷಿ ಇಲಾಖೆಯಿಂದ ಮಹತ್ವದ ಹೆಜ್ಜೆ
ಈಗಾಗಲೇ ಹಿರಿಯರಿಗೆ ಇಲ್ಲವೇ ಪ್ರಭಾವಿಗಳಿಗೆ ಪಕ್ಷದಲ್ಲಿ ಮಣೆ ಹಾಕಲಾಗಿದೆ. ಸಚಿವ ಸ್ಥಾನಗಳನ್ನು ನೀಡಿದವರಿಗೇ ನೀಡಲಾಗುತ್ತಿದೆ. ಉಳಿದವರು ಇವರಿಗೆ ಯಾಕೆ ಕಣ್ಣಿಗೆ ಕಾಣುತ್ತಿಲ್ಲ? ವಿಧಾನ ಪರಿಷತ್ (Legislative Council) ನಾಮ ನಿರ್ದೇಶನಕ್ಕೂ ಅಧಿಕಾರ ಅನುಭವಿಸಿದವರನ್ನೇ ಆಯ್ಕೆ ಮಾಡಿಕೊಳ್ಳಲಾಗಿದೆ. ಇಲ್ಲವೇ ಪ್ರಭಾವಿಗಳನ್ನು ಆರಿಸಿಕೊಳ್ಳಲಾಗುತ್ತದೆ. ಹಾಗಾದರೆ, ಪಕ್ಷಕ್ಕೆ ಇಷ್ಟು ವರ್ಷದಿಂದ ಸೇವೆ ಮಾಡುತ್ತಾ ಬಂದಿರುವ ನಮಗೆ ಯಾವುದೇ ಅವಕಾಶ ಇಲ್ಲವೇ? ಎಂಬ ಪ್ರಶ್ನೆಯನ್ನು ಎತ್ತಿದ್ದಾರೆ.
ನಿಗಮ ಮಂಡಳಿಗೆ ಬೇಡಿಕೆ
ಎಲ್ಲ ಅಧಿಕಾರವನ್ನು ಶಾಸಕರು, ಸಚಿವರು ಅನುಭವಿಸಿದರೆ ಹೇಗೆ? ನಾವು ಪಕ್ಷಕ್ಕಾಗಿ ದುಡಿಯುತ್ತಿಲ್ಲವೇ? ಇವರು ಚುನಾವಣೆಯಲ್ಲಿ ಗೆಲ್ಲಲು ನಾವು ಕೂಡಾ ಕೆಲಸ ಮಾಡಿದ್ದೇವೆ. ಹಾಗಾಗಿ ಈಗ ನೇಮಕ ಮಾಡಿಕೊಳ್ಳಲು ಹೊರಟಿರುವ ನಿಗಮ – ಮಂಡಳಿಗಳ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ನಮ್ಮನ್ನೂ ಪರಿಗಣನೆಗೆ ತೆಗೆದುಕೊಳ್ಳಲಿ ಎಂದು ಸಭೆಯಲ್ಲಿ ಚರ್ಚೆ ಮಾಡಿದ್ದಾರೆ. ಇದೇ ವೇಳೆ ಸಭೆಯಲ್ಲಿ ಕೆಲ ಸಚಿವರ ವರ್ತನೆ ವಿರುದ್ಧವೂ ಅಸಮಾಧಾನದ ಮಾತುಗಳು ಕೇಳಿಬಂದಿವೆ. ಚುನಾವಣೆಯಲ್ಲಿ ದುಡಿದ ಕಾರ್ಯಕರ್ತರು ಏನು ಮಾಡಬೇಕು? ನಾವು ಸುಮ್ಮನೆ ಇದ್ದರೆ ಆಗಲ್ಲ ಎಂದು ಕೆಲವರು ಅಸಮಾಧಾನ ವ್ಯಕ್ತಪಡಿಸಿದ್ದು, ನಮ್ಮ ಹಕ್ಕನ್ನು ನಾವು ಕೇಳಿ ಪಡೆಯಬೇಕಾದ ಪರಿಸ್ಥಿತಿ ಬಂದೊದಗಿದೆ ಎಂಬ ಬೇಸರವನ್ನು ಹಲವರು ಹೊರಹಾಕಿದ್ದಾರೆ ಎನ್ನಲಾಗಿದೆ.
ಈಗಾಗಲೇ ಅರ್ಜಿ ನಮೂನೆ ನೀಡಿರುವ ಕೆಪಿಸಿಸಿ
ಅಸಮಾಧಾನಿತರಿಗೆ ಮಣೆ ಹಾಕುವ ಜತೆಗೆ ಪಕ್ಷಕ್ಕೆ ನಿಷ್ಠೆಯಿಂದ ದುಡಿದ ಕಾರ್ಯಕರ್ತರಿಗೆ ನಿಗಮ, ಮಂಡಳಿಗಳಲ್ಲಿ ಇಲ್ಲವೇ ಸಮಿತಿಗಳಲ್ಲಿ ಸೂಕ್ತ ಸ್ಥಾನಮಾನ ನೀಡುವ ನಿರ್ಧಾರಕ್ಕೆ ಬಂದಿದೆ. ಈ ಹಿನ್ನೆಲೆಯಲ್ಲಿ ಸರ್ಕಾರದಿಂದ ನಿಗಮ ಮಂಡಳಿಗೆ ಅಧ್ಯಕ್ಷರ, ಸದಸ್ಯರ ನೇಮಕಾತಿ ವಿಚಾರಕ್ಕೆ ಸಂಬಂಧಪಟ್ಟಂತೆ ಕಾಂಗ್ರೆಸ್‌ನಿಂದ ಪರಿಶೀಲನಾ ಸಮಿತಿ ರಚನೆ ಸಾಧ್ಯತೆ ಇದೆ. ಗೃಹ ಸಚಿವ ಡಾ. ಜಿ. ಪರಮೇಶ್ವರ್ (Home Minister Dr G Parameshwara) ಅಥವಾ ಹಿರಿಯ ನಾಯಕರೊಬ್ಬರ ನೇತೃತ್ವದಲ್ಲಿ ಸಮಿತಿ ರಚನೆಯಾಗಲಿದೆ ಎಂದು ಹೇಳಲಾಗುತ್ತಿದೆ. ಈಗಾಗಲೇ ಅರ್ಜಿ ನಮೂನೆಯನ್ನು ಕಳುಹಿಸಿರುವ ಕೆಪಿಸಿಸಿ, ಆಕಾಂಕ್ಷಿತರು ಸಂಪೂರ್ಣ ವಿವರಗಳೊಂದಿಗೆ ಅದನ್ನು ಭರ್ತಿ ಮಾಡಿ ಕಳುಹಿಸಲು ಸೂಚಿಸಿದೆ.
70-30 ಫಾರ್ಮುಲಾ?
ನಿಗಮ, ಮಂಡಳಿ ಆಯ್ಕೆಯಲ್ಲಿ 70-30 ಪರ್ಸೆಂಟ್ ಫಾರ್ಮುಲಾ ಅಳವಡಿಕೆ ಮಾಡುವ ಸಾಧ್ಯತೆ ಹೆಚ್ಚಿದೆ. ಇದರಂತೆ ಶಾಸಕರಿಗೆ ಮತ್ತು ಕಾರ್ಯಕರ್ತರಿಗೆ ಅಧಿಕಾರ ನೀಡುವ ನಿರ್ಧಾರಕ್ಕೆ ಬರಲಾಗಿದೆ. ಹೀಗಾಗಿ ಈಗ ಪ್ರತಿ ಬೂತ್ ಮಟ್ಟದ ಶೇಕಡಾವಾರು ಮತಗಳಿಕೆಯ ಮಾಹಿತಿಯನ್ನು ಡಿಸಿಎಂ, ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ (DCM and KPCC president DK Shivakumar) ಕೇಳಿದ್ದಾರೆ.
ಸ್ಥಳೀಯ ನಾಯಕರು ಪ್ರತಿನಿಧಿಸುವ ಬೂತ್‌ನಲ್ಲಿ ಎಷ್ಟು ಮತಗಳು ಬಂದಿವೆ? ಮತಗಳ ಪ್ರಮಾಣ ಎಷ್ಟು ಎಂದು ಮಾಹಿತಿ ಕೇಳುವ ಮೂಲಕ ಚುನಾವಣೆಯಲ್ಲಿ ಕಾರ್ಯಕರ್ತರ ಪಾಲ್ಗೊಳ್ಳುವಿಕೆ ಎಷ್ಟಿದೆ ಎಂದು ಪತ್ತೆ ಹಚ್ಚುವ ತಂತ್ರ ಇದರಲ್ಲಿ ಅಡಗಿದೆ. ಪಕ್ಷದ ಪರವಾಗಿ ಹೆಚ್ಚು ಕೆಲಸ ಮಾಡಿ, ಪ್ರತಿನಿಧಿಸುವ ಬೂತ್‌ನಲ್ಲಿ ಹೆಚ್ಚು ಮತಗಳು ಬಂದಿದ್ದರೆ ಅಂಥವರಿಗೆ ಅವಕಾಶವನ್ನು ನೀಡಲಾಗುತ್ತದೆ. ನಿಗಮ – ಮಂಡಳಿಗಳಲ್ಲಿ ಕಾರ್ಯಕರ್ತರಿಗೆ ಅವಕಾಶವನ್ನು ಕಲ್ಪಿಸಲಾಗುತ್ತದೆ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ: Gruha Lakshmi Scheme : ಸೆಪ್ಟೆಂಬರ್‌ನಲ್ಲಿ ಗೃಹಲಕ್ಷ್ಮಿಯರ ಖಾತೆಗೆ ಹಣ? 2500 ಕೋಟಿ ಉಳಿಸಲು ಪ್ಲ್ಯಾನ್!
ಆದರೆ, ಹೆಚ್ಚಿನ ಪಾಲು ಮತ್ತೆ ಶಾಸಕರಿಗೇ ಹೋದರೆ ಎಂಬ ಆತಂಕದಲ್ಲಿ ಕೆಪಿಸಿಸಿಯ ಮೂರನೇ ಸ್ತರದ ನಾಯಕರು ಇದ್ದಾರೆ. ಈ ಹಿನ್ನೆಲೆಯಲ್ಲಿ ಅವರು ಸಭೆ ನಡೆಸಿ ತಮ್ಮ ಹಕ್ಕನ್ನು ಕೇಳಬೇಕು ಎಂಬ ಬಗ್ಗೆ ಚರ್ಚೆ ನಡೆಸಿದ್ದಾರೆ.