ಬೆಂಗಳೂರು: ರಾಜ್ಯ ಸರ್ಕಾರದ (Karnataka Congress Government) ವಿರುದ್ಧ ಮುಗಿಬೀಳಲು ಬಿಜೆಪಿ (BJP Karnataka) ಸಜ್ಜಾಗಿದೆ. ಈಗಾಗಲೇ ರಾಜ್ಯದಲ್ಲಿ ಪ್ರವಾಸ ನಡೆಸುವುದಾಗಿ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ (Former CM BS Yediyurappa) ಘೋಷಣೆ ಮಾಡಿದ್ದು, ಹೋರಾಟದ ರೂಪುರೇಷೆ ಬಗ್ಗೆ ಮಂಗಳವಾರ (ಸೆಪ್ಟೆಂಬರ್ 12) ಬಿಜೆಪಿ ನಾಯಕರ ಸಭೆ ನಡೆಸಿ ಮಹತ್ವದ ಚರ್ಚೆ ಮಾಡಿದ್ದಾರೆ. ಇಲ್ಲಿ ಜಿಲ್ಲಾವಾರು ಪ್ರವಾಸ ಹೇಗಿರಬೇಕು? ಯಾವ ಜಿಲ್ಲೆಗಳಿಗೆ ಪ್ರವಾಸ ಮಾಡಬೇಕು ಎಂಬ ಬಗ್ಗೆ ಚರ್ಚೆ ಮಾಡಲಾಗಿದೆ. ಬಹುಮುಖ್ಯವಾಗಿ ಪಕ್ಷ ಬಿಡಲು ಮುಂದಾಗಿರುವ ಶಾಸಕರು ಹಾಗೂ ಮುಖಂಡರನ್ನು ಮನವೊಲಿಸುವ ಬಗ್ಗೆ ಚರ್ಚೆ ನಡೆಸಲಾಗಿದೆ. ರಾಜ್ಯ ರಾಜಕೀಯದಲ್ಲಿ (Karnataka Politics) ನಡೆಯುತ್ತಿರುವ ಪ್ರಸಕ್ತ ಬೆಳವಣಿಗೆಗಳ ಬಗ್ಗೆಯೂ ಮಾಹಿತಿ ಹಂಚಿಕೊಳ್ಳಲಾಗಿದೆ.
ಬಿಜೆಪಿಯ ಮಲ್ಲೇಶ್ವರ ಕಚೇರಿಯಲ್ಲಿ ಪ್ರಮುಖರು, ಪದಾಧಿಕಾರಿಗಳ ಸಭೆ ನಡೆಸಿದ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ, ರಾಜ್ಯ ಸರ್ಕಾರವನ್ನು ಕಟ್ಟಿಹಾಕುವ ನಿಟ್ಟಿನಲ್ಲಿ ಚರ್ಚೆ ನಡೆಸಿದ್ದಾರೆ. ಆದರೆ, ಹೋರಾಟದ ರೂಪುರೇಷೆ ಯಾವ ರೀತಿ ಇರಲಿದೆ ಎಂಬ ಮಾಹಿತಿಯನ್ನು ಬಿಟ್ಟುಕೊಟ್ಟಿಲ್ಲ. ಸಭೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಮಾಜಿ ಸಿಎಂಗಳಾದ ಬಸವರಾಜ ಬೊಮ್ಮಾಯಿ, ಡಿ.ವಿ. ಸದಾನಂದ ಗೌಡ ಇನ್ನಿತರರು ಭಾಗಿಯಾಗಿದ್ದರು.
ಇದನ್ನೂ ಓದಿ: Water supply : ಪೈಪ್ ವಾಲ್ವ್ ದುರಸ್ತಿ; ಅರ್ಧ ಬೆಂಗಳೂರಿಗೆ ನಾಳೆ ಕಾವೇರಿ ನೀರಿಲ್ಲ
ರಾಜ್ಯ ಸರ್ಕಾರದ ವಿರುದ್ಧ ಯಡಿಯೂರಪ್ಪ ಆಕ್ರೋಶ
ಸಭೆ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ, ಲೋಕಸಭಾ ಚುನಾವಣೆ ರಾಜಕೀಯದ ಜತೆಗೆ ರಾಜ್ಯ ಸರ್ಕಾರದ ಕಾರ್ಯವೈಖರಿ ವಿರುದ್ಧ ಜನಾಂದೋಲನ ಮಾಡುವ ಸಂಬಂಧ ನಮ್ಮೆಲ್ಲ ಪ್ರಮುಖ ನಾಯಕರ ಸಭೆಯನ್ನು ಇಂದು ನಡೆಸಿ ಸುದೀರ್ಘವಾಗಿ ಚರ್ಚೆ ಮಾಡಿದ್ದೇವೆ. ಈ ಸರ್ಕಾರವು ಬಹಳ ಕಡಿಮೆ ಸಮಯದಲ್ಲಿ ಜನರ ವಿಶ್ವಾಸವನ್ನು ಕಳೆದುಕೊಂಡು ಛೀಮಾರಿ ಹಾಕಿಸಿಕೊಂಡಿದೆ. ಜನ ವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಕಿಡಿಕಾರಿದರು.
ಚೌತಿ ಬಳಿಕ ರಾಜ್ಯ ಪ್ರವಾಸ
ಗಣೇಶ ಹಬ್ಬದ ಬಳಿಕ ರಾಜ್ಯ ಪ್ರವಾಸ ಮಾಡುತ್ತೇವೆ. ಮುಂದಿನ ಹೋರಾಟದ ಬಗ್ಗೆ ರೂಪುರೇಷೆ ಮಾಡುತ್ತೇವೆ. ಈ ಹಿನ್ನೆಲೆಯಲ್ಲಿ ಸಭೆಯಲ್ಲಿ ಪ್ರಮುಖರು ಹಲವು ಸಲಹೆಗಳನ್ನು ನೀಡಿದ್ದಾರೆ. ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಹೋರಾಟ ತೀವ್ರಗೊಳ್ಳಲಿದೆ ಎಂದು ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಹೇಳಿದರು.
ಬುಧವಾರ (ಸೆಪ್ಟೆಂಬರ್ 13) ದೆಹಲಿಗೆ ತೆರಳುತ್ತಿದ್ದು, ಅಲ್ಲಿ ಚುನಾವಣಾ ಸಮಿತಿ ಸಭೆ ಇದೆ. ನಮ್ಮ ವರಿಷ್ಠರನ್ನು ಭೇಟಿ ಮಾಡುತ್ತೇನೆ. ಏನು ಚರ್ಚೆ ಆಗುತ್ತದೆ ಎಂಬುದನ್ನು ನೋಡಬೇಕು. ರಾಜ್ಯದ ರಾಜಕೀಯ ಪರಿಸ್ಥಿತಿ ಬಗ್ಗೆ ಚರ್ಚೆ ಮಾಡುತ್ತೇನೆ ಎಂದು ಬಿ.ಎಸ್. ಯಡಿಯೂರಪ್ಪ ತಿಳಿಸಿದರು.
ಇದನ್ನೂ ಓದಿ: Lok Sabha Election 2024 : ಬಿಜೆಪಿ 11 ಕ್ಷೇತ್ರದಲ್ಲಿ ಟಿಕೆಟ್ ಬದಲು? ಗೆಲ್ಲೋ ಲೆಕ್ಕಾಚಾರಕ್ಕೆ ಆತಂಕ ಹಲವು!
ಇನ್ನು ಜೆಡಿಎಸ್ ಜತೆ ಮೈತ್ರಿ ಮಾಡಿಕೊಳ್ಳುವ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ತೀರ್ಮಾನ ಮಾಡುತ್ತಾರೆ. ಅಲ್ಲದೆ, ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ ಅವರ ಹೇಳಿಕೆ ಬಗ್ಗೆಯೂ ಚರ್ಚೆ ಮಾಡುತ್ತೇನೆ. ನಾಯಕರು ಏನು ಹೇಳುತ್ತಾರೋ ಅದರಂತೆ ನಡೆದುಕೊಳ್ಳುತ್ತೇವೆ ಎಂದು ಯಡಿಯೂರಪ್ಪ ಹೇಳಿದರು.