Site icon Vistara News

Karnataka Politics : ಸೆ. 16ರಿಂದ ರಾಜ್ಯಾದ್ಯಂತ ಹೋರಾಟ; ಸರ್ಕಾರ ತೊಲಗುವವರೆಗೂ ಅಭಿಯಾನ ಬಿಎಸ್‌ವೈ ಗುಡುಗು

BJP protest against Congress Government in freedom park

ಬೆಂಗಳೂರು: ರಾಜ್ಯ ಕಾಂಗ್ರೆಸ್‌ ಸರ್ಕಾರ (Karnataka Congress Government) ಎಲ್ಲದರಲ್ಲೂ ವಿಫಲವಾಗಿದೆ. ಜನಸಾಮಾನ್ಯರನ್ನು ಮರೆತಿದೆ. ಈ ಸರ್ಕಾರದ ವಿರುದ್ಧ ಹೋರಾಟ ಅನಿವಾರ್ಯವಾಗಿದೆ. ಹೀಗಾಗಿ ರಾಜ್ಯಾದ್ಯಂತ ಹೋರಾಟ ಮಾಡುತ್ತಿದ್ದೇವೆ. ಸೆಪ್ಟೆಂಬರ್‌ 16ರಂದು ಕುರುಡುಮಲೆ ವಿನಾಯಕನ ದರ್ಶನ ಪಡೆಯುತ್ತೇವೆ. ದರ್ಶನ ಪಡೆದು ರಾಜ್ಯಾದ್ಯಂತ ಅಭಿಯಾನ ನಡೆಸಲಿದ್ದೇವೆ. ಇಷ್ಟು ದಿನ ನಾನು ಶಾಂತವಾಗಿದ್ದೆ. ಇನ್ನು ಮುಂದೆ ಬೀದಿಗಿಳಿದು ಹೋರಾಟ ಮಾಡುತ್ತೇನೆ ಎಂದು ಮಾಜಿ ಸಿಎಂ ಬಿ.ಎಸ್.‌ ಯಡಿಯೂರಪ್ಪ (Former CM BS Yediyurappa) ಗುಡುಗಿದ್ದಾರೆ. ಈ ಮೂಲಕ ಕರ್ನಾಟಕ ರಾಜಕೀಯದಲ್ಲಿ (Karnataka Politics) ಪ್ರತಿಭಟನೆ ಪರ್ವ ಆರಂಭವಾಗಲಿದೆ ಎಂಬ ಸಂದೇಶವನ್ನು ರವಾನೆ ಮಾಡಿದರು.

ಫ್ರೀಡಂ ಪಾರ್ಕ್‌ನಲ್ಲಿ (Freedom Park) ರಾಜ್ಯ ಕಾಂಗ್ರೆಸ್‌ ವಿರುದ್ಧ ಬಿಜೆಪಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ (BJP Protest) ಮಾತನಾಡಿದ ಬಿ.ಎಸ್.‌ ಯಡಿಯೂರಪ್ಪ, ಈ ಸರ್ಕಾರ ಜನರಿಗೆ ನೀರು ಕೊಟ್ಟಿಲ್ಲ. ಜನರನ್ನು ಸಂಪೂರ್ಣವಾಗಿ ಮರೆತಿದೆ. ಸರ್ಕಾರದ ವಿರುದ್ಧ ಈಗ ಹೋರಾಟ ಶುರುವಾಗಿದೆ. ದೊಡ್ಡ ಪ್ರಮಾಣದ ಕಾರ್ಯಕರ್ತರು ಸೇರಿದ್ದಾರೆ. ಈ ಜನ ವಿರೋಧಿ ಸರ್ಕಾರದ ವಿರುದ್ಧ ಹೋರಾಟ ಆರಂಭವಾಗಿದೆ. ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಹೋರಾಟ ಮುಂದುವರಿಯುತ್ತದೆ. ಈ ಹೋರಾಟಕ್ಕೆ ನಿಮ್ಮೆಲ್ಲರ ಬೆಂಬಲ ಇರಬೇಕು. ನೀವು ನನಗೆ ಆಶೀರ್ವಾದ ಮಾಡಿ ಕಳಿಸಿಕೊಡಿ. ಈ ಸರ್ಕಾರ ತೊಲಗುವವರೆಗೂ ಹೋರಾಟ ಮುಂದುವರಿಯುತ್ತದೆ ಎಂದು ಬಿ.ಎಸ್.‌ ಯಡಿಯೂರಪ್ಪ ಹೇಳಿದರು.

BJP protest against Congress Government

ಕಾವೇರಿ ಹೋರಾಟದಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ.‌ ನಾವು ಕಾವೇರಿ ಹೋರಾಟವನ್ನು ಪೂರ್ಣಗೊಳಿಸುತ್ತೇವೆ. ರಾಜ್ಯದಲ್ಲಿ ಮಳೆ ಇಲ್ಲದೆ ಹಲವೆಡೆ ನೀರಿಲ್ಲ. ಬರಗಾಲ ಘೋಷಣೆ ಮಾಡದೇ ಮೀನಮೇಷ ಎಣಿಸುತ್ತಿರುವುದು ಖಂಡನೀಯ. ಒಂದು ಕಡೆ ಯೋಜನೆ ಅಂತ ಕೊಟ್ಟು, ಮತ್ತೊಂದು ಕಡೆಯಿಂದ ಕಿತ್ತುಕೊಂಡಿದೆ ಎಂದು ಬಿ.ಎಸ್.‌ ಯಡಿಯೂರಪ್ಪ ಗುಡುಗಿದರು.

ಕುಮಾರಕೃಪದಲ್ಲಿ ದಂಧೆ: ಬೊಮ್ಮಾಯಿ ಕಿಡಿ

ಕಾಂಗ್ರೆಸ್‌ನವರು ಅಕ್ಕಿ ಕೊಟ್ಟಿದ್ದೇವೆ ಎಂದು ಹೇಳಿದ್ದಾರೆ. ಆದರೆ, ಇವರು ಕೊಟ್ಟಿರುವ ಒಂದು ಕಾಳು ಕೂಡ ತಲುಪಿಲ್ಲ. ಜನರಿಗೆ ಹೋಗುತ್ತಿರುವುದು ಪ್ರಧಾನಿ ನರೇಂದ್ರ ಮೋದಿ ಅವರು ಕೊಟ್ಟಿರುವ ಅಕ್ಕಿ. ಜನರಿಗೆ, ರೈತರಿಗೆ ಮೋಸ ಮಾಡಿರುವುದು ಕಾಂಗ್ರೆಸ್ ಸರ್ಕಾರವಾಗಿದೆ. ಗೃಹ ಜ್ಯೋತಿಗೆ ಅರ್ಜಿಗಳನ್ನು ತೆಗೆದುಕೊಂಡರು. ಆದರೆ, ಈಗ ಲೋಡ್ ಶೆಡ್ಡಿಂಗ್ ಶುರು ಮಾಡಿದ್ದಾರೆ. ರಾಜ್ಯಕ್ಕೆ ನೀರಿಗೆ ಬರ ಬಂದಿರುವ ಹಾಗೇ ಕರೆಂಟ್ ಅಭಾವವೂ ಆಗುತ್ತದೆ. ಗೃಹಲಕ್ಷ್ಮಿ ಯೋಜನೆ ಯಾರಿಗೂ ತಲುಪಿಲ್ಲ. ಗೃಹಲಕ್ಷ್ಮಿ ಯೋಜನೆಯೇ ಕಾಂಗ್ರೆಸ್‌ಗೆ ಮುಳ್ಳಾಗುತ್ತದೆ. ಕುಮಾರಕೃಪದಲ್ಲಿ ದಂಧೆ ನಡೆಯುತ್ತಿದೆ. ಯಾವ ಅಧಿಕಾರಿಗೂ ಮುಕ್ತವಾಗಿ ಕೆಲಸ ಮಾಡಲು ಬಿಡುತ್ತಿಲ್ಲ. ಯಾವ ಪೊಲೀಸರಿಗೂ ಮುಕ್ತವಾಗಿ ಕೆಲಸ ಮಾಡಲು ಬಿಡುತ್ತಿಲ್ಲ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಕಿಡಿಕಾರಿದರು.

ಶಾಸಕ‌ ಎಸ್.ಆರ್. ವಿಶ್ವನಾಥ್ ಮಾತನಾಡಿ, ಈ ಸರ್ಕಾರದ ಹನಿಮೂನ್ ಪೀರಿಯಡ್ ಮುಗೀತು. ಈ ಸರ್ಕಾರ ನುಡಿದಂತೆ ನಡೆದಿಲ್ಲ. ಗ್ಯಾರಂಟಿಗಳಿಗೆ ಷರತ್ತು ಹಾಕಿ ಜನರ ಕಿವಿಗೆ ಹೂ ಇಟ್ಟರು. ಗೃಹಲಕ್ಷ್ಮಿ ಯೋಜನೆಯಲ್ಲಿ ಮೆಸೇಜ್ ಬಂದಿದೆ. ಅಕೌಂಟ್‌ಗೆ ಹಣ ಬಂದಿಲ್ಲ. ಮನೆಯಲ್ಲಿ ಅತ್ತೆ – ಸೊಸೆ ಮಧ್ಯೆ ಜಗಳ ತಂದರು ಎಂದು ಹೇಳಿದರು.

ಇದನ್ನೂ ಓದಿ: Karnataka Politics : ಲೋಕಸಭೆಗೆ ಬಿಜೆಪಿ-ಜೆಡಿಎಸ್‌ ಮೈತ್ರಿ ಫಿಕ್ಸ್;‌ 4 ಕ್ಷೇತ್ರ ದಳ ಪಾಲು ಎಂದ ಬಿಎಸ್‌ವೈ

ಎಸ್‌.ಟಿ. ಸೋಮಶೇಖರ್‌ ಗೈರು

ಪ್ರತಿಭಟನೆಯಲ್ಲಿ ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ , ಮಾಜಿ ಸಚಿವರಾದ ಆರ್ ಅಶೋಕ್, ಗೋಪಾಲಯ್ಯ, ಮುನಿರತ್ನ, ಬೈರತಿ ಬಸವರಾಜ, ಕೋಟ ಶ್ರೀನಿವಾಸ ಪೂಜಾರಿ ಸೇರಿದಂತೆ ಮಾಜಿ ಸಚಿವರು ಶಾಸಕರು ಹಾಜರಿದ್ದರು.‌ ಆದರೆ, ಬಿಜೆಪಿ ಶಾಸಕ, ಮಾಜಿ ಸಚಿವ ಎಸ್.ಟಿ. ಸೋಮಶೇಖರ್ ಗೈರಾಗಿದ್ದರು.

Exit mobile version