Site icon Vistara News

Karnataka Politics : ಸರ್ಕಾರಕ್ಕೆ ಬಡವರ ಕಾಳಜಿ ಇದ್ದರೆ ತಕ್ಷಣ ಬರ ತಾಲೂಕು ಘೋಷಿಸಲಿ: ಬಿ.ವೈ. ವಿಜಯೇಂದ್ರ

BY Vijayendra is tasted political strategist and well organizer

ಬೆಂಗಳೂರು: ರಾಜ್ಯ ಕಾಂಗ್ರೆಸ್‌ ಸರ್ಕಾರದ (State Congress Government) ಮೇಲೆ ಬಿಜೆಪಿ ಮುಗಿಬಿದ್ದಿದೆ. ರಾಜ್ಯದಲ್ಲಿ ಮಳೆ ಇಲ್ಲದೆ ಬರ ತಾಂಡವವಾಡುತ್ತಿದ್ದರೂ, ಬರ ತಾಲೂಕನ್ನು (Drought Taluk) ಘೋಷಣೆ ಮಾಡದೆ ಮೀನಮೇಷ ಎಣಿಸುತ್ತಿದೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ, ಶಾಸಕ ಬಿ.ವೈ. ವಿಜಯೇಂದ್ರ (BJP state vice president and MLA BY Vijayendra) ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಸಿಎಂ ಸಿದ್ದರಾಮಯ್ಯ ಅವರ ಸರ್ಕಾರದಲ್ಲಿ ಸರ್ಕಾರಿ ನೌಕರರಿಗೆ ಸಂಬಳ ಕೊಡಲೂ ದುಡ್ಡಿಲ್ಲ. ಗ್ಯಾರಂಟಿ ಜಾತ್ರೆಯಲ್ಲಿ ಮುಳುಗಿದ್ದಾರೆ. ರೈತರ ಬಗ್ಗೆ ಕಾಳಜಿ ಇಲ್ಲದೆ ವರ್ತಿಸುತ್ತಿದ್ದಾರೆ. ಈ ಕಾರಣಕ್ಕಾಗಿ ಕೇಂದ್ರ ಸರ್ಕಾರಕ್ಕೆ ಬರದ ಮಾನದಂಡ ಬದಲಾಯಿಸುವಂತೆ ಪತ್ರ ಬರೆದು ಕೈಕಟ್ಟಿ ಕುಳಿತಿದ್ದಾರೆ. ಕಾಂಗ್ರೆಸ್ ಸರ್ಕಾರಕ್ಕೆ ಬಡವರ ಕಾಳಜಿ ಇದ್ದರೆ ತಕ್ಷಣ ಬರಪೀಡಿತ ತಾಲೂಕು ಘೋಷಣೆ ಮಾಡಲಿ. ಸರ್ಕಾರದ ಎಲ್ಲ ವೈಫಲ್ಯಗಳನ್ನು (Karnataka Politics) ಕೈಗೆತ್ತಿಕೊಂಡು ಸರ್ಕಾರ ವಿರುದ್ಧ ಸೆಪ್ಟೆಂಬರ್‌ 8ರಂದು‌ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ‌ಅವರ ನೇತೃತ್ವದಲ್ಲಿ ಹೋರಾಟ ‌ಮಾಡುತ್ತೇವೆ ಎಂದು ಸವಾಲು ಹಾಕಿದರು.

ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ, ಸರ್ಕಾರಿ ನೌಕರರಿಗೆ ಸಂಬಳ ಕೊಡಲು ಆಗುತ್ತಿಲ್ಲ. ಅಕ್ಕಿ ಬದಲಿಗೆ ಹಣ ಕೊಡುತ್ತಿಲ್ಲ. ಈತನಕ ಒಂದು ತಿಂಗಳ ಹಣ ಮಾತ್ರ ಬಂದಿದೆ. ಬರ ಪೀಡಿತ ಪ್ರದೇಶಗಳ ಘೋಷಣೆ ಮಾಡುತ್ತೇವೆ ಎಂದು ಹೇಳಿದ್ದರು.

ಇದನ್ನೂ ಓದಿ: Krishna Janmashtami : ವಿಸ್ತಾರ ನ್ಯೂಸ್‌ನಲ್ಲಿ ನಿಮ್ಮ ಮನೆಯ ಮುದ್ದು ಕೃಷ್ಣರ ದರ್ಶನ; ಇಲ್ಲಿದೆ ನೋಡಿ ಚೆಂದದ ಫೋಟೊ!

ಆದರೆ, ಈತನಕ ಮಾಡಿಲ್ಲ. ರೈತರು ಸರ್ಕಾರದ ಘೋಷಣೆಗೆ ಕಾಯುತ್ತಾ ಇದ್ದಾರೆ. ರಾಜ್ಯದಿಂದ ಸಾಧ್ಯವಾದಷ್ಟು ಬೇಗ ವರದಿ ಕೊಡಬೇಕು. ಆ ಕೆಲಸವನ್ನು ಮಾಡಿಲ್ಲ. ಸುಮ್ಮನೆ ಕೇಂದ್ರ ಸರ್ಕಾರದ ಮೇಲೆ ಆರೋಪ ಮಾಡುತ್ತಾ ಕುಳಿತಿದ್ದಾರೆ ಎಂದು ರಾಜ್ಯ ಸರ್ಕಾರದ ಸಚಿವರನ್ನು ವಿಜಯೇಂದ್ರ ತರಾಟೆಗೆ ತೆಗೆದುಕೊಂಡರು.

ರಾಜ್ಯ ಸರ್ಕಾರದವರು ವರದಿ ಕೊಟ್ಟರೆ ಕೇಂದ್ರದ ಅಧಿಕಾರಿಗಳು ಬಂದು ಸರ್ವೆ ಮಾಡುತ್ತಾರೆ. ಸರ್ಕಾರ ಪ್ರತಿ ಹಂತದಲ್ಲೂ ಕೇಂದ್ರವನ್ನೇ ದೂರುತ್ತಿದೆ. ಅಕ್ಕಿ ವಿಚಾರದಲ್ಲಿ ಕೇಂದ್ರವನ್ನು ದೂರಿದರು. ಈಗ ಎರಡನೇ ಹಂತದಲ್ಲಿ ಚಾಲಾಕಿತನ ತೋರುತ್ತಿದ್ದಾರೆ. ಹೀಗಾಗಿ ಬರ ನಿಯಮಗಳ ಸಡಿಲಿಕೆ ಮಾಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ಇದರ ಹಿಂದೆ ಉದ್ದೇಶ ಇಲ್ಲ, ದುರುದ್ದೇಶ ಇದೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದರು.

ಗ್ಯಾರಂಟಿ ಜಾತ್ರೆಗೆ ಸಮಯ ಇದೆ

ಹೀಗಾಗಿ ಕೇಂದ್ರಕ್ಕೆ ಪತ್ರ ಬರೆದು, ಬರ ಪೀಡಿತ ತಾಲೂಕು ಘೋಷಣೆ ಮಾಡದೆ ಕೈಕಟ್ಟಿ ಕುಳಿತಿದ್ದಾರೆ. ಸರ್ವೆ ಮಾಡಬೇಕು, ರಾಜ್ಯ ಪ್ರವಾಸ ಮಾಡಬೇಕು ಎಂದು ಬರಪೀಡಿತ ತಾಲೂಕು ಘೋಷಣೆ ವಿಳಂಬ ಮಾಡುತ್ತಿದ್ದಾರೆ. ಗ್ಯಾರಂಟಿ ಜಾತ್ರೆಗೆ ಇವರಿಗೆ ಸಮಯ ಇದೆ. ರೈತರ ಬಗ್ಗೆ ಕಳಕಳಿ ಇಲ್ಲ. ಕೇಂದ್ರದಿಂದ ಅಧಿಕಾರಿಗಳು ಬಂದು ಪರಿಶೀಲಿಸಿ ಪರಿಹಾರದ ತೀರ್ಮಾನ ಮಾಡಬೇಕಾಗುತ್ತದೆ. ಆದರೆ ಇವರು ಇನ್ನೂ ಬರ ಘೋಷಣೆ ಮಾಡಿಲ್ಲ. ಕಾರಣ, ಮುಂದೆ ಕೇಂದ್ರ ಸರ್ಕಾರದ ಮೇಲೆ ಗೂಬೆ ಕೂರಿಸಲು ಈ ತಂತ್ರ ಮಾಡಲಾಗುತ್ತದೆ. ಬಿ.ಎಸ್. ಯಡಿಯೂರಪ್ಪ‌ ಅವರು ಸಿಎಂ ಆಗಿದ್ದಾಗ, ಒಬ್ಬರೇ ಉತ್ತರ ಕರ್ನಾಟಕದ ಪ್ರವಾಸ ಮಾಡಿದ್ದರು. 5 ಲಕ್ಷ ರೂಪಾಯಿ ಪರಿಹಾರ ಕೊಟ್ರು. ಕೇಂದ್ರ ಸರ್ಕಾರವನ್ನು ಕಾಯುತ್ತ ಕೂರಲಿಲ್ಲ. ಕಾಂಗ್ರೆಸ್ ಸರ್ಕಾರಕ್ಕೆ ಬಡವರ ಕಾಳಜಿ ಇದ್ದರೆ ತಕ್ಷಣ ಬರಪೀಡಿತ ತಾಲೂಕು ಘೋಷಣೆ ಮಾಡಲಿ ಎಂದು ಬಿ.ವೈ. ವಿಜಯೇಂದ್ರ ಸವಾಲು ಹಾಕಿದರು.

ಶಿವಾನಂದ ಪಾಟೀಲ್‌ ರೈತರ ಕ್ಷಮೆ ಕೇಳಲಿ

ದಿನ ನಿತ್ಯ ಎಲ್ಲ ಪತ್ರಿಕೆಗಳಲ್ಲಿ ನುಡಿದಂತೆ ನಡೆದ ಸರ್ಕಾರ ಎಂದು ಜಾಹೀರಾತು ಬರುತ್ತಿದೆ. ಆದರೆ, ಈ ಸರ್ಕಾರವನ್ನು ಎಚ್ಚರಿಸಬೇಕಾಗಿದೆ. ಮಳೆ ಅಭಾವದಿಂದ ರೈತರಿಗೆ ತೊಂದರೆ ಆಗುತ್ತಲಿದೆ. ರಾಜ್ಯದಲ್ಲಿ ಬರದ ಛಾಯೆ ಆವರಿಸಿದೆ. ಈ ಹಿನ್ನೆಲೆಯಲ್ಲಿ ನುಡಿದಂತೆ ನಡೆದ ಸರ್ಕಾರಕ್ಕೆ ನಾವು ಎಚ್ಚರಿಸಬೇಕಾಗಿದೆ. ಆಮೆ ಗತಿಯಲ್ಲಿ ಸರ್ಕಾರ ನಡೆಯುತ್ತಿದೆ. ರಾಜ್ಯದಲ್ಲಿ 196 ತಾಲೂಕುಗಳು ಬರಕ್ಕೆ ಒಳಗಾಗಿವೆ. ಆದರೆ, ಸರ್ಕಾರ ಬರದ ಬಗ್ಗೆ ತಲೆಕೆಡಿಸಿಕೊಳ್ಳುತ್ತಿಲ್ಲ. ಈ ಸರ್ಕಾರದವರು ಕೇಂದ್ರದ ಕಾಂಗ್ರೆಸ್‌ ನಾಯಕರನ್ನು ರಾಜ್ಯಕ್ಕೆ ಕರೆಸಿಕೊಂಡು ಜಾತ್ರೆ ಮಾಡುತ್ತಾ ಇದ್ದಾರೆ. ಬರ ಬಂದರೂ ರೈತರ ಬಗ್ಗೆ ಗಮನ ಕೊಡುತ್ತಿಲ್ಲ. ಇದೊಂದು ‌ರೈತ ಮತ್ತು ಜನವಿರೋಧಿ ಸರ್ಕಾರ. ಬರ ಮತ್ತು ರೈತರ ಬಗ್ಗೆ ‌ಸಚಿವ ಶಿವಾನಂದ ಪಾಟೀಲ್‌ ಪ್ರತಿಕ್ರಿಯೆ ನೋಡಿದರೆ ಗೊತ್ತಾಗುತ್ತದೆ. ಪರಿಹಾರಕ್ಕಾಗಿ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ ಎಂದು ಹೇಳುತ್ತಾ ಇದ್ದಾರೆ. ಈ ಹೇಳಿಕೆಯನ್ನು ನಾನು ಖಂಡಿಸುತ್ತೇನೆ. ಆ ಸಚಿವರು ರೈತರ ಬಳಿ ಕ್ಷಮೆ ಕೇಳಬೇಕು ಎಂದು ಶಾಸಕ ವಿಜಯೇಂದ್ರ ಆಗ್ರಹಿಸಿದರು.

ಇದು ಕಿವುಡು ಸರ್ಕಾರ

ತುರ್ತಾಗಿ ತೀರ್ಮಾನ ತೆಗೆದುಕೊಳ್ಳಬೇಕಿತ್ತು. ಆದರೆ ರಾಜ್ಯ ಸರ್ಕಾರಕ್ಕೆ ಮಂಪರು ಕವಿದಂತೆ ಕಾಣಿಸುತ್ತಿದೆ. ರೈತರಿಗೆ ಏನೇ ಸಮಸ್ಯೆಯಾದರೂ ಅದಕ್ಕೆ ರಾಜ್ಯ ಸರ್ಕಾರವೇ ಹೊಣೆ. ಬರದ ವಿಚಾರವಾಗಿ ನಿರಂತರ ಸಮೀಕ್ಷೆ ನಡೆಯುತ್ತಲಿದೆ. ಮಾಧ್ಯಮದಲ್ಲಿ ವರದಿ ಬರುತ್ತಿವೆ. ಆದರೂ ರಾಜ್ಯ ಸರ್ಕಾರ ಎಚ್ಚೆತ್ತುಕೊಂಡಿಲ್ಲ. ರೋಮ್ ಹೊತ್ತಿ ಉರಿಯುವಾಗ ದೊರೆ ಪಿಟೀಲು ಬಾರಿಸುತ್ತಿದ್ದ. ಅದೇ ರೀತಿ ರಾಜ್ಯ ಸರ್ಕಾರ ನಡೆಯುತ್ತಾ ಇದೆ. ದುಂದು ವೆಚ್ಚ ಮಾಡಿಕೊಂಡು, ಕೇಂದ್ರದ ಕಾಂಗ್ರೆಸ್‌ ನಾಯಕರನ್ನು ಕರೆಸಿ ಜಾತ್ರೆ ಮಾಡುವುದರಲ್ಲಿ ಈ ಸರ್ಕಾರ ನಿರತವಾಗಿದೆ. ಇದು ಕಿವುಡು ಸರ್ಕಾರ. ಯಾವುದೇ ಎಚ್ಚರಿಕೆಯನ್ನು ಗಣನೆಗೆ ತೆಗೆದುಕೊಂಡಿಲ್ಲ ಎಂದು ಬಿ.ವೈ. ವಿಜಯೇಂದ್ರ ಕಿಡಿಕಾರಿದರು.

ನುಡಿದಂತೆ ನಡೆಯದ ಸರ್ಕಾರ

ಸಿಎಂ ಸಿದ್ದರಾಮಯ್ಯ, ಡಿಸಿಎಂ ಶಿವಕುಮಾರ್ ಈ ಹಿಂದೆ ಮೇಕೆದಾಟು ಯೋಜನೆಗೆ ಆಗ್ರಹಿಸಿ ಪಾದಯಾತ್ರೆ ಮಾಡಿದ್ದರು. ಈಗ ಕೇಂದ್ರದ ವಿರುದ್ಧ ಗೂಬೆ ಕೂರಿಸುತ್ತಿದ್ದಾರೆ. ಕಾವೇರಿ ಹೋರಾಟ ಮಾಡುತ್ತಿರುವ ರೈತರು, ಕನ್ನಡಪರ ಹೋರಾಟಗಾರರ ಧ್ವನಿ ಹತ್ತಿಕ್ಕುವ ಕೆಲಸ ನಡೆದಿದೆ. ನುಡಿದಂತೆ ನಡೆಯದ ಸರ್ಕಾರಕ್ಕೆ ರಾಜ್ಯದ ಜನರು, ರೈತರು ಶಾಪ ಹಾಕುತ್ತಿದ್ದಾರೆ ಎಂದು ಬಿ.ವೈ. ವಿಜಯೇಂದ್ರ ಹೇಳಿದರು.‌

ರೈತರಿಗೆ ಪಂಪ್‍ಸೆಟ್‍ಗಳಿಗೆ ವಿದ್ಯುತ್ ಕೊಡದ ಸರ್ಕಾರ

ಲೋಡ್ ಶೆಡ್ಡಿಂಗ್ ನಿರಂತರವಾಗಿದೆ. ನನ್ನ ಕ್ಷೇತ್ರ ಶಿಕಾರಿಪುರದಲ್ಲಿ 40 ಸಾವಿರ ಪಂಪ್‍ಸೆಟ್ ಇವೆ. ನೀರು ಮೇಲೆತ್ತಿ ಹಾಯಿಸಲು ಒಂದೆರಡು ತಾಸು ಕೂಡ ಕರೆಂಟ್ ಸಿಗುತ್ತಿಲ್ಲ. 200 ಯೂನಿಟ್ ಕರೆಂಟ್ ಉಚಿತ ಎನ್ನುವ ಸರ್ಕಾರ, ರೈತರಿಗೆ ಪಂಪ್‍ಸೆಟ್‍ಗಳಿಗೆ ವಿದ್ಯುತ್ ಕೊಡುತ್ತಿಲ್ಲ. ರೈತರ ಬಗ್ಗೆ ಇವರಿಗೆ ಕನಿಕರ, ಅನುಕಂಪ ಇಲ್ಲ. ಇದು ಖಂಡನೀಯ ಎಂದರು.

ರಾಜ್ಯ ಸರಕಾರದ ವೈಫಲ್ಯಗಳನ್ನು ಖಂಡಿಸಿ ಮಾಜಿ ಸಿಎಂ, ರೈತ ನಾಯಕ ಬಿ.ಎಸ್.ಯಡಿಯೂರಪ್ಪ ಅವರ ನೇತೃತ್ವದಲ್ಲಿ ಬೆಂಗಳೂರಿನಲ್ಲಿ ಇದೇ 8ರಂದು ಹೋರಾಟ ನಡೆಯಲಿದೆ. ರಾಜ್ಯಾಧ್ಯಕ್ಷ ನಳಿನ್‍ಕುಮಾರ್ ಕಟೀಲ್, ಡಾ. ಅಶ್ವತ್ಥನಾರಾಯಣ್, ಆರ್.ಅಶೋಕ್ ಮತ್ತಿತರ ಮುಖಂಡರು ಭಾಗವಹಿಸುತ್ತಾರೆ ಎಂದು ವಿವರಿಸಿದರು. ಇದು ನುಡಿದಂತೆ ನಡೆದ ಸರಕಾರವಲ್ಲ. ಇದು ಎಡವುತ್ತಿರುವ ಸರಕಾರ ಎಂದು ರಾಜ್ಯದ ಜನತೆ ಗಮನಿಸಿದ್ದಾರೆ. ಇವರಿಗೆ ಲೋಕಸಭಾ ಚುನಾವಣೆಯಲ್ಲಿ ಜನತೆ ಪಾಠ ಕಲಿಸುತ್ತಾರೆ ಎಂದು ಬಿ.ವೈ. ವಿಜಯೇಂದ್ರ ಎಚ್ಚರಿಸಿದರು.

ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮತ್ತು ವಿಧಾನಪರಿಷತ್ ಸದಸ್ಯ ಎನ್.ರವಿಕುಮಾರ್, ಶಾಸಕರಾದ ಬಿ. ಸುರೇಶ್ ಗೌಡ, ಸಿ.ಕೆ. ರಾಮಮೂರ್ತಿ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದ್ದರು.

ನನ್ನನ್ನು ರಾಜ್ಯಾಧ್ಯಕ್ಷನನ್ನಾಗಿ ಮಾಡಲು ಬಿಎಸ್‌ವೈ ಪಟ್ಟು ಹಿಡಿದಿಲ್ಲ

ರಾಜ್ಯಾಧ್ಯಕ್ಷ ಸ್ಥಾನಕ್ಕೆ ಮಗನ ಪರ ಯಡಿಯೂರಪ್ಪ ಪಟ್ಟು ಹಿಡಿದು ಕುಳಿತಿದ್ದಾರೆ ಎಂಬ ಸುದ್ದಿ ಬಗ್ಗೆ ಪ್ರತಿಕ್ರಿಯೆ ನೀಡಿದ ಶಾಸಕ ವಿಜಯೇಂದ್ರ, ಪಕ್ಷದ ರಾಜ್ಯಾಧ್ಯಕ್ಷರು ಯಾರಾಗಬೇಕು? ಯಾವಾಗ ಆಗಬೇಕು ಅಂತ ಪಕ್ಷದ ವರಿಷ್ಠರು ನಿರ್ಧಾರ ಮಾಡುತ್ತಾರೆ. ಕಳೆದ ಹಲವು ದಿನಗಳಿಂದ ಮಾಧ್ಯಮಗಳಲ್ಲಿ ನಾನೂ ಗಮನಿಸುತ್ತಿದ್ದೇನೆ. ಯಡಿಯೂರಪ್ಪ, ವಿಜಯೇಂದ್ರಗೆ ರಾಜ್ಯಾಧ್ಯಕ್ಷ ಮಾಡಿ ಅಂತ ಪಟ್ಟು ಹಿಡಿದಿದ್ದಾರೆ ಎಂಬ ಸುದ್ದಿಗಳು ಬರುತ್ತಿವೆ. ಇಂಥ ಚರ್ಚೆ ಅನಾವಶ್ಯಕ, ಇದು ಕಾರ್ಯಕರ್ತರನ್ನು ಗೊಂದಲಕ್ಕೀಡು ಮಾಡುತ್ತದೆ. ಪಕ್ಷದಲ್ಲಿ ಹಗಲು – ರಾತ್ರಿಯನ್ನದೆ ದುಡಿಯಲು ತಯಾರಿದ್ದಾರೋ ಅವರ ಬೆನ್ನು ತಟ್ಟುವ ಕೆಲಸ ಯಡಿಯೂರಪ್ಪ ಮಾಡಿದ್ದಾರೆ. ಇನ್ನು ನನ್ನನ್ನು ರಾಜ್ಯಾಧ್ಯಕ್ಷನನ್ನಾಗಿ ಮಾಡಿ ಎಂದು ಅವರು ಪಟ್ಟು ಹಿಡಿಯುವ ಪ್ರಶ್ನೆಯೇ ಉದ್ಭವ ಆಗಲ್ಲ. ಈ ಬಗ್ಗೆ ವರಿಷ್ಠರ ಜತೆ ಯಡಿಯೂರಪ್ಪ ಚರ್ಚೆ ಮಾಡಿಲ್ಲ. ಒಂದು ವೇಳೆ ಚರ್ಚೆ ಮಾಡಿದರೂ ಪಕ್ಷಕ್ಕೆ ಹಗಲಿರುಳು ಶ್ರಮಿಸಿದ ಕಾರ್ಯಕರ್ತರಿಗೆ ಕೊಡಿ ಎಂದು ಹೇಳುತ್ತಾರೆಯೇ ಹೊರತು ತಮ್ಮ ಮಗನಿಗೆ ಕೊಡಿ ಅಂತ ಕೇಳಲ್ಲ. ಇದು ಸತ್ಯಾಂಶಕ್ಕೆ ದೂರವಾದ ವಿಷಯ ಎಂದು ಸುದ್ದಿಗಾರರ ಬಳಿ ಬಿ.ವೈ. ವಿಜಯೇಂದ್ರ ಸ್ಪಷ್ಟನೆ ನೀಡಿದರು.

ಬಿಜೆಪಿಯಲ್ಲಿ ಲಿಂಗಾಯತ ಕಡೆಗಣನೆ ವಿಚಾರ ಸತ್ಯಕ್ಕೆ ದೂರವಾಗಿದೆ. ಬಿಜೆಪಿ ಜಾತಿ ಆಧಾರಿತ ಪಕ್ಷ ಅಲ್ಲ. ಮೂರ್ನಾಲ್ಕು ದಶಕಗಳ ಕಾಲ ಯಡಿಯೂರಪ್ಪ ಅವರು ರಾಜ್ಯಾದ್ಯಂತ ಓಡಾಟ ಮಾಡಿ ಪಕ್ಷ ಕಟ್ಟಿದ್ದಾರೆ. ನಗರಕ್ಕೆ ಸೀಮಿತವಾಗಿದ್ದ ಪಕ್ಷವನ್ನು ಎಲ್ಲೆಡೆ ಪಸರಿಸುವಂತೆ ಮಾಡಿದ್ದರು. ಇದಕ್ಕೆ ಅನಂತ್ ಕುಮಾರ್, ಕೆ.ಎಸ್. ಈಶ್ವರಪ್ಪ, ಶಂಕರಮೂರ್ತಿ ಸೇರಿ ಎಲ್ಲ ನಾಯಕರ ಹೋರಾಟದ ಶ್ರಮ ಇದೆ. ಒಂದು ಜಾತಿಗೆ ಸೀಮಿತ ಮಾಡಿ ಮಾತನಾಡುವುದು ಸರಿಯಲ್ಲ ಎಂದು ಬಿ.ವೈ. ವಿಜಯೇಂದ್ರ ಹೇಳಿದರು.

ಇದನ್ನೂ ಓದಿ: Weather report : ಬೆಂಗಳೂರಲ್ಲಿ ಇಂದೂ ಇದೆ ಮಳೆ; ಉತ್ತರ ಕರ್ನಾಟಕದಲ್ಲೂ ವರುಣನ ಅಬ್ಬರ!

ವಿಜಯೇಂದ್ರ ಕಡೆಗಣನೆ ಆಗಿದ್ದಾರೆ ಎಂದು ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ನೀಡಿರುವ ಹೇಳಿಕೆ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಪಕ್ಷ ನನಗೆ ಶಿಕಾರಿಪುರದಲ್ಲಿ ಟಿಕೆಟ್ ಕೊಟ್ಟು ಗೆಲ್ಲಿಸಿದೆ. ಇಷ್ಟರ ಮೇಲೂ ನನಗೆ ಅನ್ಯಾಯ ಆಗಿದೆ ಅಂತ ಹೇಳಿದರೆ ಅದಕ್ಕೆ ಅರ್ಥ ಇಲ್ಲ ಎಂದು ಸ್ಪಷ್ಟನೆ ನೀಡಿದರು.

Exit mobile version