ರಮೇಶ ದೊಡ್ಡಪುರ, ಬೆಂಗಳೂರು
ರಾಜ್ಯದಲ್ಲಿ ವಿಧಾನಸಭೆ ಚುನಾವಣೆಗಳು ಹತ್ತಿರವಾದಂತೆಯೇ ರಾಜಕೀಯ ನಾಯಕರ ಬಹಿರಂಗ ಹೇಳಿಕೆಗಳು, ಪ್ರತಿಹೇಳಿಕೆಗಳು, ವಾಗ್ದಾಳಿಗಳು ಎಲ್ಲರ ಕಿವಿಗೆ ಕೇಳುತ್ತಿವೆ. ಆದರೆ ರಾಜಕೀಯ ನಾಯಕರು ವಿವಿಧ ಮೂಲಗಳು, ಮಾರ್ಗಗಳ ಮೂಲಕ ಜನಸಾಮಾನ್ಯರಿಗೆ ರವಾನೆ ಮಾಡುತ್ತಿರುವ ಆಂತರಿಕ ಸಂದೇಶಗಳು ಸದ್ದಿಲ್ಲದೆ ಕೆಲಸ ಮಾಡುತ್ತಿವೆ.
ಇದೀಗ ಅಧಿಕಾರದಲ್ಲಿರುವ ಬಿಜೆಪಿಯನ್ನು ಹೇಗಾದರೂ ಮಾಡಿ ಕೆಳಗಿಳಿಸಬೇಕು ಎಂದು ನಿರ್ಧಿಸಿರುವ ಕಾಂಗ್ರೆಸ್, ಬಿಜೆಪಿ ಕುರಿತು ಅನೇಕ ಆಂತರಿಕ ಸಂದೇಶಗಳನ್ನು ರವಾನೆ ಮಾಡುತ್ತಿದೆ. ಇದರಲ್ಲಿ ಎರಡು ವಿಚಾರಗಳು ಬಿಜೆಪಿ ಪಾಳೆಯದಲ್ಲೂ ಆತಂಕಕ್ಕೀಡು ಮಾಡಿದ್ದು, ಅದನ್ನು ಎದುರಿಸಲು ಹರಸಾಹಸಪಡುತ್ತಿದೆ.
ಕೇಂದ್ರಕ್ಕೆ ಮೋದಿ, ರಾಜ್ಯಕ್ಕೆ ಕಾಂಗ್ರೆಸ್
ಕಾಂಗ್ರೆಸ್ ಪಕ್ಷವು ಮೊದಲನೆಯದಾಗಿ, ಕರ್ನಾಟಕದಲ್ಲಿ ಮೋದಿ ಅಲೆ ನಿಚ್ಚಳವಾಗಿರುವುದನ್ನು ಒಪ್ಪಿಕೊಂಡಿದೆ. ರಾಜ್ಯದಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಪ್ರಾಬಲ್ಯವಿರುವ ಪ್ರದೇಶಗಳಲ್ಲೂ ಮೋದಿ ಅಲೆಯಿದೆ. ಇತರೆ ರಾಜ್ಯಗಳಂತೆಯೇ ಕರ್ನಾಟಕದಲ್ಲೂ ಮೋದಿಯನ್ನು ತೆಗಳಿದಷ್ಟೂ ಜನರಲ್ಲಿ ಮೋದಿ ಕುರಿತು ಅನುಕಂಪ ಹೆಚ್ಚಳವಾಗುತ್ತದೆ. ಅನ್ಯರಾಜ್ಯದ ಕಾಂಗ್ರೆಸ್ ನಾಯಕನೊಬ್ಬ ʼಮರ್ ಜಾ ಮೋದಿ (ಮೋದಿ ಮೃತನಾಗಲಿ)ʼ ಎಂದು ಹೇಳಿದ್ದ ಮಾತನ್ನು ಇತ್ತೀಚೆಗೆ ಮೋದಿ ಕರ್ನಾಟಕದ ಬೆಳಗಾವಿಯಲ್ಲೂ ಉಲ್ಲೇಖಿಸಿದ್ದು ಇದಕ್ಕೆ ಸಾಕ್ಷಿ.
ಈ ಕಾರಣಕ್ಕೆ ಕಾಂಗ್ರೆಸ್ ಪಕ್ಷವು ಮನೆಮನೆ ಪ್ರಚಾರ ಹಾಗೂ ಸಮುದಾಯದ ಮುಖಂಡರೊಂದಿಗೆ ಮಾತನಾಡುವಾಗ ಒಂದು ಸಮಾನ ಅಂಶವನ್ನು ಉಚ್ಛರಿಸುತ್ತಿದ್ದಾರೆ. ಕೇಂದ್ರದಲ್ಲಿ ಮೋದಿ ಸರ್ಕಾರ ಉತ್ತಮ ಕೆಲಸ ಮಾಡುತ್ತಿದೆ ಎನ್ನುವುದು ಎಲ್ಲರಿಗೂ ಗೊತ್ತಿದೆ. ಅದನ್ನು ತೀರಾ ವಿರೋಧಿಸಲು ನಾವು ಹೋಗುವುದಿಲ್ಲ. ಆದರೆ ರಾಜ್ಯದ ವಿಚಾರಕ್ಕೆ ಬಂದಾಗ ಬಿಜೆಪಿ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿರುವುದನ್ನು ಎಲ್ಲರೂ ನೋಡಿ ಎನ್ನುತ್ತಿದ್ದಾರೆ.
ಜತೆಗೆ, ಕೇಂದ್ರದ ಪ್ರಬಲ ನಾಯಕರ ಎದುರು ರಾಜ್ಯದ ನಾಯಕರು ಕೈಕಟ್ಟಿ ನಿಲ್ಲುತ್ತಿದ್ದಾರೆ. ಹೆಚ್ಚಿನ ಅನುದಾನವನ್ನು ತರಬೇಕೆಂದರೆ ಕೇಂದ್ರದೊಂದಿಗೆ ಗುದ್ದಾಡಬೇಕು. ಇದಕ್ಕೆ, ಕೇಂದ್ರ ಹಾಗೂ ರಾಜ್ಯದಲ್ಲಿ ವಿಭಿನ್ನ ಆಡಳಿತಗಳಿದ್ದರೆ ಅಭಿವೃದ್ಧಿ ಆಗುತ್ತದೆ. ಈ ಹಿಂದೆ ಕರ್ನಾಟಕದಲ್ಲಿ ಬಹಳಷ್ಟು ಬಾರಿ ಹೀಗೆಯೇ ಆಗಿತ್ತು. ಕೇಂದ್ರದಲ್ಲಿ ಹಾಗೂ ರಾಜ್ಯದಲ್ಲಿ ಪ್ರತ್ಯೇಕ ಪಕ್ಷಗಳು ಅಧಿಕಾರದಲ್ಲಿದ್ದವು. ಆಗೆಲ್ಲ ಕರ್ನಾಟಕದ ಅಭಿವೃದ್ಧಿ ಉತ್ತಮವಾಗಿ ನಡೆದಿದೆ. ತಮಿಳುನಾಡು ಸಹ ಕೇಂದ್ರದೊಂದಿಗೆ ಗುದ್ದಾಡಿ ಅನುದಾನ ತರುತ್ತಿದೆ. ಅದೇ ಮಾರ್ಗವನ್ನು ಕರ್ನಾಟಕದಲ್ಲೂ ಅನುಸರಿಸುವುದು ಒಳ್ಳೆಯದು ಎಂಬ ಮಾತುಗಳನ್ನು ಕಾಂಗ್ರೆಸ್ ನಾಯಕರು ಆಡುತ್ತಿದ್ದಾರೆ ಎಂದು ಬಿಜೆಪಿ ಮುಖಂಡರೊಬ್ಬರು ತಿಳಿಸಿದ್ದಾರೆ. ಇಂತಹ ಮಾತನ್ನು ಆಡುವ ಮೂಲಕ, ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಮತಗಳನ್ನು ಭದ್ರಪಡಿಸಿಕೊಳ್ಳುವ ತಂತ್ರವನ್ನು ಮಾಡಲಾಗಿದೆ.
ಕಾಂಗ್ರೆಸ್‌ನ ಈ ತಂತ್ರವನ್ನು ವಿರೋಧಿಸಲು ಪದೇಪದೆ ಡಬಲ್ ಇಂಜಿನ್ ಸರ್ಕಾರವನ್ನು ಬಿಜೆಪಿ ಪ್ರಸ್ತಾಪಿಸಲು ನಿರ್ಧರಿಸಿದೆ. ಈ ಹಿಂದಿನಿಂದಲೂ ಡಬಲ್ ಇಂಜಿನ್ ಸರ್ಕಾರದ ಕುರಿತು ಪ್ರಸ್ತಾಪ ಆಗುತ್ತಿದೆ. ಆದರೆ ಇದನ್ನು ನಿರ್ದಿಷ್ಟವಾಗಿ ಜನರಿಗೆ ತಿಳಿಸಬೇಕು. ಅದಕ್ಕಾಗಿಯೇ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಯೋಜನೆಗಳ ಫಲಾನುಭವಿಗಳ ಸಮಾವೇಶವನ್ನು ಹೆಚ್ಚೆಚ್ಚು ಆಯೋಜಿಸಲಾಗಿದೆ. ಕೇವಲ ಕೇಂದ್ರ ಸರ್ಕಾರವಿದ್ದರೆ ಸಾಲದು, ಅದಕ್ಕೆ ಅನುಗುಣವಾಗಿ ನಡೆಯುವ ರಾಜ್ಯ ಸರ್ಕಾರ ಇದ್ದರೆ ಮಾತ್ರವೇ ಅಭಿವೃದ್ಧಿ ಸಾಧ್ಯ ಎನ್ನುವುದನ್ನು ಜನರಿಗೆ ಮನವರಿಕೆ ಮಾಡಿಕೊಡಲಾಗುತ್ತಿದೆ ಎಂದು ರಾಜ್ಯ ಬಿಜೆಪಿ ಪದಾಧಿಕಾರಿಯೊಬ್ಬರು ಹೇಳಿದ್ದಾರೆ.
ಯಡಿಯೂರಪ್ಪ ಕಡೆಗಣನೆ
ಕಾಂಗ್ರೆಸ್ ಪ್ರಚಾರದಲ್ಲಿ ಪ್ರಮುಖವಾಗಿ ಪ್ರಸ್ತಾಪಿಸುತ್ತಿರುವ ಎರಡನೇ ವಿಚಾರವೆಂದರೆ ಬಿಜೆಪಿಯಲ್ಲಿ ಬಿ.ಎಸ್. ಯಡಿಯೂರಪ್ಪ ಅವರನ್ನು ಕಡೆಗಣಿಸಲಾಗಿದೆ ಎನ್ನುವ ಅಂಶ. ಮುಖ್ಯಮಂತ್ರಿ ಸ್ಥಾನದಿಂದ ರಾಜೀನಾಮೆ ನೀಡುವ ಮುನ್ನ ಯಡಿಯೂರಪ್ಪ ಆಡಿದ ಮಾತು ಹಾಗೂ ಕಣ್ಣೀರು ಹಾಕಿದ್ದನ್ನು ಕಾಂಗ್ರೆಸ್ ಪ್ರಧಾನವಾಗಿ ಹೇಳುತ್ತಿದೆ.
ಮುಖ್ಯವಾಗಿ, ವೀರಶೈವ ಲಿಂಗಾಯತ ಸಮುದಾಯ ಸಂಪೂರ್ಣವಾಗಿ ಬಿಜೆಪಿ ಜತೆ ನಿಂತಿದೆ. ಈ ಹಿಂದೆ ಕಾಂಗ್ರೆಸ್‌ನಲ್ಲಿ ವೀರೇಂದ್ರ ಪಾಟೀಲ್ ಹಾಗೂ ಎಸ್. ನಿಜಲಿಂಗಪ್ಪ ಅವರನ್ನು ಅವಮಾನಿಸಿದ ನಂತರ ಈ ಸಮುದಾಯದ ಮತಗಳು ಜನತಾ ಪರಿವಾರಕ್ಕೆ ವರ್ಗಾವಣೆಯಾದವು. ಅಲ್ಲಿಂದ ರಾಮಕೃಷ್ಣ ಹೆಗಡೆ ಮೂಲಕ ಬಿಜೆಪಿಗೆ ಆಗಮಿಸಿದವು. ಈಗಲೂ ಈ ಮತಗಳು ಬಿಜೆಪಿಯಲ್ಲಿ ಉಳಿಯಲು ಪ್ರಮುಖ ಕಾರಣವೇ ಬಿ.ಎಸ್. ಯಡಿಯೂರಪ್ಪ.
ಕಳೆದ 2018ರ ಚುನಾವಣೆಯಲ್ಲಿ ಪ್ರತ್ಯೇಕ ಲಿಂಗಾಯತ ಧರ್ಮದ ವಿಚಾರವನ್ನಿಟ್ಟುಕೊಂಡು ಸಮುದಾಯದ ಮತ ವಿಭಜನೆಯ ಪ್ರಯತ್ನವನ್ನು ಕಾಂಗ್ರೆಸ್ ಮಾಡಿತ್ತು. ಆದರೆ ಅದು ಸಾಧ್ಯವಾಗಲಿಲ್ಲ. ಈ ಬಾರಿ ಯಡಿಯೂರಪ್ಪ ಅವರನ್ನು ಕಡೆಗಣಿಸಲಾಗಿದೆ ಎಂಬ ವಿಚಾರ ಇಟ್ಟುಕೊಂಡು ಸಮುದಾಯದ ಮತಗಳನ್ನು ಪಡೆಯುವ ಪ್ರಯತ್ನ ನಡೆಯುತ್ತಿದೆ. ಇದಕ್ಕೆ ಅನುಗುಣವಾಗಿ ವೀರಶೈವ ಲಿಂಗಾಯತ ಸಮುದಾಯಕ್ಕೆ ಹೆಚ್ಚಿನ ಟಿಕೆಟ್ ನೀಡುವ ಚರ್ಚೆಯೂ ನಡೆಯುತ್ತಿದೆ.
ಈ ಅಂಶವೂ ಬಿಜೆಪಿ ವರಿಷ್ಠರಿಗೆ ತಲೆನೋವಾಗಿದೆ. ವೀರಶೈವ ಲಿಂಗಾಯತ ಸಮುದಾಯವು ಕಾಂಗ್ರೆಸ್‌ನವರ ಮಾತಿಗೆ ಮರುಳಾಗಬಾರದು, ನನಗೆ ಯಾವುದೇ ಅವಮಾನ ಆಗಿಲ್ಲ, ನಾನೇ ಸ್ವಯಂ ಪ್ರೇರಣೆಯಿಂದ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದೆ ಎಂದು ಎರಡು ಬಾರಿ ಬಿ.ಎಸ್. ಯಡಿಯೂರಪ್ಪ ಮನವಿ ಮಾಡಿದ್ದಾರೆ. ಕಾಂಗ್ರೆಸ್‌ನಲ್ಲಿ ವೀರೇಂದ್ರ ಪಾಟೀಲ್ ಹಾಗೂ ಎಸ್. ನಿಜಲಿಂಗಪ್ಪ ಅವರನ್ನು ಕಡೆಗಣಿಸಿದ ವಿಚಾರವನ್ನು ಬೆಳಗಾವಿಯಲ್ಲಿ ಪ್ರಧಾನಿ ಮೋದಿ ಪ್ರಸ್ತಾಪಿಸಿದ್ದಾರೆ. ಇದೇ ಮಾತನ್ನು ಬೆಂಗಳೂರಿನ ಆವತಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೇಂದ್ರ ಗೃಹಸಚಿವ ಅಮಿತ್ ಶಾ ಪ್ರಸ್ತಾಪಿಸಿದ್ದಾರೆ.
ಇದೀಗ ಚನ್ನಗಿರಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಮೇಲಿನ ಲೋಕಾಯುಕ್ತ ದಾಳಿಯು ಕಾಂಗ್ರೆಸ್‌ಗೆ ಹೊಸ ಅಸ್ತ್ರವನ್ನು ನೀಡಿದೆ. ಮಾಡಾಳ್ ವಿರೂಪಾಕ್ಷಪ್ಪ, ಯಡಿಯೂರಪ್ಪ ಆಪ್ತ ಎಂದೇ ಗುರುತಿಸಿಕೊಂಡವರು. ಲೋಕಾಯುಕ್ತ ಸಂಸ್ಥೆ ದಾಳಿ ನಡೆಸುತ್ತದೆ ಎಂದರೆ ಅದಕ್ಕೆ ಸರ್ಕಾರವೇ, ಅಂದರೆ ಸಿಎಂ ಬಸವರಾಜ ಬೊಮ್ಮಾಯಿ ನಿರ್ದೇಶನ ಇದ್ದೇ ಇರುತ್ತದೆ. ಕನಿಷ್ಠ ಪಕ್ಷ ದಾಳಿಯ ಮಾಹಿತಿಯಾದರೂ ತಿಳಿದಿರುತ್ತದೆ. ಆದರೂ ತಡೆದಿಲ್ಲ ಎಂದರೆ ಬಿ.ಎಸ್. ಯಡಿಯೂರಪ್ಪ ಅವರನ್ನು ಹೆದರಿಸಿ ಕಟ್ಟಿಹಾಕುವ ಪ್ರಯತ್ನ ನಡೆದಿದೆ. ತಮಗೆ ಅವಮಾನವಾಗಿದೆ ಎಂದು ಯಡಿಯೂರಪ್ಪ ಹೇಳಿದರೆ ಮುಂದೆ ಇಡಿ, ಸಿಬಿಐ ದಾಳಿಯನ್ನೂ ನಡೆಸುವ ಮುನ್ಸೂಚನೆ ಇದು ಎಂಬ ಮಾತುಗಳನ್ನು ರಾಜಕೀಯ ಪಡಸಾಲೆಯಲ್ಲಿ ಹರಿಯಬಿಡಲಾಗಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ರಾಜ್ಯ ಬಿಜೆಪಿ ಪದಾಧಿಕಾರಿಯೊಬ್ಬರು, ವೀರಶೈವ ಲಿಂಗಾಯತ ಮತಗಳು ವಿಭಜನೆ ಆಗುತ್ತವೆ ಎನ್ನುವುದು ಸ್ಪಷ್ಟವಿಲ್ಲ. ಆದರೂ ಎಷ್ಟು ಪ್ರಮಾಣದಲ್ಲಿ ಆಗಬಹುದು ಎನ್ನುವುದೂ ತಿಳಿಯುತ್ತಿಲ್ಲ. ಆದರೆ ಯಾವುದಕ್ಕೂ ಅಪಾಯವನ್ನು ಮೈಮೇಲೆ ಎಳೆದುಕೊಳ್ಳುವುದು ಬೇಡ ಎಂಬ ಕಾರಣಕ್ಕೆ ಮುನ್ನೆಚ್ಚರಿಕೆ ವಹಿಸಲಾಗಿದೆ. ಅದಕ್ಕಾಗಿ ಬಿಜೆಪಿ ನಾಯಕರು ಈ ವಿಚಾರವನ್ನು ಹೆಚ್ಚೆಚ್ಚು ಪ್ರಸ್ತಾಪಿಸುತ್ತಿದ್ದಾರೆ. ಮನೆಮನೆಗೆ ಪ್ರಚಾರಕ್ಕೆ ತೆರಳಿದಾಗಲೂ ಈ ವಿಚಾರವನ್ನು ತಿಳಿಸಲಾಗುತ್ತಿದೆ ಎಂದಿದ್ದಾರೆ.
ಒಟ್ಟಿನಲ್ಲಿ, ಮೇಲ್ಮಟ್ಟದಲ್ಲಿ ನಡೆಯುತ್ತಿರುವ ಚರ್ಚೆಗಳು ಒಂದೆಡೆಯಾದರೆ ರಾಜಕೀಯದಲ್ಲಿ ಆಂತರಿಕವಾಗಿ ನಡೆಯುವ ಸಂದೇಶಗಳ ರವಾನೆಯು ಮತ್ತಷ್ಟು ಪ್ರಮುಖ ಪಾತ್ರ ವಹಿಸುತ್ತದೆ. ಇಂತಹ ಸಂದೇಶಗಳ ಪರಿಣಾಮವನ್ನು ಗ್ರಹಿಸಿ ಅದಕ್ಕೆ ಉತ್ತರ ಕಂಡುಕೊಳ್ಳುವುದು ರಾಜಕೀಯ ಪಕ್ಷಗಳಿಗೆ ಸವಾಲು. ಈಗಿನ ಕಾಂಗ್ರೆಸ್ ಸಂದೇಶಗಳನ್ನು ಬಿಜೆಪಿ ಯಾವ ರೀತಿ ಎದುರಿಸುತ್ತದೆ ಎನ್ನುವುದನ್ನು ಕಾದುನೋಡಬೇಕು.
ಇದನ್ನೂ ಓದಿ: Vijay Sankalpa Yatre: ವೀರಶೈವ ಲಿಂಗಾಯತರು ಕಾಂಗ್ರೆಸ್ ಅಪಪ್ರಚಾರಕ್ಕೆ ಬಲಿಯಾಗಬೇಡಿ: ಬಿ.ಎಸ್. ಯಡಿಯೂರಪ್ಪ ಮನವಿ