ನವ ದೆಹಲಿ: ಬಿಜೆಪಿ ಜತೆಗಿನ ಮೈತ್ರಿ (BJP JDS Alliance) ಬದಲಿಸದಿದ್ದರೆ ರಾಷ್ಟ್ರೀಯ ಅಧ್ಯಕ್ಷ ಸ್ಥಾನದಿಂದ (JDS National President Post) ಎಚ್.ಡಿ. ದೇವೇಗೌಡರನ್ನೇ (HD Deve Gowda) ಬದಲಾವಣೆ ಮಾಡಬೇಕಾಗುತ್ತದೆ. ಹಾಗಂತ ನಾವು ಅವರನ್ನು ಉಚ್ಚಾಟನೆ ಏನೂ ಮಾಡೋಕೆ ಹೋಗುವುದಿಲ್ಲ. ಆದರೆ, ಅನಿವಾರ್ಯವಾಗಿ ಅಧ್ಯಕ್ಷರನ್ನು ಬದಲಾವಣೆ ಮಾಡುತ್ತೇವೆ ಅಷ್ಟೇ ಎಂದು ಜೆಡಿಎಸ್ ಮಾಜಿ ಅಧ್ಯಕ್ಷ ಸಿ.ಎಂ. ಇಬ್ರಾಹಿಂ (Former JDS president CM Ibrahim) ಗುಡುಗಿದ್ದಾರೆ. ಈ ಮೂಲಕ ರಾಜ್ಯ ರಾಜಕೀಯದಲ್ಲಿ (Karnataka Politics) ಪ್ರಾದೇಶಿಕ ಪಕ್ಷದ ಅಸ್ತಿತ್ವಕ್ಕಾಗಿ ಹೋರಾಟ ಮಾಡುತ್ತಿರುವುದಾಗಿ ಕರೆ ಕೊಟ್ಟಿದ್ದಾರೆ.
ನವ ದೆಹಲಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಸಿ.ಎಂ. ಇಬ್ರಾಹಿಂ, ಅರೇಂಜ್ ಮ್ಯಾರೇಜ್ ಮಾಡಿದರೇ ನಿಲ್ಲುವುದಿಲ್ಲ. ಇನ್ನು ಬಸ್ ಸ್ಟ್ಯಾಂಡ್‌ನಲ್ಲಿ ಲವ್ ಮಾಡಿದ್ದು ಉಳಿಯುತ್ತದೆಯೇ? ಪಾರ್ಟಿಯಲ್ಲಿ ತೀರ್ಮಾನ ಆಗಿದ್ಯಾ? ಯಾರಿಗೆ ಏನು ಅಧಿಕಾರ ಇದೆ? ಶಾಸಕರು ಎಲ್ಲರೂ ಕಾದು ನೋಡಬೇಕು. ಮೈತ್ರಿ ವಿಚಾರವಾಗಿ ಎಚ್.ಡಿ. ದೇವೇಗೌಡ ಅವರು ಮನಸ್ಸು ಬದಲಾಯಿಸಿಲ್ಲ ಅಂದರೆ ರೆಸಲ್ಯೂಷನ್ ಮಾಡಿ ಬೇರೆ ಅಧ್ಯಕ್ಷರನ್ನು ಆಯ್ಕೆ ಮಾಡುತ್ತೇವೆ. ಉಚ್ಚಾಟನೆ ಮಾಡಲು ನಾವು ಹೋಗುವುದಿಲ್ಲ. ಆದರೆ, ಅನಿವಾರ್ಯವಾಗಿ ಅಧ್ಯಕ್ಷರನ್ನು ಬದಲಾವಣೆ ಮಾಡುತ್ತೇವೆ ಎಂದು ಹೇಳಿದರು.
ಇದನ್ನೂ ಓದಿ: Congress Politics : ಅಭಿವೃದ್ಧಿ ಬಗ್ಗೆ ಮಾಧ್ಯಮ ಚರ್ಚೆಗೆ ಬನ್ನಿ; ಎಚ್‌ಡಿಕೆಗೆ ಡಿಕೆಶಿ ಸವಾಲು
ಜೆಡಿಎಸ್ ಪಕ್ಷದ ಹಕ್ಕಿನ ಬಗ್ಗೆ ಕೋರ್ಟ್‌ಗೆ ಹೋಗುವ ಅವಶ್ಯಕತೆ ಬೀಳುವುದಿಲ್ಲ ಅಂತ ನಾನು ಅಂದುಕೊಂಡಿದ್ದೇನೆ. ಎಲೆಕ್ಷನ್ ಕಮಿಷನ್ ಅವರೇ ಈ ಬಗ್ಗೆ ತೀರ್ಮಾನ ಮಾಡುತ್ತಾರೆ. ನಮ್ಮ ದೇವೇಗೌಡರು ಒಪ್ಪದೇ ಇದ್ದರೆ ಮುಂದೆ ಅನಿವಾರ್ಯ ಪರಿಸ್ಥಿತಿ ಬರಬಹುದು. ಅವರನ್ನೇ ರಾಜ್ಯಾಧ್ಯಕ್ಷ ಸ್ಥಾನದಿಂದ ಬದಲಾವಣೆ ಮಾಡಬೇಕಾಗುತ್ತದೆ. ಅವರ ಜತೆಯಲ್ಲಿ ಯಾರೂ ಇಲ್ಲ. ಗೌಡರಿಗೆ ಅವಮಾನ ಆಗೋಕೆ ಬಿಡಬಾರದು, ಅವರಿಗೆ ಗೌರವ ಕೊಡಬೇಕು. ಅವರು ತಂದೆ ಸಮಾನ, ನಮ್ಮ ಜತೆ ನೀವೇ ನಾಯಕರಾಗಿ ಮುಂದುವರಿಯಿರಿ ಅಂತ ಕೇಳುತ್ತೇವೆ. ಅದಾದ ಮೇಲೆ ಅವರು ಏನು ತೀರ್ಮಾನ ಮಾಡುತ್ತಾರೋ ನೋಡೋಣ ಎಂದು ಸಿ.ಎಂ. ಇಬ್ರಾಹಿಂ ಹೇಳಿದರು.
ನಾನು ಕೇಳಿದಾಗ ಇಲ್ಲ ಎಂದಿದ್ದರು!
ಈ ಹಿಂದೆ ಮೈತ್ರಿ ಬಗ್ಗೆ ನಾನು ಎಚ್.ಡಿ. ದೇವೇಗೌಡ ಬಳಿ ಕೇಳಿದ್ದೆ. ಅದಕ್ಕೆ ಅವರು ಅಂಥದ್ದು ಯಾವುದೂ ಇಲ್ಲ ಎಂದೇ ಹೇಳುತ್ತಾ ಬಂದಿದ್ದರು. ಆದರೆ, ಕೊನೆಗೆ ಮೈತ್ರಿ ಮಾಡಿಕೊಂಡಿದ್ದಾರೆ. ಈಗ ಮನಸ್ಸು ಬದಲಾವಣೆ ಮಾಡಿಕೊಳ್ಳದಿದ್ದರೆ ಅವರನ್ನೇ ಬದಲಾವಣೆ ಮಾಡುತ್ತೇವೆ ಎಂದು ಸಿ.ಎಂ. ಇಬ್ರಾಹಿಂ ಹೇಳಿದರು.
ನಾಳೆ ಸಭೆಯಲ್ಲಿ ತೀರ್ಮಾನ
ಈಗ ಜನತಾ ದಳದ ಎಲ್ಲ ರಾಜ್ಯದ ನಾಯಕರು ಒಟ್ಟಾಗಿ ಸೇರಿ ಗುರುವಾರ (ಅ. 26) ನವ ದೆಹಲಿಯಲ್ಲಿ ಮೀಟಿಂಗ್ ಮಾಡುತ್ತಾ ಇದ್ದೇವೆ. ಕೇರಳ, ಮಹಾರಾಷ್ಟ್ರ, ಬಿಹಾರ ರಾಜ್ಯದ ಜನತಾ ದಳದ ನಾಯಕರ ಜತೆ ಸಭೆ ಮಾಡುತ್ತಾ ಇದ್ದೇನೆ. ಜನತಾದಳದಲ್ಲಿ ನಮ್ಮದೇ ಒರಿಜಿನಲ್ ಸ್ಟ್ರೆoತ್. ಮೀಟಿಂಗ್ ಮಾಡಿ ನಾವು ದೇವೇಗೌಡರಿಗೆ ನಮ್ಮ ಅಭಿಪ್ರಾಯವನ್ನು ಹೇಳುತ್ತೇವೆ ಎಂದು ಸಿ.ಎಂ. ಇಬ್ರಾಹಿಂ ತಿಳಿಸಿದರು.
ನೀವು ಹಿರಿಯರಿದ್ದೀರಿ. ನಿಮ್ಮನ್ನು ನಾವು ತಂದೆ ಸ್ಥಾನದಲ್ಲಿ ಕಾಣುತ್ತಲಿದ್ದೇವೆ. ಕರ್ನಾಟಕದಿಂದ ಹೋದ ಏಕೈಕ ಪ್ರಧಾನ ಮಂತ್ರಿ ನೀವು. ಮಕ್ಕಳ ಮಾತು ಕೇಳಿ ಹಾಳಾಗಬೇಡಿ. ಜನತಾದಳ ಯು, ಎಸ್ ಆಗಿದ್ದೇ ಸಿದ್ಧಾಂತದ ಮೇಲೆ ಎಂಬುದು ನಿಮಗೂ ಗೊತ್ತಿದೆ. ರಾಮ್ ವಿಲಾಸ್ ಪಾಸ್ವಾನ್, ಜೆ.ಎಚ್. ಪಟೇಲ್ ಬಿಜೆಪಿ ಜತೆ ಹೋದರು ಅಂತ ಅದನ್ನು ಬಿಟ್ಟು ಬಂದು. ನಾನು, ಸಿದ್ದರಾಮಯ್ಯ ಎಲ್ಲ ಸೇರಿ ಮಾಡಿದ್ದು ಜೆಡಿಎಸ್ ಅನ್ನು. ಈಗ ನೀವು ಮಕ್ಕಳ ಮಾತು ಕೇಳಿ ನಮ್ಮನ್ನು ನಡು ನೀರಿನಲ್ಲಿ ಬಿಟ್ಟು ಹೋಗ್ತಾ ಇದ್ದೀರ. ಆದರೆ, ನಾವು ಹೋರಾಟ ಮಾಡೋದನ್ನು ನಿಮ್ಮಿಂದಲೇ ಕಲಿತಿದ್ದೇವೆ. ಅದಕ್ಕಾಗಿಯೇ ನಾನು ತಿರುಗಾಟ ಮಾಡುತ್ತಾ ಇದ್ದೇನೆ. ಇಷ್ಟಾದ ಮೇಲೂ ಸಹ ನೀವು ಒಪ್ಪದೇ ಇದ್ದರೆ ಮುಂದೆ ನಾವು ತೀರ್ಮಾನ ಮಾಡುತ್ತೇವೆ. ಜೆಡಿಎಸ್ ಪಕ್ಷವನ್ನು ಹೇಗೆ ಉಳಿಸಬೇಕು ಅಂತ ನಾವು ತೀರ್ಮಾನ ಮಾಡುತ್ತೇವೆ ಎಂದು ಎಚ್.ಡಿ. ದೇವೇಗೌಡ ಅವರಿಗೆ ಸಿ.ಎಂ. ಇಬ್ರಾಹಿಂ ನೇರ ಸಂದೇಶ ರವಾನಿಸಿದರು.
ಎಲ್ಲ ರಾಜ್ಯದ ನಾಯಕರು ಸೇರಿ ನಾವು ತೀರ್ಮಾನ ಮಾಡ್ತೇವೆ. ಸಭೆಯನ್ನು ಪಾಟ್ನಾದಲ್ಲಿ ಮಾಡಿ ಅಂತ ಹೇಳಿದ್ದಾರೆ, ನಾನು ಬೆಂಗಳೂರಲ್ಲೇ ಮಾಡೋಣ ಅಂತ ಹೇಳಿದ್ದೇನೆ. ಅದಕ್ಕೆ ನಾಳೆ ನಾವೆಲ್ಲ ಸೇರಿ ಒಂದು ತೀರ್ಮಾನಕ್ಕೆ ಬರುತ್ತೇವೆ. ಎಲ್ಲಿ ಸಭೆ ಮಾಡಬೇಕು ಅಂತ ತೀರ್ಮಾನ ಮಾಡುತ್ತೇವೆ. ಮುಂದಿನ ನಡೆ ಏನು ಎಂಬುದರ ಬಗ್ಗೆ ತೀರ್ಮಾನ ಮಾಡೋಕೆ ನಾಳೆ ಸಭೆ ಸೇರುತ್ತೇವೆ ಎಂದು ಸಿ.ಎಂ. ಇಬ್ರಾಹಿಂ ತಿಳಿಸಿದರು.
ದೇವೇಗೌಡರ ಬಳಿ ಏನೂ ಇಲ್ಲ, ಯಾವ ಲಿಸ್ಟ್ ಕೂಡಾ ಇಲ್ಲ. ಸುಮ್ಮನೆ ಮನೆಯಲ್ಲಿ ಕುಳಿತು ಏನೇನೋ ಬರೆಯುತ್ತಾರೆ ಅಷ್ಟೇ. ಜೆಡಿಎಸ್‌ನಲ್ಲಿ ನಾನು ಎಲೆಕ್ಟೆಡ್ ಪ್ರೆಸಿಡೆಂಟ್ ಇದ್ದೇನೆ. ನನ್ನನ್ನು ತೆಗೆಯೋಕೆ ಬರುವುದೇ ಇಲ್ಲ. ಜನತಾ ದಳದ ಪ್ರಕಾರ ಅವಿಶ್ವಾಸ ತಂದು ಅದು ಪಾಸ್ ಆದ್ಮೇಲೆ 45 ದಿನಕ್ಕೆ ನಾನು ರಾಜೀನಾಮೆ ಕೊಡುತ್ತೇನೆ. ಇನ್ನು ಗಂಡ ಸತ್ತೇ ಇಲ್ಲ, ನೀವು ಎರಡನೇ ಮದುವೆಗೆ ರೆಡಿ ಅಂದರೆ ಹೇಗೆ? ಎಂದು ಸಿ.ಎಂ. ಇಬ್ರಾಹಿಂ ಪ್ರಶ್ನೆ ಮಾಡಿದ್ದಾರೆ.
ಮೈತ್ರಿ ಘೋಷಣೆ ಮಾಡೋಕೆ ಎಚ್.ಡಿ. ಕುಮಾರಸ್ವಾಮಿ ಯಾರು?
ಎನ್‌ಡಿಎ ಮೈತ್ರಿಕೂಟಕ್ಕೆ ಸೇರಿದ್ದೇವೆ ಎಂದು ಘೋಷಣೆ ಮಾಡೋಕೆ ಎಚ್.ಡಿ. ಕುಮಾರಸ್ವಾಮಿ ಯಾರು? ಅವರು ಓನ್ಲಿ ಎಂಎಲ್‌ಎ ಅಷ್ಟೇ. ಹೆಣ್ಣಿಗೆ ಧಾರೆ ಎರೆಯೋದು ಅವರ ಅಪ್ಪ ಆಗಿರಬೇಕು. ಯಾರೋ ಬಸ್ ಸ್ಟ್ಯಾಂಡ್‌ನಲ್ಲಿ ಇರೋನು ಬಂದು ಧಾರೆ ಎರೆಯೋಕೆ ಆಗುತ್ತಾ? ಎಂದು ಸಿ.ಎಂ. ಇಬ್ರಾಹಿಂ ಕೇಳಿದರು.
ಇದನ್ನೂ ಓದಿ: Karnataka Politics : ಸಿದ್ದರಾಮಯ್ಯ ನೋವಿನಲ್ಲಿದ್ದಾರೆ; ನಿಮ್ಮ ತಪ್ಪಿಂದ ಸರ್ಕಾರ ಬಿದ್ದರೆ ನಮ್ಮನ್ನು ದೂಷಿಸಬೇಡಿ: ಸಿಪಿವೈ
ಅಮಿತ್ ಶಾ ಮುಂದೆ ನಿಮ್ಮ ಮಗ ನಿಮ್ಮನ್ನು ಅಡ ಇಡುತ್ತಿದ್ದಾರೆ
ನಾಳೆ ಮಧ್ಯಾಹ್ನ 3 ಗಂಟೆಗೆ ಸಭೆ ಸೇರುತ್ತೇವೆ. ಎಲ್ಲ ರಾಜ್ಯದವರು ಸಹ ಬರುತ್ತಾರೆ. ಈಗಲೂ ನಿಮ್ಮ ಮುಖಾಂತರ ದೇವೇಗೌಡರಿಗೆ ಪ್ರಾರ್ಥನೆ ಮಾಡುತ್ತೇನೆ. ಕೈ ಮುಗಿದು ಹೇಳುತ್ತೇನೆ. ನಮಗೆ ಬಿಜೆಪಿ ಜತೆ ಮೈತ್ರಿ ಬೇಡ. 91 ವರ್ಷ ಆಗಿದೆ ನಿಮಗೆ. ವಾಜಪೇಯಿ ನಿಮಗೆ ಬೆಂಬಲ ಕೊಡುತ್ತೇನೆ ಎಂದು ಹೇಳಿದಾಗಲೇ ನೀವು ಬಿಟ್ಟು ಬಂದವರು. ಈ 3 ಸೀಟಿಗೆ ಅಮಿತ್ ಶಾ ಮುಂದೆ ನಿಮ್ಮ ಮಗ ನಿಮ್ಮನ್ನು ಅಡ ಇಡುತ್ತಿದ್ದಾರೆ. ಏನು ಪರಿಸ್ಥಿತಿ ಬಂದಿದೆ ನಿಮಗೆ? ಕೆಂಪೇಗೌಡರ ನಾಡು ನಮ್ಮ ಕರ್ನಾಟಕ. ಕುಮಾರಸ್ವಾಮಿಗೆ ಬುದ್ಧಿ ಹೇಳಿ. ನಾವು ಇಂಡಿಪೆಂಡೆoಟ್ ಆಗಿ ನಿಂತರೂ ಸಹ 3 ಗೆಲ್ಲುತ್ತೇವೆ. ಬಿಜೆಪಿ ಜತೆ ಹೋದರೆ ಒಂದು ಸೀಟನ್ನೂ ಗೆಲ್ಲುವುದಿಲ್ಲ. ಮದುವೆಗೆ ಬ್ರಾಹ್ಮಣರು ಬರುತ್ತಾ ಇಲ್ಲ. ಇನ್ನು ಒಕ್ಕಲಿಗರಿಗೆ ವೋಟ್ ಹಾಕಲು ಬರುತ್ತಾರಾ? ಎಂದು ಪ್ರಶ್ನೆ ಸಿ.ಎಂ. ಇಬ್ರಾಹಿಂ ಪ್ರಶ್ನೆ ಮಾಡಿದರು.