ಬೆಂಗಳೂರು: ರಾಜ್ಯ ರಾಜಕೀಯದಲ್ಲಿ (Karnataka Politics) ಸಾಕಷ್ಟು ಬೆಳವಣಿಗೆಗಳು ನಡೆಯುತ್ತಿವೆ. ಮುಂಬರುವ ಲೋಕಸಭಾ ಚುನಾವಣೆ (Lok Sabha Election 2024) ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ ಅತಿ ಹೆಚ್ಚು ಸ್ಥಾನವನ್ನು ಪಡೆಯಬೇಕೆಂದರೆ ಕೂಡಲೇ ಬಿಜೆಪಿ ರಾಜ್ಯಾಧ್ಯಕ್ಷರನ್ನು (BJP state president) ಬದಲಾಯಿಸಬೇಕು. ಹೊಸ ರಾಜ್ಯಾಧ್ಯಕ್ಷರನ್ನು ನೇಮಕ ಮಾಡಬೇಕು. ಆ ಮೂಲಕ ಸಂಘಟನೆಗೆ ಒತ್ತು ನೀಡಬೇಕು ಎಂದು ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ (Former CM BS Yediyurappa) ಪಕ್ಷದ ಹೈಕಮಾಂಡ್‌ಗೆ (BJP High Command) ಬೇಡಿಕೆ ಇಟ್ಟಿದ್ದಾರೆ ಎನ್ನಲಾಗಿದೆ.
ನವ ದೆಹಲಿಯಲ್ಲಿ ಕೇಂದ್ರ ಚುನಾವಣಾ ಸಮಿತಿ ಸಭೆಯಲ್ಲಿ (Central Election Committee meeting) ಭಾಗವಹಿಸಿದ್ದ ಬಿ.ಎಸ್. ಯಡಿಯೂರಪ್ಪ, ವಿರೋಧ ಪಕ್ಷದ ನಾಯಕ ಹಾಗೂ ನೂತನ ರಾಜ್ಯಾಧ್ಯಕ್ಷ ನೇಮಕದ ಬಗ್ಗೆ ಪ್ರಸ್ತಾಪ ಮಾಡಿದ್ದಾರೆ ಎನ್ನಲಾಗಿದೆ. ಆದರೆ, ಇದಕ್ಕೆ ವರಿಷ್ಠರು ಯಾವ ಉತ್ತರವನ್ನು ನೀಡಿದ್ದಾರೆ ಎಂಬುದು ಮಾತ್ರ ತಿಳಿದುಬಂದಿಲ್ಲ.
ಇದನ್ನೂ ಓದಿ: Karnataka Road : ರಸ್ತೆ ಅವ್ಯವಹಾರಕ್ಕೆ ಬೀಳುತ್ತೆ ಬ್ರೇಕ್; ಗುಣಮಟ್ಟ, ನಕಲಿ ಬಿಲ್ ದೂರಿಗೆ ಸಿದ್ಧವಾಗಿದೆ ಆ್ಯಪ್!
ಸಭೆಗೂ ಮೊದಲು ಮಾಧ್ಯಮದವರೊಂದಿಗೆ ಮಾತನಾಡಿದ್ದ ಬಿ.ಎಸ್. ಯಡಿಯೂರಪ್ಪ, ಕರ್ನಾಟಕ ವಿಧಾನಸಭೆಯ ವಿರೋಧ ಪಕ್ಷದ ನಾಯಕ (Leader of Opposition) ಮತ್ತು ಪಕ್ಷದ ಹೊಸ ರಾಜ್ಯಾಧ್ಯಕ್ಷರನ್ನು ಆದಷ್ಟು ಬೇಗ ನೇಮಕ ಮಾಡುವಂತೆ ಕೇಂದ್ರ ನಾಯಕತ್ವವನ್ನು ಕೋರುವುದಾಗಿ ಹೇಳಿದ್ದರು.
ರಾಜ್ಯ ರಾಜಕೀಯ ಚರ್ಚೆಯೇ ಆಗಿಲ್ಲ ಎಂದ ಬಿಎಸ್‌ವೈ
ನೂತನ ರಾಜ್ಯಾಧ್ಯಕ್ಷರ ನೇಮಕಕ್ಕೆ ಬಿ.ಎಸ್. ಯಡಿಯೂರಪ್ಪ ಅವರು ವರಿಷ್ಠರೆದುರು ಮನವಿ ಮಾಡಿದ್ದಾರೆಂದು ಹೇಳಲಾಗುತ್ತಿದೆಯಾದರೂ,ಸಭೆ ಬಳಿಕ ಮಾತನಾಡಿದ ಅವರು, ರಾಜ್ಯ ರಾಜಕೀಯದ ಬಗ್ಗೆ ಯಾವುದೇ ಚರ್ಚೆ ನಡೆದಿಲ್ಲ. ಕೇವಲ ಜಿ 20 ಶೃಂಗಸಭೆಯ ಯಶಸ್ಸಿನ ಬಗ್ಗೆ ಮಾತ್ರ ಚರ್ಚೆ ಮಾಡಲಾಯಿತು ಎಂದು ಹೇಳಿ ಅಚ್ಚರಿ ಮೂಡಿಸಿದ್ದಾರೆ.
ಮೋದಿ ಅವರ ಮನಸ್ಸಿನಲ್ಲಿ ಏನಿದೆಯೋ?
ದೆಹಲಿಯಲ್ಲಿ ರಾಜಕೀಯ ವಿಚಾರ ಚರ್ಚೆ ಆಗಿಲ್ಲ. ಬಿಜೆಪಿ – ಜೆಡಿಎಸ್ ಮೈತ್ರಿ ವಿಚಾರವಾಗಿಯೂ ಚರ್ಚೆ ಆಗಿಲ್ಲ. ಪ್ರಧಾನಿ ನರೇಂದ್ರ ಮೋದಿ ಅವರ ಮನಸ್ಸಿನಲ್ಲಿ ಏನಿದೆಯೋ? ಮೈತ್ರಿಗೆ ರಾಜ್ಯ ನಾಯಕರ ಆಕ್ಷೇಪ ಅಂತೇನಿಲ್ಲ. ದೆಹಲಿ ನಾಯಕರು ಏನು ತೀರ್ಮಾನ ಮಾಡುತ್ತಾರೆ ಎಂಬುದನ್ನು ನೋಡಬೇಕು. ಇದರಲ್ಲಿ ವೈಯುಕ್ತಿಕ ಅಭಿಪ್ರಾಯ ಏನೂ ಇರುವುದಿಲ್ಲ. ಎಲ್ಲವೂ ದೆಹಲಿಯಲ್ಲಿಯೇ ತೀರ್ಮಾನ ಆಗಬೇಕು ಎಂದು ಬಿ.ಎಸ್. ಯಡಿಯೂರಪ್ಪ ಹೇಳಿದರು.
ಇದನ್ನೂ ಓದಿ: ISIS Terrorist : ದೆಹಲಿಯಲ್ಲಿ ಶಿವಮೊಗ್ಗ ಮೂಲದ ಐಸಿಸ್ ಉಗ್ರ ಅರಾಫತ್ ಅಲಿ ಸೆರೆ
ಪರೋಕ್ಷ ಸಂದೇಶ ಕೊಟ್ಟರೇ?
ವಿಧಾನಸಭಾ ಚುನಾವಣೆ ಕಳೆದು ಕಾಂಗ್ರೆಸ್ ಸರ್ಕಾರ ಅಸ್ಥಿತ್ವಕ್ಕೆ ಬಂದು ಸುಮಾರು ನಾಲ್ಕು ತಿಂಗಳು ಕಳೆಯುತ್ತಾ ಬಂದರೂ ಬಿಜೆಪಿಯಲ್ಲಿ ಇನ್ನೂ ವಿಧಾನಸಭೆ ಹಾಗೂ ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕರನ್ನು ಆಯ್ಕೆ ಮಾಡಲಾಗಿಲ. ಇನ್ನು ಪಕ್ಷದ ರಾಜ್ಯಾಧ್ಯಕ್ಷರ ಅವಧಿ ಮುಗಿದರೂ ಅವರನ್ನು ಬದಲಾವಣೆ ಮಾಡಲಾಗಿಲ್ಲ. ಹೀಗಾಗಿ ಯಾವುದೇ ಹೋರಾಟಕ್ಕೂ ಒಂದು ಬಲ ಎಂಬುದು ಸಿಗುತ್ತಿಲ್ಲ. ರಾಜ್ಯ ಬಿಜೆಪಿಯು ನಾಯಕನಿಲ್ಲದ ತಂಡವಾಗಿದೆ. ಇದು ಲೋಕಸಭಾ ಚುನಾವಣೆಯಲ್ಲಿ ಪೆಟ್ಟು ನೀಡಲಿದೆ ಎಂಬ ಸಂದೇಶವನ್ನು ಬಿ.ಎಸ್. ಯಡಿಯೂರಪ್ಪ ರವಾನಿಸಿದ್ದಾರೆ ಎನ್ನಲಾಗಿದೆ.