ಬೆಂಗಳೂರು: ರಾಜ್ಯ ರಾಜಕೀಯದಲ್ಲಿ (Karnataka Politics) ಈಗ ಜೈಲು ವಾರ್ (Jail War) ಪ್ರಾರಂಭವಾಗಿದೆ. ಕೆಪಿಸಿಸಿ ಅಧ್ಯಕ್ಷ, ಡಿಸಿಎಂ ಡಿ.ಕೆ. ಶಿವಕುಮಾರ್ (KPCC president and Deputy CM DK Shivakumar) ಮುಂದಿನ ದಿನಗಳಲ್ಲಿ ತಿಹಾರ್ ಜೈಲಿಗೆ (Tihar Jail) ಹೋಗಬಹುದು ಎಂಬ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ (Former CM HD Kumaraswamy) ಹೇಳಿಕೆಗೆ ಡಿಕೆ ಬ್ರದರ್ಸ್ ತಿರುಗಿಬಿದ್ದಿದ್ದಾರೆ. ಡಿ.ಕೆ. ಶಿವಕುಮಾರ್ ಮಾತನಾಡಿ, “ಹಿಂದೆ ಏನೋ ಪಾಪ ಮಾಡಿದ್ದರಲ್ಲ. ನನ್ನ ತಂಗಿ, ನನ್ನ ತಮ್ಮ, ನನ್ನ ಹೆಂಡತಿ ಮೇಲೆ ಕೇಸ್ ಹಾಕಿದ್ದರು. ಈ ಹಿಂದೆ ಸಿಎಂ ಆಗಿದ್ದನ್ನು ಈಗ ನೆನಪು ಮಾಡಿಕೊಳ್ಳುತ್ತಿದ್ದಾರೆ” ಎಂದು ತಿರುಗೇಟು ನೀಡಿದ್ದಾರೆ. ಸಂಸದ ಡಿ.ಕೆ. ಸುರೇಶ್ ಪ್ರತಿಕ್ರಿಯೆ ನೀಡಿ, “ದೆಹಲಿಗೆ ಹೋದಾಗ ಕೇಂದ್ರ ಗೃಹ ಸಚಿವ ಅಮಿತ್ ಶಾ (Union Home Minister Amit Shah) ಅವರಿಗೆ ಮನವಿ ಮಾಡಿ ಬಂದಿರಬೇಕು. ಇವರ ಗೊಡ್ಡು ಬೆದರಿಕೆಗಳಿಗೆ ಹೆದರುವ ಜಾಯಮಾನ ನಮ್ಮದಲ್ಲ” ಎಂದು ಗುಡುಗಿದ್ದಾರೆ.
ಎಚ್.ಡಿ. ಕುಮಾರಸ್ವಾಮಿ ಹೇಳಿದ್ದೇನು?
ನನ್ನ ಜೀವನದಲ್ಲಿ ಡಿ.ಕೆ. ಶಿವಕುಮಾರ್ ಅವರ ಜತೆ ಎಂದೂ ರಾಜಿ ಆಗಲ್ಲ. ಒಮ್ಮೆ ಅವರ ಜತೆ ಸರ್ಕಾರ ಮಾಡಿದ್ದರಿಂದ ನಾನು ಈಗಲೂ ನೋವು ಅನುಭವಿಸುತ್ತಾ ಇದ್ದೇನೆ. ಅವರು ಒಮ್ಮೆ ತಿಹಾರ್ ನೋಡಿಕೊಂಡು ಬಂದಿದ್ದಾರೆ. ಅವರು ಮತ್ತೆ ಅಲ್ಲಿಗೆ ಪರ್ಮನೆಂಟಾಗಿ ಹೋದರೂ ಅಚ್ಚರಿ ಅಲ್ಲ. ನಮ್ಮನ್ನು ಹಾಸನಕ್ಕೆ ಓಡಿಸಬಹುದು, ಅವರು ತಿಹಾರ್‌ಗೆ ಓಡುವ ಕಾಲ ಹತ್ತಿರದಲ್ಲಿ ಇದೆ ಎಂದು ಎಚ್.ಡಿ. ಕುಮಾರಸ್ವಾಮಿ ಹೇಳಿದ್ದರು. ಈ ಹೇಳಿಕೆಗೆ ಈಗ ಡಿ.ಕೆ. ಬ್ರದರ್ಸ್ ಆಕ್ರೋಶ ಹೊರಹಾಕಿದ್ದಾರೆ.
ಅವರ ಪ್ಲ್ಯಾನ್ ಏನಿದೆ ಎಂದು ಹೇಳುತ್ತಿದ್ದಾರೆ: ಡಿ.ಕೆ. ಶಿವಕುಮಾರ್
ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿ, ಎಚ್.ಡಿ. ಕುಮಾರಸ್ವಾಮಿ ಅವರು ಏನು ಹೇಳಿದ್ದಾರೆ ಎಂಬುದನ್ನು ಮೊದಲು ನೋಡುತ್ತೇನೆ. ಏನು ಹೇಳಿದ್ದಾರೋ ಗೊತ್ತಿಲ್ಲ, ಅವರು ದೊಡ್ಡವರು. ಅವರ ನುಡಿಮುತ್ತುಗಳನ್ನು ನೋಡಿ ಉತ್ತರ ಕೊಡುತ್ತೇನೆ. ನನ್ನನ್ನು ಜೈಲಿಗೆ ಕಳುಹಿಸುವ ಬಗ್ಗೆ ಅವರ ಪ್ಲ್ಯಾನ್ ಏನಿದೆ ಎಂದು ಹೇಳುತ್ತಿದ್ದಾರೆ. ಏನೆಲ್ಲ ಮಾಡಲು ಸಾಧ್ಯವೋ ಎಲ್ಲವನ್ನೂ ಹೇಳುತ್ತಿದ್ದಾರೆ. ಹಿಂದೆಯೂ ಪಾಪ ಮಾಡಿದ್ದರಲ್ಲ. ನನ್ನ ತಂಗಿ, ನನ್ನ ತಮ್ಮ, ನನ್ನ ಹೆಂಡತಿ ಮೇಲೆ ಕೇಸ್ ಹಾಕಿದ್ದರು. ಈ ಹಿಂದೆ ಸಿಎಂ ಆಗಿದ್ದನ್ನು ಈಗ ನೆನಪು ಮಾಡಿಕೊಳ್ಳುತ್ತಿದ್ದಾರೆ ಎಂದು ಹೇಳಿದರು.
ಬೆದರಿಕೆಗೆ ನಾವು ಬಗ್ಗುವವರಲ್ಲ
ಈ ಬಗ್ಗೆ ಸಂಸದ ಡಿ.ಕೆ. ಸುರೇಶ್ ಪ್ರತಿಕ್ರಿಯೆ ನೀಡಿದ್ದು, ಡಿ.ಕೆ. ಶಿವಕುಮಾರ್ ಅವರನ್ನು ತಿಹಾರ್ ಜೈಲಿಗೆ ಕಳುಹಿಸಿ ಅಂತ ದೆಹಲಿಗೆ ಹೋದಾಗ ಬಹುಶಃ ಇವರೇ ಅಮಿತ್ ಶಾಗೆ ರಿಕ್ವೆಸ್ಟ್ ಮಾಡಿಕೊಂಡು ಬಂದಿರಬೇಕು. ಇವರ ಗೊಡ್ಡು ಬೆದರಿಕೆಗಳಿಗೆ ಹೆದರುವ ಜಾಯಮಾನ ನಮ್ಮದಲ್ಲ. ಇವರ ದಾಖಲೆಗಳನ್ನು ಬಿಚ್ಚಿಡುವ ಸಮಯ ಬಂದರೆ ನಾವೂ ಸಿದ್ಧ. ಇವರ ಕನಸು ನನಸಾಗುವುದಿಲ್ಲ, ಕನಸು ಕನಸಾಗಿಯೇ ಉಳಿಯುತ್ತದೆ. ಜೆಡಿಎಸ್ ನಾಯಕರು ಎಲ್ಲೋ ಒಂದು ಕಡೆ ಮಾನಸಿಕವಾಗಿ ಕುಗ್ಗಿದ್ದಾರೆ. ಅವರ ಕಾರ್ಯಕರ್ತರನ್ನು ಉಳಿಸಿಕೊಳ್ಳಬೇಕಿದೆ. ಅವರ ಆಲೋಚನೆಗಳೆಲ್ಲ ಒಂದು ಕಡೆ ಕೇಂದ್ರಿಕೃತ ಆದಂತೆ ಕಾಣುತ್ತಿದೆ. ಕಾರ್ಯಕರ್ತರು ಇವರ ನಡೆ ನುಡಿ ನೋಡಿ ಅವರ ದಾರಿಯನ್ನು ಅವರೇ ನೋಡಿಕೊಳ್ಳುತ್ತಿದ್ದಾರೆ. ಎಚ್‌ಡಿಕೆ ಹೇಳುವುದು ಸುಳ್ಳಿನ ಮಹಾ ಭಾಗ. ಸುಳ್ಳಿನಲ್ಲಿ ಎಚ್‌ಡಿಕೆ ಎಕ್ಸ್‌ಪರ್ಟ್ ಎಂದು ಹೇಳಿದ್ದಾರೆ.
ಇದನ್ನೂ ಓದಿ: MLA Muniratna : ಶಾಸಕ ಮುನಿರತ್ನ ವಿರುದ್ಧ ಮಹಿಳೆಯಿಂದ ಹನಿಟ್ರ್ಯಾಪ್ ಬಾಂಬ್!
ಎಚ್.ಡಿ. ಕುಮಾರಸ್ವಾಮಿ ಅವರು ಯಾವ ಯಾವ ಸಂದರ್ಭದಲ್ಲಿ ಯಾರ ಜತೆಗೆ ಹೇಗೆ ನಡೆದುಕೊಳ್ಳುತ್ತಿದ್ದಾರೆ ಎಂಬುದು ಗೊತ್ತಿದೆ. ಅಧಿಕಾರಕ್ಕಾಗಿ ಏನು ಬೇಕಾದರೂ ಮಾಡುವವರು ಅವರು. ಮೈತ್ರಿ ಧರ್ಮ ಪಾಲನೆ ಮಾಡಿಲ್ಲ ಎಂಬ ವಿಚಾರ ಸುಳ್ಳು. ಮಂಡ್ಯದ ಜನರೇ ಅವರನ್ನು ತಿರಸ್ಕಾರ ಮಾಡಿದ್ದರು. ನಾವಲ್ಲ ತಿರಸ್ಕಾರ ಮಾಡಿದ್ದು. ಮಂಡ್ಯದಲ್ಲಿ ನಮ್ಮ ಕಾರ್ಯಕರ್ತರು ಏನು ಸಹಕಾರ ಕೊಡಬೇಕೋ ಅದನ್ನು ಕೊಟ್ಟಿದ್ದರು. ಮಂಡ್ಯದ ಜನರನ್ನೇ ಯಾಕೆ ಸೋಲಿಸಿದರು ಅಂತ ಕೇಳಬೇಕು. ಈಗ ಬಂದು ನಮ್ಮನ್ನು ಕೇಳಿದರೆ ಹೇಗೆ? ಎಂದು ಡಿ.ಕೆ. ಸುರೇಶ್ ಪ್ರಶ್ನೆ ಮಾಡಿದ್ದಾರೆ.