Site icon Vistara News

Karnataka Politics : ಕೆ.ಎನ್.‌ ರಾಜಣ್ಣರ ಮೂವರು ಡಿಸಿಎಂ ಹೇಳಿಕೆಗೆ ಸಿಎಂ ಉತ್ತರಿಸಲಿ: ಡಿ.ಕೆ. ಶಿವಕುಮಾರ್

KN Rajanna CM Siddaramaiah and DCM DK shivakumar

ಬೆಂಗಳೂರು: ಕಾಂಗ್ರೆಸ್‌ ಸರ್ಕಾರದಲ್ಲಿ ಸಿದ್ದರಾಮಯ್ಯ (CM Siddaramaiah) ಅವರೇ ಪೂರ್ಣಾವಧಿ ಸಿಎಂ ಆಗಿ ಇರಲಿದ್ದಾರೆ. ಹೀಗಾಗಿ ಮೂವರು ಉಪ ಮುಖ್ಯಮಂತ್ರಿಗಳ ಅವಶ್ಯಕತೆ ಇದೆ. ಈ ಸಂಬಂಧ ಹೈಕಮಾಂಡ್‌ಗೆ (Congress High Command) ಪತ್ರ ಬರೆಯುತ್ತೇನೆ ಎಂದು ಸಚಿವ ಕೆ.ಎನ್.‌ ರಾಜಣ್ಣ (KN Rajanna) ನೀಡಿರುವ ಹೇಳಿಕೆ ಬಗ್ಗೆ ಡಿಸಿಎಂ ಡಿ.ಕೆ. ಶಿವಕುಮಾರ್‌ (Deputy CM DK Shivakumar) ಕೆಂಡವಾಗಿದ್ದಾರೆ. ಈ ಬಗ್ಗೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ, ಇದರ ಬಗ್ಗೆ ನನ್ನನ್ನು ಏಕೆ ಕೇಳುತ್ತೀರಿ? ಹೀಗೆ ಹೇಳಿದ್ದು ಯಾಕೆ ಎಂದು ಒಂದೋ ರಾಜಣ್ಣ ಅವರನ್ನೇ ಕೇಳಿ. ಇಲ್ಲದಿದ್ದರೆ ಸಿಎಂ ಸಿದ್ದರಾಮಯ್ಯ ಅವರನ್ನೇ ಕೇಳಿ ಎಂದು ಉತ್ತರಿಸಿದ್ದಾರೆ. ರಾಜ್ಯ ರಾಜಕೀಯದಲ್ಲಿ (Karnataka Politics) ಆಪರೇಷನ್‌ ಹಸ್ತ (Operation Hasta) ಸೇರಿದಂತೆ ಇನ್ನಿತರ ಚಟುವಟಿಕೆ ಬೆನ್ನಲ್ಲೇ ಮತ್ತೆ ಕೈ ಪಕ್ಷದೊಳಗೆ ಪೂರ್ಣಾವಧಿ ಸಿಎಂ (Full time CM) ವಿವಾದ ಹುಟ್ಟಿಕೊಂಡಂತೆ ಆಗಿದೆ.

ಈ ಬಗ್ಗೆ ಸೋಮವಾರ (ಸೆಪ್ಟೆಂಬರ್‌ 18) ಮಾಧ್ಯಮದವರ ಜತೆ ಮಾತನಾಡಿದ ಡಿ.ಕೆ. ಶಿವಕುಮಾರ್‌, ಮೂವರು ಡಿಸಿಎಂ ಬೇಕು ಎಂದು ಕೆ.ಎನ್.‌ ರಾಜಣ್ಣ ಅವರ ಹೇಳಿಕೆ ಹಾಗೂ ಗೃಹ ಸಚಿವ ಡಾ. ಜಿ. ಪರಮೇಶ್ವರ್ (Home Minister Dr G Parameshwara) ಅದನ್ನು ಸ್ವಾಗತ ಮಾಡಿರೋದು ಬಹಳ ಸಂತೋಷ. ಎಲ್ಲ ವಿಘ್ನಕ್ಕೆ‌ ವಿನಾಯಕನೇ ನಾಯಕ. ಎಲ್ಲರ ಮನಸ್ಸಿಗೆ ಸಮಾಧಾನವಾಗಲಿ. ಮುಖ್ಯಮಂತ್ರಿಗಳೇ ಇದಕ್ಕೆಲ್ಲ ಉತ್ತರ ಕೊಡುತ್ತಾರೆ. ಲೋಕಸಭೆ ಚುನಾವಣೆ ಹೊತ್ತಲ್ಲಿ ಡಿಸಿಎಂ ಹೇಳಿಕೆ ಯಾಕೆ ಅಂತ ನಮಗೆ ಗೊತ್ತಿಲ್ಲ. ಯಾಕೆ ಅಂತ ನೀವು ರಾಜಣ್ಣ ಅವರನ್ನೇ ಕೇಳಬೇಕು. ಇಲ್ಲವೇ ಸಿಎಂ ಅವರನ್ನು ಕೇಳಬೇಕು. ನಾವೆಲ್ಲ ಸಿಎಂ ಕೆಳಗಡೆ ಕೆಲಸ ಮಾಡುತ್ತಿದ್ದೇವೆ ಎಂದು ಖಡಕ್‌ ಆಗಿ ಹೇಳಿದರು.

ಇದನ್ನೂ ಓದಿ: Crime News : ಸಾಲಭಾದೆಯಿಂದ ಫೋಟೊಗ್ರಾಫರ್ ಆತ್ಮಹತ್ಯೆ, ಟಿಲ್ಲರ್‌ಗೆ ಬೈಕ್‌ ಡಿಕ್ಕಿಯಾಗಿ ಯುವಕ ಸಾವು

ರಾಜಣ್ಣ ಅವರನ್ನೇ ಕೇಳಿ

ರಾಜ್ಯಕ್ಕೆ ಮೂವರು ಡಿಸಿಎಂಗಳ ಅವಶ್ಯಕತೆ ಇರುವ ಬಗ್ಗೆ ಹೈಕಮಾಂಡ್‌ಗೆ ಪತ್ರ ಬರೆಯುತ್ತೇನೆ ಎಂಬ ಕೆ.ಎನ್. ರಾಜಣ್ಣ ಹೇಳಿಕೆ ಬಗ್ಗೆ ಪ್ರತಿಕ್ರಿಯೆ ನೀಡಿದ ಡಿ.ಕೆ. ಶಿವಕುಮಾರ್‌, ಈ ಬಗ್ಗೆ ನೀವು ರಾಜಣ್ಣ ಅವರನ್ನೇ ಕೇಳಿ. ಯಾರು ಏನು ಹೇಳುತ್ತಿದ್ದಾರೋ ಅವರನ್ನೇ ಕೇಳಿ. ನಾನು ಈ ಬಗ್ಗೆ ಬೆಳಗ್ಗೆ ಪೇಪರ್‌ನಲ್ಲಿ ಓದಿದ್ದೇನೆ. ನಾನು ತೆಲಂಗಾಣದಲ್ಲಿ ಕಾಂಗ್ರೆಸ್ ಸಭೆಗೆ ಹೋಗಿದ್ದೆ. ಎಲ್ಲ ನಾಯಕರು ಅಲ್ಲಿಗೆ ಹೋಗಿದ್ದೆವು. ಸಿಎಂ ಸಿದ್ದರಾಮಯ್ಯ ಅವರು ಹೈದ್ರಾಬಾದ್‌ ಕರ್ನಾಟಕ ವಿಮೋಚನಾ ದಿನಕ್ಕೆ ಹೋಗಿದ್ದರು ಎಂದು ಡಿ.ಕೆ. ಶಿವಕುಮಾರ್‌ ಹೇಳಿದರು.

ಯಾರೇ ಮಾತನಾಡಿದರೂ ಅದಕ್ಕೆ ಒಂದು ಸ್ಟೇಟಸ್ ಇದೆ. ಸಚಿವ ಕೆ‌.ಎನ್. ರಾಜಣ್ಣ ಮಾತನಾಡಿರುವ ಬಗ್ಗೆ ಉತ್ತರ ಕೇಳಬೇಕಿರುವವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು. ರಾಜಣ್ಣನಿಗೆ ಉತ್ತರ ಕೇಳಬೇಕಿರುವುದು ಹೈಕಮಾಂಡ್. ಬಿ.ಕೆ. ಹರಿಪ್ರಸಾದ್‌ ಏನೋ ಮಾತನಾಡಿದರು. ಅವರು ವರ್ಕಿಂಗ್ ಕಮಿಟಿ ಸದಸ್ಯರಾಗಿದ್ದಾರೆ. ಆದರೆ, ಅವರಿಗೆ ಹೈಕಮಾಂಡ್ ಇದೆ. ನನ್ನ ಮಟ್ಟದಲ್ಲಿ ಯಾರ ಬಳಿ ಮಾತನಾಡಬೇಕೋ ಅವರಿಗೆ ಮಾತನಾಡುತ್ತೇನೆ. ಅವರವರಿಗೆ ಯಾರು ಯಾರು ಕೇಳಬೇಕು ಅಂತ ಇದೆಯೋ ಅವರಿಗೆ ಕೇಳುತ್ತಾರೆ. ನಾನು ಯಾರಿಗೆ ಕೇಳಬೇಕು ಅಂತ ಇದೆಯೋ ಅವರಿಗೆ ನಾನು ಮುಲಾಜಿಲ್ಲದೆ ಕೇಳುತ್ತೇನೆ ಎಂದು ಅಸಮಾಧಾನವನ್ನು ಹೊರಹಾಕಿದರು.

ಸಿದ್ದರಾಮಯ್ಯ ಬಣದ ಆಪ್ತರಿಂದ ಡಿ.ಕೆ. ಶಿವಕುಮಾರ್‌ ವಿರುದ್ಧ “ಡಿಸಿಎಂ ಕಾರ್ಡ್ ಪ್ಲೇ” ಮಾಡಲಾಗುತ್ತಿದೆಯಾ ಎಂದು ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಆಕ್ರೋಶಗೊಂಡ ಡಿಕೆಶಿ ಮಾಧ್ಯಮಗಳ ಮೇಲೆಯೇ ಹರಿಹಾಯ್ದರು. ನಿಮ್ಮ ಹತ್ತಿರ ಬಣ ಇರಬೇಕು. ನಿಮಗೇನೋ ತಲೆ ಕೆಟ್ಟಿರಬೇಕು. ಬಣ ಅಂತ ಹೇಳುತ್ತಿದ್ದೀರಲ್ಲಾ? ನನ್ನ ರಾಜಕೀಯ ಜೀವನದಲ್ಲಿ ನಾನು ಯಾವತ್ತೂ ಬಣ ರಾಜಕೀಯ ಮಾಡಿಲ್ಲ. ನಾನು ಬಣ ರಾಜಕೀಯಕ್ಕೆ ಬೆಂಬಲ ಕೊಟ್ಟಿಲ್ಲ. ನನಗೆ ಬಣದ ಅವಶ್ಯಕತೆ ಇಲ್ಲ. ಬಣ ಮಾಡಬೇಕಿದ್ದರೆ ಎಸ್‌.ಎಂ. ಕೃಷ್ಣ ಕಾಲದಲ್ಲಿ, ಎಸ್. ಬಂಗಾರಪ್ಪ ‌ಅವರ ಕಾಲದಲ್ಲಿಯೇ ಬಣ ಮಾಡುತ್ತಿದ್ದೆ. ನನ್ನದು ಒಂದೇ ಒಂದು ಬಣ, ಅದುವೇ ಕಾಂಗ್ರೆಸ್ ಬಣ. ಬಣದ ಬಗ್ಗೆ ಮತ್ತೆ ಮಾತನಾಡಿದರೆ ಮಾಧ್ಯಮಗಳಿಗೆ ನಾನು ಉತ್ತರ ಕೊಡುವುದಿಲ್ಲ ಎಂದು ಖಡಕ್‌ ಆಗಿ ಹೇಳಿದರು.

ನಾನು ಕಸ ನಿರ್ವಹಣೆ ಬಗ್ಗೆ ಅಧ್ಯಯನಕ್ಕೆ ಹೋಗಿದ್ದೆ. ಬೆಂಗಳೂರಿನಲ್ಲಿ ಕಸ ನಿರ್ವಹಣೆ ಬಗ್ಗೆ ಪರಿಹಾರ ಕಂಡು ಹಿಡಿಯಲು ತಂತ್ರ ರೂಪಿಸುತ್ತಿದ್ದೇನೆ ಎಂದು ಡಿ.ಕೆ. ಶಿವಕುಮಾರ್‌ ಮಾಹಿತಿ ನೀಡಿದರು.

ಬೋರ್ಡ್ ಮುಂದೆ ವಾಸ್ತವಿಕ ಅಂಶ ತಿಳಿಸುತ್ತೇವೆ

ಇಂದು ಕಾವೇರಿ ಬೋರ್ಡ್ ಸಭೆ ನಡೆಯುವುದರ ಬಗ್ಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ.ಕೆ. ಶಿವಕುಮಾರ್, ಮಳೆಯಿಲ್ಲದೆ ದೊಡ್ಡ ಕಷ್ಟ ಆಗಿದೆ. 180ಕ್ಕೂ ಹೆಚ್ಚು ತಾಲೂಕುಗಳನ್ನು ಬರ ತಾಲೂಕು ಅಂತ ಅಂತ ಘೋಷಣೆ ಮಾಡಿದ್ದೇವೆ. ಇವತ್ತು ಕಾವೇರಿ ಬೋರ್ಡ್ ಸಭೆ ಇದೆ. ಬೋರ್ಡ್ ಮುಂದೆ ವಾಸ್ತವಿಕ ಅಂಶವನ್ನು ತಿಳಿಸುತ್ತೇವೆ. ನಾನು ಈಗಾಗಲೇ ಕೇಂದ್ರ ಸಚಿವರನ್ನು ಭೇಟಿಯಾಗಿದ್ದೇನೆ. ಸಿಎಂ ಬರೆದ ಪತ್ರವನ್ನು ತಲುಪಿಸಿ ಚರ್ಚೆ ಮಾಡಿದ್ದೇನೆ. ನೀವು ಮಧ್ಯ ಪ್ರವೇಶ ಮಾಡಬೇಕು ಅಂತ ಕೇಳಿದ್ದೇನೆ. ಸಂಸತ್ ನಡೆಯುವ ಸಮಯದಲ್ಲಿ ಸಂಸದರನ್ನು ಕರೆದೊಯ್ದು ಭೇಟಿ ಮಾಡಲಾಗುವುದು. ಸರ್ವ ಪಕ್ಷ ನಿಯೋಗ ಕರೆದುಕೊಂಡು ಹೋಗಲು ಅವರು ಸಮಯ ಕೊಟ್ಟಿಲ್ಲ ಎಂದು ಹೇಳಿದರು.

ಇದನ್ನೂ ಓದಿ: Weather Report : ಬೆಂಗಳೂರಿನಲ್ಲಿಂದು ಭಾರಿ ಮಳೆ; ಕರಾವಳಿಯಲ್ಲೂ ಜೋರು

ಬಂದು ಪರಿಸ್ಥಿತಿ ನೋಡಲು ಸುಪ್ರೀಂಗೆ ಮನವಿ

ತಮಿಳುನಾಡಿನವರು ಅವರದೇ ಆದ ನಿಲುವನ್ನು ತಾಳಿದ್ದಾರೆ. ನಾವು ನಮ್ಮ ಜನರನ್ನು ಕಾಪಾಡಬೇಕು. ಕೋರ್ಟ್‌ಗೆ ಹೋಗಬೇಕು. ನಾವು ಸುಪ್ರೀಂ ಕೋರ್ಟ್‌ಗೆ ಹೋಗುತ್ತೇವೆ. ಕೋರ್ಟ್‌ಗೆ ವಾಸ್ತವಾಂಶ ಹೇಳುತ್ತೇವೆ. ನೀವೇ ಬಂದು‌ ಪರಿಸ್ಥಿತಿ ನೋಡಿ ಅಂತ ಸುಪ್ರೀಂ ಕೋರ್ಟ್‌ಗೆ ಮನವಿ ಮಾಡುತ್ತೇವೆ. ಎರಡು ಕಡೆ ಬಂದು ಕೋರ್ಟ್ ನೋಡಲಿ. ಎರಡು ಕಡೆ ನೋಡಿ ಸುಪ್ರೀಂ ಕೋರ್ಟ್ ತಿಳಿಸಲಿ ಎಂದು ಡಿ.ಕೆ. ಶಿವಕುಮಾರ್‌ ಹೇಳಿದರು.

Exit mobile version