Site icon Vistara News

Karnataka Politics : ಎಚ್.ಡಿ. ದೇವೇಗೌಡ – ಸಿದ್ದರಾಮಯ್ಯ ಅಚ್ಚರಿ ಭೇಟಿ; ಆರೋಗ್ಯ ವಿಚಾರಿಸಿದ ಸಿಎಂ

CM Siddaramaiah and HD Devegowda in kempegowda airport

ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ (Assembly election) ಭರ್ಜರಿ ಬಹುಮತಗಳೊಂದಿಗೆ ಕಾಂಗ್ರೆಸ್‌ ಗೆದ್ದು ಬೀಗಿದೆ. ಲೋಕಸಭಾ ಚುನಾವಣೆ (Lok Sabha Election 2024) ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ರಾಜಕೀಯದ (Karnataka Politics) ಕಣ ರಂಗೇರಿದೆ. ಅಲ್ಲದೆ, ಕರ್ನಾಟಕವು ಅನೇಕ ರಾಜಕೀಯ ಬೆಳವಣಿಗೆಗೆ ಸಾಕ್ಷಿಯಾಗುತ್ತಲಿದೆ. ಇನ್ನು ಕಾಂಗ್ರೆಸ್‌ ಅನ್ನು ಲೋಕಸಭೆಯಲ್ಲಿ ಕಟ್ಟಿಹಾಕಲು ಬಿಜೆಪಿ – ಜೆಡಿಎಸ್‌ ಮೈತ್ರಿ (BJP JDS alliance) ಮಾಡಿಕೊಂಡಿದೆ. ಈ ಬಗ್ಗೆ ಉಭಯ ಪಕ್ಷಗಳು ಸಮರ್ಥನೆಯನ್ನೂ ಮಾಡಿಕೊಂಡಿವೆ. ಇನ್ನು ಮೈತ್ರಿ ಬಗ್ಗೆ ಸ್ಪಷ್ಟೀಕರಣ ನೀಡುವ ವೇಳೆ ಸಿಎಂ ಸಿದ್ದರಾಮಯ್ಯ (CM Siddaramaiah) ವಿರುದ್ಧ ಜೆಡಿಎಸ್‌ ವರಿಷ್ಠ, ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ (JDS supremo and former Prime Minister HD DeveGowda) ಹರಿಹಾಯ್ದಿದ್ದರು. ಇದಕ್ಕೆ ಸಿಎಂ ಸಿದ್ದರಾಮಯ್ಯ ಸಹ ತಿರುಗೇಟು ನೀಡಿದ್ದರು. ಆದರೆ, ಭಾನುವಾರ (ಅಕ್ಟೋಬರ್‌ 8) ಅಚ್ಚರಿಯ ಬೆಳವಣಿಗೆಯೊಂದರಲ್ಲಿ ಎಚ್.ಡಿ. ದೇವೇಗೌಡ ಅವರನ್ನು ಅನಿರೀಕ್ಷಿತವಾಗಿ ಸಿಎಂ ಸಿದ್ದರಾಮಯ್ಯ ಭೇಟಿಯಾಗಿದ್ದಾರೆ. ಉಭಯ ಕುಶಲೋಪರಿಯನ್ನು ವಿಚಾರಿಸಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭಾನುವಾರ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಾಜಿ ಪ್ರಧಾನಿ ದೇವೇಗೌಡರನ್ನು ಅನಿರೀಕ್ಷಿತವಾಗಿ ಭೇಟಿಯಾದರು. ಇದೇ ವೇಳೆ ಸಿದ್ದರಾಮಯ್ಯ ಅವರು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಆರೋಗ್ಯವನ್ನು ವಿಚಾರಿಸಿದರು. ಅದಕ್ಕೆ ಅವರು ತಮಗೆ ಕಾಲು ನೋವು ಇರುವುದಾಗಿ ಹೇಳಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದೆಹಲಿಗೆ ತೆರಳಲು ಭಾನುವಾರ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದರು. ಇದೇ ವೇಳೆ ಮಾಜಿ ಪ್ರಧಾನಿ ದೇವೇಗೌಡರನ್ನು ಸಿಎಂ ಅನಿರೀಕ್ಷಿತವಾಗಿ ಭೇಟಿಯಾದರು. ಆಗ ಸಿದ್ದರಾಮಯ್ಯ ಜತೆ ಸಚಿವರಾದ ಬೈರತಿ ಸುರೇಶ್ ಮತ್ತು ಎಂಎಲ್‌ಸಿ ಗೋವಿಂದ ರಾಜು ಕೂಡ ಉಪಸ್ಥಿತರಿದ್ದರು.

ಆರೋಗ್ಯ ವಿಚಾರಿಸಿದ ಸಿದ್ದರಾಮಯ್ಯ

ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರು ಪತ್ನಿ ಚೆನ್ನಮ್ಮ ಜತೆ ಮಂಗಳೂರಿಗೆ ಹೊರಟಿದ್ದರು. ಸಿಎಂ ಸಿದ್ದರಾಮಯ್ಯ ಸಿಕ್ಕಿದ ಕೂಡಲೇ ಹೇಗಿದೀಯಪ್ಪ ಎಂದು ಕೇಳಿದ್ದಾರೆ. ನಂತರ ಸಿಎಂ ಸಿದ್ದರಾಮಯ್ಯ, “ನಾನು ಚೆನ್ನಾಗಿ ಇದ್ದೇನೆ. ನೀವು ಹೇಗಿದ್ದೀರಾ ಸರ್” ಎಂದು ಕೇಳಿದರು. ಅದಕ್ಕೆ ಎಚ್.ಡಿ. ದೇವೇಗೌಡ ಅವರು, “ನಾನು ಆರಾಮವಾಗಿದ್ದೇನೆ. ಆದರೆ ಕಾಲು ಸ್ವಲ್ಪ ನೋವು ಇದೆ ಎಂದು ಹೇಳಿದ್ದಾರೆ. ಬಳಿಕ ಸಿದ್ದರಾಮಯ್ಯ ಅವರು, “ಆರೋಗ್ಯ ಚೆನ್ನಾಗಿ ನೋಡಿಕೊಳ್ಳಿ” ಎಂದು ಹೇಳಿ ಅಲ್ಲಿಂದ ಹೊರಟರು.

ಸೋಮವಾರ ಎಐಸಿಸಿ ಕಾರ್ಯಕಾರಿ ಸಭೆ ಇರುವ ಕಾರಣ ಬಳಿಕ ಅವರು ದೆಹಲಿಯತ್ತ ಪ್ರಯಾಣ ಬೆಳೆಸಿದರು. ಇತ್ತ ದೇವೇಗೌಡ ದಂಪತಿ ಸಹ ಮಂಗಳೂರಿಗೆ ಪ್ರಯಾಣ ಬೆಳೆಸಿದರು.

2024ಕ್ಕೆ ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ಖಚಿತವೆಂದಿರುವ ಎಚ್‌ಡಿಕೆ

ಪಬ್ಲಿಕ್‌ನಲ್ಲಿ ನನ್ನ ಕೈ ಮೇಲೆ ಎತ್ತಿ ಜೋಡೆತ್ತು ಎಂದು ಹೇಳಿದ ನಯವಂಚಕ ಮಾತುಗಳನ್ನು ನಂಬಿ ಮೋಸ ಹೋದೆ. ಆಮೇಲೆ ಅವರು ನನ್ನನ್ನು ನಡು ರಸ್ತೆಯಲ್ಲಿ ಕೈ ಬಿಟ್ಟು ಎತ್ತು, ಗಾಡಿಯೊಂದಿಗೆ ಪಲಾಯನ ಮಾಡಿದರು. ಡಿ.ಕೆ. ಶಿವಕುಮಾರ್‌ ಜತೆ ಇನ್ನೆಂದೂ ಕೈಜೋಡಿಸಲಾರೆ. ಅವರು ತಿಹಾರ್‌ ಜೈಲಿಗೆ ಹೋಗುವುದು ಖಚಿತ. ಇನ್ನು 2024ಕ್ಕೆ ವಿಧಾನಸಭಾ ಚುನಾವಣೆ (Assembly election) ನಡೆಯಲಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ (Former Chief Minister HD Kumaraswamy) ಅವರು ಪರೋಕ್ಷವಾಗಿ ಡಿಸಿಎಂ ಡಿ.ಕೆ.ಶಿವಕುಮಾರ್ (Deputy CM DK Shivakumar) ಅವರ ವಿರುದ್ಧ ಹರಿಹಾಯ್ದರು. ಈ ಮೂಲಕ ರಾಜ್ಯ ರಾಜಕೀಯದಲ್ಲಿ (Karnataka Politics) ಮಹತ್ತರ ಬದಲಾವಣೆಗಳಾಗಲಿವೆ ಎಂಬ ಸುಳಿವನ್ನು ನೀಡಿದ್ದರು.

ಬಿಡದಿಯ ತಮ್ಮ ತೋಟದಲ್ಲಿ ನಡೆದ ರಾಮನಗರ ಜಿಲ್ಲಾ ಜೆಡಿಎಸ್ ಮುಖಂಡರ ಸಭೆಯಲ್ಲಿ ಅವರು ಮಾತನಾಡಿದ ಎಚ್.ಡಿ. ಕುಮಾರಸ್ವಾಮಿ, 2018ರಲ್ಲಿ ಸರ್ಕಾರ ಪತನವಾಗಿದ್ದು ಡಿ.ಕೆ.ಶಿವಕುಮಾರ್ ಅವರಿಂದಲೇ ಹೊರತು ನನ್ನಿಂದ ಅಲ್ಲ. ನನಗೂ ರಮೇಶ್ ಜಾರಕಿಹೊಳಿ ಅವರಿಗೂ ವೈಷಮ್ಯ ಇತ್ತಾ? ಬೆಳಗಾವಿ ಡಿಸಿಸಿ ಬ್ಯಾಂಕ್ ರಾಜಕೀಯಕ್ಕೆ ನಾನು ಬಲಿಪಶುವಾದೆ. ಅವರು ಬೆಳಗಾವಿ ರಾಜಕೀಯಕ್ಕೆ ಕೈಹಾಕಿದ್ದು ಯಾಕೆ? ನಾನು ಕುಮಾರಣ್ಣನ ಸರ್ಕಾರ ಉಳಿಸೋಕೆ ಪ್ರಾಮಾಣಿಕ ಪ್ರಯತ್ನ ಮಾಡಿದೆ ಎಂದು ಮೊಸಳೆ ಕಣ್ಣೀರು ಹಾಕಿ ಪ್ರಚಾರ ತೆಗೆದುಕೊಂಡರು. ಆಮೇಲೆ ನೋಡಿದರೆ ಒಳಗೊಳಗೇ ಮಾಡುವುದೆಲ್ಲವನ್ನು ಮಾಡಿದರು ಎಂದು ರಾಮನಗರದಲ್ಲಿ ಭಾನುವಾರ ಏರ್ಪಡಿಸಿದ್ದ ಜೆಡಿಎಸ್‌ ಸಮಾವೇಶದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದರು.

ಇದನ್ನೂ ಓದಿ: JDS BJP alliance : ಜೆಡಿಎಸ್ – ಬಿಜೆಪಿ ಮೈತ್ರಿಗೆ ರಾಮನಗರ ಮುಖಂಡರ ಸಮ್ಮತಿ; ಡಿವಿಜನ್‌ ಮಟ್ಟದ ಸಭೆಗೆ ಎಚ್‌ಡಿಕೆ ಮುಂದು

ಸಿದ್ದರಾಮಯ್ಯ ವಿರುದ್ಧವೂ ಹರಿಹಾಯ್ದಿದ್ದ ಎಚ್‌ಡಿಡಿ, ಎಚ್‌ಡಿಕೆ

ಈ ಮೊದಲು ಎಚ್.ಡಿ. ದೇವೇಗೌಡ ಹಾಗೂ ಎಚ್.ಡಿ ಕುಮಾರಸ್ವಾಮಿ ಅವರು ಸಿಎಂ ಸಿದ್ದರಾಮಯ್ಯ ವಿರುದ್ಧವೂ ಹರಿಹಾಯ್ದಿದ್ದರು. ಆಗಿನ ಕಾಂಗ್ರೆಸ್‌ – ಜೆಡಿಎಸ್‌ ಮೈತ್ರಿ ಸರ್ಕಾರ ಉರುಳಲು ಸಿದ್ದರಾಮಯ್ಯ ಅವರೇ ಕಾರಣ ಎಂದು ಹರಿಹಾಯ್ದಿದ್ದರು. ಅವರು ಏನೇನು ಮಾಡಿದ್ದಾರೆ ಎಂಬುದನ್ನು ತಾವಿನ್ನೂ ಮರೆತಿಲ್ಲ ಎಂದು ಎಚ್.ಡಿ. ದೇವೇಗೌಡ ಸಹ ಗುಡುಗಿದ್ದರು. ಇನ್ನು ರಾಜಕೀಯವಾಗಿ ಎಚ್.ಡಿ. ದೇವೇಗೌಡ ಅವರ ಗರಡಿಯಲ್ಲಿಯೇ ಬೆಳೆದು ಅಲ್ಲಿಂದ ಸಿಡಿದು ಕಾಂಗ್ರೆಸ್‌ಗೆ ಬಂದಿರುವ ಸಿದ್ದರಾಮಯ್ಯ ಅವರು ಆಗಾಗ ಜೆಡಿಎಸ್‌ ಮೇಲೆ ಕಿಡಿಕಾರುತ್ತಲೇ ಬಂದಿದ್ದಾರೆ. ರಾಜಕೀಯವಾಗಿ ಎಷ್ಟೇ ಬದ್ಧ ವೈರಿಗಳಾಗಿದ್ದರೂ ಎದುರು ಸಿಕ್ಕಾಗ ಇಬ್ಬರೂ ಸೌಜನ್ಯಯುತವಾಗಿ ಮಾತನಾಡಿಕೊಂಡಿದ್ದಾರೆ.

Exit mobile version