ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ (Karnataka Politics) ವಾಕ್ಸಮರಗಳು ಹೆಚ್ಚುತ್ತಿವೆ. ಕಾಂಗ್ರೆಸ್ ಸಂಪೂರ್ಣ ಬಹುಮತಗಳೊಂದಿಗೆ ಅಧಿಕಾರಕ್ಕೆ ಬಂದರೂ ಒಂದಲ್ಲಾ ಒಂದು ರೀತಿಯ ವಿವಾದಗಳನ್ನು ಮೈಮೇಲೆ ಎಳೆದುಕೊಂಡು ಬರುತ್ತಲೇ ಇದೆ. ಈ ಮಧ್ಯೆ ಸರ್ಕಾರದ ಹಾಗೂ ಮುಖ್ಯಮಂತ್ರಿಗಳ ವಿರುದ್ಧ ಪ್ರತಿಪಕ್ಷಗಳು ಟೀಕೆಗಳನ್ನು ಮಾಡುತ್ತಾ ಬಂದಿದೆ. ಇದಕ್ಕೆ ಸರ್ಕಾರ ಸಹ ತಿರುಗೇಟು ನೀಡುತ್ತಾ ಬಂದಿದೆ. ಈಗ ಸಿಎಂ ಸಿದ್ದರಾಮಯ್ಯ (CM Siddaramaiah) ಹಾಗೂ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ (Former CM HD Kumaraswamy) ಮಧ್ಯೆ ಹಲವು ದಿನಗಳಿಂದ ವಾಗ್ಯುದ್ಧ ನಡೆಯುತ್ತಿದೆ. ಪ್ರತಿಯೊಂದು ಹೇಳಿಕೆಗಳಿಗೂ “ಕೌಂಟರ್”ಗಳನ್ನು ಕೊಡಲಾಗುತ್ತಿದೆ. “ನಾನಾ-ನೀನಾ” ಎಂಬಂತೆ ಜಿದ್ದಿಗೆ ಬಿದ್ದಿದ್ದಾರೆ. ಈ ಹಿಂದಿನ ಜೆಡಿಎಸ್ – ಕಾಂಗ್ರೆಸ್ ಮೈತ್ರಿ ಸರ್ಕಾರ ಬೀಳಲು ಸಿದ್ದರಾಮಯ್ಯ ಅವರೇ ಕಾರಣ ಎಂದು ಎಚ್.ಡಿ. ಕುಮಾರಸ್ವಾಮಿ ನೀಡಿದ್ದ ಹೇಳಿಕೆಗೆ ಈಗ ಸಿಎಂ ಸಿದ್ದರಾಮಯ್ಯ ತಿರುಗೇಟು ಕೊಟ್ಟಿದ್ದು, ಕುಣಿಯಲಾರದವರು ನೆಲಡೊಂಕು ಎಂದರಂತೆ ಎನ್ನುವ ಮೂಲಕ ಕಾಲೆಳೆದಿದ್ದಾರೆ.
ಸೋಮವಾರ ಕಿತ್ತೂರು ರಾಣಿ ಚೆನ್ನಮ್ಮನವರ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ನಂತರ ಮಾಧ್ಯಮದವರಿಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ ಅವರು, ಈ ಹಿಂದಿನ ಜೆಡಿಎಸ್ ಜತೆಗಿನ ಸರ್ಕಾರ ಬೀಳಲು ತಾವು ಕಾರಣ ಅಲ್ಲ ಎಂದು ಸ್ಪಷ್ಟಪಡಿಸಿದರು.
ಸಿಎಂ ಸಿದ್ದರಾಮಯ್ಯ ಹೇಳಿದ್ದೇನು?
ಕುಣಿಯಲಾರದವರು ನೆಲಡೊಂಕು ಎಂದು ಹೇಳುವಂತೆ ತಮಗೆ ಸರ್ಕಾರವನ್ನು ಉಳಿಸಿಕೊಳ್ಳಲು ಸಾಧ್ಯವಾಗದ ಕಾರಣ, ಬೇರೆಯವರ ಮೇಲೆ ಆರೋಪವನ್ನು ಹೊರಿಸಿರುವುದು ನಿರರ್ಥಕ ಎಂದು ಎಚ್.ಡಿ. ಕುಮಾರಸ್ವಾಮಿಗೆ ಸಿಎಂ ಸಿದ್ದರಾಮಯ್ಯ ತಿರುಗೇಟು ನೀಡಿದರು.
ಮುಖ್ಯಮಂತ್ರಿಯಾಗಿ ನಾನು ವಿಶ್ವಕಪ್ ಕ್ರಿಕೆಟ್ ವೀಕ್ಷಿಸಲು ತೆರಳಿದ್ದಕ್ಕೆ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಟೀಕಿಸಿದ್ದಾರೆ. ನಾನು ಕ್ರಿಕೆಟ್ ಕ್ರೀಡೆಯನ್ನು ಬೆಂಬಲಿಸಲು ತೆರಳಿದ್ದೆ. ಅವರು ವೆಸ್ಟ್ಎಂಡ್ ಹೋಟೆಲ್‌ನಲ್ಲಿ ಇದ್ದ ಕಾರಣವನ್ನು ಮೊದಲು ತಿಳಿಸಲಿ ಎಂದು ಸಿಎಂ ಸಿದ್ದರಾಮಯ್ಯ ಆಗ್ರಹಿಸಿದರು.
ಯಾರು ಬೇಕಾದರೂ ವಾಸವಿರಬಹುದು
ಮುಖ್ಯಮಂತ್ರಿಗಳು ವಸತಿ ಗೃಹವನ್ನು ಹಿಂದಿರುಗಿಸಿಲ್ಲ ಎಂದು ಎಚ್.ಡಿ. ಕುಮಾರಸ್ವಾಮಿ ಅವರು ಹೇಳಿದ್ದಾರೆ. ಬಿ.ಎಸ್. ಯಡಿಯೂರಪ್ಪನವರು ಕಾವೇರಿಯಲ್ಲಿ ಕಡೆಯತನಕ ವಾಸವಿದ್ದರು. ಕೆ.ಜೆ. ಜಾರ್ಜ್ ಅವರಿಗೆ ಹಂಚಿಕೆಯಾಗಿದ್ದ ವಸತಿಗೃಹದಲ್ಲಿ ನಾನು ವಾಸವಿದ್ದೆ. ನಾನು ವಾಸವಿದ್ದ ವಸತಿ ಗೃಹ ಮೀಸಲಾದ ವಸತಿ ಗೃಹವಲ್ಲ. ಅದರಲ್ಲಿ ಯಾರು ಬೇಕಾದರೂ ವಾಸವಿರಬಹುದು ಎಂದು ಸಿಎಂ ಸಿದ್ದರಾಮಯ್ಯ ಪ್ರತ್ಯುತ್ತರ ನೀಡಿದರು.
ಇದನ್ನೂ ಓದಿ: Mysore dasara : ಜಂಬೂ ಸವಾರಿಯಲ್ಲಿ ಗಮನ ಸೆಳೆವ ಆಪರೇಶನ್ ಸ್ಪೆಷಲಿಸ್ಟ್ ಆನೆಗಳು! ಇಲ್ಲಿದೆ ಕಿರು ಪರಿಚಯ
ನಾಳೆ ದಸರಾ ಮಹೋತ್ಸವದಲ್ಲಿ ಭಾಗಿ
ಮಂಗಳವಾರ ನಡೆಯಲಿರುವ ಚಾಮುಂಡೇಶ್ವರಿ ದೇವಿ ಮೆರವಣಿಗೆ, ನಂದಿಕಂಬದ ಪೂಜೆ, ಪಂಜಿನ ಮೆರವಣಿಗೆ ಸೇರಿದಂತೆ ದಸರಾ ಮಹೋತ್ಸವದಲ್ಲಿ ಸಚಿವರು, ಶಾಸಕರು ಹಾಗೂ ಅಧಿಕಾರಿಗಳೊಂದಿಗೆ ಭಾಗವಹಿಸಲಿದ್ದೇನೆ ಎಂದು ಸಿಎಂ ಸಿದ್ದರಾಮಯ್ಯ ಇದೇ ವೇಳೆ ತಿಳಿಸಿದರು.