ಬೆಂಗಳೂರು: ಈಗ ರಾಜ್ಯ ರಾಜಕೀಯದಲ್ಲಿ (Karnataka Politics) ಅನುದಾನ ತಾರತಮ್ಯದ ಬಗ್ಗೆ ಆರೋಪ-ಪ್ರತ್ಯಾರೋಪಗಳು ತಾರಕಕ್ಕೇರಿವೆ. ಕೇಂದ್ರ ಬಿಜೆಪಿ ಸರ್ಕಾರದಿಂದ ರಾಜ್ಯಕ್ಕೆ ಅನ್ಯಾಯವಾಗಿದೆ ಎಂಬ ಕಾಂಗ್ರೆಸ್ ಸರ್ಕಾರದ ಆರೋಪಕ್ಕೆ ಈಗ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ (Basavaraj Bommai) ತಿರುಗೇಟು ನೀಡಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಬೊಮ್ಮಾಯಿ, ಸ್ವಾತಂತ್ರ್ಯ ಬಂದಾಗಿನಿಂದ 55 ವರ್ಷ ದೇಶ ಆಳಿರುವ ಕಾಂಗ್ರೆಸ್ ಅವಧಿಯಲ್ಲಿ ರಾಜ್ಯಗಳಿಗೆ ಕೇವಲ ಶೇ. 20ರಷ್ಟು ಮಾತ್ರ ಅನುದಾನ ಬರುತ್ತಿತ್ತು, ನರೇಂದ್ರ ಮೋದಿಯವರು (Narendra Modi) ಅಧಿಕಾರಕ್ಕೆ ಬಂದ ಮೇಲೆ ರಾಜ್ಯಗಳಿಗೆ ಶೇ. 42ರಷ್ಟು ಅನುದಾನ ಬರುತ್ತಿದೆ. ಕಾಂಗ್ರೆಸ್‌ನವರು ಕೇಂದ್ರದ ವಿರುದ್ಧ ಅನಗತ್ಯ ಆರೋಪ ಮಾಡಿ ರಾಜ್ಯದ ಜನರ ದಾರಿ ತಪ್ಪಿಸುತ್ತಿದ್ದಾರೆ ಎಂದು ಆರೋಪಿಸಿದರು.
ರಾಜ್ಯ ವಿಧಾನಸಭೆಯಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ಮಂಡಿಸಿರುವ ನಿರ್ಣಯದ ವಿರುದ್ಧ ಶುಕ್ರವಾರ ಪ್ರತಿಪಕ್ಷ ಬಿಜೆಪಿ ರಾಜ್ಯ ಸರ್ಕಾರದ ವಿರುದ್ಧ ನಿರ್ಣಯವನ್ನು ಮಂಡಿಸಿತು. ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಬಸವರಾಜ ಬೊಮ್ಮಾಯಿ, ಕೇಂದ್ರ ಸರ್ಕಾರದ ವಿರುದ್ಧ ರಾಜ್ಯ ಕಾಂಗ್ರೆಸ್ ಸರ್ಕಾರವು ನಿರ್ಣಯ ಮಂಡಿಸಿ ವಿಧಾನಸಭೆಯ ಪಾವಿತ್ರ್ಯತೆಯನ್ನು ಹಾಳು ಮಾಡಿ ಸುಳ್ಳು ಹೇಳುವ ದಾರ್ಷ್ಟ್ಯ ತೋರಿದೆ. ಕೇಂದ್ರದಿಂದ ಅನ್ಯಾಯವಾಗಿದೆ ಅಂತ ರಾಜ್ಯದ ಜನರ ದಾರಿ ತಪ್ಪಿಸುತ್ತಿದೆ ಎಂದು ವಾಗ್ದಾಳಿ ನಡೆಸಿದರು.
ತೆರಿಗೆ ಪಾಲನ್ನು ಹೆಚ್ಚಳ ಮಾಡಿದ್ದು ಮೋದಿ
ರಾಜ್ಯದ ತೆರಿಗೆ ಕಾಂಗ್ರೆಸ್ ಆಡಳಿತದಲ್ಲಿ ಶೇ. 20ರಷ್ಟು ಮಾತ್ರ ಇತ್ತು. ಆಗ ರಾಮಕೃಷ್ಣ ಹೆಗಡೆ ನೇತೃತ್ವದಲ್ಲಿ ದಕ್ಷಿಣ ಭಾರತದ ಅನೇಕ ನಾಯಕರು ಸೇರಿ ರಾಜ್ಯಗಳ ತೆರಿಗೆ ಹೆಚ್ಚಳ ಮಾಡುವಂತೆ ಹೋರಾಟ ಮಾಡಲಾಯಿತು. ಆದರೆ, ಯುಪಿಎ ಅವಧಿಯಲ್ಲಿ ರಾಜ್ಯಗಳ ತೆರಿಗೆ ಅನುದಾನ ಹೆಚ್ಚಳ ಮಾಡಲು ನಿರಾಕರಿಸಿದ್ದರು. ನರೇಂದ್ರ ಮೋದಿಯವರು ಬಂದು ಕೆಲವೇ ವರ್ಷದಲ್ಲಿ ರಾಜ್ಯಗಳ ತೆರಿಗೆ ಪಾಲನ್ನು ಶೇ. 32ರಿಂದ ಶೇ. 42ಕ್ಕೆ ಹೆಚ್ಚಳ ಮಾಡಿದ್ದಾರೆ ಎಂದು ಬಸವರಾಜ ಬೊಮ್ಮಾಯಿ ವಿವರಿಸಿದರು.
ಈ ಯೋಜನೆಗಳಡಿ ರಾಜ್ಯಕ್ಕೆ ಅನುದಾನ
ಕೇಂದ್ರದಿಂದ ರಾಜ್ಯಕ್ಕೆ ಕೇವಲ ಜಿಎಸ್‌ಟಿ ಪರಿಹಾರ, ಅನುದಾನ ಅಷ್ಟೇ ಅಲ್ಲದೆ ಕೇಂದ್ರ ಪ್ರಾಯೋಜಿತ ಯೋಜನೆಗಳಿಗೆ ಅನುದಾನ ಬರಲಿದೆ. ಅಲ್ಲದೆ, ಫಲಾನುಭವಿಗಳ ಅಕೌಂಟ್‌ಗೆ ನೇರವಾಗಿ ಹಣ ಹಾಕುತ್ತದೆ. ರಾಜ್ಯ ಸರ್ಕಾರ ಅದೆಲ್ಲವನ್ನೂ ಮುಚ್ಚಿಟ್ಟು ರಾಜ್ಯಕ್ಕೆ ಅನ್ಯಾಯವಾಗಿದೆ ಎಂದು ಸುಳ್ಳು ಹೇಳುತ್ತಿದೆ. ಬೆಂಗಳೂರಿನ ಫೆರಿಫೆರಲ್ ರಿಂಗ್ ರೋಡ್‌ಗೆ ಕೇಂದ್ರದಿಂದ ಈಗಲೂ ಹಣ ಬರುತ್ತದೆ. ಆದರೆ, ರಾಜ್ಯ ಸರ್ಕಾರ ಯೋಜನೆ ಆರಂಭಿಸಬೇಕು. ರಾಷ್ಟ್ರೀಯ ಹೆದ್ದಾರಿಗೆ ಸುಮಾರು 13 ಸಾವಿರ ಕೋಟಿ ರೂ. ಕೇಂದ್ರ ಸರ್ಕಾರ ನೀಡಿದೆ. ರೈಲ್ವೆ ಯೋಜನೆಗಳಿಗೆ ಕೇಂದ್ರದ ಅನುದಾನ ಬಂದಿದೆ. ಪ್ರಧಾನಮಂತ್ರಿ ಆವಾಸ್ ಯೋಜನೆ, ಸ್ವಚ್ಚ ಭಾರತ, ಆಯುಷ್ಮಾನ್ ಭಾರತ, ಅಮೃತ ನಗರ ಯೊಜನೆ ಅಡಿಯಲ್ಲಿ ರಾಜ್ಯಕ್ಕೆ ಹಣ ಬಂದಿದೆ ಎಂದು ಬಸವರಾಜ ಬೊಮ್ಮಾಯಿ ಹೇಳಿದರು.
ಇದನ್ನೂ ಓದಿ: Sumalatha Ambareesh: ಸ್ಪರ್ಧೆ ಖಚಿತ ಎಂದ ಸುಮಲತಾ; ಅವರು ಬಿಜೆಪಿಯೊಳಗೆ ಇರ್ತಾರೆ ಎಂದ ಜೋಶಿ
ಜನರ ದಾರಿ ತಪ್ಪಿಸುತ್ತಿರುವ ಕಾಂಗ್ರೆಸ್
ಕಳೆದ ಐದು ವರ್ಷದಲ್ಲಿ ಕೇಂದ್ರದಿಂದ ಜಿಎಸ್‌ಟಿ ಪರಿಹಾರ 1.06 ಲಕ್ಷ ಕೋಟಿ ರೂ. ಬಂದಿದೆ. 15ನೇ ಹಣಕಾಸು ಆಯೋಗದ ಅವಧಿ ಇನ್ನೂ 2026ರ ವರೆಗೆ ಇದೆ. ಇನ್ನೂ 1 ಲಕ್ಷ ಕೋಟಿಗೂ ಹೆಚ್ಚು ಹಣ ಬರುತ್ತದೆ. ಕೇಂದ್ರ ಸರ್ಕಾರ ಜಿಎಸ್‌ಟಿ ಪರಿಹಾರವಾಗಿ ಶೇ. 14ರಷ್ಟನ್ನು 2022ರವರೆಗೆ ನೀಡಿದೆ. ಜಿಎಸ್‌ಟಿ ಪರಿಹಾರ ಅವಧಿ ಮುಗಿದರೂ, ರಾಜ್ಯ ಸರ್ಕಾರ ಅದನ್ನು 2023-24ರ ವರೆಗೆ ಸೇರಿಸಿ ಜನರ ದಾರಿ ತಪ್ಪಿಸುತ್ತಿದ್ದಾರೆ. ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಕೇಂದ್ರ ರಾಜ್ಯದ ನಡುವೆ ಸಂಘರ್ಷ ಉಂಟು ಮಾಡುವ ಪ್ರಯತ್ನ ಮಾಡುತ್ತಿದ್ದಾರೆ. ಹೀಗಾಗಿ ನಾವು ರಾಜ್ಯ ಸರ್ಕಾರದ ವಿರುದ್ಧ ನಿರ್ಣಯ ಮಂಡಿಸಿದ್ದೇವೆ. ನಾವು ಮಂಡಿಸಿರುವ ನಿರ್ಣಯವನ್ನು ಯಾರೂ ವಿರೋಧ ಮಾಡಿಲ್ಲ. ಹೀಗಾಗಿ ನಮ್ಮ ನಿರ್ಣಯ ಸರ್ವಾನುಮತದಿಂದ ಅಂಗೀಕಾರವಾಗಿದೆ ಎಂದು ತಿಳಿದಿದ್ದೇವೆ ಎಂದು ಬಸವರಾಜ ಬೊಮ್ಮಾಯಿ ಹೇಳಿದರು.