ಬೆಂಗಳೂರು: ಲೋಕಸಭಾ ಚುನಾವಣೆ (Lok Sabha Election 2024) ಸಮೀಪ ಬರುತ್ತಿದ್ದಂತೆ ರಾಜ್ಯ ರಾಜಕೀಯದಲ್ಲಿ (Karnataka Politics) ಸಾಕಷ್ಟು ಬೆಳವಣಿಗೆಗಳು ನಡೆಯುತ್ತಿವೆ. ಈ ನಡುವೆ ಕಾಂಗ್ರೆಸ್ ಅನ್ನು ರಾಜ್ಯದಲ್ಲಿ ಮಣಿಸಬೇಕು ಹಾಗೂ ಈಗ ಇರುವ 25 + 1 ಸ್ಥಾನವನ್ನು ಉಳಿಸಿಕೊಳ್ಳಬೇಕು ಎಂದು ಬಿಜೆಪಿ ತಂತ್ರಗಾರಿಕೆಯನ್ನು (BJP strategy) ಹೆಣೆಯುತ್ತಿದೆ. ಅಂತೆಯೇ ಕಾಂಗ್ರೆಸ್ ಗ್ಯಾರಂಟಿಗಳ (Congress Guarantee Scheme) ಮಧ್ಯೆ ಪಕ್ಷದ ಅಸ್ತಿತ್ವ ಉಳಿಯಬೇಕು ಎಂಬ ನಿಟ್ಟಿನಲ್ಲಿ ಜೆಡಿಎಸ್ ಸಹ ರಾಜಕೀಯ ದಾಳವನ್ನು (JDS Politics) ಉರುಳಿಸುತ್ತಿದೆ. ಈ ಸಂಬಂಧ ಬಿಜೆಪಿ – ಜೆಡಿಎಸ್ ಮೈತ್ರಿ (BJP JDS alliance) ಮಾಡಿಕೊಳ್ಳಲು ಮುಂದಾಗಿದೆ. ಇದನ್ನು ಟೀಕೆ ಮಾಡಿರುವ ರಾಜ್ಯ ಕಾಂಗ್ರೆಸ್, ಜೆಡಿಎಸ್ ಅನ್ನು “ಕಮಲದಳ” (JDS as Kamala Dal) ಎಂದು ಮಾಡಿಕೊಳ್ಳಿ ಎಂದು ಟ್ವೀಟ್ ಮಾಡಿತ್ತು. ಈಗ ಈ ಟ್ವೀಟ್‌ಗೆ ಜೆಡಿಎಸ್ ತಿರುಗೇಟು ನೀಡಿದೆ.
ಕಾಂಗ್ರೆಸ್ ಮತಿಗೆಟ್ಟು ಕುಳಿತಿದೆ ಎಂದು ಹೇಳಿರುವ ಜೆಡಿಎಸ್, ಒಂದು ಸೀಟಿಗೂ ದಿಕ್ಕಿಲ್ಲದ ಸ್ಥಿತಿ ಆ ಪಕ್ಷಕ್ಕೆ ಬಂದೊದಗಿದೆ ಎಂದು ಹೇಳಿದೆ. ಇನ್ನು ಪಕ್ಷ ವಿಸರ್ಜನೆ ಕುರಿತ ಮಾಜಿ ಸಿಎಂ, ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ ಅವರ ಮಾತನ್ನು ತಿರುಚಲಾಗಿದೆ ಎಂದು ಕಿಡಿಕಾರಿದೆ.
ಶಿವಸೇನೆ, ಜೆಡಿಯು, ಡಿಎಂಕೆಯಂಥ ಪ್ರಾದೇಶಿಕ ಪಕ್ಷಗಳ ‘ಬಾಲ’ದಲ್ಲಿಯೇ ಕಾಂಗ್ರೆಸ್ ಬದುಕು ಕಂಡುಕೊಂಡಿದೆ ಎಂದು ಜೆಡಿಎಸ್ ಕಾಲೆಳೆದಿದೆ. ಕಾಶ್ಮೀರದಿಂದ ಕೇರಳವರೆಗೆ, ಗುಜರಾತಿನಿಂದ ಓಡಿಶಾವರೆಗೆ ಕೈ ಪಕ್ಷ ಪಾತಾಳ ಕಚ್ಚಿರುವುದು ಅಸತ್ಯವೇ? ಎಂದು ಪ್ರಶ್ನೆ ಮಾಡಿದೆ. ಕಾಡಿ, ಬೇಡಿ ಕಟ್ಟಿಕೊಂಡ I.N.D.I.A ಮೈತ್ರಿಕೂಟಕ್ಕೆ ಸೇರಿಕೊಂಡ ವೀರಾಧಿವೀರರೆಲ್ಲ ಬೆಂಗಳೂರಿಗೆ ಬರುವುದಕ್ಕೆ ಮೊದಲು ಎಲ್ಲೆಲ್ಲಿದ್ದರು? ಎಂದು ಕುಹುಕ ಮಾಡಲಾಗಿದೆ. ಶಿಲಾಯುಗದ ಪಳೆಯುಳಿಕೆಯಂತೆ ಅಳಿವಿನ ಅಂಚಿನಲ್ಲಿರುವ ಕಾಂಗ್ರೆಸ್ ಪಕ್ಷ ಕಾಣದ ಕಡಲಿಗೆ ಹಂಬಲಿಸುತ್ತಿದೆ! ಎಂದು ಜೆಡಿಎಸ್ ಕಟುವಾಗಿ ಟೀಕೆ ಮಾಡಿದೆ.
ಇದನ್ನೂ ಓದಿ: Insurance Policy : ಇ ಕಾಮರ್ಸ್ ಕಾರ್ಮಿಕರಿಗೆ ಭರ್ಜರಿ ಗಿಫ್ಟ್! 4 ಲಕ್ಷ ರೂ. ಅಪಘಾತ – ಜೀವ ವಿಮೆ ನೀಡಿ ಆದೇಶ
ಜೆಡಿಎಸ್ ಮಾಡಿದ ಟ್ವೀಟ್‌ನಲ್ಲೇನಿದೆ?
ಜೆಡಿಎಸ್-ಬಿಜೆಪಿ ಮೈತ್ರಿ ಮಾತು ಕೇಳಿ ಮತಿಗೆಟ್ಟು ಕೂತ @INCKarnataka, ಲೋಕಸಭೆ ಚುನಾವಣೆಯಲ್ಲಿ ಸಿಂಗಲ್ ಸೀಟಿಗೂ ದಿಕ್ಕಿಲ್ಲದ ಸ್ಥಿತಿ ನೆನೆದು ಕೈಕೈ ಪರಚಿಕೊಳ್ಳುತ್ತಿದೆ. ಪಕ್ಷ ವಿಸರ್ಜನೆ ಬಗ್ಗೆ ಶ್ರೀ @hd_kumaraswamy ಅವರು ನೀಡಿದ್ದ ಹೇಳಿಕೆಯನ್ನೇ ತಿರುಚುತ್ತಿರುವ ಕೂಗುಮಾರಿ, ಈಗ ಮಾರಿ ಉಳಿಸಿಕೊಳ್ಳಲು ಸತ್ಯ ತಿರುಚುತ್ತಿದೆ.
75 ವರ್ಷಗಳ ಸ್ವಾತಂತ್ರ್ಯ ಭಾರತದಲ್ಲಿ ಜಾತ್ಯತೀತತೆ ಜಪ ಮಾಡಿಕೊಂಡೇ ಅಧಿಕಾರದ ಅಮಲಿನಲ್ಲಿ ತೇಲಿ ‘ಜಲ್ಸಾ’ ಹೊಡೆದ ಆ ಪಕ್ಷಕ್ಕೆ ತನ್ನ ಕೊಳಕು ಬೆನ್ನೇ ಕಾಣುತ್ತಿಲ್ಲ. ಶಿವಸೇನೆ, ಜೆಡಿಯು, ಡಿಎಂಕೆಯಂಥ ಪ್ರಾದೇಶಿಕ ಪಕ್ಷಗಳ ‘ಬಾಲ’ದಲ್ಲಿಯೇ ಬದುಕು ಕಂಡುಕೊಂಡು ಏದುಸಿರು ಬಿಡುತ್ತಾ ದೇಶದ ಉದ್ದಗಲಕ್ಕೂ ‘ಹಸ್ತವ್ಯಸ್ತ’ವಾಗಿದೆ.
ಕಾಶ್ಮೀರದಿಂದ ಕೇರಳವರೆಗೆ, ಗುಜರಾತಿನಿಂದ ಓಡಿಶಾವರೆಗೆ ಕೈ ಪಕ್ಷ ಪಾತಾಳ ಕಚ್ಚಿರುವುದು ಅಸತ್ಯವೇ? ನಡುನೀರಿನಲ್ಲಿ ಮುಳುಗಿಹೋಗಿ, 403 ಕ್ಷೇತ್ರಗಳ ಉತ್ತರ ಪ್ರದೇಶದಲ್ಲಿ ಎರಡೇ ಕ್ಷೇತ್ರಗಳಿಗೆ ರನ್ ಔಟ್ ಆಗಿ ಮಕಾಡೆ ಮಲಗಿದ್ದೂ, ಅಲ್ಲೂ ಬಿಎಸ್ಪಿ ಬಾಲ ಹಿಡಿದು ನೇತಾಡಿದ್ದು ಇಷ್ಟು ಬೇಗ ಮರೆತೇ ಹೋಯಿತೇ?
2014, 2019ರ ಲೋಕಸಭೆಯ ಚುನಾವಣೆಗಳಲ್ಲಿ ತಳಮುಟ್ಟಿದ ಪಕ್ಷಕ್ಕೆ 2024ರಲ್ಲಾದರೂ ಅವಕಾಶ ಸಿಕ್ಕೀತೇ ಎನ್ನುವ ಚಿಂತೆ. ಕಾಡಿ, ಬೇಡಿ ಕಟ್ಟಿಕೊಂಡ I.N.D.I.A ಮೈತ್ರಿಕೂಟಕ್ಕೆ ಸೇರಿಕೊಂಡ ವೀರಾಧಿವೀರರೆಲ್ಲ ಬೆಂಗಳೂರಿಗೆ ಬರುವುದಕ್ಕೆ ಮೊದಲು ಎಲ್ಲೆಲ್ಲಿದ್ದರು? ಚುನಾವಣೆ ಮುಗಿದ ಮೇಲೆ ಎಲ್ಲೆಲ್ಲಿ ಹೋಗುತ್ತಾರೆ? ಬಲ್ಲಿರಾ.. ಬಲ್ಲಿರಾ?
ಗೆದ್ದಲು ಹಿಡಿದ ಕಾಂಗ್ರೆಸ್ ಪಕ್ಷದ ಮೈತ್ರಿಕೂಟಕ್ಕೆ ಮೈಯ್ಯೆಲ್ಲಾ ರಂಧ್ರಗಳೇ ಎನ್ನುವ ಅರಿವಿಲ್ಲವೇ? ಶಿಲಾಯುಗದ ಪಳೆಯುಳಿಕೆಯಂತೆ ಅಳಿವಿನ ಅಂಚಿನಲ್ಲಿರುವ ಕಾಂಗ್ರೆಸ್ ಪಕ್ಷ ಕಾಣದ ಕಡಲಿಗೆ ಹಂಬಲಿಸುತ್ತಿದೆ! ಕಂಡವರ ಆಸರೆಯಲ್ಲಿ ಚಳಿ ಕಾಯಿಸಿಕೊಳ್ಳಲು ಅವರಿವರಿಗೆಲ್ಲ ಕರ ಮುಗಿಯುತ್ತಿದೆ!!” ಎಂಬುದಾಗಿ ಜೆಡಿಎಸ್ ಟ್ವೀಟ್‌ನಲ್ಲಿ ಉಲ್ಲೇಖಿಸಿದೆ.