Site icon Vistara News

Karnataka Politics : ದುಬಾರಿ ಗ್ಯಾರಂಟಿಯಲ್ಲಿ ಈ ಬಾರಿ ಶಾಸಕರ ನಿಧಿ 50 ಲಕ್ಷ ರೂ.ಗೆ ಸೀಮಿತ? 1.5 ಕೋಟಿ ಖೋತಾ!

CM Siddaramaiah and DCM DK Shivakumar

ಬೆಂಗಳೂರು: ಐದು ಪ್ರಮುಖ ಗ್ಯಾರಂಟಿ ಯೋಜನೆಯನ್ನು (Congress Guarantee Scheme) ಘೋಷಣೆ ಮಾಡಿ ಅಧಿಕಾರಕ್ಕೆ ಬಂದ ರಾಜ್ಯ ಕಾಂಗ್ರೆಸ್‌ ಸರ್ಕಾರ (Congress Government) ಈಗ ಅದರ ಅನುಷ್ಠಾನದಲ್ಲಿ ಹೈರಾಣಾಗಿದೆ. ಈ ವರ್ಷ 38 ಸಾವಿರ ಕೋಟಿ ರೂಪಾಯಿ ಅನುದಾನವು ದುಬಾರಿ ಗ್ಯಾರಂಟಿಗಾಗಿಯೇ ಸರ್ಕಾರ ಎತ್ತಿಟ್ಟಿದೆ. ಅಭಿವೃದ್ಧಿಗೆ ಹಣ ಇಲ್ಲ ಎಂದು ಹೇಳುತ್ತಿದ್ದ ರಾಜ್ಯ ಸರ್ಕಾರ ವಿರುದ್ಧ ಸ್ವಪಕ್ಷೀಯ ಶಾಸಕರೇ ಅಸಮಾಧಾನಗೊಂಡಿದ್ದರು. ಈ ನಿಟ್ಟಿನಲ್ಲಿ ನಾನಾ ಸರ್ಕಸ್‌ ಮಾಡುತ್ತಿರುವ ಸರ್ಕಾರ ಎರಡು ತಿಂಗಳು ಮೊದಲು ಬಿಡುಗಡೆ ಮಾಡಬೇಕಾದ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿಯನ್ನು (Local Area Development Scheme) ಕೊನೆಗೂ ಬಿಡುಗಡೆಗೊಳಿಸಿದೆ. 224 ಕ್ಷೇತ್ರದ ಶಾಸಕರಿಗೆ ಹಾಗೂ 67 ವಿಧಾನ ಪರಿಷತ್‌ ಸದಸ್ಯರಿಗೆ ತಲಾ 50 ಲಕ್ಷ ರೂಪಾಯಿ ಹಣ ಬಿಡುಗಡೆ ಮಾಡಲಾಗಿದೆ. ಈ ಮೂಲಕ ಶಾಸಕರ ಅಸಮಾಧಾನವನ್ನು ಸ್ವಲ್ಪ ಮಟ್ಟಿಗೆ ತಣಿಸಲು ಮುಂದಾಗಿದೆ. ಆದರೆ, ಈ ಹಣ ಈ ವರ್ಷ ಇಷ್ಟಕ್ಕೇ ಸೀಮಿತವಾಗಲಿದೆಯೇ ಎಂಬ ಅನುಮಾನ ಶುರುವಾಗಿದೆ. ರಾಜ್ಯ ರಾಜಕೀಯದಲ್ಲಿ (Karnataka Politics) ಈ ಬೆಳವಣಿಗೆ ಕುತೂಹಲ ಮೂಡಿಸಿದೆ.

ಹೌದು. ಯಾವುದೇ ಸರ್ಕಾರ ಬರಲಿ ಮೊದಲ ತಿಂಗಳು ಕಳೆಯುವುದರೊಳಗೆ ಶಾಸಕರ ಪ್ರದೇಶಾಭಿವೃದ್ಧಿ ನಿಧಿಯನ್ನು ಬಿಡುಗಡೆ ಮಾಡುತ್ತದೆ. ಅದು ಅನಿವಾರ್ಯ ಸಹ. ಪ್ರದೇಶಾಭಿವೃದ್ಧಿ ನಿಧಿ ಎಂಬುದು ಅತಿ ಅವಶ್ಯಕವಾಗಿ ಬಿಡುಗಡೆ ಮಾಡಬೇಕಾದ ಅನುದಾನವಾಗಿದೆ. ಪ್ರತಿ ಆರ್ಥಿಕ ವರ್ಷದಲ್ಲಿ ಶಾಸಕರ ನಿಧಿಗೆ 2 ಕೋಟಿ ರೂಪಾಯಿ ಅನುದಾನದಂತೆ ಐದು ವರ್ಷಕ್ಕೆ 10 ಕೋಟಿ ರೂಪಾಯಿಯನ್ನು ಪ್ರತಿ ಶಾಸಕರಿಗೆ ಬಿಡುಗಡೆ ಮಾಡಬೇಕು. ಆದರೆ, ಈ ವರ್ಷ ಗ್ಯಾರಂಟಿ ಯೋಜನೆಗಳನ್ನು ರಾಜ್ಯ ಸರ್ಕಾರ ಹಾಕಿಕೊಂಡಿದ್ದರಿಂದ ಅದರ ಅನುಷ್ಠಾನ, ಹಣ ಹೊಂದಾಣಿಕೆಯಲ್ಲಿಯೇ ಮುಳುಗಿತ್ತು. ಜತೆಗೆ ಶಾಸಕರ ಪ್ರದೇಶಾಭಿವೃದ್ಧಿ ನಿಧಿ ಬಗ್ಗೆ ಯಾವುದೇ ಗ್ಯಾರಂಟಿಯನ್ನು ಹೇಳುತ್ತಿರಲಿಲ್ಲ. ಇದರಿಂದ ಕಾಂಗ್ರೆಸ್‌ ಶಾಸಕರೇ ಅಸಮಾಧಾನಗೊಂಡಿದ್ದರು. ಸಿಎಂ ಸಿದ್ದರಾಮಯ್ಯ (CM Siddaramaiah) ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್‌ (DCM DK Shivakumar) ಬಳಿ ಆಕ್ರೋಶವನ್ನು ಹೊರಹಾಕಿದ್ದರು.

50 ಲಕ್ಷ ರೂ.ದಲ್ಲಿ “ಮ್ಯಾನೇಜ್‌” ಮಾಡಿ ಎಂದಿತೇ ಸರ್ಕಾರ?

ಈ ಮಧ್ಯೆ ಅಸಮಾಧಾನಿತ ಕಾಂಗ್ರೆಸ್‌ ಶಾಸಕರ ಜತೆ ಜಿಲ್ಲಾವಾರು ಸಭೆ ನಡೆಸಿದ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್‌ ಅವರು ಸಭೆ ಮುಗಿಯುತ್ತಿದ್ದಂತೆ ಮೊದಲ ಕಂತಿನ ಭಾಗವಾಗಿ ಶಾಸಕರಿಗೆ ತಲಾ 50 ಲಕ್ಷ ರೂಪಾಯಿಯನ್ನು ಬಿಡುಗಡೆ ಮಾಡಿ ಆದೇಶಿಸಿದೆ. ಆದರೆ, ಸದ್ಯಕ್ಕೆ ಈ ಅನುದಾನದಲ್ಲಿ “ಮ್ಯಾನೇಜ್‌” ಮಾಡಿ ಎಂದು ಕಾಂಗ್ರೆಸ್‌ ಶಾಸಕರಿಗೆ ಹೇಳಲಾಗಿದೆ ಎಂಬುದಾಗಿ ಹೇಳಲಾಗುತ್ತಿದೆ. ಗ್ಯಾರಂಟಿ ಯೋಜನೆಯ ಆರ್ಥಿಕ ಹೊರೆ ಹೆಚ್ಚಾದರೆ, ಈ ಆರ್ಥಿಕ ವರ್ಷದಲ್ಲಿ ಶಾಸಕರಿಗೆ ಇನ್ನು ಬಾಕಿ ಬರಬೇಕಾದ 1.50 ಕೋಟಿ ರೂಪಾಯಿ ಖೋತಾ ಆಗಲಿದೆಯೇ ಎಂಬ ಚರ್ಚೆ ಹುಟ್ಟಿಕೊಂಡಿದೆ.

ಶಾಸಕರ ಅಸಮಾಧಾನ ಶಮನಕ್ಕೆ ಪ್ರಯತ್ನ

ಶಾಸಕರ ಅಸಮಾಧಾನ ಶಮನಗೊಳಿಸಲು ಕ್ಷೇತ್ರಗಳಿಗೆ ರಾಜ್ಯ ಸರ್ಕಾರ ಅನುದಾನ ಬಿಡುಗಡೆ ಮಾಡಿದೆ. 31 ಜಿಲ್ಲೆಗಳ 135 ಕಾಂಗ್ರೆಸ್ ಶಾಸಕರ ಜತೆ ಖುದ್ದು ಸಿಎಂ ಸಭೆ ನಡೆಸಿದ್ದರು. ಇದಾದ ಕೂಡಲೇ ಶಾಸಕರ ಪ್ರದೇಶಾಭಿವೃದ್ಧಿ ನಿಧಿಯಡಿ ಮೊದಲ ಕಂತಿನ ಭಾಗವಾಗಿ 145 ಕೋಟಿ ರೂಪಾಯಿ ಬಿಡುಗಡೆ ಮಾಡಿದೆ. ಅನುದಾನ ಸಿಗುತ್ತಿಲ್ಲ. ಕ್ಷೇತ್ರದಲ್ಲಿ ತಲೆ ಎತ್ತಿ ನಡೆಯಲು ಆಗುತ್ತಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಎದುರು ಶಾಸಕರು ಅಸಮಾಧಾನವನ್ನು ಹೊರಹಾಕಿದ್ದರು.

ಇದನ್ನೂ ಓದಿ: Commission Politics : 40 ಪರ್ಸೆಂಟ್‌ ಹಗರಣದ ತನಿಖೆಗೆ ಆದೇಶ; ತಿಂಗಳೊಳಗೆ ವರದಿ ಸಲ್ಲಿಕೆಗೆ ಸೂಚನೆ

ಆದ್ಯತೆ ಮತ್ತು ಅನುದಾನದ ಲಭ್ಯತೆ ಆಧಾರದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಜಾರಿಗೆ ತರುವುದಾಗಿ ಸಭೆಯಲ್ಲಿ ಸಿಎಂ ಸಿದ್ದರಾಮಯ್ಯ ಹೇಳಿದ್ದರು. ಅದರಂತೆ ಈಗ ಅನುದಾನ ಬಿಡುಗಡೆ ಮಾಡಲಾಗಿದ್ದು, ಶಾಸಕರ ಸಮಸ್ಯೆಗೆ ತಾತ್ಕಾಲಿಕ ಬ್ರೇಕ್ ಹಾಕುವ ಪ್ರಯತ್ನ ಮಾಡಲಾಗಿದೆ.

Exit mobile version