ಬೆಂಗಳೂರು: ಆರ್‌ಆರ್ ನಗರ ವಿಧಾನಸಭಾ ಕ್ಷೇತ್ರಕ್ಕೆ (RR Nagar Assembly Constituency) ಬಿಜೆಪಿ ಸರ್ಕಾರ ನೀಡಿದ್ದ ಅನುದಾನವನ್ನು ವಾಪಸ್ ತೆಗೆದುಕೊಂಡಿರುವ ರಾಜ್ಯ ಸರ್ಕಾರದ ಕ್ರಮವನ್ನು ಪ್ರಶ್ನಿಸಿ ಬುಧವಾರ (ಅಕ್ಟೋಬರ್ 11) ವಿಧಾನಸೌಧದ ಗಾಂಧಿ ಪ್ರತಿಮೆ ಎದುರು ಪ್ರತಿಭಟನೆ ಕೈಗೊಂಡಿದ್ದ ಆ ಕ್ಷೇತ್ರದ ಶಾಸಕ ಮುನಿರತ್ನ (MLA Munirathna) ಅವರು ಪ್ರತಿಭಟನೆಯನ್ನು ಕೈಬಿಟ್ಟಿದ್ದಾರೆ. ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಪ್ರತಿಭಟನೆಯನ್ನು ಕೈಬಿಡುವಂತೆ ಸೂಚನೆ ನೀಡಿದ್ದು, ನಿಮ್ಮ ಪರವಾಗಿ ಬಿಜೆಪಿ ಇರಲಿದೆ ಎಂಬ ಅಭಯವನ್ನು ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಮುನಿರತ್ನ ಪ್ರತಿಭಟನೆಯನ್ನು ಕೈಬಿಟ್ಟಿದ್ದು, ಡಿಸಿಎಂ ಡಿ.ಕೆ. ಶಿವಕುಮಾರ್ (Deputy CM DK Shivakumar) ಅವರನ್ನು ಹುಡುಕಿಕೊಂಡು ಹೊರಟಿದ್ದಾರೆ. ಅಲ್ಲದೆ, ರಾಜ್ಯ ರಾಜಕೀಯದಲ್ಲಿ (Karnataka Politics) ಕಾಂಗ್ರೆಸ್ ಸರ್ಕಾರ (Congress Government) ದ್ವೇಷದ ರಾಜಕಾರಣ (Hate politics) ಮಾಡುತ್ತಿದೆ ಎಂದು ಬಿಜೆಪಿ ಆರೋಪ ಮಾಡಿದೆ.
ಪ್ರತಿಭಟನೆ ಕೈಬಿಟ್ಟ ಬಳಿಕ ಮಾತನಾಡಿದ ಶಾಸಕ ಮುನಿರತ್ನ, ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರು ನನ್ನ ಬೆಂಬಲಕ್ಕೆ ಇರುವುದಾಗಿ ಹೇಳಿದ್ದಾರೆ. ಪಕ್ಷ ನನ್ನ ಜತೆ ಇದೆ. ಧರಣಿ ಕೈಬಿಡುವಂತೆ ಸೂಚಿಸಿದರು. ಅವರ ಸೂಚನೆ ಮೇರೆಗೆ ಧರಣಿಯನ್ನು ಕೈ ಬಿಡುತ್ತಿದ್ದೇನೆ ಎಂದು ಹೇಳಿದರು.
ಇದನ್ನೂ ಓದಿ: Karnataka Weather : ಬೆಂಗಳೂರಿನಲ್ಲಿ ಭರ್ಜರಿ ಮಳೆ; ದಕ್ಷಿಣ ಒಳನಾಡು, ಕರಾವಳಿಯಲ್ಲಿ ಸಾಧಾರಣ ಪ್ರದರ್ಶನ
ಸೋತ ಅಭ್ಯರ್ಥಿಯ ಕೆಲಸ ಆಗುತ್ತದೆ!
ನನ್ನ ಕ್ಷೇತ್ರದ ಅನುದಾನವನ್ನು ಮೂರು ವಿಧಾನಸಭಾ ಕ್ಷೇತ್ರಗಳಿಗೆ ಹಂಚಿಕೆ ಮಾಡಿದ್ದಾರೆ. ಪುಲಕೇಶಿ ನಗರಕ್ಕೆ 40 ಕೋಟಿ ರೂಪಾಯಿ ಕೊಟ್ಟಿದ್ದಾರೆ. ಬ್ಯಾಟರಾಯಣಪುರಕ್ಕೆ 40 ಕೋಟಿ ರೂಪಾಯಿ ಹಾಗೂ ಯಶವಂತಪುರ ವಿಧಾನಸಭಾ ಕ್ಷೇತ್ರಕ್ಕೂ 40 ಕೋಟಿ ರೂಪಾಯಿ ಕೊಟ್ಟಿದ್ದಾರೆ. ಇದು ನನ್ನ ಕ್ಷೇತ್ರದ ಅನುದಾನವಾಗಿದೆ. ನನ್ನ ಕ್ಷೇತ್ರದ ಸಂಸದ ಡಿ.ಕೆ. ಸುರೇಶ್ ಸಹ ಕೇಳಬಹುದಿತ್ತು. ನಮ್ಮ ಕ್ಷೇತ್ರಕ್ಕೆ ಅನುದಾನ ಕೊಡಿ ಎಂದು ಕೇಳಬಹುದಿತ್ತು. ನನ್ನ ಕ್ಷೇತ್ರದ ಅನುದಾನ ವರ್ಗಾವಣೆ ಮಾಡಬಾರದು ಅಂತ ಒಂದು ಪತ್ರವನ್ನೂ ಅವರು ಬರೆಯಲಿಲ್ಲ. ಡಿಕೆಶಿಗೆ ಒತ್ತಾಯ ಮಾಡಿ ಮಾಡಬಹುದಿತ್ತು. ನಿಮ್ಮದೇ ಕ್ಷೇತ್ರವಲ್ಲವೇ ಇದು? ನೀವೂ ಸಹ ಕೆಲಸ ಮಾಡಬೇಕಿತ್ತು. ಆರ್.ಆರ್. ನಗರದಲ್ಲಿ ಸೋತ ಅಭ್ಯರ್ಥಿ (ಕುಸುಮಾ ಡಿ.ಕೆ. ರವಿ) ಹೇಳಿದರೆ ಎಲ್ಲ ಕೆಲಸವೂ ಆಗುತ್ತದೆ. ಪ್ಲ್ಯಾನ್ ಅಪ್ರೂವಲ್ ಆಗುತ್ತದೆ. ಸಸ್ಪೆಂಡ್ ಸಹ ಮಾಡುತ್ತಾರೆ. ಬಡವ ಮನೆ ಕಟ್ಟಲು ಸೋತ ಅಭ್ಯರ್ಥಿಯ ಅನುಮತಿ ಬೇಕು ಎಂದು ಕಿಡಿಕಾರಿದ್ದಾರೆ.
ನಿಮ್ಮಲ್ಲಿ ನಾನು ಒಬ್ಬ. ನನ್ನನ್ನು ಬೇರೆ ಅಂತ ನೋಡಬೇಡಿ. ಚುನಾವಣೆಯಲ್ಲಿ ನಿಮ್ಮ ಅಭ್ಯರ್ಥಿ ಗೆಲ್ಲುವುದಕ್ಕೆ ನೀವು ಕೆಲಸ ಮಾಡಿ. ನಮ್ಮ ಅಭ್ಯರ್ಥಿಗಾಗಿ ನಾನು ಕೆಲಸ ಮಾಡುತ್ತೇನೆ. ಅಭಿವೃದ್ಧಿಗಾಗಿ ಒಂದಾಗಿ ಹೋಗೋಣ ಎಂದು ಡಿಕೆ ಸಹೋದರರಿಗೆ ಮುನಿರತ್ನ ಮಾಡಿದ್ದಾರೆ.
ಏನಿದು ಗಲಾಟೆ?
ಆರ್. ಆರ್ ನಗರ ಸೇರಿದಂತೆ ಬಿಜೆಪಿ ಶಾಸಕರ ಕ್ಷೇತ್ರಗಳಿಗೆ ಕಳೆದ ಅವಧಿಯಲ್ಲಿ ನೀಡಲಾಗಿದ್ದ ಅನುದಾನವನ್ನು ವಾಪಸ್ ಪಡೆದು 11 ಕಾಂಗ್ರೆಸ್ ಶಾಸಕರ ಕ್ಷೇತ್ರಗಳಿಗೆ ತಲಾ 40 ಕೋಟಿ ರೂಪಾಯಿ ಅನುದಾನವನ್ನು ಮಂಜೂರು ಮಾಡಲಾಗಿದೆ. ಇಲ್ಲಿ ಇನ್ನೊಂದು ಸ್ವಾರಸ್ಯಕರ ಸಂಗತಿಯೆಂದರೆ ಇವರಲ್ಲಿ ಬಿಜೆಪಿಯ ಶಾಸಕರೊಬ್ಬರ ಕ್ಷೇತ್ರವೂ ಸೇರಿದೆ. ಅಂದರೆ, ಯಶವಂತಪುರ ಕ್ಷೇತ್ರದ ಶಾಸಕ, ಮಾಜಿ ಸಚಿವ ಎಸ್.ಟಿ. ಸೋಮಶೇಖರ್ ಅವರ ಕ್ಷೇತ್ರಕ್ಕೂ ಅನುದಾನವನ್ನು ನೀಡಲಾಗಿದೆ.
ಇದನ್ನೂ ಓದಿ: OPS News : ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್; ಹಳೆ ಪಿಂಚಣಿ ಜಾರಿ ಬಗ್ಗೆ ಸಿಎಂ BIG Update
ಬಿಜೆಪಿ ಸರ್ಕಾರ ಮಂಜೂರು ಮಾಡಿದ್ದ 485 ಕೋಟಿ ರೂಪಾಯಿಗಳ ಅನುದಾನವನ್ನು ಕಾಂಗ್ರೆಸ್ ಸರ್ಕಾರ ಈಗ ವಾಪಸ್ ಪಡೆದಿದೆ. ವಾಪಸ್ ಪಡೆದು 11 ಕಾಂಗ್ರೆಸ್ ಶಾಸಕರ ಕ್ಷೇತ್ರಗಳಿಗೆ ತಲಾ 40 ಕೋಟಿ ರೂಪಾಯಿ ಅನುದಾನವನ್ನು ಮಂಜೂರು ಮಾಡಲಾಗಿದೆ. ಇದು ಈಗ ವ್ಯಾಪಕ ಆಕ್ರೋಶಕ್ಕೆ ಗುರಿಯಾಗಿದೆ.