Site icon Vistara News

Karnataka Politics : ಮಾಜಿ ಸಿಎಂ ಬಿಎಸ್‌ವೈ ಭೇಟಿ ಮಾಡಿದ ನಿಖಿಲ್‌ ಕುಮಾರಸ್ವಾಮಿ; ಮಂಡ್ಯ ಸ್ಪರ್ಧೆ ಬಗ್ಗೆ ಹೇಳಿದ್ದೇನು?

Nikhil Kumaraswamy meets former CM BS Yediyurappa

ಬೆಂಗಳೂರು: ದೆಹಲಿಯಲ್ಲಿ ಬಿಜೆಪಿ-ಜೆಡಿಎಸ್ (BJP and JDS alliance) ಮೈತ್ರಿ ಬೆನ್ನಲ್ಲೆ ರಾಜ್ಯ ರಾಜಕೀಯದಲ್ಲಿ (Karnataka Politics) ರಾಜಕೀಯ ಚಟುವಟಿಕೆ ಗರಿಗೆದರಿದೆ. ಬಿಜೆಪಿ ಹಿರಿಯ ನಾಯಕ, ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ‌ (Former CM BS Yediyurappa) ಅವರ ನಿವಾಸಕ್ಕೆ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಪುತ್ರ, ಜೆಡಿಎಸ್ ರಾಜ್ಯ ಯುವ ಘಟಕದ ಅಧ್ಯಕ್ಷ ನಿಖಿಲ್‌ ಕುಮಾರಸ್ವಾಮಿ (JDS state youth wing president Nikhil Kumaraswamy) ಭೇಟಿ ಮಾಡಿ ಆಶೀರ್ವಾದ ಪಡೆದಿದ್ದಾರೆ.

ನಿಖಿಲ್ ಕುಮಾರಸ್ವಾಮಿ ಜತೆಗೆ ಬಿಜೆಪಿ ಶಾಸಕ ಮಾಜಿ ಸಚಿವ ಮುನಿರತ್ನ, ಕುಪೇಂದ್ರ ರೆಡ್ಡಿ ಪುತ್ರ ಆಗಮಿಸಿದ್ದಾರೆ. ಈ ವೇಳೆ ಯಡಿಯೂರಪ್ಪ ಅವರಿಗೆ ಪಂಚಲೋಹದ ಕೃಷ್ಣನ ವಿಗ್ರಹವನ್ನು ನಿಖಿಲ್ ಕುಮಾರಸ್ವಾಮಿ ಉಡುಗೊರೆಯಾಗಿ ನೀಡಿದರು. ಬಳಿಕ ಯಡಿಯೂರಪ್ಪ ಕಾಲಿಗೆ ಬಿದ್ದು ಆಶೀರ್ವಾದ ಪಡೆದರು.

ಇದನ್ನೂ ಓದಿ: HD Kumaraswamy : 6ನೇ ಗ್ಯಾರಂಟಿಯಾಗಿ ಮದ್ಯಭಾಗ್ಯ; ಎಚ್.ಡಿ. ಕುಮಾರಸ್ವಾಮಿ ಕಿಡಿ

ಸದ್ಯದಲ್ಲೇ ಎಚ್‌.ಡಿ. ಕುಮಾರಸ್ವಾಮಿ ಮನೆಗೆ ಹೋಗುವೆ: ಬಿ.ಎಸ್‌. ಯಡಿಯೂರಪ್ಪ

ಬಳಿಕ ಮಾತನಾಡಿದ ಮಾಜಿ ಸಿಎಂ ಯಡಿಯೂರಪ್ಪ, ನಿಖಿಲ್ ಕುಮಾರಸ್ವಾಮಿ ಅವರು ಭೇಟಿ ಆಗಿದ್ದಾರೆ. ಈ ಭೇಟಿಯಲ್ಲಿ ವಿಶೇಷತೆ ಏನಿಲ್ಲ, ಸೌಹಾರ್ದಯುತ ಭೇಟಿಯಷ್ಟೇ. ಕುಮಾರಸ್ವಾಮಿ ಅವರೂ ಕರೆ ಮಾಡಿದ್ದರು. ಮನೆಗೆ ಬಂದು ಹೋಗಿ ಅಂದರೂ ಸದ್ಯದಲ್ಲೇ ಹೋಗುತ್ತೇನೆ. ಸದ್ಯದಲ್ಲೇ ಕುಮಾರಸ್ವಾಮಿ ಅವರ ಮನೆಗೆ ಹೋಗಿ ಮಾತನಾಡಿಸಿಕೊಂಡು ಬರುತ್ತೇನೆ. ಹೇಗೂ ನಮ್ಮ ಜತೆ ಅವರು ಹೊಂದಾಣಿಕೆ ಆಗಿದ್ದಾರೆ. ನಾವೆಲ್ಲರೂ ಒಟ್ಟಾಗಿ ಹೋಗಬೇಕಿದೆ ಎಂದು ಹೇಳಿದರು.

ಮಂಡ್ಯದಲ್ಲಿ ಸ್ಪರ್ಧೆ ಬಗ್ಗೆ ಪ್ರತಿಕ್ರಿಯಿಸಲ್ಲ: ನಿಖಿಲ್‌ ಕುಮಾರಸ್ವಾಮಿ

ಮಂಡ್ಯದಲ್ಲಿ ಸ್ಪರ್ಧೆ ಬಗ್ಗೆ ಈಗ ನಾನು ಪ್ರತಿಕ್ರಿಯೆ ನೀಡುವುದಿಲ್ಲ. ಮುಂದಿನ ದಿನಗಳಲ್ಲಿ ಅಲ್ಲಿರುವ ಕಾರ್ಯಕರ್ತರು, ಮುಖಂಡರು ತೀರ್ಮಾನ ಮಾಡುತ್ತಾರೆ. ನಾನೆಂದೂ ರಾಜಕೀಯದಿಂದ ದೂರ ಹೋಗುತ್ತೇನೆ ಎಂದು ಹೇಳಿಲ್ಲ. ಈ ಮೈತ್ರಿಗೆ ಎಚ್.ಡಿ. ರೇವಣ್ಣ ಅವರ ಸಂಪೂರ್ಣ ಬೆಂಬಲ ಇದೆ. ತಪ್ಪು ಸಂದೇಶ ಹೋಗುವುದು ಬೇಡ. ಅವರು ಹೊಳೆನರಸೀಪುರಕ್ಕೆ ಹೋಗಬೇಕಿತ್ತು. ಆ ಕಾರಣ ಸಭೆಗೆ ಅವರು ಬಂದಿಲ್ಲ. ನಾವೆಲ್ಲರೂ ಕುಳಿತು ಚರ್ಚೆ ಮಾಡಿದ್ದೇವೆ ಎಂದು ನಿಖಿಲ್ ಕುಮಾರಸ್ವಾಮಿ ಹೇಳಿದರು.

ತಮಗೆ ಗೊತ್ತಿರುವಂತೆ ಜೆಡಿಎಸ್‌ – ಬಿಜೆಪಿ ಜಂಟಿಯಾಗಿ ಚುನಾವಣೆ ಎದುರಿಸಬೇಕು ಅನ್ನೋದು ನಮ್ಮ ಉದ್ದೇಶ. ಮಾಜಿ ಪ್ರಧಾನಿ, ಪಕ್ಷದ ವರಿಷ್ಠರಾದ ಎಚ್.ಡಿ. ದೇವೇಗೌಡರು ಪಕ್ಷದ ಹಿತದೃಷ್ಟಿಯಿಂದ ಈ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ. ಕಾರ್ಯಕರ್ತನಾಗಿ ಆಶೀರ್ವಾದ ಪಡೆಯುವುದು ನನ್ನ ಜವಾಬ್ದಾರಿ. ಸಿಎಂ ಆಗಿದ್ದಾಗ ಯಡಿಯೂರಪ್ಪ ಅವರ ಕಾರ್ಯಕ್ರಮ ಮನೆಮಾತಾಗಿದೆ. ಹಿರಿಯರ ಆಶೀರ್ವಾದ ಪಡೆಯುವುದು ಒಂದು ಸಂಸ್ಕೃತಿ. ಹಾಗಾಗಿ ಆಶೀರ್ವಾದ ಪಡೆದಿದ್ದೇನೆ ಎಂದು ನಿಖಿಲ್‌ ಕುಮಾರಸ್ವಾಮಿ ಹೇಳಿದರು.

ಮೈತ್ರಿ ವೇಳೆ ಬಿಜೆಪಿ ರಾಜ್ಯ ನಾಯಕರು ಇರಲಿಲ್ಲ ಎಂಬ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿರುವ ನಿಖಿಲ್‌ ಕುಮಾರಸ್ವಾಮಿ, ಈಗ ಬಿಜೆಪಿ ಶಾಸಕ ಮುನಿರತ್ನ ಅವರು ನನ್ನ ಜತೆಯಲ್ಲಿ ಇದ್ದಾರೆ. ಬಿಜೆಪಿಯಲ್ಲಿ ಪ್ರತಿಯೊಬ್ಬರನ್ನೂ ಜತೆಯಲ್ಲಿ ಕರೆದುಕೊಂಡು ಹೋಗುವ ಕೆಲಸ ಆಗಲಿದೆ. ಸೀಟು ಹಂಚಿಕೆ ಮುಂದಿನ ದಿನದಲ್ಲಿ ತೀರ್ಮಾನ ಆಗಲಿದೆ. ಎಂದೂ ಕೂಡ ರಾಜಕಾರಣದಿಂದ ಹಿಂದೆ ಸರಿಯುವ ಕೆಲಸ ಆಗಲ್ಲ. ಮೊನ್ನೆ ದಿನ ಕೂಡ ಫೇಸ್‌ಬುಕ್‌ನಲ್ಲಿ ಹೇಳಿದ್ದೆ. ದೇವೇಗೌಡರು, ಕುಮಾರಣ್ಣ ಪಕ್ಷ ಕಟ್ಟಿದ್ದಾರೆ. ಅನೇಕರು ಮುಂದುವರಿಸಿಕೊಂಡು ಬಂದಿದ್ದಾರೆ. ನಮ್ಮಂತಹ ಯುವಕರು ಅದನ್ನು ಉಳಿಸಿ, ಬೆಳೆಸಿಕೊಂಡು ಹೋಗಬೇಕಿದೆ ಎಂದು ಹೇಳಿದರು.

28 ಲೋಕಸಭಾ ಕ್ಷೇತ್ರದಲ್ಲಿ ಜಂಟಿಯಾಗಿ ಚುನಾವಣೆ ಎದುರಿಸುತ್ತೇವೆ. 28 ಕ್ಷೇತ್ರದಲ್ಲಿ ಕೂಡ ಗೆಲ್ಲುತ್ತೇವೆ. ಕಾವೇರಿ ವಿಚಾರವಾಗಿ ಎಚ್.ಡಿ. ಕುಮಾರಸ್ವಾಮಿ ಮಂಡ್ಯಕ್ಕೆ ಭೇಟಿ ನೀಡಿದ್ದರು. ನಮ್ಮ ರೈತರಿಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಎಂದೂ ಕೂಡ ಜತೆಯಲ್ಲಿ ಇರುತ್ತಾರೆ ಎಂದು ಹೇಳಿದರು.

ಇದನ್ನೂ ಓದಿ: Education News : 9 – 11ನೇ ತರಗತಿ ವಿದ್ಯಾರ್ಥಿಗಳಿಗೆ ಇನ್ನು ಬೋರ್ಡ್ ಪರೀಕ್ಷೆ!

ಮೈತ್ರಿಗೆ ಈಗ ಸಮಯ ಬಂದಿದೆ: ಶಾಸಕ ಮುನಿರತ್ನ

ಮೊದಲನೆಯದಾಗಿ ಇದು ಒಳ್ಳೆಯ ಬೆಳವಣಿಗೆ. ಈ ಬೆಳವಣಿಗೆ ಚುನಾವಣೆ ಮೊದಲು ಆಗಿದ್ದರೆ 135 ಸೀಟುಗಳನ್ನು ನಾವು ಗೆದ್ದಿರುತ್ತಿದ್ದೆವು. ಕಾರಣಾಂತರದಿಂದ ಆಗಿರಲಿಲ್ಲ. ಈಗ ಸಮಯ ಬಂದಿದೆ. 28 ಲೋಕಸಭಾ ಕ್ಷೇತ್ರ ಗೆಲ್ಲಲು ಅನುಕೂಲ ಆಗಲಿದೆ. ಪ್ರಧಾನಿ, ಜೆ.ಪಿ ನಡ್ಡಾ, ಅಮಿತ್ ಶಾ, ಎಚ್.ಡಿ. ದೇವೇಗೌಡರು, ಎಚ್.ಡಿ. ಕುಮಾರಸ್ವಾಮಿ ಎಲ್ಲರೂ ಒಟ್ಟಾಗಿ ಚರ್ಚೆ ಮಾಡಿದ್ದಾರೆ. ಮುಂದೆ ಒಟ್ಟಾಗಿ ಹೋಗಬೇಕಿದೆ. ಅಭಿವೃದ್ಧಿ ದೃಷ್ಟಿಯಿಂದ ಎಲ್ಲರೂ ಒಟ್ಟಾಗಿ ಹೋಗಬೇಕಿದೆ. ಬಿಜೆಪಿ ಪಕ್ಷದ ಯುವ ನಾಯಕ ಬಿ.ವೈ. ವಿಜಯೇಂದ್ರ, ಜೆಡಿಎಸ್‌ನ ನಿಖಿಲ್, ಪ್ರಜ್ವಲ್ ಎಲ್ಲರೂ ಒಟ್ಟಾಗಿ ಹೋಗುವ ಕೆಲಸ ಆಗಬೇಕಿದೆ ಎಂದು ಶಾಸಕ ಮುನಿರತ್ನ ಹೇಳಿದರು.

Exit mobile version