Site icon Vistara News

Karnataka Politics : ಪಕ್ಷ ಹಾನಿ ಹೇಳಿಕೆ ಕೊಟ್ಟರೆ ಶಿಸ್ತು ಕ್ರಮ; ಸಚಿವ, ಶಾಸಕರಿಗೆ ಸುರ್ಜೇವಾಲ ವಾರ್ನಿಂಗ್

Randeep Singh surjewala pressmeet

ಬೆಂಗಳೂರು: ಲೋಕಸಭಾ ಚುನಾವಣೆ (Lok Sabha Election 2024) ಹೊತ್ತಿನಲ್ಲಿ ರಾಜ್ಯ ರಾಜಕೀಯದಲ್ಲಿ (Karnataka Politics) ಅನೇಕ ಬೆಳವಣಿಗೆಗಳು ನಡೆಯುತ್ತಿವೆ. ಈ ನಡುವೆ ಕಾಂಗ್ರೆಸ್‌ನಲ್ಲಿ ಹೆಚ್ಚಿದ್ದ ಆಂತರಿಕ ಕಲಹಕ್ಕೆ ಹೈಕಮಾಂಡ್‌ ಬ್ರೇಕ್‌ ಹಾಕಿದೆ. ಇನ್ನು ಮುಖ್ಯಮಂತ್ರಿ ಬದಲಾವಣೆ (Change of Chief Minister) ಸೇರಿದಂತೆ ಇನ್ನಿತರ ಯಾವುದೇ ಪಕ್ಷಕ್ಕೆ ಹಾನಿಯಾಗುವ ವಿಚಾರವನ್ನು ಯಾವೊಬ್ಬ ನಾಯಕರೂ ಪ್ರಸ್ತಾಪ ಮಾಡಬಾರದು. ಪಕ್ಷದ ಚೌಕಟ್ಟು ಉಲ್ಲಂಘನೆ ಮಾಡಿ‌ ಹೇಳಿಕೆಗಳನ್ನು ನೀಡಬಾರದು. ಒಂದು ವೇಳೆ ನೀಡಿದರೆ ಶಿಸ್ತು ಕ್ರಮವನ್ನು ಎದುರಿಸಬೇಕಾದೀತು ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ, ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ರಣದೀಪ್‌ ಸಿಂಗ್‌ ಸುರ್ಜೇವಾಲ (AICC general secretary KC Venugopal and Randeep Singh Surjewala) ಖಡಕ್‌ ಎಚ್ಚರಿಕೆಯನ್ನು ನೀಡಿದ್ದಾರೆ. ಇದರ ಜತೆಗೆ ಪಕ್ಷ ಸಂಘಟನೆ, ನಿಗಮ – ಮಂಡಳಿಗಳಿಗೆ ನೇಮಕ ಸೇರಿದಂತೆ ಇನ್ನಿತರ ವಿಷಯಗಳ ಬಗ್ಗೆ ಚರ್ಚೆ ನಡೆಸಲಾಗಿದೆ.

ಸಿಎಂ ಸಿದ್ದರಾಮಯ್ಯ (CM Siddaramaiah) ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್‌ (DCM DK Shivakumar) ಜತೆಗೆ ಎಐಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಕೆ.ಸಿ. ವೇಣುಗೋಪಾಲ್‌ ಹಾಗೂ ರಣದೀಪ್ ಸಿಂಗ್‌ ಸುರ್ಜೇವಾಲ‌ ಅವರು ಕೆಪಿಸಿಸಿ ಕಚೇರಿಯಲ್ಲಿ ಸುದೀರ್ಘ 2 ಗಂಟೆ ಕಾಲ ಚರ್ಚೆ ನಡೆಸಿದರು. ಈ ವೇಳೆ ರಾಜ್ಯ ರಾಜಕೀಯ ಸೇರಿದಂತೆ ಪಕ್ಷದೊಳಗಿನ ಬೆಳವಣಿಗೆಗಳ ಬಗ್ಗೆ ಚರ್ಚೆ ನಡೆಸಲಾಗಿದೆ.

ಇದನ್ನೂ ಓದಿ: Karnataka Rajyotsava : ʼಛಿದ್ರʼ ಮಾಡುವವರು ನಮ್ಮ ಸುತ್ತ ಇದ್ದಾರೆ; ಕೋಮು ದ್ವೇಷಕ್ಕೆ ಸಿಲುಕದಿರೋಣವೆಂದ ಡಿಕೆಶಿ

ವಾರ್ನಿಂಗ್‌ ನೀಡಿದ ಸುರ್ಜೇವಾಲ

ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ರಣದೀಪ್‌ ಸಿಂಗ್‌ ಸುರ್ಜೇವಾಲ, ಯಾವ ಸಚಿವರು, ಶಾಸಕರು ವಿವಾದ ಸೃಷ್ಟಿ‌ ಮಾಡುವಂತಿಲ್ಲ. ತಮ್ಮ ತಮ್ಮ ಇಲಾಖೆ, ಕ್ಷೇತ್ರ ಹಾಗೂ ಅಭಿವೃದ್ಧಿ ಕೆಲಸ ಕಾರ್ಯಗಳತ್ತ ಗಮನ ಹರಿಸಬೇಕು. ಬದಲಾಗಿ ಪಕ್ಷದ ಚೌಕಟ್ಟು ಉಲ್ಲಂಘನೆ ಮಾಡಿ‌ ಹೇಳಿಕೆಗಳನ್ನು ನೀಡಬಾರದು. ಏನೇ ಸಮಸ್ಯೆ ಇದ್ದರೂ ನನ್ನನ್ನು ಅಥವಾ ಕೆ.ಸಿ. ವೇಣುಗೋಪಾಲ್ ಅವರನ್ನು ಸಂಪರ್ಕ ಮಾಡಬಹುದು. ಅದು ಬಿಟ್ಟು ಬಹಿರಂಗ ಹೇಳಿಕೆ‌‌ಗಳನ್ನು ನೀಡುವ ಹಾಗಿಲ್ಲ ಎಂದು ಖಡಕ್‌ ವಾರ್ನಿಂಗ್‌ ನೀಡಿದ್ದಾರೆ.

ಲೋಕಸಭೆಯಲ್ಲಿ 25 + ಸ್ಥಾನ ಗೆಲ್ಲುವ ನಿರೀಕ್ಷೆ

ಶಾಸಕರಾದವರು ತಮ್ಮ ಕ್ಷೇತ್ರದ ಅಭಿವೃದ್ಧಿ ಕೆಲಸಗಳತ್ತ ಗಮನ ಹರಿಸಬೇಕು. ಈ ವಿಚಾರವಾಗಿ ಹೆಚ್ಚು ಆದ್ಯತೆ ಕೊಡಲಿ.‌ ಸಿಎಂ ಬದಲಾವಣೆ ವಿಚಾರವಾಗಿಯೂ ಯಾವುದೇ ಹೇಳಿಕೆ ನೀಡುವ ಹಾಗಿಲ್ಲ. ಕಾಂಗ್ರೆಸ್ ಗ್ಯಾರಂಟಿ ಯೋಜನೆಯು ಮುಂದಿನ ಲೋಕಸಭಾ ಚುನಾವಣೆಯಲ್ಲಿ (Lok Sabaha Election 2024) ಜಯ ತಂದು ಕೊಡಲಿದೆ. ‌15 ದಿನಗಳಲ್ಲಿ ಸಂಭಾವ್ಯ ಅಭ್ಯರ್ಥಿಗಳ ಹೆಸರುಗಳನ್ನು ಪಟ್ಟಿ ಮಾಡಲು ಸೂಚನೆ‌ ನೀಡಲಾಗಿದೆ. ಈ‌ ಬಾರಿ ಲೋಕಸಭೆಯಲ್ಲಿ 20 ಸ್ಥಾನಗಳನ್ನು ಖಂಡಿತಾ ಗೆಲ್ಲುತ್ತೇವೆ. ಜತೆಗೆ 25+ ಸ್ಥಾನಗಳನ್ನು ಗೆಲ್ಲುವ ಪ್ರಯತ್ನ ಪಡುವುದಾಗಿ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್‌ ನೀಡಿದ್ದಾರೆ ಎಂಬುದಾಗಿ ರಣದೀಪ್‌ ಸಿಂಗ್‌ ಸುರ್ಜೇವಾಲ ಹೇಳಿದರು.

ಪಾರ್ಲಿಮೆಂಟ್ ಚುನಾವಣೆಗೆ ತಕ್ಷಣ ಕ್ಯಾಂಡಿಡೇಟ್ ಹುಡುಕುವ ಕೆಲಸ ಆಗಬೇಕಿದೆ. ಇನ್ನು 15 ದಿನಗಳ ಒಳಗಾಗಿ ಮೊದಲ ಹಂತದ ಸಭೆ ನಡೆಯಲಿದೆ. ಯಾರು ಅಭ್ಯರ್ಥಿಗಳಾಗಲು ಸೂಕ್ತ ಎಂಬ ಬಗ್ಗೆ ಪ್ರಾಥಮಿಕ ಹಂತದ ಚರ್ಚೆ ಆಗಿದೆ. 25ಕ್ಕೂ ಹೆಚ್ಚು ಸೀಟು ಗೆಲ್ಲಲು ಸಿದ್ಧತೆಯನ್ನು ಆರಂಭಿಸುತ್ತೇವೆ ಎಂದು ರಣದೀಪ್‌ ಸಿಂಗ್‌ ಸುರ್ಜೇವಾಲ ತಿಳಿಸಿದರು.

ಮಧ್ಯ ಪ್ರದೇಶ ಸೇರಿದಂತೆ ಪಂಚ ರಾಜ್ಯಗಳ ಚುನಾವಣೆಗಳು ನಡೆಯಲಿವೆ. ಹೀಗಾಗಿ ಅದರಲ್ಲಿ ನಾನು ಬ್ಯುಸಿಯಾಗಿದ್ದೆ. ಸಚಿವರು, ಶಾಸಕರು ನೀಡುತ್ತಿರುವ ಹೇಳಿಕೆಯಿಂದ ಪಕ್ಷದ ವರ್ಚಸ್ಸಿಗೆ ಧಕ್ಕೆ ಆಗುತ್ತಲಿದೆ. ಯಾರೇ ಆಗಲಿ ಪಕ್ಷದ ಚೌಕಟ್ಟಿನಲ್ಲಿ ಮಾತನಾಡಬೇಕು. ಮಾಧ್ಯಮಗಳ ಮುಂದೆ ವಿವಾದಿತ ಹೇಳಿಕೆ ಕೊಡಬಾರದು. ಸಚಿವರಾಗಲಿ, ಶಾಸಕರಾಗಲಿ ಇಂತಹ ಹೇಳಿಕೆಗಳನ್ನು ನೀಡಬಾರದು. ಪಕ್ಷದ ಶಿಸ್ತನ್ನು ಎಲ್ಲರೂ ಪಾಲಿಸಬೇಕು. ಇಲ್ಲಸಲ್ಲದ ಹೇಳಿಕೆಗಳನ್ನ ನೀಡಬಾರದು ಎಂದು ರಣದೀಪ್‌ ಸಿಂಗ್‌ ಸುರ್ಜೇವಾಲ ಹೇಳಿದರು.

ನವೆಂಬರ್‌ 17ರ ನಂತರ ನಿಗಮ-ಮಂಡಳಿಗಳಿಗೆ ನೇಮಕ

ಇನ್ನು ನಿಗಮ ಮಂಡಳಿಗಳ ನೇಮಕ ಬಗ್ಗೆ ಇಂದು ಚರ್ಚೆ ಮಾಡಲಾಯಿತು. ಈ ವಿಚಾರವಾಗಿ ಇನ್ನು ನಾಲ್ಕೈದು ಸುತ್ತಿನ ಚರ್ಚೆ ನಡೆಯಬೇಕಿದೆ. ಸದ್ಯ ನನಗೆ ಮಧ್ಯಪ್ರದೇಶ ವಿಧಾನಸಭೆ ಚುನಾವಣೆಯ ಜವಾಬ್ದಾರಿ ವಹಿಸಿದ್ದು, ಇದೇ ತಿಂಗಳು 17ರಂದು ಚುನಾವಣೆ ಪೂರ್ಣಗೊಂಡ ತಕ್ಷಣವೇ ನಾನು ಕರ್ನಾಟಕಕ್ಕೆ ಆಗಮಿಸಿ ನಿಗಮ – ಮಂಡಳಿ ನೇಮಕ ಪ್ರಕ್ರಿಯೆ ಪೂರ್ಣಗೊಳಿಸುತ್ತೇವೆ ಎಂದು ರಣದೀಪ್‌ ಸಿಂಗ್‌ ಸುರ್ಜೇವಾಲ ಹೇಳಿದರು.

ಇದನ್ನೂ ಓದಿ: Karnataka Rajyotsava : ಕರಾಳ ದಿನ ಆಚರಿಸಿ ಉದ್ಧಟತನ ಮೆರೆದ ಎಂಇಎಸ್‌; ಕೈಕಟ್ಟಿ ಕುಳಿತ ಜಿಲ್ಲಾಡಳಿತ

ಸಂಘಟನೆಯಲ್ಲಿ ಬದಲಾವಣೆ

ಸಭೆಯಲ್ಲಿ ಪಕ್ಷ ಸಂಘಟನೆಯಲ್ಲಿ ಬದಲಾವಣೆ ತರುವ ನಿಟ್ಟಿನಲ್ಲಿ ಚರ್ಚೆ ಆಗಿದೆ. ಈ ವಿಚಾರವನ್ನು ಎಐಸಿಸಿ ಅಧ್ಯಕ್ಷರ ಗಮನಕ್ಕೆ ತರಲಾಗುವುದು. ಹಾಲಿ ಪದಾಧಿಕಾರಿಗಳ ಪೈಕಿ ಹಲವರು ಶಾಸಕರು, ಸಚಿವರುಗಳಾಗಿದ್ದಾರೆ. ಅವರಿಗೆ ಸಂಘಟನಾ ಜವಾಬ್ದಾರಿಯಿಂದ ಬಿಡುಗಡೆ ಮಾಡಬೇಕಿದೆ. ಯುವಕರಿಗೆ ಸಂಘಟನೆಯಲ್ಲಿ ಆದ್ಯತೆ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ರಣದೀಪ್‌ ಸಿಂಗ್‌ ಸುರ್ಜೇವಾಲ ಮಾಹಿತಿ ನೀಡಿದರು.

Exit mobile version