ಬೆಂಗಳೂರು: ಕರ್ನಾಟಕ ರಾಜ್ಯ ರಾಜಕಾರಣದಲ್ಲಿ (Karnataka Politics) ಯಾವ ಕಾರಣಕ್ಕೂ ನಮ್ಮ ಸರ್ಕಾರವನ್ನು ಆಪರೇಷನ್ ಕಮಲ (Operation Kamala) ಮಾಡಲು ಸಾಧ್ಯವಿಲ್ಲ. ಏಕೆಂದರೆ ಈ ಬಾರಿ ಎನ್‌ಡಿಎ ಸೋಲಲಿದೆ. ಆಪರೇಶನ್ ಕಮಲ ಬಿಜೆಪಿಯ ಹಗಲುಗನಸು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಹೇಳಿದರು.
ಸೋಮವಾರ ಮಾಧ್ಯಮದವರೊಂದಿಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ನಮ್ಮ ಶಾಸಕರು ಯಾರೂ ಮಾರಾಟವಾಗಲು ತಯಾರಿಲ್ಲ ಎಂದು ಸ್ಪಷ್ಟನೆ ನೀಡಿದರು. ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಪತನವಾಗುತ್ತದೆ. ಮಹಾರಾಷ್ಟ್ರದಲ್ಲಿ ಆದಂತೆ ಆಪರೇಶನ್ ಕಮಲ ನಡೆಯಲಿದೆ ಎಂದು ಮಹಾರಾಷ್ಟ್ರ ಸಿಎಂ ಏಕನಾಥ ಶಿಂಧೆ (Maharashtra CM Eknath Shinde) ಹೇಳಿಕೆ ಬಗ್ಗೆ ಸಿಎಂ ಈ ಪ್ರತಿಕ್ರಿಯೆ ನೀಡಿದರು.
ಈಗಾಗಲೇ ಕಳೆದ ಒಂದು ವರ್ಷದಿಂದ ಇಂಥ ಪ್ರಯತ್ನ ಮಾಡಿ ವಿಫಲರಾಗಿದ್ದಾರೆ. ಇನ್ನೊಂದು ಬಾರಿ ಏಕೆ ಪ್ರಯತ್ನಿಸುತ್ತಾರೆ? ನಮ್ಮ ಶಾಸಕರು ಯಾರೂ ಮಾರಾಟವಾಗಲು ತಯಾರಿಲ್ಲ. ಮಹಾರಾಷ್ಟ್ರದಲ್ಲಿ ಆದಂತೆ ಕರ್ನಾಟಕದಲ್ಲಿ ಆಗಲು ಸಾಧ್ಯವಿಲ್ಲ ಎಂದ ಸಿಎಂ ಸಿದ್ದರಾಮಯ್ಯ, ರಾಜಕೀಯ ದ್ರವೀಕರಣ ಕಾರಣವಾಗಬಹುದೇ ಎಂಬ ಸುದ್ದಿಗಾರರ ಪ್ರಶ್ನೆಗೆ, ಕಾಂಗ್ರೆಸ್ ನೇತೃತ್ವದ ಇಂಡಿಯಾ ಗೆಲ್ಲಲಿದ್ದು ನಮ್ಮವರೇ ಪ್ರಧಾನ ಮಂತ್ರಿಯಾಗಲಿದ್ದಾರೆ ಎಂದು ಉತ್ತರಿಸಿದರು.
ನಮ್ಮ ಅಭ್ಯರ್ಥಿಗಳು ಗೆಲ್ಲಲಿದ್ದಾರೆ
ಪದವೀಧರರ ಕ್ಷೇತ್ರದಿಂದ ರಾಮೋಜಿ ಗೌಡ ಪಕ್ಷದ ಅಧಿಕೃತ ಅಭ್ಯರ್ಥಿಯಾಗಿ ಹಾಗೂ ಶಿಕ್ಷಕರ ಕ್ಷೇತ್ರದಿಂದ ಬಿ. ಟಿ.ಶ್ರೀನಿವಾಸ್ ಪಕ್ಷದ ಅಧಿಕೃತ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ನಾನು, ಕೆ.ಎಚ್. ಮುನಿಯಪ್ಪ, ರಾಮಲಿಂಗಾರೆಡ್ಡಿ, ಮಧು ಬಂಗಾರಪ್ಪ, ನಜೀರ್ ಅಹ್ಮದ್ ಪಕ್ಷದ ಅಭ್ಯರ್ಥಿಗಳ ಪರವಾಗಿ ಜತೆಯಲ್ಲಿದ್ದೇವೆ. ನಮ್ಮ ಮಾಹಿತಿ ಪ್ರಕಾರ ಎರಡೂ ಕ್ಷೇತ್ರಗಳಲ್ಲಿ ನಮ್ಮ ಅಭ್ಯರ್ಥಿಗಳು ಗೆಲ್ಲಲ್ಲಿದ್ದಾರೆ. ಈ ಬಾರಿ ಕಾಂಗ್ರೆಸ್ ಪಕ್ಷ ಆರು ತಿಂಗಳು ಮುಂಚಿತವಾಗಿಯೇ ಅಭ್ಯರ್ಥಿಯನ್ನು ಘೋಷಣೆ ಮಾಡಿದ್ದೆವು. ಈಗಾಗಲೇ ಎಲ್ಲ ಮತದಾರರನ್ನು ಭೇಟಿಯಾಗಿ ಮನವಿ ಮಾಡಿಕೊಂಡಿದ್ದಾರೆ. ಇಬ್ಬರೂ ಸಮರ್ಥ ಅಭ್ಯರ್ಥಿಗಳು. ಶ್ರೀನಿವಾಸ್ ಅವರು ಶಿಕ್ಷಕರ ಸಮಸ್ಯೆಗಳನ್ನು ಅರ್ಥ ಮಾಡಿಕೊಂಡು ಅವರ ಧ್ವನಿಯಾಗಿ ಕೆಲಸ ಮಾಡುವ ಸಾಮರ್ಥ್ಯ ಉಳ್ಳವರು. ರಾಮೋಜಿ ಗೌಡ ಅವರೂ ಶಿಕ್ಷಕರಾಗಿ ಕೆಲಸ ಮಾಡಿದ್ದವರು. ಅವರಿಗೂ ಪದವೀಧರರ ಸಮಸ್ಯೆಗಳ ಬಗ್ಗೆ ಅರಿವಿದೆ. ಅವುಗಳನ್ನು ಬಗೆಹರಿಸುವ ಶಕ್ತಿ ಅವರಿಗಿದೆ. ಹಾಗಾಗಿ ಇಬ್ಬರೂ ಅಭ್ಯರ್ಥಿಗಳೂ ಗೆಲ್ಲಲಿದ್ದಾರೆ ಎಂದರು.
ಮಹಾರಾಷ್ಟ್ರ ಮಾದರಿಯಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರ ಪತನ? ಏಕನಾಥ್ ಶಿಂಧೆ ಮಹತ್ವದ ಸುಳಿವು!
ರಾಜ್ಯ ಕಾಂಗ್ರೆಸ್ (Karnataka Congress) ಸರ್ಕಾರದ ಪತನಕ್ಕೆ (Karnataka politics) ಸಮಯ ಸನ್ನಿಹಿತವಾಗಿದೆ. ಈ ಸಂದರ್ಭದಲ್ಲಿ ತನ್ನ ನೆರವನ್ನು ರಾಜ್ಯದ ಬಿಜೆಪಿ (BJP) ನಾಯಕರು ಕೋರಿದ್ದಾರೆ ಎಂಬ ಸುಳಿವನ್ನು ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂಧೆ (Maharashtra CM Eknath Shinde) ಬಿಟ್ಟುಕೊಟ್ಟಿದ್ದಾರೆ. ರಾಜ್ಯದಲ್ಲಿ ನಡೆದ ಒಂದು ಸಭೆಯಲ್ಲಿ ನಡೆದ ಚರ್ಚೆಯ ಬಗ್ಗೆ ಮಾತನಾಡಿ ಅವರು ಈ ಸೂಚನೆ ನೀಡಿದ್ದಾರೆ.
ಅತ್ತ ಬಿಜೆಪಿ ನಾಯಕರಿಂದಲೂ ಪದೇ ಪದೆ ಸರ್ಕಾರ ಬೀಳಿಸುವ ಕುರಿತ ಹೇಳಿಕೆ ಬರುತ್ತಿರುವ ಹಿನ್ನೆಲೆಯಲ್ಲಿ, ಮಹಾರಾಷ್ಟ್ರ ಸಿಎಂ ಹೇಳಿಕೆ ಮಹತ್ವ ಪಡೆದುಕೊಂಡಿದೆ. ಮಹಾರಾಷ್ಟ್ರದ ಸತಾರಾದಲ್ಲಿ ನಡೆದ ಒಂದು ಸಭೆಯಲ್ಲಿ ಕರ್ನಾಟಕ ಸರ್ಕಾರದ ಬಗ್ಗೆ ಅವರು ಮಾತನಾಡುತ್ತಿದ್ದರು. “ಕರ್ನಾಟಕ ಸರ್ಕಾರ ಬೀಳುವುದು ಖಚಿತ” ಎಂದು ಏಕನಾಥ ಶಿಂಧೆ ಹೇಳಿದ್ದಾರೆ. “ಈ ಕುರಿತು ನನ್ನ ಅನುಭವ ಬೇಕು ಅಂತ ಹೇಳಿದ್ದಾರೆ” ಎಂದು ಶಿಂಧೆ ತಿಳಿಸಿದ್ದಾರೆ.
ರಾಜ್ಯದಲ್ಲಿ ನಡೆದ ಒಂದು ಸಭೆಯಲ್ಲಿ ಚರ್ಚೆಯಾದ ಗುಟ್ಟನ್ನು ಅವರು ಈ ಮೂಲಕ ಬಿಟ್ಟುಕೊಟ್ಟಿದ್ದಾರೆ ಎನ್ನಲಾಗಿದೆ. “ನಾನು ಇತ್ತೀಚೆಗೆ ಕರ್ನಾಟಕದ ಒಂದು ಸಭೆಗೆ ಹೋಗಿದ್ದೆ. ಕರ್ನಾಟಕದಲ್ಲಿಯೂ ʼಆಪರೇಶನ್ ನಾಥʼ ನಡೆಸುವುದಿದೆ ಎಂದು ಅಲ್ಲಿನ ನಾಯಕರು ಹೇಳಿದರು. ಹಾಗೆಂದರೇನು ಎಂದು ವಿಚಾರಿಸಿದಾಗ, ಮಹಾರಾಷ್ಟ್ರದಲ್ಲಿ ಹಿಂದಿನ ಸರ್ಕಾರ ಪತನ ಮಾಡಿದಂತೆ ಇಲ್ಲಿಯೂ ಮಾಡುವುದಿದೆ ಎಂದಿದ್ದರು. ಅದಕ್ಕೆ ನಿಮ್ಮ ಅನುಭವ ಅಗತ್ಯ ಎಂದಿದ್ದರುʼʼ ಎಂದು ಶಿಂಧೆ ಹೇಳಿದ್ದಾರೆ. ಇದಕ್ಕಾಗಿ ಚುನಾವಣೆ ಮುಗಿದ ಮೇಲೆ ಮತ್ತೆ ನಾನು ಕರ್ನಾಟಕಕ್ಕೆ ಬರುತ್ತೇನೆ ಎಂದಿದ್ದೇನೆ ಎಂದವರು ಹೇಳಿದ್ದಾರೆ.
ಶುಕ್ರವಾರ ಬೆಂಗಳೂರಿನಲ್ಲಿ ಮಾತನಾಡುತ್ತ ರಾಜ್ಯ ವಿಪಕ್ಷ ನಾಯಕ ಆರ್. ಅಶೋಕ್ ಅವರು, “ಈ ಸರ್ಕಾರಕ್ಕೆ ಆಯುಷ್ಯವಿಲ್ಲ” ಎಂದಿದ್ದರು. ಅದಕ್ಕೂ ಮೊದಲು ಬೆಳಗಾವಿಯಲ್ಲಿ “ಈ ಸರ್ಕಾರ ಲೋಕಸಭಾ ಚುನಾವಣೆ ಬಳಿಕ ಬೀಳುವುದು ಖಚಿತ” ಎಂದು ರಮೇಶ್ ಜಾರಕಿಹೊಳಿ ಹೇಳಿದ್ದರು. ಇದೀಗ ಶಿಂಧೆ ಹೇಳಿಕೆ ಇನ್ನಷ್ಟು ಕುತೂಹಲ ಮೂಡಿಸಿದೆ.
ಆದರೆ, ಈ ಹೇಳಿಕೆಗಳ ಅಸಲಿಯತ್ತಿನ ಬಗ್ಗೆ ಅನುಮಾನ ಮೂಡುವಂತಿದೆ. ಸದ್ಯ ಕಾಂಗ್ರೆಸ್ ವಿಧಾನಸಭೆಯಲ್ಲಿ 136 ಸ್ಥಾನ ಹೊಂದಿದ್ದು, ಬಹುಮತ ಹೊಂದಿದೆ. ಒಟ್ಟು 224 ಶಾಸಕ ಸ್ಥಾನಗಳಲ್ಲಿ ಬಿಜೆಪಿ ಕೇವಲ 66 ಸ್ಥಾನ ಹೊಂದಿದ್ದು, ಜೆಡಿಎಸ್ 19 ಶಾಸಕ ಬಲ ಹೊಂದಿದೆ. ಎರಡೂ ಪಕ್ಷಗಳು ಒಟ್ಟಾದರೂ 85 ಸ್ಥಾನಗಳು ಆಗುತ್ತವೆ. ಇದು ಬಹುಮತದ ಹತ್ತಿರಕ್ಕೂ ಬರುವುದಿಲ್ಲ. ಹೀಗಿರುವಾಗ ಕಾಂಗ್ರೆಸ್ ಸರ್ಕಾರ ಬೀಳಿಸುವುದು ಅಷ್ಟೊಂದು ಸುಲಭವಲ್ಲ.
ಹಾಗಾದರೆ ಇದು ಕೇವಲ ರಾಜಕೀಯ ಹೇಳಿಕೆಯಾ? ಇಲ್ಲದಿದ್ದರೆ 45 ಶಾಸಕರನ್ನು ಸೆಳೆದು ಸರ್ಕಾರ ಪತನ ಮಾಡುವುದು ಅಷ್ಟೊಂದು ಸುಲಭವಾ? ಅತೃಪ್ತ ಶಾಸಕರನ್ನು ಸೆಳೆದು ಸರ್ಕಾರ ಬೀಳಿಸುವ ಸರ್ಕಸ್ ಶುರು ಮಾಡುತ್ತಾರಾ? ಸಿಎಂ ಆಗುವ ಕನಸು ಕಾಣುತ್ತಿರುವ ನಾಯಕನಿಗೆ ಬಿಜೆಪಿ ಗಾಳ ಹಾಕಲಿದೆಯಾ? ರಾಜ್ಯದಲ್ಲೂ ಒಬ್ಬ ಶಿಂಧೆಯನ್ನು ಕಾಂಗ್ರೆಸ್‌ನಲ್ಲಿ ಬಿಜೆಪಿ ಹುಟ್ಟು ಹಾಕಲಿದೆಯಾ? ಹಾಗಿದ್ದರೆ ಅಂಥವರು ಯಾರು? ಲೋಕಸಭಾ ಚುನಾವಣೆಯಲ್ಲಿ ಮತ್ತೆ ಬಿಜೆಪಿ ಗೆದ್ದು ದೆಹಲಿಯಲ್ಲಿ ಅಧಿಕಾರ ಹಿಡಿದರೆ ರಾಜ್ಯದಲ್ಲೂ ಕಾಂಗ್ರೆಸ್‌ನೊಳಗೆ ಬಂಡಾಯ ಖಚಿತವಾ? ರಾಜ್ಯ ಕಾಂಗ್ರೆಸ್‌ನಲ್ಲಿ ಶಿಂಧೆಗಾಗಿ ಹುಡುಕಾಟ ನಡೆದಿದೆಯಾ? ಮುಂತಾದ ಪ್ರಶ್ನೆಗಳು ಈಗ ಎದ್ದಿವೆ.
ಮಹಾರಾಷ್ಟ್ರದಲ್ಲಿ ಬಿಜೆಪಿ ಹಾಗೂ ಶಿವಸೇನೆ 2019ರ ಚುನಾವಣೆಯಲ್ಲಿ ಮೈತ್ರಿ ಮಾಡಿಕೊಂಡಿದ್ದವು. ಬಿಜೆಪಿ 105 ಸ್ಥಾನಗಳನ್ನು ಹಾಗೂ ಶಿವಸೇನೆ 56 ಸ್ಥಾನಗಳನ್ನು ಗೆದ್ದಿದ್ದವು. ಸರ್ಕಾರ ರಚನೆಯ ಸಂದರ್ಭದಲ್ಲಿ ಬಿರುಕು ಉಂಟಾಗಿತ್ತು. ಬಳಿಕ ಶಿವಸೇನೆ, ಎನ್‌ಸಿಪಿ ಹಾಗೂ ಕಾಂಗ್ರೆಸ್ ಸೇರಿ ಸರ್ಕಾರ ರಚಿಸಿದ್ದವು. ನಂತರ ಶಿವಸೇನೆ ನಾಯಕ ಏಕನಾಥ ಶಿಂಧೆ ಮೂರನೇ ಎರಡರಷ್ಟು ಶಾಸಕರ ಜೊತೆಗೆ ಹೊರಬಿದ್ದು ಬಿಜೆಪಿ ಜತೆ ಮೈತ್ರಿ ಮಾಡಿಕೊಂಡರು. ಇದರಿಂದ ಮಹಾ ವಿಕಾಸ್ ಅಘಾಡಿ ಸರ್ಕಾರ ಪತನವಾಗಿ ಬಿಜೆಪಿ- ಶಿವಸೇನೆ ಸರ್ಕಾರ ಅಸ್ತಿತ್ವಕ್ಕೆ ಬಂದಿತ್ತು. ಎನ್‌ಸಿಪಿಯ ಅಜಿತ್ ಪವಾರ್ ಕೂಡ ಇದಕ್ಕೆ ಕೈ ಜೋಡಿಸಿದ್ದರು.