Site icon Vistara News

Karnataka Politics : ಪರಮೇಶ್ವರ್‌ ಮುಖ್ಯಮಂತ್ರಿ ಆಗಬೇಕು; ನಾನು ಎಐಸಿಸಿಗೂ ಹೆದರಲ್ಲವೆಂದ ಕೆ.ಎನ್.‌ ರಾಜಣ್ಣ

CM siddaramaiah Dr G parameshwar and KN Rajanna

ತುಮಕೂರು: ಹಾಲಿ ಗೃಹ ಸಚಿವ ಡಾ. ಜಿ. ಪರಮೇಶ್ವರ್ (Home Minister Dr G Parameshwara) ಅವರಿಗೆ ಸಿಎಂ ಆಗುವ ಅವಕಾಶವಿದೆ. ಸಿದ್ದರಾಮಯ್ಯ ಸಿಎಂ ಆಗಿ ಇರುವವರೆಗೆ ನಾವೆಲ್ಲ ಸಿದ್ದರಾಮಯ್ಯ ಪರ.‌ ಸಿದ್ದರಾಮಯ್ಯ (CM Siddaramaiah) ಹೊರತು ಪಡಿಸಿದರೆ, ಪರಮೇಶ್ವರ್ ಅವರೇ ಸಿಎಂ ಆಗಬೇಕು ಅಂತ ಬಯಸುತ್ತೇವೆ. ಏನೂ ಮಾತನಾಡಬಾರದು ಅಂತ ಎಐಸಿಸಿಯವರು ನಮಗೆ ಹೇಳಿದ್ದಾರೆ. ನಾನು ಯಾರಿಗೂ ಹೆದರಲ್ಲ, ಎಐಸಿಸಿಗೂ ಹೆದರಲಾರೆ ಎಂದು ಸಹಕಾರಿ ಸಚಿವ ಕೆ.ಎನ್. ರಾಜಣ್ಣ (Co operation Minister KN Rajanna) ಹೇಳಿಕೆ ನೀಡುವ ಮೂಲಕ ರಾಜ್ಯ ರಾಜಕೀಯದಲ್ಲಿ (Karnataka Politics) ಮತ್ತೊಂದು ಸಂಚಲನ ಮೂಡಿಸಿದ್ದಾರೆ.

ನೂತನ ಪೊಲೀಸ್ ಸಮುಚ್ಛಯ ಉದ್ಘಾಟನೆ ಸಮಾರಂಭದಲ್ಲಿ ಮಾತನಾಡಿದ ಸಚಿವ ಕೆ.ಎನ್ ರಾಜಣ್ಣ, ಪರಮೇಶ್ವರ್ ಈಗ ಹೋಮ್ ಮಿನಿಸ್ಟರ್ ಇದ್ದಾರೆ. ಮುಂದಿನ ದಿನಗಳಲ್ಲಿ ಅವರು ಏನು ಬೇಕಾದರೂ ಆಗಬಹುದು. ಡಾಕ್ಟರೇ ನಿಮಗೆ ಅದೃಷ್ಟ ಇದೆ, ನಡೆಸುತ್ತೀರಿ ಅಂತ ಹಿಂದೊಮ್ಮೆ ಹೇಳಿದ್ದೆ. ಯಾಕಂದ್ರೆ ಅವರಿಗೆ ಅದೃಷ್ಟ ಇದೆ ಅಂತ ನಾನು ಭಾವಿಸಿದ್ದೇನೆ. ನಮ್ಮ ಜಿಲ್ಲೆಯಿಂದ ಒಬ್ಬ ಮುಖ್ಯಮಂತ್ರಿ ಆಗುತ್ತಾರೆ ಅಂತಾದರೆ ನಾವೆಲ್ಲ ಸಂತೋಷ ಪಡುತ್ತೇವೆ. ನಾವೆಲ್ಲ ಮುಖ್ಯಮಂತ್ರಿ ಆದಂತೆ ಎಂದು ಭಾವಿಸುತ್ತೇನೆ ಎಂದು ಹೇಳಿದರು.

ನಾನು ಯಾರಿಗೂ ಹೆದರಲ್ಲ

ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಗಾದಿಯಲ್ಲಿ ಇರುವವರೆಗೆ ನಾವೆಲ್ಲರೂ ಸಿದ್ದರಾಮಯ್ಯ ಪರ. ಇರುತ್ತೇವೆ. ಅಂದರೆ, ಪರಮೇಶ್ವರ್ ಆದಿಯಾಗಿ ನಾವೆಲ್ಲರೂ ಸಿದ್ದರಾಮಯ್ಯ ಅವರ ಪರವಿರುತ್ತೇವೆ. ಸಿದ್ದರಾಮಯ್ಯ ಹೊರತು ಪಡಿಸಿದರೆ, ಪರಮೇಶ್ವರ್ ಸಿಎಂ ಆಗಬೇಕು ಅಂತ ಬಯಸುತ್ತೇವೆ. ಎಐಸಿಸಿಯವರು ನಮಗೆ ಹೇಳಿದ್ದಾರೆ ಏನು ಮಾತನಾಡಬಾರದು ಅಂತ. ಆದರೆ, ನಾನು ಮತ್ತು ಪರಮೇಶ್ವರ್ ಒಟ್ಟಿಗೆ ಸಭೆಯಲ್ಲಿ ಕಾಣಿಸಿಕೊಂಡು ತುಂಬಾ ದಿನವಾಗಿತ್ತು.‌ ಹಾಗಾಗಿ ನನ್ನ ಮನಸಿನ ಭಾವನೆಯನ್ನು ಹೇಳಿದ್ದೇನೆ. ನಾನು ಯಾರಿಗೂ ಹೆದರಲ್ಲ, ಎಐಸಿಸಿಗೂ ಕೂಡ ಎಂದು ಕೆ.ಎನ್.‌ ರಾಜಣ್ಣ ಹೇಳಿದರು.

ಹೈಕಮಾಂಡ್‌ ಕೇಳಿದರೆ ಹೀಗೆ ಹೇಳುವೆ

ಎಐಸಿಸಿ ಕೇಳಿದರೆ, ಈಗ ಮಾತನಾಡಿದ್ದು ಆಗಿಹೋಯಿತು, ಮುಂದೆ ಮಾತನಾಡಲ್ಲ ಅಂತ ಹೇಳುತ್ತೇವೆ. ನಾನಂತೂ ಮುಂದೆ ಚುನಾವಣೆಗೆ ಸ್ಪರ್ಧೆ ಮಾಡುವುದಿಲ್ಲ ಎಂದು ಕೆ.ಎನ್‌. ರಾಜಣ್ಣ ಹೇಳಿದರು.

ಮುಂದಿನ 5 ವರ್ಷವೂ ನಾನೇ ಸಿಎಂ ಎಂದು ಹೇಳಿದ್ದ ಸಿದ್ದರಾಮಯ್ಯ!

ಹೊಸಪೇಟೆಯಲ್ಲಿ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದ ಸಿಎಂ ಸಿದ್ದರಾಮಯ್ಯ, ಐದು ವರ್ಷ ನಮ್ಮದೇ ಸರ್ಕಾರ ಇರುತ್ತದೆ. ನಾನು ಈಗ ಮುಖ್ಯಮಂತ್ರಿಯಾಗಿದ್ದೇನೆ ಎಂದು ಉತ್ತರಿಸಿದ್ದರು.

ಆಗ ಮಾಧ್ಯಮದವರು, ಐದು ವರ್ಷ ನೀವೇ ಸಿಎಂ ಆಗಿರುತ್ತೀರಾ ಎಂದು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಸಿಎಂ ಸಿದ್ದರಾಮಯ್ಯ, ಹೌದು, ನಾನೇ ಐದು ವರ್ಷ ಸಿಎಂ ಆಗಿರುತ್ತೇನೆ ಎಂದು ಗಟ್ಟಿ ಧ್ವನಿಯಲ್ಲಿ ಹೇಳಿದ್ದರು.

ಡಿಸಿಎಂ ಹುದ್ದೆ ಸೃಷ್ಟಿ ಬಗ್ಗೆ ಪ್ರತಿಕ್ರಿಯೆ ನೀಡಿದ ಸಿಎಂ ಸಿದ್ದರಾಮಯ್ಯ, ಡಿಸಿಎಂ ವಿಚಾರ ತೀರ್ಮಾನ ಮಾಡೋದು ಹೈಕಮಾಂಡ್‌ ಆಗಿದೆ. ನಮ್ಮದು ನ್ಯಾಷನಲ್ ಪಾರ್ಟಿ. ಏನೇ ತೀರ್ಮಾನ ಆದರೂ ಹೈಕಮಾಂಡ್ ಜತೆ ಚರ್ಚೆ ಮಾಡಿಯೇ ಆಗುತ್ತದೆ ಎಂದು ತಿಳಿಸಿದ್ದರು.

ಹೈಕಮಾಂಡ್‌ ಅಭಯ ಸಿಕ್ಕಿತೇ?

ಸಿಎಂ ಸಿದ್ದರಾಮಯ್ಯ ಅವರು ಇನ್ನೂ ಐದು ವರ್ಷ ತಾವೇ ಮುಖ್ಯಮಂತ್ರಿಯಾಗಿ ಇರುವುದಾಗಿ ನೀಡಿರುವ ಹೇಳಿಕೆ ಬಗ್ಗೆ ಈಗ ಸಾಕಷ್ಟು ರಾಜಕೀಯ ಲೆಕ್ಕಾಚಾರಗಳು ಪ್ರಾರಂಭವಾಗಿವೆ. ಒಂದು ದಿನದ ಹಿಂದಷ್ಟೇ ರಾಜ್ಯಕ್ಕೆ ಎಐಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಕೆ.ಸಿ. ವೇಣುಗೋಪಾಲ್‌ ಹಾಗೂ ರಣದೀಪ್‌ ಸಿಂಗ್‌ ಸುರ್ಜೇವಾಲ ಭೇಟಿ ಕೊಟ್ಟಿದ್ದಾರೆ. ಈ ವೇಳೆ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್‌ ನಡುವೆ ಸಂದಾನ ಮಾತುಕತೆಯನ್ನೂ ನಡೆಸಿದ್ದಾರೆ. ಈ ಎಲ್ಲದರ ಜತೆಗೆ ತಮ್ಮ ತಮ್ಮ ಬಣದ ಸಚಿವರು, ಶಾಸಕರಿಗೆ ಅಧಿಕಾರ ಹಂಚಿಕೆ ಸೇರಿದಂತೆ ಮತ್ತಿತರ ವಿಷಯಗಳ ಬಗ್ಗೆ ಏನೂ ಮಾತನಾಡದಂತೆ ತಾಕೀತು ಮಾಡುವಂತೆ ಹೇಳಿದ್ದಲ್ಲದೆ, ಸುರ್ಜೇವಾಲ ಅವರು ನೇರವಾಗಿ ಖಡಕ್‌ ಎಚ್ಚರಿಕೆಯನ್ನೂ ನೀಡಿದ್ದರು. ಅಲ್ಲದೆ, ಇಂತಹ ವಿಚಾರಗಳ ಬಗ್ಗೆ ಹೇಳುವುದಿದ್ದರೆ ಅದು ಸಿಎಂ ಸಿದ್ದರಾಮಯ್ಯ ಅಥವಾ ಡಿ.ಕೆ. ಶಿವಕುಮಾರ್‌ ಮಾತ್ರವೇ ಆಗಿರಬೇಕು ಎಂದು ಸಹ ಹೇಳಿದ್ದರು. ಈ ಮಧ್ಯೆ ಈಗ ಸ್ವತಃ ಸಿಎಂ ಸಿದ್ದರಾಮಯ್ಯ ಅವರು ತಾವೇ ಪೂರ್ಣಾವಧಿ ಸಿಎಂ ಎಂದು ಹೇಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಈ ಹೇಳಿಕೆ ಹಿಂದೆ ಇವರಿಗೆ ಹೈಕಮಾಂಡ್‌ ಅಭಯ ದೊರೆತಿದೆಯೇ ಎಂಬ ಅನುಮಾನವೂ ಮೂಡಿದೆ.

ಲೋಕಸಭಾ ಚುನಾವಣೆ ಸಮೀಪ ಬಂದಿದೆ. ಈ ಹೊತ್ತಿನಲ್ಲಿ ಸಿಎಂ ಬದಲಾವಣೆ ಚರ್ಚೆ ನಡೆದರೆ ಪಕ್ಷದ ವರ್ಚಸ್ಸಿಗೆ ಧಕ್ಕೆ ಆಗುತ್ತದೆ. ಹೀಗಾಗಿ ತಾವೇ ಪೂರ್ಣಾವಧಿ ಸಿಎಂ ಸಿದ್ದರಾಮಯ್ಯ ಹೇಳಿರಬಹುದು ಎಂದೂ ಅಂದಾಜಿಸಲಾಗುತ್ತಿದೆ.

ಇದನ್ನೂ ಓದಿ: CM Siddaramaiah : ಬೇಡ ಬೇಡ ಎನ್ನುತ್ತಲೇ ಬಂದು ಕುಣಿದ ಸಿದ್ದರಾಮಯ್ಯ; ಡ್ಯಾನ್ಸ್‌ ಮಾಡಲು ಕಾರಣ ಇವರು!

ಡಿ.ಕೆ. ಶಿವಕುಮಾರ್‌ ಕಥೆ ಏನು?

ಈಗ ಎಲ್ಲರ ಚಿತ್ತವು ಡಿ.ಕೆ. ಶಿವಕುಮಾರ್‌ ಅವರತ್ತ ನೆಟ್ಟಿದೆ. ಅವರು ಚುನಾವಣೆಗೆ ಮೊದಲೇ ಪ್ರಚಾರ ಕಾರ್ಯಕ್ರಮದಲ್ಲಿ ತಾವು ಮುಖ್ಯಮಂತ್ರಿಯಾಗಲು ಇದು ಒಳ್ಳೆಯ ಸಮಯ ಹೀಗಾಗಿ ತಮ್ಮ ಸಮುದಾಯದವರೆಲ್ಲರೂ ನನ್ನನ್ನು ಬೆಂಬಲಿಸಿ ಎಂದು ಕೋರಿದ್ದರು. ಈ ಮೂಲಕ ಸಿಎಂ ಹುದ್ದೆ ಏರಲು ಉತ್ಸುಕರಾಗಿದ್ದರು. ಅಲ್ಲದೆ, ಕಾಂಗ್ರೆಸ್‌ ಅಧಿಕಾರಕ್ಕೆ ಬಂದ ಮೊದಲು ಸಚಿವ ಎಂ.ಬಿ. ಪಾಟೀಲ್‌ ಸೇರಿ ಹಲವರು ಪೂರ್ಣಾವಧಿ ಸಿಎಂ ಬಗ್ಗೆ ಪ್ರಸ್ತಾಪ ಮಾಡಿದಾಗ ಡಿಕೆ ಬ್ರದರ್ಸ್‌ ಕಿಡಿಕಾರಿದ್ದರು. ಆದರೆ, ಎರಡು ದಿನಗಳ ಹಿಂದೆ ಕೆಪಿಸಿಸಿ ಕಚೇರಿಯಲ್ಲಿ ಕೆಲವರ ಪಕ್ಷ ಸೇರ್ಪಡೆ ಮಾಡಿಕೊಳ್ಳುವಾಗ ಮಾತನಾಡಿದ್ದ ಡಿ.ಕೆ. ಶಿವಕುಮಾರ್‌, ನನಗೆ ಅಧಿಕಾರ ಸಿಗುತ್ತದೆಯೋ? ಸಿಗುವುದಿಲ್ಲವೋ? ಅದರ ಬಗ್ಗೆ ಕಾರ್ಯಕರ್ತರು ತೆಲೆ ಕೆಡಿಸಿಕೊಳ್ಳುವುದು ಬೇಡ. ಎಲ್ಲರೂ ಒಟ್ಟಾಗಿ ಪಕ್ಷಕ್ಕಾಗಿ ದುಡಿಯೋಣ ಎಂದು ಹೇಳಿಕೆ ನೀಡಿದ್ದರು. ಆದರೆ, ಈಗ ಸಿಎಂ ಸಿದ್ದರಾಮಯ್ಯ ಅವರ ಈ ಹೇಳಿಕೆಯನ್ನು ಡಿ.ಕೆ. ಶಿವಕುಮಾರ್‌ ಮತ್ತು ಬಣದವರು ಯಾವ ರೀತಿ ತೆಗೆದುಕೊಳ್ಳುತ್ತಾರೆ ಎಂಬುದು ಮುಂದಿನ ರಾಜಕೀಯ ಬೆಳವಣಿಗೆಯನ್ನು ನಿರ್ಧರಿಸುತ್ತದೆ.

Exit mobile version