ಬೆಂಗಳೂರು: ರಾಜ್ಯದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷರಾಗಿ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ (BS Yediyurappa) ಅವರ ಪುತ್ರ ಬಿ.ವೈ. ವಿಜಯೇಂದ್ರ (BY Vijayendra) ಅವರನ್ನು ಆಯ್ಕೆ ಮಾಡಿದ್ದಕ್ಕೆ ನಾನು ಪ್ರಧಾನಿ ನರೇಂದ್ರ ಮೋದಿ (Prime Minister Narendra Modi) ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಈಗ ಮೋದಿ ರಾಜಕೀಯದಲ್ಲಿ ನಾಯಕರ ಮಕ್ಕಳ ನಾಯಕತ್ವವನ್ನು ಸೆಟ್ ಮಾಡಿದ್ದಾರೆ. ಆ ಮೂಲಕ ನೆಪೋಟಿಸಂ ಮತ್ತು ಫೇವರಿಟಿಸಂ (Nepotism and Favouritism) ಬಗ್ಗೆ ಮಾತನಾಡುವುದನ್ನು ಕಳೆದುಕೊಂಡಿದ್ದಾರೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ, ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ (Randeep Singh Surjewala) ಹೇಳಿದ್ದಾರೆ. ಈ ಮೂಲಕ ರಾಜ್ಯ ರಾಜಕೀಯದಲ್ಲಿ (Karnataka Politics) ಕುಟುಂಬ ರಾಜಕಾರಣ ಪ್ರಾರಂಭವಾಗಿದೆ ಎಂದು ದೂರಿದ್ದಾರೆ.
ನವ ದೆಹಲಿಯಿಂದ ಬೆಂಗಳೂರಿಗೆ ಆಗಮಿಸಿರುವ ರಣದೀಪ್ ಸಿಂಗ್ ಸುರ್ಜೇವಾಲ ದೇವನಹಳ್ಳಿ ಏರ್‌ಪೋರ್ಟ್ ಎದುರು ಮಾಧ್ಯಮದವರೊಂದಿಗೆ ಮಾತನಾಡಿ, ಬಿಜೆಪಿಯವರು ರಾಜ್ಯಾಧ್ಯಕ್ಷ ಸ್ಥಾನಕ್ಕೆ ನಾಯಕನನ್ನು ಆಯ್ಕೆ ಮಾಡದೆ ಬಿ.ಎಸ್. ಯಡಿಯೂರಪ್ಪ ಅವರ ಮಗನನ್ನು ಆಯ್ಕೆ ಮಾಡಿದ್ದಾರೆ. ಆದರೆ, ಇದಕ್ಕಾಗಿ ನಾನು ನರೇಂದ್ರ ಮೋದಿ ಅವರನ್ನು ಅಭಿನಂದಿಸುತ್ತೇನೆ ಎಂದು ಹೇಳಿದರು.
ಬಿ.ಎಸ್. ಯಡಿಯೂರಪ್ಪ ಅವರ ಪುತ್ರನನ್ನು ಆಯ್ಕೆ ಮಾಡಿರುವ ಬಿಜೆಪಿ ಹೈಕಮಾಂಡ್ ನಿರ್ಧಾರದಿಂದ ಆ ಪಕ್ಷದ ಹಿರಿಯ ನಾಯಕರು ಮುನಿಸಿಕೊಂಡಿದ್ದಾರೆ. ಬಿಜೆಪಿಯಲ್ಲಿ ಯುವಕರು ಎಸ್‌ಸಿ, ಎಸ್‌ಟಿ ಹಿಂದುಳಿದ ವರ್ಗಗಳ ನಾಯಕರಿಗೆ ಸ್ಥಾನವಿಲ್ಲ ಎಂಬುದನ್ನು ಈ ಮೂಲಕ ತೋರಿಸಲಾಗಿದೆ ಎಂದು ರಣದೀಪ್ ಸುರ್ಜೇವಾಲ ತಿಳಿಸಿದ್ದಾರೆ.
ಲೋಕಸಭೆ ಸೇರಿ ಹಲವು ವಿಚಾರಗಳ ಬಗ್ಗೆ ಚರ್ಚೆ
ಹಲವು ವಿಚಾರಗಳ ಬಗ್ಗೆ ಚರ್ಚೆ ಮಾಡಲು ಬೆಂಗಳೂರಿಗೆ ಬಂದಿದ್ದೇನೆ. ಕಳೆದ ಭಾರಿ ನಡೆದ ವಿಚಾರಗಳ ಚರ್ಚೆಯು ಈ ಬಾರಿ ಸಹ ಮುಂದುವರಿಯುತ್ತದೆ. ಪ್ರಮುಖವಾಗಿ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಹೆಚ್ಚಿನ ಮತವನ್ನು ಸೆಳೆಯಬೇಕಿದೆ. ತೆಲಂಗಾಣ, ಮಧ್ಯಪ್ರದೇಶ, ರಾಜಸ್ಥಾನ, ಮಿಜೋರಾಂ, ಛತ್ತಿಸ್‌ಗಢಗಳಲ್ಲಿ ನಾನು ಉಸ್ತವಾರಿಯಾಗಿದ್ದೇನೆ. ಈ ಎಲ್ಲ ಕಡೆ ಇತಿಹಾಸ ಮರುಕಳಿಸಲಿದೆ. ರಾಜ್ಯದ ರೀತಿ ನಮಗೆ ಬೇರೆ ಕಡೆಯೂ ಉತ್ತಮ ಪ್ರತಿಕ್ರಿಯೆ ಸಿಗಲಿದೆ. ಕಾಂಗ್ರೆಸ್ ಇತರೆ ಪಾರ್ಟಿಗಳೊಂದಿಗೆ ಮೈತ್ರಿ ಮಾಡಿಕೊಂಡಿರುವುದು ಹೊಸ ಇತಿಹಾಸವನ್ನು ಸೃಷ್ಟಿಸಲಿದೆ. ಇದು 2024ರಲ್ಲಿ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಲು ಆರಂಭವಾಗಲಿದೆ. ಕರ್ನಾಟಕ ತುಂಬಾ ಮುಖ್ಯವಾದ ರಾಜ್ಯವಾಗಿದೆ. ಹೊಸ ಇತಿಹಾಸ ಸೃಷ್ಟಿಸಲು ಪ್ರಮುಖ ಕೇಂದ್ರ ಇದಾಗಿದೆ. ಹೀಗಾಗಿ ಲೋಕಸಭಾ ಚುನಾವಣಾ ಸ್ಥಾನಗಳ ಬಗ್ಗೆಯೂ ಇಂದು ಚರ್ಚೆ ನಡೆಸುತ್ತೇವೆ ಎಂದು ರಣದೀಪ್ ಸಿಂಗ್ ಸುರ್ಜೇವಾಲ ಹೇಳಿದರು.
ಇದನ್ನೂ ಓದಿ: Asset Digitization : ಬಿಬಿಎಂಪಿ ಆಸ್ತಿ ಡಿಜಿಟಲೀಕರಣ ಶುರು; ರೆಡಿ ಇರಲಿ ಆಸ್ತಿ ತೆರಿಗೆ ರಶೀದಿ, ವಿದ್ಯುತ್ ಬಿಲ್!
ನಿಗಮ- ಮಂಡಳಿ ಚರ್ಚೆ
ಮಂಗಳವಾರ (ನ. 21) ಮಧ್ಯಾಹ್ನ ಮೂರು ಗಂಟೆಗೆ ಸಿಎಂ, ಡಿಸಿಎಂ ಜತೆಗೆ ರಣದೀಪ್ ಸಿಂಗ್ ಸುರ್ಜೇವಾಲ ಸಭೆ ನಡೆಸಲಿದ್ದಾರೆ. ನಿಗಮ – ಮಂಡಳಿ ಪಟ್ಟಿ ಬಿಡುಗಡೆ ಬಗೆಗ ಸಿಎಂ, ಡಿಸಿಎಂ ನಡುವೆ ಒಮ್ಮತ ಮೂಡಿಸುವ ಕಸರತ್ತು ನಡೆಯಲಿದೆ. ಶಾಸಕರಿಗೆ ಮಾತ್ರ ನಿಗಮ ಮಂಡಳಿಗಳಿಗೆ ಸ್ಥಾನ ನೀಡಬೇಕು ಎಂಬ ಸಿಎಂ ಸಿದ್ದರಾಮಯ್ಯ ಅವರ ಮಾತು ಗೆಲ್ಲಲಿದೆಯೇ ಅಥವಾ ಕಾರ್ಯಕರ್ತರಿಗೂ ಸ್ಥಾನ ಸಿಗಬೇಕು ಎಂಬ ಡಿಸಿಎಂ ಡಿ.ಕೆ. ಶಿವಕುಮಾರ್ ಅವರ ಆಶಯ ಗೆಲ್ಲಲಿದೆಯೇ ಎಂಬುದು ಸದ್ಯದ ಕುತೂಹಲವಾಗಿದೆ.