ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರವನ್ನು ಪರ್ಸೆಂಟೇಜ್ ಪಟಾಲಂ ಎಂದು ಚಾಟಿ ಬೀಸಿರುವ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ (Former Chief Minister HD Kumaraswamy), ಡಿಸಿಎಂ ಡಿ.ಕೆ. ಶಿವಕುಮಾರ್ (Deputy CM DK Shivakumar) ಮೇಲೆ ವಾಗ್ದಾಳಿ ನಡೆಸಿದ್ದಾರೆ. “ಕುಂಬಳಕಾಯಿ ಕಳ್ಳ ಎಂದರೆ ಹೆಗಲು ಮುಟ್ಟಿ ನೋಡಿಕೊಂಡನಂತೆ”, ಕಳ್ಳನ ಮನಸ್ಸು ಹುಳ್ಳುಳ್ಳಗೆ” ಎನ್ನುವ ಈ ಗಾದೆ ಮಾತುಗಳು ಯಾರಿಗೆ ಅನ್ವಯ ಆಗುತ್ತವೋ ಇಲ್ಲವೋ ಗೊತ್ತಿಲ್ಲ. ಆದರೆ, ಡಿ.ಕೆ. ಸಹೋದರರಿಗಂತೂ ಕರಾರುವಕ್ಕಾಗಿ ಅನ್ವಯಿಸುತ್ತವೆ ಎಂದು ಟಾಂಗ್ ನೀಡಿದ್ದಾರೆ. ಈ ಮೂಲಕ ರಾಜ್ಯ ರಾಜಕೀಯದಲ್ಲಿ (Karnataka Politics) ಮತ್ತೆ ಪರ್ಸೆಂಟೇಜ್ ಗಲಾಟೆ ಶುರುವಾಗಿದೆ.
ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಸೋಷಿಯಲ್ ಮೀಡಿಯಾ ಎಕ್ಸ್‌ನಲ್ಲಿ ಪೋಸ್ಟ್‌ವೊಂದನ್ನು ಹಾಕಿದ್ದು, ಕುಮಾರಸ್ವಾಮಿ ಅವರೇನು ಆದಾಯ ತೆರಿಗೆ ಇಲಾಖೆಯ ಪ್ರತಿನಿಧಿಯೇ ಎಂಬ ಡಿಸಿಎಂ ಡಿ.ಕೆ. ಶಿವಕುಮಾರ್ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದರು.
“ಕುಮಾರಸ್ವಾಮಿ ಅವರು ಆದಾಯ ತೆರಿಗೆ ಇಲಾಖೆಯ ಪ್ರತಿನಿಧಿಯೇನೂ ಅಲ್ಲ” ಎಂದಿರುವ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಹೇಳಿಕೆ ಹತಾಶೆಯ ಹಳಹಳಿಕೆಯಷ್ಟೇ. ಗುತ್ತಿಗೆದಾರನ ಮನೆಯಲ್ಲಿ ಸಿಕ್ಕಿದ ಇಡುಗಂಟು ಡಿಕೆಶಿ ಅವರದ್ದು ಎಂದು ನಾನು ಹೇಳಿದ್ದೇನೆಯೇ? ನಗದು ಅಭಿವೃದ್ಧಿ ಇಲಾಖೆ ಎಂದರೆ ಅವರದ್ದೇನಾ? ಅವರು ತಿಹಾರ್ ಜೈಲಿನ ವಿಷಯವನ್ನೂ ಪ್ರಸ್ತಾಪ ಮಾಡಿದ್ದಾರೆ, ಸರಿ. ಆದರೆ, ತಿಹಾರಿಗೆ ಹೋಗುವ ಭಯ ಅಥವಾ ಗ್ಯಾರಂಟಿ ಸ್ವತಃ ಅವರಿಗೇ ಇದೆ ಎನ್ನುವುದು ನನ್ನ ಸ್ಪಷ್ಟ ಅನುಮಾನ. ಇಲ್ಲದಿದ್ದರೆ ಅವರು ಇಷ್ಟು ತೀವ್ರವಾಗಿ ನನ್ನ ಹೇಳಿಕೆಯ ಬಗ್ಗೆ ಪ್ರತಿಕ್ರಿಯೆ ನೀಡುವ ಅಗತ್ಯವಿರಲಿಲ್ಲ. ಅಂದಹಾಗೆ, ನಾನು ಐಟಿ ಪ್ರತಿನಿಧಿಯೂ ಅಲ್ಲ, ಈಡಿ ಉದ್ಯೋಗಿಯೂ ಅಲ್ಲ. ಒಬ್ಬ ಹುಲು ಮಾನವನಷ್ಟೇ.. ಕೆಲವರ ಭ್ರಮೆಗಳಿಗೆ ನಾನೇನು ಮಾಡಲಿ? ಎಂದು ಎಚ್.ಡಿ. ಕುಮಾರಸ್ವಾಮಿ ಕೇಳಿದ್ದಾರೆ.
ಸತ್ಯ ಮುಚ್ಚಿಟ್ಟರೆ ಶಿವ ಮೆಚ್ಟುತ್ತಾನೆಯೇ?
40% ಕಮಿಷನ್ ಎಂದು ಹೇಳಿಕೊಂಡು ಅಧಿಕಾರಕ್ಕೆ ಬಂದವರು ಇವರಲ್ಲವೇ? ಆದರೆ, ಇವರ ಪರ್ಸೆಂಟೇಜ್ ಬಗ್ಗೆಯೇ ಹೇಳಿದರೆ ಕೋಪ ಬರುತ್ತದೆ. ಗುತ್ತಿಗೆದಾರನ ಮನೆಯಲ್ಲಿ ಸಿಕ್ಕಿದ ಆ ಕಪ್ಪು ಹಣ ಯಾರದ್ದು? ಆ ಗುತ್ತಿಗೆದಾರ ಯಾರ ಪರಮಾಪ್ತ ಎನ್ನುವುದು ಜಗಜ್ಜಾಹೀರು. ಹೀಗಿದ್ದ ಮೇಲೆ ಸತ್ಯ ಮುಚ್ಚಿಟ್ಟರೆ ಶಿವ ಮೆಚ್ಟುತ್ತಾನೆಯೇ? ಎಂದು ಎಚ್.ಡಿ. ಕುಮಾರಸ್ವಾಮಿ ವ್ಯಂಗ್ಯವಾಗಿದರು.
ಇದನ್ನೂ ಓದಿ: Brand Bangalore : ಪಕ್ಕದ ಜಿಲ್ಲೆಗಳ ಜನರ ಸಮಾಧಿ ಮೇಲೆ ಬ್ರ್ಯಾಂಡ್ ಬೆಂಗಳೂರು; ಕಸ ಡಂಪಿಂಗ್‌ಗೆ ಎಚ್‌ಡಿಕೆ ಕೆಂಡ
ಸತ್ಯಕ್ಕೆ ಸಮಾಧಿ ಕಟ್ಟುವ ಬದಲು ತನಿಖೆ ಮಾಡಿಸಲಿ
ಮಾತೆತ್ತಿದರೆ ತನಿಖೆ, ಆಯೋಗ ಎಂದು ಜಪಿಸುವ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿಗಳು ಈಗ ಗುತ್ತಿಗೆದಾರರ ಮನೆಗಳಲ್ಲಿ ಕಂತೆಕಂತೆಯಾಗಿ ಸಿಕ್ಕಿಬಿದ್ದಿರುವ ಕನಕ ಮಹಾಲಕ್ಷ್ಮೀ ಬಗ್ಗೆ ಸತ್ಯ ಹೇಳಬೇಕಲ್ಲವೇ? ಎಷ್ಟೇ ಆಗಲಿ, ಒಬ್ಬರು ಸಿದ್ದಪುರುಷರು! ಇನ್ನೊಬ್ಬರು ಸತ್ಯಪುರುಷರು!! ಸತ್ಯಕ್ಕೆ ಸಮಾಧಿ ಕಟ್ಟುವ ಬದಲು ತನಿಖೆ ಮಾಡಿಸಲಿ. ಅದು ಯಾವ ತನಿಖೆ ಎಂದು ಅವರೇ ಬಾಯಿ ಬಿಟ್ಟು ಹೇಳಲಿ ಎಂದು ಎಚ್.ಡಿ. ಕುಮಾರಸ್ವಾಮಿ ಅವರು ಒತ್ತಾಯ ಮಾಡಿದ್ದಾರೆ.