ಬೆಂಗಳೂರು: ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ಕಲ್ಪಿಸಬೇಕೆಂದು ಹೋರಾಟ ನಡೆಸುತ್ತಿದ್ದರಿಂದ ಆರಂಭವಾದ ಸಚಿವ ಮುರುಗೇಶ್ ನಿರಾಣಿ ಹಾಗೂ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ನಡುವಿನ ವಾಗ್ಯುದ್ಧ ಇದೀಗ ರಾಜ್ಯ ರಾಜಕೀಯದಲ್ಲಿ (Karnataka Politics) ಹೊಸ ತಿರುವು ಪಡೆದಿದೆ.
ನಿರಾಣಿ ಅವರ ವಿರುದ್ಧ ಅವಾಚ್ಯ ಶಬ್ದ ಬಳಸಿದ್ದ ಯತ್ನಾಳ್ ವಿರುದ್ಧ ಶನಿವಾರ ಹರಿಹಾಯ್ದಿದ್ದ ನಿರಾಣಿ, ಯತ್ನಾಳ್ ಕಾರು ಚಾಲಕನ ಕೊಲೆ ವಿಚಾರವನ್ನು ತನಿಖೆ ನಡೆಸಿದರೆ ಅನೇಕ ಸತ್ಯಾಂಶ ಹೊರಬರುತ್ತದೆ ಎಂದಿದ್ದರು. ಈ ಕುರಿತು ಸಂಪೂರ್ಣ ತನಿಖೆ ನಡೆಸುವಂತೆ ಕಾಂಗ್ರೆಸ್ ಆಗ್ರಹಿಸಿದೆ.
ಈ ಕುರಿತು ಹೈಗ್ರೌಂಡ್ಸ್ ಪೊಲೀಸ್ ಠಾಣೆಗೆ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಸ್. ಮನೋಹರ್ ದೂರು ನೀಡಿದ್ದಾರೆ. ʼಜನವರಿ 14ರಂದು, ರೇಸ್‌ಕೋರ್ಸ್ ರಸ್ತೆಯಲ್ಲಿರುವ ಸಿಎಂ ಬಸವರಾಜ ಬೊಮ್ಮಾಯಿ ಅವರ ಮನೆಯ ಬಳಿ ನಿರಾಣಿ ಮಾತನಾಡಿದ್ದಾರೆ. ಯತ್ನಾಳ್ ಕಾರುಚಾಲಕ ಕುಮಾರ್ ಎಂಬಾತ ನಿಗೂಢವಾಗಿ ಕೊಲೆಯಾಗಿದ್ದಾನೆ. ಸೂಕ್ತ ತನಿಖೆ ನಡೆಸಬೇಕು ಎಂದಿದ್ದಾರೆ. ನಿರಾಣಿ ಅವರ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ನಡೆಸಬೇಕುʼ ಎಂದು ಆಗ್ರಹಿಸಿದ್ದಾರೆ.
ಸ್ವತಃ ಬಸನಗೌಡ ಪಾಟೀಲ್ ಯತ್ನಾಳ್ ಈ ಕುರಿತು ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಪತ್ರ ಬರೆದಿದ್ಧಾರೆ. ʼವಿಜಯಪುರದ ಯಾರೋ ಒಬ್ಬ ಕಾರು ಚಾಲಕನ ಹತ್ಯೆ ಕುರಿತು ತಮ್ಮ ಸಚಿವ ಸಂಪುಟದ ಸಚಿವರೊಬ್ಬರು ಹೇಳಿದ್ದಾರೆ. ಇಂತಹ ಸುಳ್ಳು ಆರೋಪದಿಂದ ತಪ್ಪು ಸಂದೇಶ ರವಾನೆಯಾಗುತ್ತದೆ. ದೇಶದ ಜನತೆಗೆ ಸತ್ಯ ಗೊತ್ತಾಗಬೇಕು. ಸತ್ಯಾಸತ್ಯತೆ ತಿಳಿಯಲು, ಈ ಕುರಿತು ತನಿಖೆಯನ್ನು 24 ಗಂಟೆಯಲ್ಲೇ ಸಿಬಿಐಗೆ ವಹಿಸಬೇಕು. ಈ ಕುರಿತು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಬೇಕು. ತಪ್ಪು ಸಾಬೀತಾದರೆ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಆ ಸಚಿವರನ್ನು ಸಂಪುಟದಿಂದ ವಜಾ ಮಾಡಬೇಕುʼ ಎಂದು ಆಗ್ರಹಿಸಿದ್ದಾರೆ. ಆದರೆ ಎಲ್ಲಿಯೂ ನೇರವಾಗಿ ನಿರಾಣಿ ಅವರ ಹೆಸರನ್ನು ಯತ್ನಾಳ್ ಬಳಸಿಲ್ಲ.
ಇದನ್ನೂ ಓದಿ | Nirani Vs Yathnal | ಅಪ್ಪನಿಗೆ ಹುಟ್ಟಿದವರು ಈ ರೀತಿ ಮಾತನಾಡಲ್ಲ: ಕಣ್ಣೀರು ಹಾಕುತ್ತಲೇ ಯತ್ನಾಳ್ ವಿರುದ್ಧ ಕಿಡಿಕಾರಿದ ನಿರಾಣಿ