ಬೆಂಗಳೂರು: ರಾಜ್ಯದಲ್ಲಿ ಈ ಬಾರಿ ಮುಂಗಾರು ಪ್ರವೇಶವು ಬಹಳ ತಡವಾಗಿ ಆಗಿತ್ತು. ಆ ಬಳಿಕವೂ ಅಷ್ಟಾಗಿ ಮಳೆ (Rain News) ಸುರಿಯದೇ ಕರ್ನಾಟಕವನ್ನು ಬರಕ್ಕೆ ದೂಡಿದೆ. ಮುಂಗಾರು ಕೈಕೊಟ್ಟರೇನಂತೆ ಹಿಂಗಾರು ಮಳೆಯಾದರೂ ಆದೀತು ಎಂದು ಆಕಾಶ ನೋಡುವಷ್ಟರ ಹೊತ್ತಿಗೆ ಈಗ ಚಳಿಗಾಲದ ಏಟು (Winter Season) ಕೊಡಲು ಪ್ರಾರಂಭವಾದಂತೆ ಭಾಸವಾಗುತ್ತಿದೆ. ಈಗಂತೂ ರಾಜ್ಯದ ಬಹುತೇಕ ಕಡೆ ಚಳಿಯ ಹೊಡೆತ ಶುರುವಾಗಿದೆ. ಡಿಸೆಂಬರ್ ಮಾಸಾಂತ್ಯಕ್ಕೆ ಬರುವ ಚಳಿಗಾಲ ಏನಾದರೂ ಎರಡು ತಿಂಗಳು ಮೊದಲು, ಅಂದರೆ ಅಕ್ಟೋಬರ್ ಮಾಸಾಂತ್ಯಕ್ಕೇ ಪ್ರಾರಂಭವಾಯಿತೇ? ಎಂಬ ಅನುಮಾನ ಕಾಡಲಾರಂಭಿಸಿದೆ. ರಾಜ್ಯ ಹವಾಮಾನ (Karnataka Weather) ಅಂಕಿ-ಅಂಶವನ್ನು ಗಮನಿಸಿದಾಗಿ ಈ ಆತಂಕ ಹೆಚ್ಚುತ್ತದೆ.
ಇನ್ನು ಬಂಗಾಳ ಕೊಲ್ಲಿಯಲ್ಲಿ ಚಂಡಮಾರುತ ಎದ್ದಿರುವ ಪರಿಣಾಮ ಇನ್ನು ಕೆಲವು ದಿನ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಚಳಿಗಾಲ ಮುಂದುವರಿಯಲಿದೆ ಎಂದು ಅಂದಾಜು ಮಾಡಲಾಗಿದೆ. ಇನ್ನು ಬೆಂಗಳೂರಿನಲ್ಲಿ ಮಂಗಳವಾರ (ಅ. 24) ಅಕ್ಟೋಬರ್ ತಿಂಗಳಿನಲ್ಲಿಯೇ ಅತ್ಯಂತ ಕನಿಷ್ಠ ತಾಪಮಾನ (17.1 ಡಿಗ್ರಿ ಸೆಲ್ಸಿಯಸ್) ದಾಖಲಾಗಿತ್ತು ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ವರದಿ ನೀಡಿತ್ತು. ಈಗ ರಾಜ್ಯಾದ್ಯಂತ ಚಳಿಗಾಲದ ವಾತಾವರಣ ಸೃಷ್ಟಿಯಾಗಿದೆ.
ಇದನ್ನೂ ಓದಿ: HD Kumaraswamy : ಯೆಸ್.. ಐ ಆ್ಯಮ್ ವಿಲನ್! ಸಿದ್ದರಾಮಯ್ಯಗೆ ವಿಲನ್ ಆಗದೇ ಫ್ರೆಂಡ್ ಆಗಲು ಸಾಧ್ಯವೇ?
ಕನಿಷ್ಠ ಉಷ್ಣಾಂಶಗಳು
ಸದ್ಯಕ್ಕೆ ಮುಂದಿನ ಎರಡು ದಿನಗಳಲ್ಲಿ ರಾಜ್ಯದ ಹಲವು ಕಡೆ ತಾಪಮಾನ ಬಹಳಷ್ಟು ಕುಸಿತ ಕಾಣಲಿದೆ ಎಂದು ಹವಾಮಾನ ಇಲಾಖೆ ತನ್ನ ಮುನ್ಸೂಚನಾ ವರದಿಯಲ್ಲಿ ಉಲ್ಲೇಖ ಮಾಡಿದೆ. ಉತ್ತರ ಒಳನಾಡಿನ ಬಾಗಲಕೋಟೆ, ಬೀದರ್, ಧಾರವಾಡ, ಗದಗ, ರಾಯಚೂರು, ವಿಜಯಪುರ ಜಿಲ್ಲೆಗಳು ಮತ್ತು ದಕ್ಷಿಣ ಒಳನಾಡಿನ ಚಿಕ್ಕಮಗಳೂರು, ದಾವಣಗೆರೆ, ಕೊಡಗು, ಕೋಲಾರ, ಮಂಡ್ಯ, ತುಮಕೂರು, ಬೆಂಗಳೂರು ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಕನಿಷ್ಠ ತಾಪಮಾನವು ಸಾಮಾನ್ಯಕ್ಕಿಂತ 2-3 ಡಿಗ್ರಿ ಸೆಲ್ಸಿಯಸ್‌ಗಿಂತ ಕಡಿಮೆ ಇರುವ ಸಾಧ್ಯತೆಯಿದೆ. ಹೀಗಾಗಿ ಈಗ ನೀಡಲಾಗಿರುವ ಅಂದಾಜು ಮಟ್ಟಕ್ಕಿಂತ ಕುಸಿಯುವ ಆತಂಕ ಎದುರಾಗಿದೆ.
ಒಂದು ವೇಳೆ ಇದೇ ಪರಿಸ್ಥಿತಿ ಮುಂದುವರಿಯುತ್ತಾ ಹೋಗಿ ರಾಜ್ಯದಲ್ಲಿ ಮಳೆಯೇ ಆಗದೆ ಹೋದರೆ ಚಳಿಗಾಲವು ಪ್ರಾರಂಭವಾದಂತೆಯೇ ಲೆಕ್ಕ ಎಂದು ಸಹ ಹೇಳಲಾಗುತ್ತಿದೆ. ಆದರೆ, ಈ ಬಗ್ಗೆ ಹವಾಮಾನ ಇಲಾಖೆ ಇನ್ನೂ ಯಾವುದೇ ಸ್ಪಷ್ಟನೆಯನ್ನು ನೀಡಿಲ್ಲ. ಹವಾಮಾನ ಇಲಾಖೆ ಅಂದಾಜಿನ ಪ್ರಕಾರ, ಇನ್ನು ಕೆಲವು ದಿನಗಳಲ್ಲಿ ಮಳೆಯಾಗಬಹುದು ಎಂದೇ ಹೇಳಲಾಗುತ್ತಿದೆ.
ರಾತ್ರಿ – ಮುಂಜಾನೆ ಚಳಿ ಹೆಚ್ಚು
ಬೆಳಗ್ಗೆ ಹೊತ್ತಿನಲ್ಲಿ ಸಾಮಾನ್ಯವಾಗಿ ಬಿಸಿಲಿನ ಸಹಿತ ಒಣಹವೆಯ ವಾತಾವರಣೇ ಹೆಚ್ಚಿರುತ್ತದೆ. ಆದರೆ, ರಾತ್ರಿಯಾಗುತ್ತಿದ್ದಂತೆ ಈ ಮೇಲಿನ ಎಲ್ಲ ಜಿಲ್ಲೆಗಳಲ್ಲಿ ತಾಪಮಾನವು ಕನಿಷ್ಠ ಪ್ರಮಾಣಕ್ಕೆ ಕುಸಿಯಲಿದೆ ಎಂದು ಹೇಳಲಾಗಿದೆ.
ಈ ಜಿಲ್ಲೆಗಳ ಉಷ್ಣಾಂಶದಲ್ಲಿ ಹೆಚ್ಚಳ
ಇನ್ನು ಕೆಲವು ಜಿಲ್ಲೆಗಳ ಉಷ್ಣಾಂಶದಲ್ಲಿ ಹೆಚ್ಚಳ ಆಗುತ್ತದೆ ಎಂದೂ ಸಹ ಹವಾಮಾನ ಇಲಾಖೆ ತಿಳಿಸಿದೆ. ಉತ್ತರ ಒಳನಾಡಿನ ಬಾಗಲಕೋಟೆ, ಬೆಳಗಾವಿ, ಗದಗ, ಹಾವೇರಿ ಜಿಲ್ಲೆಗಳು ಮತ್ತು ದಕ್ಷಿಣ ಒಳನಾಡಿನ ಬಳ್ಳಾರಿ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಿತ್ರದುರ್ಗ, ಕೋಲಾರ, ಮಂಡ್ಯ, ಮೈಸೂರು, ಹಾಸನ ಮತ್ತು ವಿಜಯನಗರ ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಗರಿಷ್ಠ ಉಷ್ಣಾಂಶವು ಸಾಮಾನ್ಯಕ್ಕಿಂತ 2 – 3 ಡಿಗ್ರಿ ಹೆಚ್ಚಾಗುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ.
ಪ್ರಮುಖ ನಗರಗಳಲ್ಲಿನ ಇಂದಿನ ತಾಪಮಾನ
ನಗರದ ಹೆಸರು- ಗರಿಷ್ಠ ಉಷ್ಣಾಂಶ- ಕನಿಷ್ಠ ಉಷ್ಣಾಂಶ (ಡಿಗ್ರಿ ಸೆಲ್ಸಿಯಸ್)
ಬೆಂಗಳೂರು ನಗರ: 31 ಡಿ.ಸೆ – 17 ಡಿ.ಸೆ
ಮಂಗಳೂರು: 32 ಡಿ.ಸೆ – 25 ಡಿ.ಸೆ
ಚಿತ್ರದುರ್ಗ: 33 ಡಿ.ಸೆ – 18 ಡಿ.ಸೆ
ಗದಗ: 34 ಡಿ.ಸೆ – 18 ಡಿ.ಸೆ
ಹೊನ್ನಾವರ: 35 ಡಿ.ಸೆ- 23 ಡಿ.ಸೆ
ಕಲಬುರಗಿ: 34 ಡಿ.ಸೆ – 20 ಡಿ.ಸೆ
ಬೆಳಗಾವಿ: 32 ಡಿ.ಸೆ – 17 ಡಿ.ಸೆ
ಕಾರವಾರ: 37 ಡಿ.ಸೆ – 24 ಡಿ.ಸೆ
ಇದನ್ನೂ ಓದಿ: Tiger Nail : ನವಿಲು ಗರಿ ಇಟ್ಟುಕೊಂಡಿರುವ ದರ್ಗಾ, ಮಸೀದಿಗಳ ಮೇಲೂ ದಾಳಿ ಮಾಡಿ ಮೌಲ್ವಿಗಳ ಬಂಧಿಸಿ: ಬೆಲ್ಲದ್
ಈ ಜಿಲ್ಲೆಗಳಲ್ಲಿ ಈಗಿರುವ ಕನಿಷ್ಠ ತಾಪಮಾನವು ಇನ್ನಷ್ಟು ಕುಸಿಯುವ ಸಾಧ್ಯತೆಗಳೂ ಇವೆ ಎಂದು ಅಂದಾಜಿಸಲಾಗಿದೆ. ಹಾಗಾಗಿ ಇನ್ನು ಕೆಲವು ದಿನ ಚಳಿ ಮುಂದುವರಿಯಲಿದೆ ಎಂದು ಹೇಳಲಾಗುತ್ತಿದೆ.