ಬೆಂಗಳೂರು: ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್ ಮೇ 20ರ ಶನಿವಾರದಂದು ಪ್ರಮಾಣವಚನ ಸ್ವೀಕರಿಸಲಿದ್ದು, ಇದಕ್ಕೆ ಸರ್ಕಾರ ಸಕಲ ಸಿದ್ಧತೆ ಮಾಡಿಕೊಳ್ಳುತ್ತಿದೆ. ಆದರೆ ಇದೇ ದಿನ ಸಿಇಟಿ ಪರೀಕ್ಷೆಯೂ (KCET 2023 )ನಡೆಯಲಿರುವುದರಿಂದ ಈ ಪರೀಕ್ಷೆ ಬರೆಯಬೇಕಾಗಿರುವ ಬೆಂಗಳೂರಿನ ವಿದ್ಯಾರ್ಥಿಗಳು, ಪೋಷಕರು ಆತಂಕಗೊಂಡಿದ್ದಾರೆ.
ವೃತ್ತಿಪರ ಕೋರ್ಸ್‌ಗಳ ಪ್ರವೇಶಾತಿಗಾಗಿ ಕರ್ನಾಟಕ ಪರೀಕ್ಷ ಪ್ರಾಧಿಕಾರ (ಕೆಇಎ) ನಡೆಸುವ ʻಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆʼಗೆ (KCET 2023) ಈಗಾಗಲೇ ವೆಳಾಪಟ್ಟಿ ಪ್ರಕಟಗೊಂಡಿತ್ತು. ಮೇ 20ರ ಶನಿವಾರದಂದು ಜೀವಶಾಸ್ತ್ರ ಮತ್ತು ಗಣಿತದ ಪರೀಕ್ಷೆ ನಡೆಯಬೇಕಾಗಿದೆ. ಇದಕ್ಕಾಗಿ ಕೆಇಎಯು ಸಕಲ ಸಿದ್ಧತೆ ಮಾಡಿಕೊಂಡಿದೆ. ಹೀಗಿರುವಾಗ ಈಗ ಇದ್ದಕ್ಕಿದ್ದಂತೆ ನಗರದಲ್ಲಿ ಪ್ರಮಾಣ ವಚನ ಸ್ವೀಕರಿಸುವ ನಿಯೋಜನೆಗೊಂಡಿರುವುದರಿಂದ ವಿದ್ಯಾರ್ಥಿಗಳಿಗೆ ನಿಗದಿತ ಸಮಯಕ್ಕೆ ಪರೀಕ್ಷಾ ಕೇಂದ್ರಕ್ಕೆ ತಲುಪಲು ಸಾಧ್ಯವಾಗುತ್ತದೆಯೇ ಎಂಬ ಆಂತಕ ಕಾಡುತ್ತಿದೆ.
ಪ್ರಮಾಣವಚನ ಕಾರ್ಯಕ್ರಮವು ನಗರದ ಕಂಠೀರವ ಕ್ರೀಡಾಂಗಣದಲ್ಲಿ ನಡೆಯಲಿದ್ದು, ಲಕ್ಷಾಂತರ ಜನರು ಸೇರುವ ನೀರೀಕ್ಷೆಯಿದೆ. ಇದಕ್ಕಾಗಿ ಕಾಂಗ್ರೆಸ್ ಪಕ್ಷ ಕೂಡ ಸಿದ್ಧತೆ ಮಾಡಿಕೊಳ್ಳುತ್ತಿದೆ. ಇದರಿಂದಾಗಿ ಭಾರಿ ಸಂಖ್ಯೆಯ ವಾಹನಗಳು ಅಂದು ನಗರ ಪ್ರವೇಶಿಸಲಿವೆ ಎಂದು ಅಂದಾಜಿಸಲಾಗುತ್ತಿದೆ. ಸಂಚಾರವನ್ನು ಸುಗಮಗೊಳಿಸುವ ಉದ್ದೇಶದಿಂದ ನಗರ ಸಂಚಾರಿ ಪೊಲೀಸರು ಕೆಲ ಮಾರ್ಗಗಳ ಸಂಚಾರವನ್ನು ನಿರ್ಬಂಧಿಸುವ ಸಾಧ್ಯತೆಗಳಿವೆ. ಇದರಿಂದ ವಿದ್ಯಾರ್ಥಿಗಳಿಗೆ ಪರೀಕ್ಷಾ ಕೇಂದ್ರ ತಲುಪಲು ಪರದಾಡಬೇಕಾದ ಸ್ಥಿತಿ ನಿರ್ಮಾಣವಾಗಬಹುದೇ ಎಂಬ ಆತಂಕ ಕಾಡುತ್ತಿದೆ.
ಈ ಬಾರಿ 2 ಲಕ್ಷದ 61 ಸಾವಿರದ 610 ವಿದ್ಯಾರ್ಥಿಗಳು ಸಿಇಟಿ ಪರೀಕ್ಷೆ ತೆಗೆದುಕೊಂಡಿದ್ದಾರೆ. ಇವರಲ್ಲಿ ಹೆಚ್ಚಿನ ವಿದ್ಯಾರ್ಥಿಗಳು ಬೆಂಗಳೂರಿನ ವಿವಿಧ ಕೇಂದ್ರಗಳಲ್ಲಿ ಪರೀಕ್ಷೆ ಬರೆಯಬೇಕಿದೆ. ಬೆಳಗ್ಗೆ 10:30 ರಿಂದ 11:50ರ ವರೆಗೆ ಜೀವಶಾಸ್ತ್ರ ಮತ್ತು ಮಧ್ಯಾಹ್ನ 2:30 ರಿಂದ 3:50 ರವರೆಗೆ ಗಣಿತದ ಪರೀಕ್ಷೆ ನಿಗದಿಯಾಗಿದೆ.
ಇತ್ತೀಚೆಗೆ ನಡೆದ ನೀಟ್ ಪರೀಕ್ಷೆಯ ದಿನದಂದು ಕೂಡ ಪ್ರಧಾನಿ ನರೇಂದ್ರ ಮೋದಿ ಅವರ ರೋಡ್ ಶೋ ಬೆಂಗಳೂರಿನಲ್ಲಿ ನಿಯೋಜನೆಗೊಂಡಿತ್ತು. ಇದರಿಂದ ವಿದ್ಯಾರ್ಥಿಗಳಿಗೆ ತೊಂದರೆಯಾಗಬಹುದೆಂಬ ಮಾಹಿತಿ ಸಿಗುತ್ತಿದ್ದಂತೆಯೇ ರೋಡ್ ಶೋನಲ್ಲಿ ಕೆಲ ಬದಲಾವಣೆಗಳನ್ನು ಮಾಡಲಾಗಿತ್ತು. ವಿದ್ಯಾರ್ಥಿಗಳಿಗೆ ತೊಂದರೆಯಾಗದಂತೆ ನೋಡಿಕೊಳ್ಳುವಂತೆ ಪೊಲೀಸರಿಗೆ ಸೂಚಿಸಲಾಗಿತ್ತು.
ಸಿಇಟಿ ಕುರಿತ ಪೂರ್ಣ ವಿವರಗಳಿರುವ ಮಾಹಿತಿ ಪುಸ್ತಕಕ್ಕಾಗಿ ಇಲ್ಲಿ ಕ್ಲಿಕ್ (Click Here) ಮಾಡಿ.
ವೃತ್ತಿಶಿಕ್ಷಣ ಕೋರ್ಸುಗಳಾದ ವೈದ್ಯಕೀಯ, ದಂತ ವೈದ್ಯಕೀಯ, ಇಂಡಿಯನ್ ಸಿಸ್ಟಮ್ಸ್ ಆಫ್ ಮೆಡಿಸಿನ್ ಮತ್ತು ಹೋಮಿಯೋಪತಿ (ಆಯುಶ್), ಎಂಜಿನಿಯರಿಂಗ್/ವಾಸ್ತುಶಿಲ್ಪ ಕೋರ್ಸುಗಳು, ಫಾರ್ಮ್ ಸೈನ್ಸ್ ಅಂದರೆ ಬಿಎಸ್ಸಿ. (ಕೃಷಿ), ಬಿ.ಎಸ್.ಸಿ. (ರೇಷ್ಮೆ ಕೃಷಿ), ಬಿ.ಎಸ್.ಸಿ (ತೋಟಗಾರಿಕೆ), ಬಿ.ಎಸ್.ಸಿ (ಅರಣ್ಯ), ಬಿ.ಎಸ್.ಸಿ. ಬಿ.ಎಸ್.ಕೆ (ಆಹಾರ ವಿಜ್ಞಾನ), ಬಿಟೆಕ್ (ಡೈರಿ ಟೆಕ್), ಬಿಎಫ್ಎಸ್ಸಿ (ಫಿಶರೀಸ್), ಬಿ.ಟೆಕ್ (ಫುಡ್ ಸೈನ್ಸ್ & ಟೆಕ್), ಅಕ್ರಿ ಬಯೋ ಟೆಕ್, ಬಿಎಚ್ಎಸ್ಸಿ (ಹೋಮ್ ಸೈನ್ಸ್), ಬಿ.ಟೆಕ್ (ಅಗ್ರಿ ಎಂಗ್ಜಿ) ), B.Sc. (ಅಗ್ರಿ ಮಾರ್ಕೆಟಿಂಗ್ & ಕೋ-ಆಪ್), ಬಿ-ಫಾರ್ಮಾ, ಫಾರ್ಮಾ-ಡಿ ಕೋರ್ಸುಗಳ ಪ್ರವೇಶಕ್ಕೆ ಈ ಪರೀಕ್ಷೆ ನಡೆಸಲಾಗುತ್ತದೆ. ರಾಜ್ಯ ಸರ್ಕಾರ ನೀಡಿದ ಸೀಟ್ ಮ್ಯಾಟ್ರಿಕ್ಸ್ ಪ್ರಕಾರ ಸೀಟುಗಳನ್ನು ಹಂಚಿಕೆ ಮಾಡಲಾಗುತ್ತದೆ.
ಪರೀಕ್ಷಾ ಪ್ರಾಧಿಕಾರ ಪ್ರಕಟಿಸಿರುವ ವೇಳಾಪಟ್ಟಿ ಪ್ರಕಾರ,
ಮೇ 20- ಜೀವಶಾಸ್ತ್ರ ಮತ್ತು ಗಣಿತ
ಮೇ 21- ರಸಾಯನಶಾಸ್ತ್ರ, ಭೌತಶಾಸ್ತ್ರ
ಮೇ 22- ಹೊರನಾಡು, ಗಡಿನಾಡು ಕನ್ನಡಿಗರಿಗೆ ಕನ್ನಡ ಪರೀಕ್ಷೆ ನಡೆಯಲಿದೆ. ಬೆಂಗಳೂರು, ಬೀದರ್, ಬೆಳಗಾವಿ, ಬಳ್ಳಾರಿ, ವಿಜಯಪುರ, ಮಂಗಳೂರು ಜಿಲ್ಲಾ ಕೇಂದ್ರಗಳಲ್ಲಿ ಮಾತ್ರ ಈ ಪರೀಕ್ಷೆ ನಡೆಯಲಿದೆ.
ಹೆಚ್ಚಿನ ಮಾಹಿತಿಗೆ ವೆಬ್‌ಸೈಟ್: https://cetonline.karnataka.gov.in
ಪರೀಕ್ಷೆ ನಡೆಸಲು 592 ವೀಕ್ಷಕರು, 1.184 ವಿಶೇಷ ಸ್ಕ್ಯಾಡ್ 592 ಕಸ್ಟೋಡಿಯನ್ಸ್ ಸೇರಿದಂತೆ 23 ಸಾವಿರಕ್ಕೂ ಹೆಚ್ಚು ಸಿಬ್ಬಂದಿಯನ್ನು ಪರೀಕ್ಷಾ ಪ್ರಾಧಿಕಾರ ನಿಯೋಜನೆ ಮಾಡಿದೆ.
ಇದನ್ನೂ ಓದಿ: Karnataka CM: ಸಿದ್ದರಾಮಯ್ಯ ಪ್ರಮಾಣ ವಚನಕ್ಕೆ ಲಕ್ಷಾಂತರ ಮಂದಿ ನಿರೀಕ್ಷೆ, ಕಂಠೀರವ ಸ್ಟುಡಿಯೋ ಸುತ್ತ ಬಿಗಿ ಭದ್ರತೆ