ಬೆಂಗಳೂರು: ಸಿಇಟಿ ಪರೀಕ್ಷೆಯಂದೇ (KCET 2023) ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್ ಪ್ರಮಾಣ ವಚನ ಸ್ವೀಕರಿಸುವ ಕಾರ್ಯಕ್ರಮ ರಾಜಧಾನಿಯಲ್ಲಿ ನಿಗದಿಯಾಗಿರುವುದು ಈಗ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ವಾಗ್ವಾದಕ್ಕೆ ಕಾರಣವಾಗಿದೆ.
ಈ ಹಿಂದೆ ನೀಟ್ ಪರೀಕ್ಷೆಯ ದಿನದಂದೇ ಬೆಂಗಳೂರಿನಲ್ಲಿ ಪ್ರಧಾನಿ ಮೋದಿ ಅವರ ರೋಡ್ ಶೋ ನಡೆದಾಗ ಕಾಂಗ್ರೆಸ್ ನಾಯಕರು ಟೀಕಿಸಿದ್ದರು. ಇದರಿಂದ ನೀಟ್ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದೆ ಎಂದು ಬಿಜೆಪಿ ಮೇಲೆ ಹರಿಹಾಯ್ದಿದ್ದರು. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಟ್ವೀಟ್ ಮಾಡಿ, ʻʻನೀಟ್ ಪರೀಕ್ಷಾರ್ಥಿಗಳು ಮತ್ತು ಬೆಂಗಳೂರಿನ ಜನರ ವಿರೋಧವನ್ನು ಧಿಕ್ಕರಿಸಿ ಪ್ರಧಾನಿ ಮೋದಿ ಅವರು ನಾಳೆ ಬೆಂಗಳೂರಿನಲ್ಲಿ ನಡೆಸಲಿರುವ ರೋಡ್ ಶೋ ಅತ್ಯಂತ ಬೇಜವಾಬ್ದಾರಿತನದ ನಡೆ. ಮೋದಿ ಅವರು ಪ್ರಚಾರ ಮಾಡಲಿ ನಮ್ಮ ತಕರಾರು ಇಲ್ಲ. ಆದರೆ ವಿದ್ಯಾರ್ಥಿಗಳಿಗೆ ಆಗುವ ತೊಂದರೆಗೆ ಯಾರು ಹೊಣೆ?ʼʼ ಎಂದು ಪ್ರಶ್ನಿಸಿದ್ದರು.
ಇದಕ್ಕೆ ಈಗ ಟ್ವಿಟ್ಟರ್‌ನಲ್ಲಿಯೇ ಪ್ರತಿಕ್ರಿಯಿಸಿರುವ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್, ʻʻನಾಳೆ ಸಿಇಟಿ ಪರೀಕ್ಷೆ ನಡೆಯುತ್ತಿದೆ. ನೀವು ಪ್ರಮಾಣ ವಚನ ಸ್ವೀಕರಿಸುವ ಕಾರ್ಯಕ್ರಮವನ್ನು, ವಿದ್ಯಾರ್ಥಿಗಳಿಗೆ ತೊಂದರೆಯಾಗಬಾರದೆಂಬ ಕಾರಣದಿಂದ ಒಂದು ಅಥವಾ ಎರಡು ದಿನ ಮುಂದೂಡಿದ್ದರೆ ಏನಾಗುತ್ತಿತ್ತು?ʼʼ ಎಂದು ಪ್ರಶ್ನಿಸಿದ್ದಾರೆ.
ಇವರಲ್ಲದೆ ಬಿಜೆಪಿ ಹಲವು ನಾಯಕರು, ಕಾರ್ಯಕರ್ತರು ನಿಯೋಜಿತ ಮುಖ್ಯಮಂತ್ರಿ ಸಿದ್ದರಾಮಯ್ಯರ ಮೇಲೆ ಮುಗಿಬಿದ್ದಿದ್ದು, ʻʻವಿದ್ಯಾರ್ಥಿಗಳ ಬಗೆಗಿನ ಕಾಳಜಿ ಈಗ ಎಲ್ಲಿ ಹೋಯಿತು?ʼʼ ಎಂದು ಪ್ರಶ್ನಿಸಿದ್ದಾರೆ.
ಟ್ರಾಫಿಕ್‌ನದ್ದೇ ಆತಂಕ
ಪ್ರಮಾಣವಚನ ಕಾರ್ಯಕ್ರಮವು ನಗರದ ಕಂಠೀರವ ಕ್ರೀಡಾಂಗಣದಲ್ಲಿ ನಡೆಯಲಿದ್ದು, ಲಕ್ಷಾಂತರ ಜನರು ಸೇರುವ ನೀರೀಕ್ಷೆಯಿದೆ. ಇದಕ್ಕಾಗಿ ಕಾಂಗ್ರೆಸ್ ಪಕ್ಷ ಕೂಡ ಸಿದ್ಧತೆ ಮಾಡಿಕೊಳ್ಳುತ್ತಿದೆ. ಇದರಿಂದಾಗಿ ಭಾರಿ ಸಂಖ್ಯೆಯ ವಾಹನಗಳು ನಗರ ಪ್ರವೇಶಿಸಲಿವೆ ಎಂದು ಅಂದಾಜಿಸಲಾಗುತ್ತಿದೆ. ಸಂಚಾರವನ್ನು ಸುಗಮಗೊಳಿಸುವ ಉದ್ದೇಶದಿಂದ ನಗರ ಸಂಚಾರಿ ಪೊಲೀಸರು ಕೆಲ ಮಾರ್ಗಗಳ ಸಂಚಾರವನ್ನು ನಿರ್ಬಂಧಿಸುವ ಸಾಧ್ಯತೆಗಳಿವೆ. ಇದರಿಂದ ವಿದ್ಯಾರ್ಥಿಗಳಿಗೆ ಪರೀಕ್ಷಾ ಕೇಂದ್ರ ತಲುಪಲು ಪರದಾಡಬೇಕಾದ ಸ್ಥಿತಿ ನಿರ್ಮಾಣವಾಗಬಹುದೇ ಎಂಬ ಆತಂಕ ಕಾಡುತ್ತಿದೆ.
ʻʻನಿಗದಿತ ಸಮಯಕ್ಕೆ ಪರೀಕ್ಷಾ ಕೇಂದ್ರಕ್ಕೆ ಹೋಗದಿದ್ದಲ್ಲಿ ಪರೀಕ್ಷೆ ಬರೆಯಲು ಅವಕಾಶ ನೀಡಲಾಗುವುದಿಲ್ಲ ಎಂದು ಈಗಾಗಲೇ ಕೆಇಎ ತಿಳಿಸಿದೆ. ಶನಿವಾರ ಬೆಳಗ್ಗೆ ಪರೀಕ್ಷಾ ಕೇಂದ್ರ ತಲುಪವುದೇ ದೊಡ್ಡ ಸಮಸ್ಯೆಯಾಗಬಹುದು ಎಂಬ ಆತಂಕ ಕಾಡುತ್ತಿದೆ. ಈ ಬಗ್ಗೆ ಸರ್ಕಾರದವರು ಈ ಕೂಡಲೇ ಗಮನ ನೀಡಬೇಕುʼʼ ಎಂದು ಸಿಇಟಿ ಪರೀಕ್ಷೆ ಬರೆಯಬೇಕಿರುವ ವಿದ್ಯಾರ್ಥಿನಿ ಕೆ.ಸಿ. ನಮಿತಾ ತಮ್ಮ ಆತಂಕ ತೋಡಿಕೊಂಡಿದ್ದಾರೆ. ಈ ಬಗ್ಗೆ ಹಲವು ವಿದ್ಯಾರ್ಥಿಗಳು, ಪೋಷಕರು ಸಾಮಾಜಿಕ ಜಾಲತಾಣಗಳಲ್ಲಿ ಬೇಸರ ವ್ಯಕ್ತಪಡಿಸುತ್ತಿದ್ದಾರೆ.
ಪೊಲೀಸರಲ್ಲಿ ಕೆಇಎ ಮನವಿ: ಪರಿಸ್ಥಿತಿ ಎದುರಿಸಲು ಸಜ್ಜು
ವೃತ್ತಿಪರ ಕೋರ್ಸ್‌ಗಳ ಪ್ರವೇಶಾತಿಗಾಗಿ ಕರ್ನಾಟಕ ಪರೀಕ್ಷ ಪ್ರಾಧಿಕಾರ (ಕೆಇಎ) ನಡೆಸುವ ʻಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆʼಗೆ (KCET 2023) ಈ ಹಿಂದೆಯೇ ವೆಳಾಪಟ್ಟಿ ಪ್ರಕಟಗೊಂಡಿತ್ತು. ಮೇ 20ರ ಶನಿವಾರದಂದು ಜೀವಶಾಸ್ತ್ರ ಮತ್ತು ಗಣಿತದ ಪರೀಕ್ಷೆ ನಡೆಯಬೇಕಾಗಿದೆ. ಇದಕ್ಕಾಗಿ ಕೆಇಎಯು ಸಕಲ ಸಿದ್ಧತೆ ಮಾಡಿಕೊಂಡಿದೆ. ಹೀಗಿರುವಾಗ ಈಗ ಇದ್ದಕ್ಕಿದ್ದಂತೆ ನಗರದಲ್ಲಿ ಪ್ರಮಾಣ ವಚನ ಸ್ವೀಕರಿಸುವ ನಿಯೋಜನೆಗೊಂಡಿರುವುದರಿಂದ ವಿದ್ಯಾರ್ಥಿಗಳಿಗೆ ನಿಗದಿತ ಸಮಯಕ್ಕೆ ಪರೀಕ್ಷಾ ಕೇಂದ್ರಕ್ಕೆ ತಲುಪಲು ಸಾಧ್ಯವಾಗುತ್ತದೆಯೇ ಎಂಬ ಪ್ರಶ್ನೆ ಪ್ರಾಧಿಕಾರವನ್ನೂ ಕಾಡುತ್ತಿದೆ.
ಈ ಹಿನ್ನೆಲೆಯಲ್ಲಿ ಈ ಕುರಿತು ಬೆಂಗಳೂರು ನಗರ ಸಂಚಾರ ಪೊಲೀಸರಿಗೆ ಪತ್ರ ಬರೆದ ಕೆಇಎ ಪರ್ಯಾಯ ವ್ಯವಸ್ಥೆಯನ್ನು ಮಾಡುವಂತೆ, ವಿದ್ಯಾರ್ಥಿಗಳಿಗೆ ತೊಂದರೆಯಾಗದಂತೆ ನೋಡಿಕೊಳ್ಳುವಂತೆ ಮನವಿ ಮಾಡಿಕೊಂಡಿದೆ. ಟ್ರಾಫಿಕ್ ಕಿರಿಕಿರಿ ಆಗದಂತೆ ಸಂಚಾರಿ ಪೊಲೀಸರೊಂದಿಗೆ ಮಾತುಕತೆ ನಡೆಸಿರುವುದಾಗಿ ಕೆಇಎ ಕಾರ್ಯ ನಿರ್ವಾಹಕ ನಿರ್ದೇಶಕಿ ರಮ್ಯಾ ಹೇಳಿದ್ದಾರೆ. ಕ್ರೀಡಾಂಗಣ ಸುತ್ತಮುತ್ತ 20 ಪರೀಕ್ಷಾ ಕೇಂದ್ರಗಳಿದ್ದು, ಮೂರು ಸಾವಿರ ವಿದ್ಯಾರ್ಥಿಗಳು ಪರೀಕ್ಷೆ ಬರೆಯಬೇಕಾಗಿದೆ. ಹಾಲ್ ಟಿಕೆಟ್ ತೋರಿಸಿದ್ರೆ ವಿದ್ಯಾರ್ಥಿ, ಪೋಷಕರಿಗೆ ಪರೀಕ್ಷಾ ಕೇಂದ್ರ ಹೋಗಲು ಪೊಲೀಸರ ಸಹಾಯ ಮಾಡಲಿದ್ದಾರೆ. ಸಾಧ್ಯವಾದಷ್ಟು ಬೇಗ ಪರೀಕ್ಷಾ ಕೇಂದ್ರಗಳಿಗೆ ಆಗಮಿಸಬೇಕೆಂದು ವಿದ್ಯಾರ್ಥಿಗಳಲ್ಲಿ ರಮ್ಯಾ ಮನವಿ ಮಾಡಿಕೊಂಡಿದ್ದಾರೆ.
ಕ್ರೀಡಾಂಗಣದ ಮುಂದಿರುವ ಸೆಂಟ್ ಜೋಸೆಫ್ ಕಾಲೇಜಿನಲ್ಲಿಯೇ ಪರೀಕ್ಷಾ ಕೆಂದ್ರವಿದೆ. ಇಲ್ಲಿ ಪರೀಕ್ಷೆ ಬರೆಯಬೇಕಾಗಿರುವ ವಿದ್ಯಾರ್ಥಿಗಳಿಗೆ ತಿಂಡಿ ಮತ್ತು ಊಟದ ವ್ಯವಸ್ಥೆ ಮಾಡಲಾಗುತ್ತಿದೆ. ಒಟ್ಟು 564 ವಿದ್ಯಾರ್ಥಿಗಳು ಇಲ್ಲಿ ಪರೀಕ್ಷೆ ಬರೆಯಲಿದ್ದಾರೆ. ಈ ಎಲ್ಲ ವಿದ್ಯಾರ್ಥಿಗಳ ಪೋಷಕರನ್ನು ಸಂಪರ್ಕಿಸಿರುವ ಪ್ರಾಧಿಕಾರದ ಅಧಿಕಾರಿಗಳು ಅವರಿಗೆ ಮಾಡಿರುವ ವ್ಯವಸ್ಥೆಯ ಕುರಿತು ಮಾಹಿತಿ ನೀಡುತ್ತಿದ್ದಾರೆ.
ಸಿಇಟಿ (KCET 2023) ಕುರಿತ ಪೂರ್ಣ ವಿವರಗಳಿರುವ ಮಾಹಿತಿ ಪುಸ್ತಕಕ್ಕಾಗಿ ಇಲ್ಲಿ ಕ್ಲಿಕ್ (Click Here) ಮಾಡಿ.
ಈ ಬಾರಿ 2 ಲಕ್ಷದ 61 ಸಾವಿರದ 610 ವಿದ್ಯಾರ್ಥಿಗಳು ಸಿಇಟಿ ಪರೀಕ್ಷೆ ತೆಗೆದುಕೊಂಡಿದ್ದಾರೆ. ಇವರಲ್ಲಿ ಹೆಚ್ಚಿನ ವಿದ್ಯಾರ್ಥಿಗಳು ಬೆಂಗಳೂರಿನ ವಿವಿಧ ಕೇಂದ್ರಗಳಲ್ಲಿ ಪರೀಕ್ಷೆ ಬರೆಯಬೇಕಿದೆ. ಬೆಳಗ್ಗೆ 10:30 ರಿಂದ 11:50ರ ವರೆಗೆ ಜೀವಶಾಸ್ತ್ರ ಮತ್ತು ಮಧ್ಯಾಹ್ನ 2:30 ರಿಂದ 3:50 ರವರೆಗೆ ಗಣಿತದ ಪರೀಕ್ಷೆ ನಿಗದಿಯಾಗಿದೆ.
ಹೆಚ್ಚಿನ ಮಾಹಿತಿಗೆ ವೆಬ್‌ಸೈಟ್: https://cetonline.karnataka.gov.in
ಪರೀಕ್ಷೆ ನಡೆಸಲು 592 ವೀಕ್ಷಕರು, 1.184 ವಿಶೇಷ ಸ್ಕ್ಯಾಡ್ 592 ಕಸ್ಟೋಡಿಯನ್ಸ್ ಸೇರಿದಂತೆ 23 ಸಾವಿರಕ್ಕೂ ಹೆಚ್ಚು ಸಿಬ್ಬಂದಿಯನ್ನು ಪರೀಕ್ಷಾ ಪ್ರಾಧಿಕಾರ ನಿಯೋಜನೆ ಮಾಡಲಾಗಿದೆ.
ಇದನ್ನೂ ಓದಿ: Karnataka CM: ಸಿದ್ದರಾಮಯ್ಯ ಪ್ರಮಾಣ ವಚನಕ್ಕೆ ಲಕ್ಷಾಂತರ ಮಂದಿ ನಿರೀಕ್ಷೆ, ಕಂಠೀರವ ಸ್ಟುಡಿಯೋ ಸುತ್ತ ಬಿಗಿ ಭದ್ರತೆ