Site icon Vistara News

Contract Bill : ಸರ್ಕಾರಕ್ಕೆ ತಟ್ಟಲಿದೆಯೇ ಗುತ್ತಿಗೆದಾರರ ಬಿಸಿ? ಬಾಕಿ ಬಿಲ್‌ಗಾಗಿ ಅ. 13ಕ್ಕೆ ಸುದ್ದಿಗೋಷ್ಠಿ ಕರೆದ ಕೆಂಪಣ್ಣ

kempanna press meet at october 13

ಬೆಂಗಳೂರು: ಕಳೆದ ಬಿಜೆಪಿ ಸರ್ಕಾರಕ್ಕೆ ಕಂಟಕವಾಗಿದ್ದ ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘವು ಈಗ ರಾಜ್ಯ ಕಾಂಗ್ರೆಸ್‌ ಸರ್ಕಾರದ ಮೇಲೆ ಮುನಿಸಿಕೊಂಡಿದೆ. ಬಸವರಾಜ ಬೊಮ್ಮಾಯಿ (Basavaraj Bommai) ನೇತೃತ್ವದ ಬಿಜೆಪಿ ಸರ್ಕಾರದ ವಿರುದ್ಧ “40 ಪರ್ಸೆಂಟ್‌” (40 Percent Commission) ಆರೋಪ ಮಾಡಿದ್ದ ಸಂಘದ ರಾಜ್ಯಾಧ್ಯಕ್ಷ ಕೆಂಪಣ್ಣ (Karnataka State Contractors Association State President Kempanna) ಈಗ ರಾಜ್ಯ ಸರ್ಕಾರದ (State Congress Government) ವಿರುದ್ಧ ಮತ್ತೆ ಗುಡುಗಲು ಸಿದ್ಧರಾಗಿದ್ದಾರೆ. ಸರ್ಕಾರ ಅಸ್ತಿತ್ವಕ್ಕೆ ಬಂದು ಐದು ತಿಂಗಳಾದರೂ ಬಾಕಿ ಬಿಲ್‌ (Pending Contract Bill) ಬಿಡುಗಡೆ ಆಗದೇ ಇರುವ ಹಿನ್ನೆಲೆಯಲ್ಲಿ ಶುಕ್ರವಾರ (ಅಕ್ಟೋಬರ್‌ 13) ಸುದ್ದಿಗೋಷ್ಠಿಯನ್ನು ಕರೆದಿದ್ದಾರೆ. ಈ ಮೂಲಕ ರಾಜ್ಯ ಸರ್ಕಾರದ ವಿರುದ್ಧ ಮುನಿಸು ತೋರಲು ಸಿದ್ಧತೆ ನಡೆಸಿದ್ದಾರೆ.

ಐದು ತಿಂಗಳಾದರೂ ಬಾಕಿ ಬಿಲ್ ಪಾವತಿಸದೇ ಇರುವ ಹಿನ್ನೆಲೆಯಲ್ಲಿ ಸಮಸ್ಯೆ ಮತ್ತಷ್ಟು ಉಲ್ಬಣಗೊಂಡಿದೆ. ಇನ್ನೂ ಸುಮ್ಮನೆ ಇದ್ದರೆ ಆಗುವುದಿಲ್ಲ ಎಂಬ ಕಾರಣಕ್ಕೆ ಸುದ್ದಿಗೋಷ್ಠಿಯನ್ನು ಕರೆಯುತ್ತಿದ್ದಾರೆ.

ಇದನ್ನೂ ಓದಿ: Caste Census Report : ಜಾತಿ ಗಣತಿಗೆ ಸರ್ಜರಿ! ವರದಿ ಜಾರಿಗೆ ಕೈಕಮಾಂಡ್‌ ಪಟ್ಟು; ರಾಜ್ಯ ಸರ್ಕಾರಕ್ಕೆ ಇಕ್ಕಟ್ಟು

ಆಗಸ್ಟ್ 31ರ ಗಡುವು ಕೊಟ್ಟಿದ್ದ ಕೆಂಪಣ್ಣ

ಈ ಮೊದಲು ಅಂದರೆ ಆಗಸ್ಟ್‌ 11ರಂದು ಸುದ್ದಿಗೋಷ್ಠಿ ನಡೆಸಿದ್ದ ಕೆಂಪಣ್ಣ ಅವರು, ಆಗಸ್ಟ್ 31ರೊಳಗೆ ಗುತ್ತಿಗೆದಾರರ ಬಾಕಿ ಬಿಡುಗಡೆ ಆಗಬೇಕು. ಕಳೆದ 7 ತಿಂಗಳಿಂದ ಗುತ್ತಿಗೆದಾರರ ಬಾಕಿ ಇದೆ. ಚುನಾವಣೆ, ನೀತಿ ಸಂಹಿತೆ ಕಾರಣದಿಂದ ಬಾಕಿ ಮೊತ್ತ ಬಿಡುಗಡೆಯಾಗಿಲ್ಲ. ಚುನಾವಣೆ ಮುಗಿದು ಆಗಸ್ಟ್ 20ಕ್ಕೆ ಹೊಸ ಸರ್ಕಾರಕ್ಕೆ ಮೂರು ತಿಂಗಳಾಗಿದೆ. ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆಶಿ ಅವರನ್ನು ಮೂರು ತಿಂಗಳಲ್ಲಿ ಎರಡು ಬಾರಿ ಭೇಟಿಯಾಗಿದ್ದೇವೆ. ಆದರೂ ಯಾವುದೇ ಕ್ರಮವನ್ನು ಕೈಗೊಂಡಿಲ್ಲ. ಸಚಿವ ಸತೀಶ್ ಜಾರಕಿಹೊಳಿ ಹಾಗೂ ಪ್ರಿಯಾಂಕ್ ಖರ್ಗೆ ಅವರಿಗೂ ಮನವಿ ಸಲ್ಲಿಸಿದ್ದೇವೆ. ಮುಂದಿನ ವಾರ ಅಂತ ಎಲ್ಲರೂ ಸಬೂಬು ಹೇಳುತ್ತಿದ್ದಾರೆ ಎಂದು ಬೇಸರ ಹೊರಹಾಕಿದ್ದರು.

ಸರ್ಕಾರದಿಂದ ಈಗಾಗಲೇ ಜೂನ್ 28 ಹಾಗೂ ಜುಲೈ 30 ರಂದು ಬಾಕಿ ಮೊತ್ತ ಬಿಡುಗಡೆಗೆ ಆದೇಶ ಹೊರಡಿಸಲಾಗಿದೆ. ಆದರೂ ಈವರೆಗೆ ಯಾವುದೇ ಹಣ ಬಿಡುಗಡೆಯಾಗಿಲ್ಲ. ಜಿಲ್ಲಾ ಸಂಘಗಳಿಂದಲೂ ಈಗಾಗಲೇ ಸಚಿವರಿಗೆ ಮನವಿ ಮಾಡಲಾಗಿದೆ. ಹಾಗಾಗಿ ಆಗಸ್ಟ್‌‌ 31ರೊಳಗೆ ಬಾಕಿ ಮೊತ್ತ ಬಿಡುಗಡೆ ಮಾಡುವಂತೆ ಒತ್ತಾಯ ಮಾಡಿದ್ದೇವೆ. ಲೋಕೋಪಯೋಗಿ, ಜಲಸಂಪನ್ಮೂಲ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಬಿಬಿಎಂಪಿ ಕಾಮಗಾರಿಗಳಿಗೆ ಹಣ ಬಿಡುಗಡೆಯಾಗಿಲ್ಲ. ಸಾಲ ಮಾಡಿ ಕೋಟಿ ಕೋಟಿ ಕಾಮಗಾರಿ ಮಾಡಿದ್ದೇವೆ. ಮನೆ, ಚಿನ್ನ, ನಿವೇಶನ ಪತ್ರ ಅಡವಿಟ್ಟು ಕಾಮಗಾರಿ ಮಾಡಲಾಗಿದೆ. ಕೆಲ ಇಲಾಖೆಗಳಲ್ಲಿ ಗುತ್ತಿಗೆದಾರರಿಗೆ ಅಂತಲೇ ಹಣ ಮೀಸಲಿಡಲಾಗಿದೆ. ಸರ್ಕಾರ ಬಿಬಿಎಂಪಿಗೆ 657 ಕೋಟಿ ರೂಪಾಯಿ ಹಣ ಬಿಡುಗಡೆ ಮಾಡಿದೆ. ಆದರೆ, ಬಿಬಿಎಂಪಿ ಆಯುಕ್ತರು ಸರ್ಕಾರದಿಂದ ಆದೇಶ ಬಂದಿಲ್ಲ ಅಂತ ಸಬೂಬು ಹೇಳುತ್ತಿದ್ದಾರೆ. ಆಗಸ್ಟ್ 31ರೊಳಗೆ ಬಾಕಿ ಹಣ ಬಿಡುಗಡೆ ಆಗದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳಬೇಕಾಗಲಿದೆ ಎಂದು ಕೆಂಪಣ್ಣ ಎಚ್ಚರಿಕೆ ನೀಡಿದ್ದರು.

ಸರ್ಕಾರದ ಪರವಾಗಿ ಮಾತನಾಡಿದ್ದ ಕೆಂಪಣ್ಣ

ಹೊಸ ಸರ್ಕಾರದಲ್ಲಿ ಕಮಿಷನ್ ಬಗ್ಗೆ ಗೊತ್ತಿಲ್ಲ. ಇದುವರೆಗೂ ಯಾವುದೇ ಕಾಮಗಾರಿ ಆಗಿಲ್ಲ. ಮೂರು ತಿಂಗಳಲ್ಲಿ ಯಾವ ಕಾಮಗಾರಿಯನ್ನೂ ಕರೆದಿಲ್ಲ. ಬಿಬಿಎಂಪಿ ಕಂಟ್ರಾಕ್ಟರ್ಸ್ ಅಸೋಸಿಯೇಷನ್ ಅವರು ಇಲ್ಲೇ ಇದ್ದಾರೆ. ಕಾರ್ಯನಿರತ ಗುತ್ತಿಗೆದಾರರು ಅಂತ ಹೆಸರಲ್ಲಿ ನಡೆಸುತ್ತಿದ್ದಾರೆ. ಆಗ ಕೆಲವೇ ಅಸೋಸಿಯೇಷನ್ ಇತ್ತು. ಈಗ ಅನೇಕ ಅಸೋಸಿಯೇಷನ್ ಇದೆ. ಅವರ ಆರೋಪದ ಬಗ್ಗೆಯೂ ನಮಗೆ ಗೊತ್ತಿಲ್ಲ ಎಂದು ಕೆಂಪಣ್ಣ ಹೇಳಿದ್ದರು.

ಇದನ್ನೂ ಓದಿ: Operation Hasta : 40 ನಾಯಕರ ಅರ್ಜಿ ನನ್ನ ಮುಂದಿದೆ; ಸ್ಥಳೀಯರ ಜತೆ ಚರ್ಚಿಸಿ ಸೇರ್ಪಡೆ: ಡಿ.ಕೆ. ಶಿವಕುಮಾರ್

15% ಆರೋಪ ಸುಳ್ಳು ಎಂದು ಹೇಳಿದ್ದ ಕೆಂಪಣ್ಣ

ಅಜ್ಜಯ್ಯನ ಹೆಸರು ಪ್ರಸ್ತಾಪ ಮಾಡಿ ಡಿ.ಕೆ. ಶಿವಕುಮಾರ್‌ ಮೇಲೆ ಆರೋಪ ಮಾಡಿದ್ದ ಕಂಟ್ರಾಕ್ಟರ್ ಹೇಮಂತ್ ಅವರು, ತಾವು ಟೆನ್ಷನ್‌ನಲ್ಲಿ ಆಣೆ ಮಾಡಿ ಹಾಗೆ ಹೇಳಿದ್ದಾಗಿ ಪ್ರತಿಕ್ರಿಯೆ ನೀಡಿದ್ದಾರೆ. 15% ಆರೋಪ ಮಾಡಿದ್ದು ಸುಳ್ಳು ಅಂತ ಹೇಳಿದ್ದಾರೆ. ಗುತ್ತಿಗೆದಾರ ಹಾಗೆ ಹೇಳಿದ್ದು ಸುಳ್ಳು. ಅಲ್ಲದೆ, ನನಗೆ ಗೊತ್ತಿರುವಂತೆ ಡಿ.ಕೆ. ಶಿವಕುಮಾರ್‌ ಅವರು ಕಮಿಷನ್‌ ಕೇಳುವ ವ್ಯಕ್ತಿ ಅಲ್ಲ ಎಂದು ಕೆಂಪಣ್ಣ ಸ್ಪಷ್ಟನೆ ನೀಡಿದ್ದರು. ಈಗ ಸರ್ಕಾರದ ವಿಳಂಬ ಧೋರಣೆಗೆ ಆಕ್ರೋಶಗೊಂಡಿದ್ದಾರೆ.

Exit mobile version