Site icon Vistara News

ವಿಸ್ತಾರ Interview | ತ್ರಿವರ್ಣ ಧ್ವಜದ ಮೇಲೆ ಕಾಂಗ್ರೆಸ್‌ಗೆ ಹೆಚ್ಚು ಅಧಿಕಾರವಿದೆ: ಡಿ.ಕೆ. ಶಿವಕುಮಾರ್‌

DK shivakumar interview 1

ಮಾರುತಿ ಪಾವಗಡ, ಬೆಂಗಳೂರು
ಆಗಸ್ಟ್​ 15ಕ್ಕೆ ನಡೆಯುತ್ತಿರುವ ಸ್ವಾತಂತ್ರ್ಯ ಅಮೃತ ಮಹೋತ್ಸವವನ್ನು ರಾಜ್ಯದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್​ ಪ್ರತಿಷ್ಠೆಯಾಗಿ ತೆಗೆದುಕೊಂಡಿವೆ. ಕಾಂಗ್ರೆಸ್​ 224 ವಿಧಾನಸಭಾ ಕ್ಷೇತ್ರಗಳಲ್ಲೂ ಕಾಲ್ನಡಿಗೆ ಮೂಲಕ ಜನರ ಗಮನ ಸೆಳೆಯಲು ಮುಂದಾಗಿದ್ರೆ. ಮನೆ ಮನೆಗೂ ಬಾವುಟ ಎನ್ನುವ ಕಾರ್ಯಕ್ರಮದಿಂದ ಜನರಿಗೆ ಇನ್ನಷ್ಟು ಹತ್ತಿರವಾಗಲು ಬಿಜೆಪಿ ಪ್ಲ್ಯಾನ್‌ ಮಾಡಿದೆ. ಈ ಎಲ್ಲ ಬೆಳವಣಿಗೆಗಳ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ‘ವಿಸ್ತಾರ ನ್ಯೂಸ್’​ ಜತೆ ಎಕ್ಸ್​​ಕ್ಲೂಸಿವ್ ಆಗಿ​​ ಮಾತನಾಡಿದ್ದಾರೆ.

1. ಆಗಸ್ಟ್​​ 15ಕ್ಕೆ ನಗರದಲ್ಲಿ ಕಾಂಗ್ರೆಸ್​​​ ಕಾಲು ನಡಿಗೆಯ ಉದ್ದೇಶವೇನು?
ಡಿ.ಕೆ. ಶಿವಕುಮಾರ್​: ಮಹಾತ್ಮಾ ಗಾಂಧಿ, ನೆಹರೂ ಸೇರಿದಂತೆ ಹಲವರ ಹೋರಾಟದಿಂದ ನಮಗೆ ಸ್ವಾತಂತ್ರ್ಯ ಸಿಕ್ಕಿದೆ. ಇಂದು ಸಹ ದೇಶದಲ್ಲಿ ಸ್ವಾತಂತ್ರ್ಯ ಪೂರ್ವ ದಿನಗಳನ್ನು ನೋಡುತ್ತಿದ್ದೇವೆ. ಹೀಗಾಗಿ ಮೂರು ತಿಂಗಳ ಹಿಂದೆ ನಡೆದ ಎಐಸಿಸಿ ಸಭೆಯಲ್ಲಿ ಸಲಹೆ ಕೊಟ್ಟೆ. 75 ಕಿ.ಮೀ. ಪಾದಯಾತ್ರೆ ಮಾಡಬೇಕು ಎಂದು ಹೇಳಿದೆ. ಇದಕ್ಕೆ ಕೇಂದ್ರದ ನಾಯಕರು ಒಪ್ಪಿದರು. ರಾಜ್ಯದಲ್ಲಿ 224 ವಿಧಾನಸಭಾ ಕ್ಷೇತ್ರಗಳಲ್ಲೂ ಪಾದಯಾತ್ರೆ ಮಾಡುವಂತೆ ಸೂಚಿಸಿದೆ. ಹೀಗಾಗಿ ನಮ್ಮ ಕಾರ್ಯಕರ್ತರು ಪಾದಯಾತ್ರೆ ಮಾಡಿ ಜನರ ಸಮಸ್ಯೆ ಕೇಳಿದ್ದಾರೆ. ಇದನ್ನು ಹಬ್ಬದ ರೀತಿ ಜನ ಆಚರಿಸುತ್ತಿದ್ದಾರೆ. ಇದಕ್ಕಿಂತಲೂ ಸಂತೋಷ ನಮಗೇನು ಬೇಕು?

2. ಸ್ವಾತಂತ್ರಪೂರ್ವ ದಿನಗಳನ್ನು ನೋಡುತ್ತಿದ್ದೇವೆ ಎಂದು ಹೇಳುತ್ತೀರಿ. ಹಾಗಾದರೆ ನಿಮ್ಮ ಹಾಗೂ ಜನರ ಸ್ವಾಥಂತ್ರ್ಯಕ್ಕೆ ದಕ್ಕೆ ಆಗಿದೆಯೇ?
ದೇಶದಲ್ಲಿ ಅಘೋಷಿತ ತುರ್ತುಪರಿಸ್ಥಿತಿ ನಿರ್ಮಾಣವಾಗಿದೆ. ಈ ಬಗ್ಗೆ ಜನರಿಗೂ ಗೊತ್ತಿದೆ. ನಾನು ಈಗ ರಾಜಕಾರಣ ಮಾತನಾಡುವುದಿಲ್ಲ. ನಾನು ಕರೆ ಕೊಟ್ಟ ಬಳಿಕ 70 ಸಾವಿರ ಜನ ನೊಂದಣಿ ಮಾಡಿದ್ದಾರೆ. 1.5 ಲಕ್ಷ ಬಾವುಟ ರೆಡಿ ಮಾಡಿದ್ದೇವೆ. ಯುವಕರು ಹೆಚ್ಚು ಜನ ನೊಂದಣಿ ಮಾಡಿಕೊಂಡಿದ್ದಾರೆ. ದೇಶಕ್ಕೆ ಕಾಂಗ್ರೆಸ್​ ಸ್ವಾತಂತ್ರ್ಯ ತಂದು ಕೊಟ್ಟಿದೆ, ಪ್ರಜಾಪ್ರಭುತ್ವ ಸರ್ಕಾರ ರಚನೆಯಾಗಲು ಕಾರಣವಾಗಿದೆ. ಸಂವಿಧಾನ ಸೃಷ್ಟಿಗೆ ಕಾರಣವಾಗಿದೆ. ತ್ರಿವರ್ಣ ಧ್ವಜ ತಯಾರು ಮಾಡಿದ್ದು ನಾವು, ಹೀಗಾಗಿ ಬಾವುಟ ಮತ್ತು ದೇಶದ ಮೇಲೆ ಬೇರೆ ಪಕ್ಷಗಿಂತಲೂ ಹೆಚ್ಚು ಅಧಿಕಾರ ನಮಗಿದೆ.

3. ಆಗಿನ ಕಾಂಗ್ರೆಸ್​​ ಬೇರೆ..? ಈಗಿರುವ ಕಾಂಗ್ರೆಸ್​ ಬೇರೆ ಅಲ್ಲವೇ? ಈ ಆರೋಪವನ್ನು ಬಿಜೆಪಿ ಮಾಡುತ್ತಿದೆ.
ಬಿಜೆಪಿಯವರು ಹಾಗೆ ಹೇಳುತ್ತಾರೆ. ಅದನ್ನು ನಾವು ಸೀರಿಯಸ್‌ ಆಗಿ ತೆಗೆದುಕೊಳ್ಳುವುದಿಲ್ಲ. ಅವರಿಗೆ ತಡೆದುಕೊಳ್ಲಲು ಆಗುತ್ತಿಲ್ಲ. ನಮಗೆ ಇಂತಹ ಅವಕಾಶ ಸಿಗಲಿಲ್ಲ ಎನ್ನುವ ಕೊರಗು ಬಿಜೆಪಿಯವರಿಗಿದೆ. ನಮ್ಮ ಪಕ್ಷದ ಧ್ವಜವೇ ನಮ್ಮ ರಾಷ್ಟ್ರ ಧ್ವಜ ಆಗಿದೆ. ಇಂತಹ ಅವಕಾಶ ಬಿಜೆಪಿ ಸೇರಿದಂತೆ ಯಾವ ಪಕ್ಷದ ನಾಯಕರು, ಕಾರ್ಯಕರ್ತರಿಗೆ ಇಲ್ಲ.

ಡಿ.ಕೆ. ಶಿವಕುಮಾರ್‌

4. ಸ್ವಾತಂತ್ರ್ಯಕ್ಕೆ ಕಾಂಗ್ರೆಸ್​ ಬಿಟ್ಟರೆ ಬೇರೆಯವರ ಕೊಡುಗೆ ಇಲ್ಲವೇ..?
ನಾವು ತಯಾರಿಸಿದ ಊಟವನ್ನು ಕೆಲವರು ಈಗ ಬಡಿಸಿಕೊಳ್ಳುತ್ತಿದ್ದಾರೆ. ದೇಶಕ್ಕೆ ಸಂವಿಧಾನ ಕೊಟ್ಟು, ಮೀಸಲಾತಿ ಕೊಟ್ಟು, ಅದರ ಫಲ ಈಗ ಅನುಭವಿಸುತ್ತಿದ್ದಾರೆ. ನಾವು ಎಲ್ಲರಿಗೂ ಅನುಕೂಲವಾಗಲಿ ಎಂದು ಮಾಡಿದೆವು. ಈಗ ಅದನ್ನು ಅನುಭವಿಸುತ್ತಿದ್ದಾರೆ.

5. ಕಾಂಗ್ರೆಸ್​ 65 ವರ್ಷದಲ್ಲಿ ಮಾಡದ ಕೆಲಸ ಎಂಟು ವರ್ಷದಲ್ಲಿ ನಾವು ಮಾಡಿದ್ದೇವೆಂದು ಬಿಜೆಪಿಯವರು ಹೇಳ್ತಿದ್ದಾರಲ್ಲ?
15 ನೇ ತಾರೀಕು ಆದ ಬಳಿಕ ನಾನು ಈ ವಿಚಾರದ ಬಗ್ಗೆ ‘ವಿಸ್ತಾರ ನ್ಯೂಸ್’ನಲ್ಲಿ ನಡೆಯುವ ಬಹಿರಂಗ ಚರ್ಚೆಗೆ ಸಿದ್ಧ. ಆ ಕಡೆಯಿಂದ ನನಗೆ ಸರಿ ಸಮಾನರಾದ ನಾಯಕ ಬರಲಿ.

6. ಕೆಪಿಸಿಸಿ ಅಧ್ಯಕ್ಷರಾದ ಬಳಿಕ ಸಂಘಟನೆ ಮಾಡಲು ಭಾರೀ ವೇಗದಲ್ಲಿ ಓಡುತ್ತಿದ್ದೀರಿ, ಆದರೆ ನಿಮಗೆ ಸ್ಪೀಡ್‌ ಬ್ರೇಕ್‌ ಬೀಳುತ್ತಿದೆಯಲ್ಲ?
ಯಾರು ಬ್ರೇಕ್​ ಹಾಕಿದವರು? ಬ್ರೇಕ್​ ಇಲ್ಲ, ಆದರೆ ವೆಹಿಕಲ್‌ಗೆ ಬ್ರೇಕ್​ ಅವಶ್ಯಕ. ಉಬ್ಬು ತಗ್ಗು ಬರುತ್ತದೆ, ಓರೆಕೋರೆಗಳು ಬರುತ್ತವೆ. ಎಲ್ಲವನ್ನೂ ನಿಭಾಯಿಸಿಕೊಂಡು ಹೋಗಬೇಕು. ಹಾಗಾಗಿ ಬ್ರೇಕ್​​ ಇರಬೇಕು. ರಾಜಕೀಯ ವಾಹನವಾಗಲಿ, ಜೀವನದ ವಾಹನವಾಗಲಿ ನಾವು ಬ್ಯಾಲೆನ್ಸ್​ ಮಾಡಿಕೊಂಡು ಹೋಗಬೇಕು.

7. ಮೆಜೆಸ್ಟಿಕ್‌ನಿಂದ ನ್ಯಾಷನಲ್​ ಕಾಲೇಜುವರೆಗೂ ಸಿದ್ದರಾಮಯ್ಯ ನೀವು ಒಟ್ಟಾಗಿ ನಡೆಯುತ್ತಿದ್ದೀರಾ.?
ಇದರಲ್ಲಿ ನಿಮಗೆ ಅನುಮಾನ ಬೇಡ. ನಮ್ಮಲ್ಲಿ ಯಾವುದೇ ಭಿನ್ನಾಭಿಪ್ರಾಯಗಳು ಇಲ್ಲ. ನಾವು ಒಟ್ಟಾಗಿದ್ದೇವೆ. ಸಾಮೂಹಿಕ ನಾಯಕತ್ವದಲ್ಲಿ ಮುನ್ನಡೆಯುತ್ತೇವೆ. ಇಡೀ ಪಕ್ಷ ಒಂದು, ಕಾರ್ಯಕ್ರಮ ಒಂದೇ, ಸಾಮೂಹಿಕ ನಾಯಕತ್ವವೇ ನಮ್ಮ ಶಕ್ತಿ.

8. ಸಿದ್ದರಾಮೋತ್ಸವದಲ್ಲಿ ಸಿದ್ದರಾಮಯ್ಯ ಶಕ್ತಿ ಪ್ರದರ್ಶನವಾಯಿತು- ಈಗ ನಗರದಲ್ಲಿ ಡಿಕೆಶಿ ಶಕ್ತಿ ಪ್ರದರ್ಶನ ಅನ್ನೋ ಟೀಕೆ ಕೇಳಿ ಬರುತ್ತಿದೆ.
ನನಗೆ ಯಾವ ಶಕ್ತಿ ಬೇಡ, ದೇಶದ ಶಕ್ತಿಯೇ ನನಗೆ ಇದೆ. ಕಾಂಗ್ರೆಸ್​ ಶಕ್ತಿ ನನಗಿದೆ. ಕಾಂಗ್ರೆಸ್​ ಇತಿಹಾಸ ದೇಶದ ಇತಿಹಾಸ, ಕಾಂಗ್ರೆಸ್​ ಶಕ್ತಿ ದೇಶದ ಶಕ್ತಿ.

9. ಆಗಸ್ಟ್​ 15ಕ್ಕೆ ಬೆಂಗಳೂರು ಕೇಂದ್ರ ಮಾಡಿಕೊಂಡು ಶಕ್ತಿ ಪ್ರದರ್ಶನಕ್ಕೆ ಮುಂದಾಗಿದ್ದೀರಾ?
ನಾನು ಬಿಜೆಪಿ ಜತೆ ಕಾಂಪಿಟ್​ ಮಾಡುವುದಕ್ಕೆ ಹೋಗುವುದಿಲ್ಲ. ಅವರದ್ದೇ ಸರ್ಕಾರ ಇದೆ. ಶಾಲೆಯ ಮಕ್ಕಳನ್ನು, ನೌಕರರನ್ನು, ಫಲಾನುಭವಿಗಳನ್ನು ಕರೆದುಕೊಂಡು ಬರುತ್ತಾರೆ. ಅದನ್ನು ನಾನು ಮಾಡಲು ಸಾಧ್ಯವಿಲ್ಲ. ನನಗೆ ಅದರ ಅವಶ್ಯಕತೆ ಇಲ್ಲ. ನನಗೆ ಸ್ವಇಚ್ಚೆಯಿಂದ ಪಕ್ಷಾತೀತವಾಗಿ ಬಂದು ರಾಷ್ಟ್ರಧ್ವಜ ಹಿಡಿದು ಹೆಜ್ಜೆ ಹಾಕುವವರು ಬೇಕು.

10. ನಿಮ್ಮ ಶಾಸಕರು,ಮುಖಂಡರಿಗೆ ಜನ ಸೇರಿಸಲು ಟಾಸ್ಕ್​ ಕೊಟ್ಟಿಲ್ಲವೇ..?
ಕೆಪಿಸಿಸಿಯಿಂದ ಜನ ಸೇರಿಸಲು ಟಾಸ್ಕ್​ ಕೊಟ್ಟಿಲ್ಲ. ಸ್ವಚ್ಚೆಯಿಂದ ಎಲ್ಲ ಬರುವಂತೆ ಹೇಳಿದ್ದೇವೆ. ಮಹಿಳೆಯರು, ಯುವಕರಿಗೂ ಕರೆ ಕೊಟ್ಟಿದ್ದೇವೆ. ಯಾವುದೇ ಒತ್ತಾಯ ಮಾಡಿಲ್ಲ. ರಾಷ್ಟ್ರದ ಧ್ವಜ ಹಿಡಿದು ರಾಷ್ಟ್ರಕ್ಕಾಗಿ ಹೆಜ್ಜೆ ಹಾಕಲಿ.

11. ಬಾವುಟ ಯಾರ ಸ್ವತ್ತು ಅಲ್ಲ, ಮನೆ ಮನೆಗೂ ಬಾವುಟ ಹಾರಿಸುತ್ತಿದ್ದೇವೆಂದು ಬಿಜೆಪಿ ಅಭಿಯಾನ ಮಾಡುತ್ತಿದೆಯಲ್ಲ?
ಅವರು ಬಾವುಟ ಕೊಡುವುದಕ್ಕೆ ನಮ್ಮ ತಕಾರರು ಇಲ್ಲ. ಆದರೆ ಹಣ ತೆಗೆದುಕೊಂಡು ಬಾವುಟ ಕೊಟ್ಟಿದಕ್ಕೆ ನಮ್ಮ ಆಕ್ಷೇಪ ಇದೆ. ಸರ್ಕಾರ ಇದೆ, ಉಚಿತವಾಗಿ ಏಕೆ ಕೊಡಲಿಲ್ಲ? ಒಂದು ಕೆ.ಜಿ. ಅಕ್ಕಿ ಮೌಲ್ಯ 30 ರೂಪಾಯಿ. ಒಂದು ಬಾವುಟ ಮೂವತ್ತು ರೂಪಾಯಿ. ಅದಕ್ಕೆ ಏಕೆ ದುಡ್ಡು ತೆಗೆದುಕೊಳ್ಳುತ್ತಾರೆ?

12. ಈಗ ಉಚಿತವಾಗಿ ಧ್ವಜ ನೀಡುತ್ತಿದ್ದಾರೆ
ಇದರ ಬಗ್ಗೆ ನನಗೆ ಗೊತ್ತಿಲ್ಲ. ನಾವು ಮಾತನಾಡಿದ ಮೇಲೆ ಉಚಿತವಾಗಿ ಕೊಡುತ್ತಿರಬಹುದು, ಗೊತ್ತಿಲ್ಲ. ನಮ್ಮ ಕಾರ್ಯಕ್ರಮಕ್ಕೆ ಬರುವವರಿಗೆ ಧ್ವಜ, ಟಿ ಶರ್ಟ್ ಕ್ಯಾಪ್​ ಕೊಡುತ್ತಿದ್ದೇವೆ.

17. ನಿಮ್ಮ 60 ವರ್ಷದಲ್ಲಿ ಸ್ವಾತಂತ್ರ್ಯವನ್ನು ಹೇಗೆ ಅನುಭವಿಸಿದ್ದೀರಿ? ಕಳೆದ ಎಂಟು ವರ್ಷಗಳ ನಿಮ್ಮ ಸ್ವಾತಂತ್ರದ ಅನುಭವ ಹೇಗಿದೆ?
ಸ್ವಾತಂತ್ರ ಬಂದ ಮೇಲೆ ಪ್ರಜಾಪ್ರಭುತ್ವ ಬಂತು, ಬಳಿಕ ಬಹಳಷ್ಟು ಬದಲಾವಣೆ ಆಗಿದೆ. ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ, ಮಾಧ್ಯಮರಂಗ ಇದೆ. ಒಬ್ಬರನ್ನು ಇನ್ನೊಬ್ಬರು ಪ್ರಶ್ನೆ ಮಾಡುವ ಅಧಿಕಾರ ಮತ್ತು ಸ್ವಾತಂತ್ರ ಇದೆ. ಶಾಸಕಾಂಗ ತಪ್ಪು ಮಾಡಿದರೆ ಕೂಡಲೇ ನ್ಯಾಯಾಂಗ ಮದ್ಯಪ್ರವೇಶ ಮಾಡುತ್ತದೆ. ಇದೇ ಸ್ವಾತಂತ್ರ್ಯದ ಫಲ. ಇದನ್ನು ನಾವು ನೋಡುತ್ತಿದ್ದೇವೆ. ಅನುಭವಿಸಿದ್ದೇವೆ.

18. ನಗರದ ಜನರೆಲ್ಲ ನಿಮ್ಮ ಕಾರ್ಯಕ್ರಮಕ್ಕೆ ಬಂದರೆ ಟ್ರಾಫಿಕ್​ ಸಮಸ್ಯೆ ಆಗುವುದಿಲ್ಲವೇ?
224 ವಿಧಾನಸಭಾ ಕ್ಷೇತ್ರಗಳಲ್ಲೂ ಪಾದಯಾತ್ರೆ ಯಶಸ್ವಿಯಾಗಿದೆ. ನಗರದಲ್ಲಿ ಯಾವುದೇ ಸಮಸ್ಯೆ ಆಗದ ರೀತಿಯಲ್ಲಿ ನೋಡಿಕೊಳ್ಳುತ್ತಿದ್ದೇವೆ. ಮೇಟ್ರೋ ಮೂಲಕ ಬನ್ನಿ ಎಂದು 50 ಸಾವಿರ ಬಲ್ಕ್​​ ಟಿಕೆಟ್​​ ಖರೀದಿ ಮಾಡಿದ್ದೇವೆ.

19. ರಾಜ್ಯದ ಜನರಿಗೆ ಸ್ವಾತಂತ್ರ್ಯ ದಿನದಂದು ನಿಮ್ಮ ಸಂದೇಶವೇನು ..?
ಪ್ರಜಾಪ್ರಭುತ್ವ ಉಳಿಸಿಕೊಳ್ಳಿ. ದೇಶ ನೂರು ವರ್ಷ ಪೂರೈಸುವಷ್ಟು ಹೊತ್ತಿಗೆ ನಿರುದ್ಯೋಗ ಇರಬಾರದು. ಅಭಿವೃದ್ಧಿ ಹೊಂದಿದ ರಾಷ್ಟ್ರ ಮಾಡಬೇಕು. ಸಾಮಾಜಿಕ ನ್ಯಾಯ, ಮಹಿಳೆಯರಿಗೆ ಅವಕಾಶ ಸಿಗಬೇಕು. ನೂರು ವರ್ಷ ಪೂರೈಸುವ ಸಮಯಕ್ಕೆ ದೇಶ ಬಲಿಷ್ಠವಾಗಬೇಕು, ಜನ ನೆಮ್ಮದಿಯಿಂದ ಇರಬೇಕು. ಸದೃಢ ಸರ್ಕಾರ ರಾಜ್ಯ ಮತ್ತು ಕೇಂದ್ರದಲ್ಲಿ ಇರಬೇಕು

21. ಪ್ರಧಾನಿಗೆ ನಿಮ್ಮ ಸಲಹೆ ಮತ್ತು ಮನವಿಯೇನು..?
ಅವರಿಗೆ ಸಲಹೆ ಕೊಡುವಷ್ಟು ದೊಡ್ಡವನು ನಾನಲ್ಲ. ಈ ದೇಶವನ್ನು ಭಾಗ ಮಾಡುವುದು ಬೇಡ. ರಾಜ್ಯವನ್ನು ಒಡೆಯುವುದು ಬೇಡ, ಸಮಾಜವನ್ನು ಭಾಗ ಮಾಡುವುದು ಬೇಡ. ದೇಶದ ಐಕ್ಯತೆಯನ್ನು ಕಾಪಾಡಿದರೆ ಸಾಕು.

Exit mobile version