ರಮೇಶ ದೊಡ್ಡಪುರ, ಬೆಂಗಳೂರು
ಇತ್ತೀಚೆಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ನಾರಾಯಣ ಜಪ ಮಾಡುತ್ತಿದ್ದಾರೆ. ಬಹುಶಃ ಇದು ಅವರಿಗೆ ಮುಂದಿನ ದಾರಿಯನ್ನು ಸುಗಮಗೊಳಿಸುತ್ತದೆ ಎಂದು ನಂಬಿರಬೇಕು. ಬೆಂಗಳೂರಿನಲ್ಲಿರಲಿ, ಮಂಡ್ಯದಲ್ಲಿರಲಿ, ರಾಮನಗರಕ್ಕೇ ಹೋಗಲಿ ಅವರ ಬಾಯಿಂದ ಕೇಳಿಬರುವುದು ಇದೇ ಜಪ.
ಅಂದಹಾಗೆ ಡಿಕೆಶಿ ಮಾಡುತ್ತಿರುವುದು ಸ್ಥಿತಿಕಾರಕ ಶ್ರೀಮನ್ ನಾರಾಯಣನ ಜಪ ಅಲ್ಲ. ಬದಲಿಗೆ, “ಯಾವಾನ್ರೋ ಅವ್ರು ಗಂಡಸರು?” ಡೈಲಾಗ್ ಖ್ಯಾತಿಯ, ಉನ್ನತ ಶಿಕ್ಷಣ ಹಾಗೂ ಐಟಿಬಿಟಿ ಸಚಿವ ಡಾ. ಸಿ.ಎನ್. ಅಶ್ವತ್ಥನಾರಾಯಣ ಅವರದ್ದು.
ಜನವರಿಯಲ್ಲಿ ರಾಮನಗರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಎದುರಲ್ಲೇ ಸಂಸದ ಹಾಗೂ ಡಿ.ಕೆ. ಶಿವಕುಮಾರ್ ಅವರ ಸಹೋದರ ಡಿ.ಕೆ. ಸುರೇಶ್ ಜತೆಗೆ ಅಶ್ವತ್ಥನಾರಾಯಣ ನಡೆಸಿದ್ದ ಜಗಳವನ್ನು ರಾಜ್ಯವೇ ನೋಡಿತ್ತಲ್ಲ? ಅನೇಕರ ಗಂಡಸ್ತನಕ್ಕೆ ಸವಾಲುಗಳನ್ನೊಡ್ಡಿದ ದಿನ ಅದು. ಗಂಡಸ್ತನ ಇದ್ರೆ ಕೆಲಸದಲ್ಲಿ ತೋರಿಸ್ರೋ… ಎಂದು ಅಶ್ವತ್ಥನಾರಾಯಣ ಆವಾಜ್ ಹಾಕಿದ ಸುದಿನ. ಹಾಗೆಯೇ ಅದು ಡಿಕೆಶಿ ಜಪದ ಆರಂಭದ ದಿನ. ರಾಮನಗರದಲ್ಲಿ ಡಿಕೆ ಸಹೋದರರ ಕೋಟೆಯನ್ನು ಅಲುಗಾಡಿಸುವುದು ಅಷ್ಟು ಸುಲಭದ ಮಾತಲ್ಲ. ಗೌಡರಂಥ ಗೌಡ, ದೇವೇಗೌಡರ ಕುಟುಂಬವೇ ಅಲ್ಲಲ್ಲಿ ಗುಟುರು ಹಾಕಿ ಇನ್ನೆಲ್ಲೊ ಅಡ್ಜಸ್ಟ್ ಮಾಡಿಕೊಂಡು ಹೋಗುತ್ತಿರುತ್ತದೆ. ಅಂಥದ್ದರಲ್ಲಿ ಮಲ್ಲೇಶ್ವರದಂತಹ ಸಿಟಿಯ ಶಾಸಕನೊಬ್ಬ ತಮ್ಮನ್ನು ಅಲುಗಾಡಿಸುತ್ತಾನೆ ಎಂದರೆ ಹೇಗೆ ತಾಳುವುದು?
ಇದನ್ನೂ ಓದಿ | ಸಚಿವ ಅಶ್ವತ್ಥನಾರಾಯಣ ವಿರುದ್ಧ ನೀತಿ ಸಂಹಿತೆ ಉಲ್ಲಂಘನೆ ದೂರು, ನೋಟಿಸ್
ಪಿಎಸ್‌ಐ ಹಗರಣದಲ್ಲಿ ʼಜಪʼ
ಅಂದಿನಿಂದ ಒಂದಲ್ಲ ಒಂದು ರೀತಿಯಲ್ಲಿ ಇಬ್ಬರ ನಡುವೆ ಹಗ್ಗಜಗ್ಗಾಟ ನಡೆದೇ ಇದೆ. ಪೊಲೀಸ್ ಸಬ್ ಇನ್ಸ್ಪೆಕ್ಟರ್ ಪರೀಕ್ಷೆಯಲ್ಲಿ ನಡೆದ ಹಗರಣದಲ್ಲಿ ಕಲಬುರಗಿಯ ಬಿಜೆಪಿ ನಾಯಕಿ ಮೊದಲ ಆರೋಪಿಯಾದಳು. ಕೆಲ ದಿನದಲ್ಲಿ ಈ ವಿವಾದ ಮಂಡ್ಯ, ರಾಮನಗರಕ್ಕೂ ಕಾಲಿಟ್ಟಿತು. ಅಲ್ಲಿನ ಕೆಲ ವಿದ್ಯಾರ್ಥಿಗಳಿಂದ ಅಶ್ವತ್ಥನಾರಾಯಣ ಸಹೋದರ ಹಣ ಪಡೆದು ಪಾಸ್ ಮಾಡಿಸಿದ್ದಾರೆ ಎಂಬ ಅನುಮಾನ ಇದೆ ಎಂದು ಡಿಕೆಶಿ ಹೇಳಿದರು. ಅಶ್ವತ್ಥನಾರಾಯಣ ಅತ್ಯಂತ ಭ್ರಷ್ಟ ರಾಜಕಾರಣಿ ಎಂದರು.
ಈ ವಾದ ವಿವಾದಗಳೂ ಕೆಲ ದಿನ ನಡೆದವು. ಇದೇ ವೇಳೆಗೆ ರಾಜ್ಯಕ್ಕೆ ಅಮಿತ್ ಷಾ ಆಗಮಿಸುವವರಿದ್ದರು, ಮುಖ್ಯಮಂತ್ರಿ ಬದಲಾವಣೆ ಚರ್ಚೆಗಳೂ ಇದ್ದವು. “ಅವರು ಮುಖ್ಯಮಂತ್ರಿ ಆಗೋಕೆ ಹೊರಟಿದ್ದಾರೆ” ಎಂದು ಡಿಕೆಶಿ ಕೆಣಕಿದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಅಶ್ವತ್ಥನಾರಾಯಣ, “ನಾನು ಮುಖ್ಯಮಂತ್ರಿ ಆಗಿಬಿಟ್ಟರೆ ತಮ್ಮ ಗತಿ ಏನು ಎಂದು ಶಿವಕುಮಾರ್‌ಗೆ ಚಿಂತೆ ಆಗಿಬಿಟ್ಟಿದೆ. ಇಂಥ ಭಯ ನಮ್ಮ ಮೇಲೆ ಇರಬೇಕು. ಭಯ ಯಾವಾಗಲೂ ಒಳ್ಳೆಯದುʼ ಎಂದು ಮೌಂಟೇನ್ ಡ್ಯೂ ಜಾಹೀರಾತಿನಲ್ಲಿ ಸಲ್ಮಾನ್ ಖಾನ್ ಹೇಳುವ “ಡರ್ ಕೆ ಆಗೆ ಜೀತ್ ಹೈ” ರೀತಿ ಡೈಲಾಗ್ ಹೊಡೆದು ನಕ್ಕಿದ್ದರು.
ಇದನ್ನೂ ಓದಿ | ನಮ್ಮದು ಡಿ.ಕೆ. ಶಿವಕುಮಾರ್ ಕುಟುಂಬ ಕೆಟ್ಟೋಯ್ತ?: ಆರೋಪಕ್ಕೆ ಅಶ್ವತ್ಥನಾರಾಯಣ ಆಕ್ರೋಶ
ದಿವ್ಯಸ್ಪಂದನ ಪ್ರತ್ಯಕ್ಷ
ಒಂದು ವಾರದ ನಂತರ ಮಾತನಾಡುತ್ತ, ತಮ್ಮದೇ ಪಕ್ಷದ ನಾಯಕ ಹಾಗೂ ಮಾಜಿ ಸಚಿವ ಎಂ.ಬಿ. ಪಾಟೀಲ್ ಮತ್ತು ಅಶ್ವತ್ಥನಾರಾಯಣ ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ ಎಂದು ಕಾಲೆಳೆಯುವ ಧಾಟಿಯಲ್ಲಿ ಶಿವಕುಮಾರ್ ಹೇಳಿಕೆ ನೀಡಿದರು. ಇದಕ್ಕೆ ಮೊದಲನೆಯದಾಗಿ ಕಾಂಗ್ರೆಸ್‌ನ ಅನೇಕ ನಾಯಕರೇ ಅಂತರ ಕಾಯ್ದುಕೊಂಡರು. ಸ್ವತಃ ಎಂ.ಬಿ. ಪಾಟೀಲ್, ಕೆಪಿಸಿಸಿ ಅಧ್ಯಕ್ಷರ ಮಾತನ್ನು ಖಂಡಿಸಿದರು.
ಈ ವಿವಾದ ಇಷ್ಟಕ್ಕೇ ಸುಮ್ಮನಾಗದೆ, ಅನೇಕ ತಿಂಗಳುಗಳಿಂದ ರಾಜಕಾರಣದಿಂದಲೇ ಕಣ್ಮರೆಯಾಗಿದ್ದ ತಾರೆಯೊಂದನ್ನು ಇಡೀ ಕರ್ನಾಟಕ ನೋಡುವಂತೆ ಮಾಡಿತು ಈ ಘಟನೆ. ಯಾರ ಕೈಗೂ ಸಿಗದೇ ಇದ್ದ ಕಾಂಗ್ರೆಸ್ ನಾಯಕಿ ಹಾಗೂ ಚಿತ್ರನಟಿ ರಮ್ಯಾ ಎಂ.ಬಿ. ಪಾಟೀಲ್ ಬೆಂಬಲಿಸಿ, ಡಿಕೆಶಿ ಅವರನ್ನು ಟೀಕಿಸಿ ಟ್ವೀಟ್ ಮಾಡಿದರು. ಇದು ಶಿವಕುಮಾರ್ ಅವರಿಗೆ ಸಾಕಷ್ಟು ಹಿನ್ನಡೆಯನ್ನೇ ಉಂಟುಮಾಡಿತು.
ನೀತಿ ಸಂಹಿತೆ ಪಠಣ
ಶಿವಕುಮಾರ್ ಅವರ ನಾರಾಯಣ ಜಪ ಇಲ್ಲಿಗೇ ಮುಗಿದಿಲ್ಲ. ಇದೀಗ ದಕ್ಷಿಣ ಪದವೀಧರ ಕ್ಷೇತ್ರದ ವಿಧಾನ ಪರಿಷತ್ ಚುನಾವಣೆ ಪ್ರಚಾರ ಎಲ್ಲೆಡೆ ನಡೆಯುತ್ತಿದೆ. ಚುನಾವಣೆ ನೀತಿ ಸಂಹಿತೆಯನ್ನು ಉಲ್ಲಂಘಿಸಿದ್ದಾರೆ ಎಂದು ಮಂಡ್ಯ ಜಿಲ್ಲಾ ಕಾಂಗ್ರೆಸ್ ಸಮಿತಿ ಚುನಾವಣಾಧಿಕಾರಿಗೆ ದೂರು ನೀಡಿದೆ. ಇದೀಗ ಅಶ್ವತ್ಥನಾರಾಯಣ ಅವರಿಗೆ ಚುನಾವಣಾಧಿಕಾರಿ ನೋಟಿಸ್ ನೀಡಿದ್ದಾರೆ, ಅದಕ್ಕೆ ಅಶ್ವತ್ಥನಾರಾಯಣ ದಾವೋಸ್ನಿಂದಲೇ ಉತ್ತರ ಕಳಿಸಿದ್ದಾರೆ.
ಪಠ್ಯಪುಸ್ತಕದಲ್ಲೂ ಉನ್ನತ ಶಿಕ್ಷಣ
ಇಷ್ಟಕ್ಕೂ ಸುಮ್ಮನಾಗಲಿಲ್ಲ ಶಿವಕುಮಾರ್ ಜಪ ಅಭಿಯಾನ. ರಾಜ್ಯಾದ್ಯಂತ ನಡೆಯುತ್ತಿರುವ ಪಠ್ಯಪುಸ್ತಕ ಪರಿಷ್ಕರಣೆ ವಿವಾದದ ಕುರಿತು ಬೆಂಗಳೂರಿನಲ್ಲಿ ಡಿಕೆಶಿ ಪ್ರತಿಕ್ರಿಯಿಸಿದ್ದಾರೆ. “ಸರ್ಕಾರ ರಾಜಕೀಯ ಅಜೆಂಡಾವನ್ನು ಪಠ್ಯಕ್ರಮದಲ್ಲಿ ತರಲು ಪ್ರಯತ್ನಿಸುತ್ತಿದೆ. ಇತಿಹಾಸ ತಿರುಚಿ, ಮುಂದಿನ ಪೀಳಿಗೆಗೆ ಹೊಸ ಇತಿಹಾಸ ಸೃಷ್ಟಿಸುತ್ತಿದೆ. ಇತಿಹಾಸವನ್ನು ಯಾರೂ ಬದಲಿಸಲು ಸಾಧ್ಯವಿಲ್ಲ. ಎಲ್ಲ ಪ್ರಯತ್ನಗಳೂ ಕೆಲಕಾಲ ಮಾತ್ರ” ಎಂದರು. ಆದರೆ ಇದ್ದಕ್ಕಿದ್ದಂತೆ, ಅಶ್ವತ್ಥನಾರಾಯಣ ನಿಭಾಯಿಸುವ ಉನ್ನತ ಶಿಕ್ಷಣದತ್ತ ಅವರ ಚಿತ್ತ ಹರಿಯಿತು. “ದೇಶದ ಯಾವುದೇ ರಾಜ್ಯಗಳಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ತರಲು ಸಾಧ್ಯವಾಗಿಲ್ಲ. ಆದರೆ ರಾಜ್ಯದಲ್ಲಿ ಅನುಷ್ಠಾನಕ್ಕೆ ತರಲು ಪ್ರಯತ್ನಿಸುತ್ತಿದ್ದಾರೆ” ಎಂದುಬಿಟ್ಟರು ಶಿವಕುಮಾರ್. ಇದನ್ನು ಕೇಳುತ್ತಿದ್ದ ಪತ್ರಕರ್ತರಿಗೂ ಗೊಂದಲ. ಶಾಲಾ ಪಠ್ಯಪುಸ್ತಕಕ್ಕೂ ಉನ್ನತ ಶಿಕ್ಷಣದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿಗೂ ಏನು ಸಂಬಂಧ?. ಅಸಲಿಗೆ ಶಿವಕುಮಾರ್ ತಲೆತುಂಬ ನಾರಾಯಣನೇ ತುಂಬಿಕೊಂಡಿರುವುದರ ಫಲ ಇದು ಎಂದು ಆನಂತರ ತಿಳಿದುಬಂತು. ಈ ನಾರಾಯಣ ಜಪ, 2023ರ ಚುನಾವಣೆಯಲ್ಲಿ ತಮ್ಮ ಭದ್ರಕೋಟೆಯನ್ನು ಅಶ್ವತ್ಥನಾರಾಯಣ ಭೇದಿಸುವುದನ್ನು ತಡೆದ ನಂತರವಷ್ಟೆ ಸಮಾಪ್ತಿಯಾಗುವಂತೆ ಕಾಣುತ್ತಿದೆ.
ಇದನ್ನೂ ಓದಿ | ಅಶ್ವತ್ಥನಾರಾಯಣಗೆ ತಾಕತ್ ಇದ್ದರೆ ನನ್ನ ವಿರುದ್ಧ ದಾಖಲೆ ಬಿಡುಗಡೆ ಮಾಡಲಿ: H.D. ಕುಮಾರಸ್ವಾಮಿ ಸವಾಲು