ಬೆಳಗಾವಿ: ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಅಧಿವೇಶನ (Belagavi Winter Session) ಆರಂಭವಾಗಿದೆ. ಬರ, ರೈತರ ಸಮಸ್ಯೆ, ಶಿಕ್ಷಣ ಸೇರಿದಂತೆ ಇನ್ನಿತರ ವಿಷಯಗಳ ಬಗ್ಗೆ ಬಿಸಿ ಬಿಸಿ ಚರ್ಚೆ ನಡೆಯುತ್ತಿದೆ. ಈ ಬಿಸಿ ಬಿಸಿ ಚರ್ಚೆಗಳ ನಡುವೆ ಕಂದಾಯ ಸಚಿವ ಕೃಷ್ಣ ಬೈರೇಗೌಡ (Revenue Minister Krishna Byre Gowda) ಅವರಿಗೆ ಬಿಸಿ ಬಿಸಿ ಕಾಫಿ ಕುಡಿಯಬೇಕು ಎಂದೆನಿಸಿದೆ. ಹೀಗಾಗಿ ಅವರು ಸೀದಾ ವಿಧಾನಸೌಧದ ಪ್ಯಾಂಟ್ರಿಗೆ (ಅಡುಗೆ ಮನೆ) ಹೋದ ಅವರು ತಾವೇ ಕಾಫಿಯನ್ನು ಸಿದ್ಧಪಡಿಸಿದ್ದಾರೆ.
ಹೌದು, ಪ್ಯಾಂಟ್ರಿಗೆ ಹೋದ ಸಚಿವ ಕೃಷ್ಣ ಬೈರೇಗೌಡ ಬಿಸಿ ಬಿಸಿ ತಾಜಾ ಕಾಫಿ ಇದೆಯಾ ಎಂದು ಕೇಳಿದ್ದಾರೆ. ಅದಕ್ಕೆ ಅಡುಗೆ ಮನೆ ಸಿಬ್ಬಂದಿ, ಇಲ್ಲ ಸರ್.., ಈಗಲೇ ಮಾಡಿಕೊಡುವೆ ಎಂದು ಹೇಳಿದ್ದಾರೆ. ಆದರೆ, ಕೃಷ್ಣ ಬೈರೇಗೌಡ ಅವರು, ಅದೆಲ್ಲ ಬೇಡ, ನಾನೇ ಮಾಡಿಕೊಳ್ಳುತ್ತೇನೆ ಎಂದು ಖುಷಿಯಿಂದಲೇ ಹಾಲನ್ನು ಖಾಯಿಸಿ ಅದಕ್ಕೆ ತಮಗೆ ಬೇಕಾದಷ್ಟು ಡಿಕಾಕ್ಷನ್ ಬೆರೆಸಿ ಘಮ ಘಮಿಸುವ ಕಾಫಿಯನ್ನು ಮಾಡಿಕೊಂಡಿದ್ದಾರೆ.
ಬಳಿಕ ಆ ಕಾಫಿಯನ್ನು ಹಿಡಿದುಕೊಂಡು ಬೆಳಗಾವಿಯ ಸುವರ್ಣಸೌಧದ ಆಡಳಿತ ಪಕ್ಷದ ಮೊಗಸಾಲೆಗೆ ಬಂದಿದ್ದು, ಅಲ್ಲಿ ಆನಂದದಿಂದ ಸವಿದಿದ್ದಾರೆ. ಹೀಗಾಗಿ ಸ್ವತಃ ತಮ್ಮ ಕಾಫಿಯನ್ನು ತಾವೇ ರೆಡಿ ಮಾಡಿಕೊಂಡಿದ್ದಾರೆ.
ಬೆಳಗಾವಿ ಅಧಿವೇಶನದಲ್ಲಿ ಈ 18 ಬಿಲ್ ಮಂಡನೆ ಸಾಧ್ಯತೆ
ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ನಡೆಯುತ್ತಿರುವ ಅಧಿವೇಶನವು ಹಲವಾರು ವಿಚಾರಗಳಿಂದ ಪ್ರಮುಖವಾಗಿದೆ. ಈ ಬಾರಿ ಅಧಿವೇಶನದಲ್ಲಿ 18 ಬಿಲ್‌ಗಳು ಮಂಡನೆಯಾಗುವ ಸಾಧ್ಯತೆ (18 bills likely to be introduced) ಇದೆ. ಈಗಾಗಲೇ ಕೆಲವು ವಿಧೇಯಕ ಸಂಬಂಧ ಸಚಿವ ಸಂಪುಟದಲ್ಲಿ ಒಪ್ಪಿಗೆಯನ್ನು ಪಡೆದುಕೊಳ್ಳಲಾಗಿದೆ.
ಕಳೆದ ಕೆಲವು ಸಚಿವ ಸಂಪುಟದಲ್ಲಿ ಹಲವು ವಿಧೇಯಕ ಸಂಬಂಧ ಪ್ರಮುಖ ನಿರ್ಣಯಗಳನ್ನು ತೆಗೆದುಕೊಳ್ಳಲಾಗಿದೆ. ಈಗಾಗಲೇ ಅಲ್ಲಿ ಅನುಮೋದನೆಯನ್ನು ಪಡೆದುಕೊಳ್ಳಲಾಗಿದ್ದು, ಈಗ ವಿಧಾನಸಭೆ ಹಾಗೂ ವಿಧಾನ ಪರಿಷತ್‌ನಲ್ಲಿ ಮಂಡಿಸಿ ಒಪ್ಪಿಗೆ ಪಡೆಯಲು ರಾಜ್ಯ ಸರ್ಕಾರ ನಿರ್ಧರಿಸಿದೆ.
ಇಂದು ಸರ್ಕಾರಿ ಕೋಟಾದಲ್ಲಿ ವೈದ್ಯಕೀಯ ಶಿಕ್ಷಣ ಪೂರೈಸಿ ಗ್ರಾಮೀಣ ಭಾಗಕ್ಕೆ ಸೇವೆಗೆ ಹಲವು ಯುವ ವೈದ್ಯರು ತೆರಳುತ್ತಿಲ್ಲ. ಈ ಹಿನ್ನೆಲೆಯಲ್ಲಿ ಗ್ರಾಮೀಣ ಭಾಗದಲ್ಲಿ ವೈದ್ಯರ ಕೊರತೆಯು ಗಣನೀಯ ಪ್ರಮಾಣದಲ್ಲಿದೆ. ಹೀಗಾಗಿ ಈ ಬಾರಿ ಪ್ರಮುಖವಾಗಿ ವೈದ್ಯಕೀಯ ಪದವೀಧರ ಕಡ್ಡಾಯ ಗ್ರಾಮೀಣ ಸೇವೆ ತಿದ್ದುಪಡಿ ವಿಧೇಯಕಕ್ಕೆ ಅನುಮೋದನೆ ಪಡೆಯಲು ರಾಜ್ಯ ಸರ್ಕಾರ ಮುಂದಾಗಿದೆ. ಇದೂ ಅಲ್ಲದೆ, ಕರ್ನಾಟಕ ಕರಾವಳಿ ಅಭಿವೃದ್ಧಿ ನಿಗಮ ತಿದ್ದುಪಡಿ ವಿಧೇಯಕ 2021, ಕರ್ನಾಟಕ ಸರಕು ಮತ್ತು ಸೇವೆಗಳ ತಿದ್ದುಪಡಿ ವಿಧೇಯಕ, ಕರ್ನಾಟಕ ಪರಿಶಿಷ್ಟ ಜಾತಿ ಪಂಗಡಗಳ ಉಪ ಮಂಜೂರಾತಿ ಮಸೂದೆ, ಕರ್ನಾಟಕ ನಗರ ಮತ್ತು ಯೋಜನೆ ತಿದ್ದುಪಡಿ ವಿಧೇಯಕ, ಕರ್ನಾಟಕ ಹಿಂದು ಧಾರ್ಮಿಕ ಸಂಸ್ಥೆಗಳು ಮತ್ತು ದತ್ತಿ ವಿಧೇಯಕ ಸೇರಿದಂತೆ ಹಲವು ಬಿಲ್‌ಗಳನ್ನು ಮಂಡಿಸಿ ಪಾಸ್ ಮಾಡಿಕೊಳ್ಳಲು ರಾಜ್ಯ ಸರ್ಕಾರ ಮುಂದಾಗಿದೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ: Belagavi Winter Session: ಚಳಿಗಾಲದ ಅಧಿವೇಶನಕ್ಕೆ ಶಾಸಕರ ಕೊರತೆ; ತೆಲಂಗಾಣದಲ್ಲಿ ಡಿಕೆಶಿ, ಜಮೀರ್!
ಈ 18 ಬಿಲ್ ಮಂಡನೆ ಸಾಧ್ಯತೆ
1) ಕರ್ನಾಟಕ ಕರಾವಳಿ ಅಭಿವೃದ್ಧಿ ನಿಗಮ ತಿದ್ದುಪಡಿ ವಿಧೇಯಕ 2021
2) ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ತಿದ್ದುಪಡಿ ವಿಧೇಯಕ 2023
3) ವೈದ್ಯಕೀಯ ಪದವೀಧರ ಕಡ್ಡಾಯ ಗ್ರಾಮೀಣ ಸೇವೆ ತಿದ್ದುಪಡಿ ವಿಧೇಯಕ
4) ಕರ್ನಾಟಕ ಸರಕು ಮತ್ತು ಸೇವೆಗಳ ತಿದ್ದುಪಡಿ ವಿಧೇಯಕ
5) ಕರ್ನಾಟಕ ಸಾರ್ವಜನಿಕ ಪರೀಕ್ಷೆಗಳ ತಿದ್ದುಪಡಿ ವಿಧೇಯಕ
6) ಗದಗ – ಬೆಟಗೇರಿ ವ್ಯಾಪಾರ ಸಂಸ್ಕೃತಿ ಮತ್ತು ವಸ್ತು ಪ್ರದರ್ಶನ ವಿಧೇಯಕ
7) ಕರ್ನಾಟಕ ಪರಿಶಿಷ್ಟ ಜಾತಿ ಪಂಗಡಗಳ ಉಪ ಮಂಜೂರಾತಿ ಮಸೂದೆ
8) ಕಾಂತ್ರಿವೀರ ಸಂಗೊಳ್ಳಿ ರಾಯಣ್ಣ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ
9) ಶ್ರೀ ರೇಣುಕಾ ಯಲ್ಲಮ್ಮ ಕ್ಷೇತ್ರ ಪ್ರವಾಸೋದ್ಯಮ ಅಭಿವೃದ್ಧಿ ಮಂಡಳಿ ರಚನೆ ವಿಧೇಯಕ
10) ಕರ್ನಾಟಕ ಅಭಿವೃದ್ಧಿ ಮಂಡಳಿ ಮೈಸೂರು ನಗರ ಅಭಿವೃದ್ಧಿ ವಿಧೇಯಕ
11) ವಿಶ್ವ ಪಾರಂಪರಿಕ ಪ್ರದೇಶ ನಿರ್ವಹಣೆ ಪ್ರಾಧಿಕಾರ
12) ಕರ್ನಾಟಕ ಹಿಂದು ಧಾರ್ಮಿಕ ಸಂಸ್ಥೆಗಳು ಮತ್ತು ದತ್ತಿ ವಿಧೇಯಕ
13) ಕರ್ನಾಟಕ ಸ್ಟಾಂಪ್ ತಿದ್ದುಪಡಿ ವಿಧೇಯಕ
14) ಕರ್ನಾಟಕ ನಗರ ಮತ್ತು ಯೋಜನೆ ತಿದ್ದುಪಡಿ ವಿಧೇಯಕ
15) ಕರ್ನಾಟಕ ಸಿವಿಲ್ ಕೋರ್ಟ್ ತಿದ್ದುಪಡಿ ವಿಧೇಯಕ
16) ಕರ್ನಾಟಕ ಹೈಕೋರ್ಟ್ ತಿದ್ದುಪಡಿ ವಿಧೇಯಕ
17) ಕರ್ನಾಟಕ ವೃತ್ತಿ ಪರ ಸಿವಿಲ್ ಎಂಜಿನಿಯರ್‌ಗಳ ಪರಿಷತ್ ಮಸೂದೆ
18) ಕರ್ನಾಟಕ ಆಡಳಿತಾತ್ಮಕ ಕಾರ್ಯ ವಿಧಾನ ಮಸೂದೆ