ಬೆಂಗಳೂರು: ಈಗಾಗಲೆ ರಾಜ್ಯದ ವಿವಿಧೆಡೆ ಸಂಚರಿಸುತ್ತಿರುವ ಪಂಚರತ್ನ ಯಾತ್ರೆ ಹಾಗೂ ಯೋಜನೆಯಲ್ಲಿ ʼರೈತ ಚೈತನ್ಯʼ ಕಾರ್ಯಕ್ರಮ ರೂಪಿಸಿರುವ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ, ಜನವರಿ 16ರಂದು, ಕೃಷಿ ಸಮಸ್ಯೆಗಳ ಬಗ್ಗೆ ರೈತರ ಜತೆ ಮುಕ್ತವಾಗಿ ಚರ್ಚಿಸಲು ರೈತ ಸಂಕ್ರಾಂತಿ ಎಂಬ ಅನ್ಲೈನ್ ಸಂವಾದ ಹಮ್ಮಿಕೊಂಡಿದ್ದಾರೆ.
ಈ ಸಂವಾದದಲ್ಲಿ ಮಾಜಿ ಪ್ರಧಾನಮಂತ್ರಿ ಹಾಗೂ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡ ಸಂದೇಶ ನೀಡಲಿದ್ದು, ಚರ್ಚೆಯನ್ನು ಅವರೂ ಆಲಿಸಲಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿರುವ ಕುಮಾರಸ್ವಾಮಿ, ಕಳೆದ 45 ದಿನಗಳಿಂದ ರಾಜ್ಯದ ಉದ್ದಗಲಕ್ಕೂ ಪಂಚರತ್ನ ರಥಯಾತ್ರೆ ನಡೆಸಿದ್ದೇನೆ. ಎಲ್ಲೆಡೆ ರೈತರು ಸಂಕಷ್ಟದಲ್ಲಿದ್ದಾರೆ. ನಾನು ಮುಖ್ಯಮಂತ್ರಿ ಆಗಿದ್ದಾಗ 2006 ಮತ್ತು 2018ರಲ್ಲಿ ಎರಡು ಬಾರಿ ಸಾಲಮನ್ನಾ ಮಾಡಿದ್ದೆ. ಆದರೂ ರೈತರ ಸಮಸ್ಯೆಗಳು ನಿವಾರಣೆ ಆಗಿಲ್ಲ. ಕೆಲ ದಿನಗಳಿಂದ ಈಚೆಗೆ ಮತ್ತೆ ರೈತರು ಜೀವ ಕಳೆದುಕೊಳ್ಳುತ್ತಿದ್ದಾರೆ. ರಾಜ್ಯದ ನಾನಾ ಭಾಗಗಳಲ್ಲಿ ಅನ್ನದಾತರು ಜೀವ ಕಳೆದುಕೊಳ್ಳುತ್ತಿರುವುದು ನನಗೆ ಅತೀವ ನೋವುಂಟು ಮಾಡಿದೆ ಎಂದು ತಿಳಿಸಿದ್ದಾರೆ.
ರೈತರು ಶಾಶ್ವತವಾಗಿ ಸಾಲಗಾರರಾಗದಂತೆ ಮಾಡುವುದು ಹಾಗೂ ಅವರಿಗೆ ಆರ್ಥಿಕ ಚೈತನ್ಯ ಕಲ್ಪಸುವ ಉದ್ದೇಶದಿಂದ ರೂಪಿಸಿರುವ ʼರೈತ ಚೈತನ್ಯʼ ಕಾರ್ಯಕ್ರಮದ ಬಗ್ಗೆ ಅನ್ನದಾತರಿಗೆ ಈ ಸಂವಾದದಲ್ಲಿ ಮನವರಿಕೆ ಮಾಡಿಕೊಡುತ್ತೇನೆ. ಕೃಷಿ ಸಮಸ್ಯೆಗಳ ಬಗ್ಗೆ ಇನ್ನಷ್ಟು ಪರಿಣಾಮಕಾರಿಯಾಗಿ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ನಾನು ರೈತರ ಜತೆ ಸಂವಾದ ನಡೆಸುತ್ತಿದ್ದೇನೆ ಎಂದು ಅವರು ಹೇಳಿದ್ದಾರೆ.
ಬಿಡದಿಯ ನನ್ನ ತೋಟದಲ್ಲಿ ʼರೈತ ಸಂಕ್ರಾಂತಿʼ ಸಂವಾದ ಹಮ್ಮಿಕೊಳ್ಳಲಾಗಿದೆ. ಅಹರಾಹ್ನ 3.30ರಿಂದ ಸಂಜೆ ೫ ಗಂಟೆವರೆಗೂ ರೈತರ ಜತೆ ಸಂವಾದ ನಡೆಸುತ್ತೇನೆ. ಸುಮಾರು 50ಕ್ಕೂ ಹೆಚ್ಚು ವಿಧಾನಸಭೆ ಕ್ಷೇತ್ರಗಳ ರೈತರ ಜತೆ ನಾನು ಅನ್ಲೈನ್ ವೇದಿಕೆ ಮೂಲಕ ನೇರ ಸಂವಾದ ನಡೆಸುತ್ತೇನೆ. ಆದರೆ, ಯಾವುದೇ ಭಾಗದ ರೈತರು ಈ ಸಂವಾದದಲ್ಲಿ ಭಾಗಿಯಾಗಬಹುದು ಹಾಗೂ ಸಮಸ್ಯೆಗಳು, ಪರಿಹಾರಗಳನ್ನು ತಿಳಿಸಬಹುದು ಎಂದು ಅವರು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ | Karnataka Election : ಪಂಚರತ್ನ ಯಾತ್ರೆಯಲ್ಲಿ ಕಾಣಿಸದ ರೇವಣ್ಣ ಕುಟುಂಬ; ಭಿನ್ನರ ಜತೆ ಶಕ್ತಿ ಪ್ರದರ್ಶನ ಮಾಡಿದ ಸೂರಜ್ ರೇವಣ್ಣ!