ಬೆಂಗಳೂರು: ಕಾಂಗ್ರೆಸ್ ಪಕ್ಷದ ಮುಖಂಡರ ವಿರುದ್ಧ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಕಿಡಿಕಾರಿದ್ದಾರೆ. ಸಿದ್ಧರಾಮಯ್ಯ ಕಾಂಗ್ರೆಸ್ ಪಕ್ಷದ ಡೋಂಗಿ ಜಾತ್ಯಾತೀತ ನಾಯಕರು ಎಂದು ಕರೆಯುವ ಮೂಲಕ ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ಜೆಡಿಎಸ್ ಪಕ್ಷ ಯಾವುದೇ ಪಕ್ಷದ ಬಿ ಟೀಂ ಅಲ್ಲ ಎಂದ ಕುಮಾರಸ್ವಾಮಿ, ಕಾಂಗ್ರೆಸ್‌ನವರಿಗೆ ತಕ್ಕ ಪಾಠ ಕಲಿಸುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.
ಈಚೆಗೆ ತುಮಕೂರಿನಲ್ಲಿ ಕಾಂಗ್ರೆಸ್ ನಾಯಕರು ನಮ್ಮ ಪಕ್ಷದ ಬಗ್ಗೆ ಲಘುವಾಗಿ ಮಾತಾಡಿದ್ದಾರೆ. ಅವರೇ ಜಾತಿವಾರು ಸಮಾವೇಶ ಮಾಡಿಕೊಂಡು, ತಾವು ಜಾತ್ಯಾತೀತರು ಎಂದು ಭಂಡತನ ಪ್ರದರ್ಶನ ಮಾಡುತ್ತಿದ್ದಾರೆ. ಬಿಜೆಪಿ ಜತೆ ನಾವು ಸರ್ಕಾರ ಮಾಡಿದಾಗಲೂ ಕೋಮು ಸಂಘರ್ಷಕ್ಕೆ ಅವಕಾಶ ಕೊಡಲಿಲ್ಲ. ಆದರೆ ಈಗ ಏನಾಗಿದೆ? ಅನೇಕ ತಿಂಗಳಿನಿಂದ ಸಮಾಜವನ್ನು ಒಡೆಯುವ ಘಟನೆಗಳು ನಡೆಯುತ್ತಿವೆ. ಇದಕ್ಕೆ ಕಾರಣ ಯಾರು? ಇಂತಹ ಸರ್ಕಾರ ಬರಲು ಕಾರಣ ಯಾರು ಎನ್ನುವುದು ಜನತೆಗೆ ಗೊತ್ತಿದೆ ಎಂದು ಕಾಂಗ್ರೆಸ್ ನಾಯಕರ ಮೇಲೆ ಟೀಕಾ ಪ್ರಹಾರ ನಡೆಸಿದ್ದಾರೆ.
ಇದನ್ನೂ ಓದಿ | ಕೆರೆ ನುಂಗಿ ಹಾಕಿ ಮೇಕೆದಾಟು ಎಂದರೆ ಏನು ಪ್ರಯೋಜನ?: ಕುಮಾರಸ್ವಾಮಿ ಆಕ್ರೋಶ
ಪಕ್ಷ ಉಳಿಸುವುದಕ್ಕೆ ನಾನು ಬಿಜೆಪಿ ಜತೆ ಸೇರಿ ಸರ್ಕಾರ ಮಾಡಿದೆ. ಅದೇ ರೀತಿ ಕಾಂಗ್ರೆಸ್ ಜತೆಯಲ್ಲೂ ಸೇರಿ ಸರ್ಕಾರ ಮಾಡಿದೆ. ಆದರೆ ಇವತ್ತಿಗೂ ಕಾಂಗ್ರೆಸ್ ಮುಖಂಡರು ನಮ್ಮ ಪಕ್ಷವನ್ನು ಬಿಜೆಪಿ ಬಿ ಟೀಂ ಎಂದು ಹೇಳುತ್ತಾರೆ. ಹಿಂದೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಬಿಜೆಪಿ ಸರ್ಕಾರದಲ್ಲಿ ಮಂತ್ರಿ ಆಗಿದ್ದರು. ಈಗ ಕಾಂಗ್ರೆಸ್ ಪಕ್ಷವೇ ಮಹಾರಾಷ್ಟ್ರದಲ್ಲಿ ಶಿವಸೇನೆ ಜತೆ ಸರ್ಕಾರ ಮಾಡಿದೆ. ಇದಕ್ಕೆ ಏನು ಹೇಳಬೇಕು? ಎಂದು ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.
ಕಾಂಗ್ರೆಸ್‌ನವರು ಜ್ಯಾತ್ಯಾತೀತತೆ ಬಗ್ಗೆ ಚರ್ಚೆ ಮಾಡಲು ನೈತಿಕತೆ ಉಳಿಸಿಕೊಂಡಿಲ್ಲ. ನಾನು ಯಾವ ಪಕ್ಷದ ಬಿ ಟೀಂ ಅಲ್ಲ. ನಮ್ಮ ಪಕ್ಷವನ್ನು ಅಧಿಕಾರಕ್ಕೆ ತರಲು ಶ್ರಮ ವಹಿಸುತ್ತೇವೆ ಎಂದು ಸ್ಪಷ್ಟವಾಗಿ ಹೇಳಿದರು.
ರಾಜ್ಯ ಚುನಾವಣೆಯ ಬಗ್ಗೆ ಮಾತನಾಡಿದ ಕುಮಾರಸ್ವಾಮಿ, ಮೂರು ಪಕ್ಷಕ್ಕೆ ಹೋಲಿಕೆ ಮಾಡಿದರೆ ನಮ್ಮ ಮತಗಳು ಹೆಚ್ಚಿವೆ. ನಾವು ಅಭ್ಯರ್ಥಿಯನ್ನು ಕಣಕ್ಕೆ ಇಳಿಸುತ್ತೇವೆ. ಉಳಿದ ಪಕ್ಷಗಳೂ ಒಂದಿಷ್ಟು ಲೆಕ್ಕಾಚಾರ ಮಾಡುತ್ತಿದ್ದು, ನಾವು ಇಲ್ಲಿಯವರೆಗೆ ಯಾವುದೇ ಚರ್ಚೆಯನ್ನು ಯಾರ ಜೊತೆಯೂ ಮಾಡಿಲ್ಲ. ನಾಲ್ಕನೇ ಅಭ್ಯರ್ಥಿಗೆ ಮೊದಲ ಪ್ರಾಶಸ್ತ್ಯದ ಮತ ಅವರಿಗೂ ಇಲ್ಲ ಎಂದು ಹೇಳಿದರು.
ಇದನ್ನೂ ಓದಿ: ಜನತಾ ಜಲಧಾರೆ ಯಶಸ್ಸಿಗೆ ತಾಯಿ ಚಾಮುಂಡಿಗೆ ವಿಶೇಷ ಪೂಜೆ ಸಲ್ಲಿಸಿದ ಎಚ್.ಡಿ. ಕುಮಾರಸ್ವಾಮಿ