Site icon Vistara News

Rajya Sabha Election: ರಾಜ್ಯಸಭೆಗೆ 5ನೇ ಅಭ್ಯರ್ಥಿಯಾಗಿ ಕುಪೇಂದ್ರ ರೆಡ್ಡಿ; ನಿಜ ಕಾರಣ ಬಿಚ್ಚಿಟ್ಟ ಬಿ.ವೈ. ವಿಜಯೇಂದ್ರ

Kupendra Reddy to be Rajya Sabha election 5th candidate BY Vijayendra reveals reason

ಬೆಂಗಳೂರು: ರಾಜ್ಯಸಭಾ ಚುನಾವಣೆಗೆ (Rajya Sabha Election) ಐದನೇ ಅಭ್ಯರ್ಥಿಯಾಗಿ, ಜೆಡಿಎಸ್ ಬಿಜೆಪಿ ಮೈತ್ರಿ (JDS- BJP) ಮೂಲಕ ಕುಪೇಂದ್ರ ರೆಡ್ಡಿ (D Kupendra Reddy) ಅಖಾಡಕ್ಕೆ ಇಳಿದಿದ್ದಾರೆ. ಅವರು ಇಂದು ನಾಮಪತ್ರವನ್ನೂ ಸಲ್ಲಿಸಲಿದ್ದಾರೆ. ಆದರೆ, ಏಕಾಏಕಿ ಈ ನಿರ್ಧಾರಕ್ಕೆ ಬಂದಿದ್ದು ಯಾಕೆ? ಈ ತೀರ್ಮಾನವನ್ನು ಮಾಡಿದ್ದು ಯಾರು? ಗೆಲ್ಲಲು ಬಿಜೆಪಿ – ಜೆಡಿಎಸ್‌ ಯಾವ ರಣತಂತ್ರವನ್ನು ಹೆಣೆಯಲಿದೆ? ಎಂಬಿತ್ಯಾದಿ ಅಂಶಗಳ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದ್ದಾರೆ.

ಮಾಧ್ಯಮದವರೊಂದಿಗೆ ಮಾತನಾಡಿದ ಬಿ.ವೈ. ವಿಜಯೇಂದ್ರ‌, ರಾಜ್ಯಸಭಾ ಚುನಾವಣೆಗೆ ಅಭ್ಯರ್ಥಿಯಾಗಿ ಕುಪೇಂದ್ರ ರೆಡ್ಡಿ ಅವರು ನಾಮಪತ್ರ ಸಲ್ಲಿಸುತ್ತಿದ್ದಾರೆ. ಕುಪೇಂದ್ರ ರೆಡ್ಡಿ ಅವರು ನಾಮಪತ್ರ ಸಲ್ಲಿಸುತ್ತಿದ್ದಾರೆ ಎಂದರೆ ಜೆಡಿಎಸ್ ಕಾರ್ಯತಂತ್ರಗಳು ಇದ್ದೇ ಇರುತ್ತದೆ. ಜೆಡಿಎಸ್ ಪಕ್ಷ ಎನ್‍ಡಿಎ ಕೂಟಕ್ಕೆ ಸೇರಿದ ನಂತರ ಯಾವುದೇ ಹೋರಾಟ ಮತ್ತು ತೀರ್ಮಾನಗಳನ್ನು ಜಂಟಿಯಾಗಿಯೇ ತೆಗೆದುಕೊಳ್ಳುತ್ತಿದ್ದೇವೆ. ನಿನ್ನೆ (ಬುಧವಾರ) ನಮ್ಮ ಕೇಂದ್ರದ ವರಿಷ್ಠರು ಮತ್ತು ಜೆಡಿಎಸ್‌ನ ರಾಜ್ಯದ ಹಿರಿಯರು ಚರ್ಚೆ ಮಾಡಿದ್ದೇವೆ. ಈ ಹಿನ್ನೆಲೆಯಲ್ಲಿ ರಾಜ್ಯಸಭೆಗೆ 5ನೇ ಅಭ್ಯರ್ಥಿಯಾಗಿ ಕುಪೇಂದ್ರ ರೆಡ್ಡಿಯವರನ್ನು ಕಣಕ್ಕೆ ಇಳಿಸಲು ನಿರ್ಧರಿಸಿದ್ದಾಗಿ ವಿವರಿಸಿದರು.

ಬಿಜೆಪಿ- ಜೆಡಿಎಸ್ ಒಟ್ಟಾಗಿ ನಮ್ಮ ಅಭ್ಯರ್ಥಿ ಗೆಲ್ಲುವ ದೃಷ್ಟಿಯಿಂದ ತಂತ್ರಗಾರಿಕೆಯನ್ನು ಮುಂದಿನ ದಿನಗಳಲ್ಲಿ ರೂಪಿಸಲಿದ್ದೇವೆ. ಬೇಕಾದ ಹೆಚ್ಚುವರಿ ಮತಗಳ ಕುರಿತು ಚರ್ಚಿಸುತ್ತೇವೆ ಎಂದು ಬಿ.ವೈ. ವಿಜಯೇಂದ್ರ ಅವರು ಮಾಧ್ಯಮದವರ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಈ ಬಜೆಟ್‌ನಲ್ಲಿ ಏನನ್ನು ನಿರೀಕ್ಷೆ ಮಾಡಲು ಸಾಧ್ಯ?

ಸಿದ್ದರಾಮಯ್ಯ ಅವರಿಂದ ಬಜೆಟ್ ಮೂಲಕ ಏನನ್ನು ನಿರೀಕ್ಷಿಸಲು ಸಾಧ್ಯ ಎಂಬುದು ತಮಗೇ ಗೊತ್ತಿದೆ. ಖಜಾನೆ ಖಾಲಿ ಮಾಡಿಕೊಂಡು ಯಾವುದೇ ಅಭಿವೃದ್ಧಿ ಮಾಡದೆ ಇರುವ ರಾಜ್ಯ ಸರ್ಕಾರವು ತನ್ನ ವೈಫಲ್ಯಗಳನ್ನು ಮುಚ್ಚಿ ಹಾಕಲು ದೆಹಲಿಯಲ್ಲಿ ಹೋಗಿ ನಾಟಕ ಮಾಡಿತ್ತು. ನಾಳೆ ಅವರು ಮಂಡಿಸುವ ಬಜೆಟ್ ಬಗ್ಗೆ ಜನರೂ ನಿರೀಕ್ಷೆ ಇಟ್ಟುಕೊಂಡಿಲ್ಲ. ನಮ್ಮಲ್ಲೂ ಸಹ ರಾಜ್ಯದ ಅಭಿವೃದ್ಧಿ ದೃಷ್ಟಿಯಿಂದ, ರಾಜ್ಯದ ಹಿತದೃಷ್ಟಿಗಾಗಿ ಉತ್ತಮ ಬಜೆಟ್ ಕೊಡಬಹುದೆಂಬ ಅಪೇಕ್ಷೆ ಇಲ್ಲ ಎಂದು ಹೇಳಿದರು.

ಇದನ್ನೂ ಓದಿ: Rajya Sabha Election: ಕಾಂಗ್ರೆಸ್‌ಗೆ ಮೈತ್ರಿ ಅಭ್ಯರ್ಥಿ ಗುನ್ನ; ಕುಪೇಂದ್ರೆ ರೆಡ್ಡಿ ಸ್ಪರ್ಧೆ ಹಿಂದಿದೆ ಮಾಸ್ಟರ್‌ ಪ್ಲ್ಯಾನ್!

ಜನರ ಕಿವಿಗೆ ಹೂ ಮುಡಿಸುವ ಕೆಲಸ

ಕಾಂಗ್ರೆಸ್ ಪಕ್ಷವು ಚುನಾವಣೆ ಸಂದರ್ಭದಲ್ಲಿ ಹಲವಾರು ಸುಳ್ಳುಗಳನ್ನು ಹೇಳಿ ಜನರ ವಿಶ್ವಾಸ ಗೆದ್ದು ಅಧಿಕಾರಕ್ಕೆ ಬಂದಿತ್ತು. ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಅನೇಕ ತಂತ್ರಗಳನ್ನು ಮಾಡುತ್ತಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಗೆಲ್ಲಲು ಅವರದೇ ಆದ ತಂತ್ರಗಾರಿಕೆ, ರಾಜ್ಯದ ಜನರ ಕಿವಿಗೆ ಹೂ ಮುಡಿಸುವ ಕೆಲಸವನ್ನು ಮಾಡುತ್ತಾರೆ. ಆದರೆ, ಈ ಬಾರಿ ಅವರು ಯಶಸ್ವಿಯಾಗುವುದಿಲ್ಲ. ಜನರು ಪ್ರಜ್ಞಾವಂತರಿದ್ದಾರೆ. ಸಿದ್ದರಾಮಯ್ಯ ಅವರ ನೇತೃತ್ವದ ರಾಜ್ಯ ಸರ್ಕಾರ ಆರೆಂಟು ತಿಂಗಳಲ್ಲೇ ಜನರ ವಿಶ್ವಾಸವನ್ನು ಕಳೆದುಕೊಂಡಿದೆ. ಸಹಜವಾಗಿ ಬಜೆಟ್‍ನಲ್ಲಿ ಏನೂ ನಿರೀಕ್ಷೆ ಇಡಲು ಅಸಾಧ್ಯ ಎಂದು ಬಿ.ವೈ. ವಿಜಯೇಂದ್ರ ವಿಶ್ಲೇಷಣೆ ಮಾಡಿದರು.

Exit mobile version