Site icon Vistara News

Labour Department : ಸಿಎಂ ಕಚೇರಿ – ಕಾರ್ಮಿಕ ಸಚಿವರ ವಾರ್;‌ ಅಧಿಕಾರಿಗಳ ವರ್ತನೆಗೆ ಅʼಸಂತೋಷʼ!

Minister Santosh Lad and CM Siddaramaiah

ಬೆಂಗಳೂರು: ಸಚಿವರಿಗೆ ಈಗ ವರ್ಗಾವಣೆ ಕೋಟಾ ಮುಗಿದು ಹೋಗಿರುವ ಹಿನ್ನೆಲೆಯಲ್ಲಿ ಯಾವುದೇ ಇಲಾಖೆಯ ಅಧಿಕಾರಿಗಳು ಅಥವಾ ಸಿಬ್ಬಂದಿಯನ್ನು ವರ್ಗಾವಣೆ ಮಾಡುವುದೇನಿದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಾಗಿದ್ದಾರೆ. ಆದರೆ, ಇದೇ ಈಗ ಸಚಿವರ ಹಾಗೂ ಸಿಎಂ ಕಚೇರಿ ಅಧಿಕಾರಿಗಳ (Officials in the CM office) ನಡುವಿನ ಸಂಘರ್ಷಕ್ಕೆ ಹಾದಿಯಾಗಿದೆ. ಕಾರ್ಮಿಕ ಇಲಾಖೆ (Labour Department ) ಸಚಿವ ಸಂತೋಷ್‌ ಲಾಡ್‌ (Minister Santosh Lad) ಅವರು ಸಿಎಂ ಕಚೇರಿಯ ಅಧಿಕಾರಿಗಳ ವರ್ತನೆಗೆ ಬೇಸರಗೊಂಡಿದ್ದಾರೆ. ಅವರು ನೀಡಿದ ವರ್ಗಾವಣೆ ಶಿಫಾರಸನ್ನು ಪರಿಗಣನೆಗೇ ತೆಗೆದುಕೊಂಡಿಲ್ಲ ಎಂದು ಹೇಳಲಾಗುತ್ತಿದ್ದು, ಸಿಎಂ ಸಿದ್ದರಾಮಯ್ಯ (CM Siddaramaiah) ಅವರನ್ನೂ ಕತ್ತಲಲ್ಲಿ ಇಟ್ಟು ಆಟ ಆಡಲಾಗಿದೆ ಎಂದು ಹೇಳಲಾಗುತ್ತಿದೆ.

ವರ್ಗಾವಣೆ ವಿಚಾರವಾಗಿ ಸಿಎಂ ಕಚೇರಿ ಹಾಗೂ ಕಾರ್ಮಿಕ ಸಚಿವರ ನಡುವೆ ಈಗ ಮುಸುಕಿನ ಗುದ್ದಾಟ ಆರಂಭವಾಗಿದೆ. ವರ್ಗಾವಣೆ ಅವಧಿ ಮುಗಿದ ಬಳಿಕ ಸಚಿವರು ವರ್ಗಾವಣೆ ಮಾಡಿ ಹೊರಡಿಸಿದ್ದ ಆದೇಶವನ್ನು ಸಿಎಂ ಕಚೇರಿಯಿಂದ ರದ್ದು ಪಡಿಸಿ ಆದೇಶವನ್ನು ಹೊರಡಿಸಲಾಗಿತ್ತು. ಆದರೆ, ಈಗ ಮತ್ತೊಂದು ಆದೇಶವನ್ನು ಹೊರಡಿಸಲಾಗಿದ್ದರೂ ಇದರಲ್ಲಿ ಸಚಿವರ ಶಿಫಾರಸನ್ನು ಲೆಕ್ಕಕ್ಕೆ ಪಡೆದುಕೊಂಡಿಲ್ಲ ಎಂದು ಹೇಳಲಾಗುತ್ತಿದೆ. ಇದು ಸಚಿವ ಸಂತೋಷ್‌ ಲಾಡ್‌ ಅವರ ಆಕ್ರೋಶಕ್ಕೆ ಕಾರಣವಾಗಿದೆ ಎಂದು ಹೇಳಲಾಗಿದೆ.

ಸಚಿವರ ಶಿಫಾರಸು ಪತ್ರಕ್ಕೆ ಸಿಎಂ ಕಚೇರಿ ಅಧಿಕಾರಿಗಳು ಡೋಂಟ್ ಕೇರ್ ಎಂದು ಹೇಳುತ್ತಿದ್ದಾರೆಯೇ ಎಂಬ ಅನುಮಾನ ಈಗ ಮೂಡಿದೆ. ಇಂತಹ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಎಂದು ಸಿಎಂಗೆ ಸಚಿವ ಸಂತೋಷ್‌ ಲಾಡ್‌ ಅವರು ಶಿಫಾರಸು ಪತ್ರವನ್ನು ಬರೆದಿದ್ದರು. ಆದರೆ, ಅಧಿಕಾರಿಗಳು ಮಾತ್ರ ಸಚಿವರ ಶಿಫಾರಸನ್ನೇ ಮೂಲೆಗುಂಪು ಮಾಡಿದ್ದಾರೆ. ಸಚಿವರಿಗೂ ಮಾಹಿತಿ ನೀಡದೆ ವರ್ಗಾವಣೆ ಪಟ್ಟಿಯನ್ನು ಸಿದ್ಧಪಡಿಸಿದ್ದಲ್ಲದೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಅಧಿಕಾರಿಗಳು ಅನುಮೋದನೆಯನ್ನೂ ಪಡೆದುಕೊಂಡಿದ್ದಾರೆ.

ವರ್ಗಾವಣೆ ಪಟ್ಟಿ ಸಿದ್ಧಗೊಂಡ ಬಗ್ಗೆ ಸಚಿವರಿಗೆ ಮಾಹಿತಿ ನೀಡದೆ ಯಾಮಾರಿಸಲಾಗಿದೆ ಎಂಬ ಗಂಭೀರ ಆರೋಪ ಈಗ ಕೇಳಿ ಬಂದಿದೆ.

ಏನಿದು ಅಸಲಿ ಪ್ರಕರಣ?

ಆಗಸ್ಟ್ ತಿಂಗಳಲ್ಲಿ ಕಾರ್ಮಿಕ ಇಲಾಖೆಯ 40 ಸಿಬ್ಬಂದಿಯನ್ನು ಸಚಿವರು ವರ್ಗಾವಣೆ ಮಾಡಿದ್ದರು. ವರ್ಗಾವಣೆಗೆ ಸಿಎಂ ಅನುಮೋದನೆ ಇಲ್ಲ ಎಂದು ಐದೇ ದಿನಕ್ಕೆ ವರ್ಗಾವಣೆಯನ್ನು ಸಿಎಂ ಕಚೇರಿ ಅಧಿಕಾರಿಗಳು ರದ್ದು ಮಾಡಿದ್ದರು. ಅಲ್ಲದೆ, ಈ ಹಿಂದಿನ ಹುದ್ದೆಗಳಲ್ಲಿಯೇ ಎಲ್ಲರೂ ಕಾರ್ಯನಿರ್ವಹಣೆ ಮಾಡಬೇಕು ಎಂಬ ಆದೇಶವನ್ನು ನೀಡಿದ್ದರು.

ಕಾರ್ಮಿಕ ಇಲಾಖೆಯ ಅಧಿಕಾರಿಗಳ ವರ್ಗಾವಣೆ ಆದೇಶದ ಪಿಡಿಎಫ್‌ ಕಾಪಿ ಇಲ್ಲಿದೆ

ಇದೀಗ ಮತ್ತೆ ಸಿಎಂ ಅನುಮೋದನೆಗೆ ಕೇವಲ ನಾಲ್ಕು ಅಧಿಕಾರಿಗಳ ವರ್ಗಾವಣೆಗಾಗಿ ಸಚಿವ ಸಂತೋಷ್ ಲಾಡ್ ಪಟ್ಟಿಯನ್ನು ಕಳುಹಿಸಿದ್ದರು. ಸಿಎಂ ಅನುಮೋದನೆ ಪಡೆಯುವ ವೇಳೆ ಹೆಚ್ಚುವರಿ ಲಿಸ್ಟ್ ಅನ್ನು ಸಿದ್ಧಪಡಿಸಿದ ಅಧಿಕಾರಿಗಳು, ಸಚಿವರು ಕೊಟ್ಟಿದ್ದ ಪಟ್ಟಿಯನ್ನು ಕಸದ ಬುಟ್ಟಿಗೆ ಹಾಕಿ ತಾವೇ ಹೊಸ ಪಟ್ಟಿಯನ್ನು ಸಿದ್ಧಪಡಿಸಿದ್ದಾರೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: KEA Exam Scam : ಕೆಇಎ ಪರೀಕ್ಷೆಗೆ ಟೈಟ್‌ ಸೆಕ್ಯುರಿಟಿ; ಅಂಗಿಯ ಉದ್ದ ತೋಳನ್ನು ಕಟ್‌ ಮಾಡಿ ಪರೀಕ್ಷೆ ಬರೆದ ಅಭ್ಯರ್ಥಿ!

ಸಚಿವರ ಗಮನಕ್ಕೇ ತಾರದೇ 40 ಮಂದಿ ಕಾರ್ಮಿಕ ಇಲಾಖೆ ಅಧಿಕಾರಿಗಳ ವರ್ಗಾವಣೆ ಮಾಡಿರುವುದಕ್ಕೆ ಸಂತೋಷ್‌ ಲಾಡ್‌ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ. ಸಚಿವರ ಬೇಸರ ಗೊತ್ತಿಲ್ಲದೆ ಸಿಎಂ ಸಿದ್ದರಾಮಯ್ಯ ಅವರು ವರ್ಗಾವಣೆ ಪಟ್ಟಿಗೆ ಅನುಮೋದನೆ ನೀಡಿದ್ದಾರೆ. ಸಚಿವರು ಮತ್ತು ಸಿಎಂ ಮಧ್ಯೆ ಮಾಹಿತಿಯನ್ನೇ ನೀಡದೇ ಅಧಿಕಾರಿಗಳು ವರ್ಗಾವಣೆ ಮಾಡಿದ್ದಾರೆ ಎಂಬ ಆರೋಪ ಈಗ ಕೇಳಿಬಂದಿದೆ.

Exit mobile version