ಬೆಳಗಾವಿ: ಮಾಜಿ ಸಿಎಂ ಜಗದೀಶ್ ಶೆಟ್ಟರ್ (Jagadish Shettar) ಬಳಿಕ ಮಾಜಿ ಡಿಸಿಎಂ ಲಕ್ಷ್ಮಣ ಸವದಿ (Laxman Savadi) ಅವರು ಬಿಜೆಪಿಗೆ ಸೇರ್ಪಡೆಯಾಗಲಿದ್ದಾರೆ ಎಂಬ ಸುದ್ದಿ ಈಗ ದಟ್ಟವಾಗಿ ಹರಡುತ್ತಿದೆ. ಲೋಕಸಭಾ ಚುನಾವಣೆ (Lok Sabha Election 2024) ಹಿನ್ನೆಲೆಯಲ್ಲಿ ಬಿಜೆಪಿ ತಂತ್ರಗಾರಿಕೆಯಲ್ಲಿ ತೊಡಗಿದ್ದು, ಘರ್ ವಾಪ್ಸಿಗೆ (Ghar Wapsi) ಚಾಲನೆ ನೀಡಿದೆ. ಇದರ ಭಾಗವಾಗಿ ಕಿತ್ತೂರು ಕರ್ನಾಟಕ (Kittur Karnataka) ಭಾಗದ ನಾಯಕರಾಗಿರುವ ಲಕ್ಷ್ಮಣ ಸವದಿ ಅವರನ್ನು ಪಕ್ಷಕ್ಕೆ ವಾಪಸ್ ಕರೆತರಲು ಕಸರತ್ತು ತೀವ್ರಗೊಂಡಿದೆ. ಮಾಹಿತಿ ಪ್ರಕಾರ, ಅಂತಿಮ ಹಂತಕ್ಕೆ ಬಂದಿದೆ ಎಂದೇ ಹೇಳಲಾಗುತ್ತಿದೆ.
ಲಕ್ಷ್ಮಣ ಸವದಿಯನ್ನು ಬಿಜೆಪಿ ಕರೆತರುವ ಪ್ರಯತ್ನಕ್ಕೆ ಸಂಬಂಧಪಟ್ಟಂತೆ ಹಾಲಿ ಮತ್ತು ಮಾಜಿ ಸಂಸದರು ಸುಳಿವು ನೀಡಿದ್ದಾರೆ. ಚಿಕ್ಕೋಡಿ ಹಾಲಿ ಸಂಸದ ಅಣ್ಣಾಸಾಹೇಬ್ ಜೊಲ್ಲೆ, ಮಾಜಿ ಸಂಸದ ರಮೇಶ್ ಕತ್ತಿ ಸವದಿ ಸೇರ್ಪಡೆ ಬಗ್ಗೆ ಮಾತನಾಡಿದ್ದಾರೆ.
ಕಿತ್ತೂರು ಕರ್ನಾಟಕ ಭಾಗದಲ್ಲಿ ತಮ್ಮದೇ ಪ್ರಭಾವ ಹೊಂದಿರುವ ಲಕ್ಷ್ಮಣ ಸವದಿ ಅವರನ್ನು ಬಿಜೆಪಿ ಸೇರ್ಪಡೆ ಮಾಡಿಕೊಂಡರೆ ಬೆಳಗಾವಿ, ಚಿಕ್ಕೋಡಿ, ಬಾಗಲಕೋಟೆ, ವಿಜಯಪುರ, ಕೊಪ್ಪಳದಲ್ಲಿ ಅನುಕೂಲವಾಗುತ್ತದೆ ಎಂಬ ಲೆಕ್ಕಾಚಾರವನ್ನು ಹಾಕಿಕೊಳ್ಳಲಾಗಿದೆ. ಈ ನಿಟ್ಟಿನಲ್ಲಿ ಈಗ ಬಿಜೆಪಿ ವಲಯದಲ್ಲಿ ಪ್ರಯತ್ನಗಳು ಶುರುವಾಗಿವೆ ಎಂದು ಹೇಳಲಾಗುತ್ತಿದೆ.
ಸವದಿಯನ್ನು ಕರೆತರುವ ಜವಾಬ್ದಾರಿ ನಮ್ಮ ಮೇಲಿದೆ
ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಸಂಸದ ಅಣ್ಣಾಸಾಹೇಬ್ ಜೊಲ್ಲೆ ಈ ಬಗ್ಗೆ ಪ್ರತಿಕ್ರಿಯೆ ನೀಡಿ, ನಾವು ಪಕ್ಷಕ್ಕೆ ಬರಲಿ ಎಂದು ಹೇಳುತ್ತಿದ್ದೇವೆ. ಕೇಂದ್ರದ ಮತ್ತು ರಾಜ್ಯದ ನಾಯಕರು ಏನು ನಿರ್ಧಾರ ತೆಗೆದುಕೊಳ್ಳುತ್ತಾರೆ ನೋಡಬೇಕು. ಲಕ್ಷ್ಮಣ ಸವದಿಯನ್ನು ಕರೆದುಕೊಂಡು ಬರುವ ಜವಾಬ್ದಾರಿ ಎಲ್ಲರ ಹೆಗಲ ಮೇಲಿದೆ. ನಾನಿರಬಹುದು, ಈರಣ್ಣಾ ಕಡಾಡಿ, ಮಹಾಂತೇಶ್ ದೊಡ್ಡಗೌಡರ, ರಮೇಶ್ ಕತ್ತಿ ಸೇರಿ ಜಿಲ್ಲೆಯ ಎಲ್ಲ ನಾಯಕರ ಮೇಲೆ ಈ ಜವಾಬ್ದಾರಿ ಇದೆ ಎಂದು ಹೇಳಿದರು.
ಸವದಿ ಮನೆಯಲ್ಲಿ ಲಂಚ್ ಮೀಟಿಂಗ್ ನಡೆಸಿದ ವಿಚಾರಕ್ಕೆ ಸಂಬಂಧಪಟ್ಟಂತೆ ಪ್ರತಿಕ್ರಿಯೆ ನೀಡಿದ ಅಣ್ಣಾಸಾಹೇಬ್ ಜೊಲ್ಲೆ, ಯಾವಾಗಲೂ ನಾವು ಸೇರುತ್ತಿರುತ್ತೇವೆ. ಡಿಸಿಸಿ ಬ್ಯಾಂಕ್ ವಿಚಾರದಲ್ಲಿ ಪಕ್ಷಾತೀತವಾಗಿ ಸೇರುತ್ತೇವೆ ಎಂದು ಹೇಳಿದರು.
ಬಿ.ವೈ. ವಿಜಯೇಂದ್ರರಿಂದ ಪ್ರಯತ್ನ
ಬಿಜೆಪಿಗೆ ಲಕ್ಷ್ಮಣ ಸವದಿ ಯಾವಾಗ ಸೇರ್ಪಡೆಯಾಗುತ್ತದೆ ಎಂಬ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅಣ್ಣಾಸಾಹೇಬ್ ಜೊಲ್ಲೆ, ನೋಡಬೇಕು ಅವರು ಒಪ್ಪಿಗೆ ಕೊಡಬೇಕು. ಕೇಂದ್ರದ ಮುಖಂಡರ ಜತೆಗೆ ಚರ್ಚೆ ಆಗಬೇಕು. ಸವದಿಯವರು ಬರಲಿ ಅನ್ನೋದು ನಮ್ಮ ಆಶಯವಾಗಿದೆ. ಅವರು ಬಂದರೆ ಪಕ್ಷಕ್ಕೆ ಹಾಗೂ ಬೆಳಗಾವಿ ಜಿಲ್ಲೆಗೆ ಒಳ್ಳೆಯದಾಗುತ್ತದೆ. ನಮ್ಮ ಪಕ್ಷದಿಂದ ಹೊರ ಹೋದವರಿಗೆ ನಾವು ಆಹ್ವಾನ ಕೊಟ್ಟಿದ್ದೇವೆ. ಸವದಿಗೆ ನಾವು ಕೂಡ ಆಹ್ವಾನ ಕೊಟ್ಟಿದ್ದೇವೆ. ನಮ್ಮ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಸೇರಿದಂತೆ ಎಲ್ಲರೂ ಪ್ರಯತ್ನ ಮಾಡುತ್ತಿದ್ದಾರೆ ಎಂದು ಹೇಳಿದರು.
ಬಿಜೆಪಿಯಲ್ಲಿದ್ದವರಿಗೆ ಹೊರಗೆ ಇರುವುದೇ ಕಷ್ಟ
ಎಷ್ಟು ಜನ ಬಿಜೆಪಿಗೆ ಬರ್ತಾರೆ ಎಂಬುದನ್ನು ಹೇಳಲು ಆಗಲ್ಲ. ಬಿಟ್ಟು ಹೋದವರು ಎಲ್ಲರೂ ಬರಬಹುದು. ಬಿಜೆಪಿಯಲ್ಲಿದ್ದವರಿಗೆ ಹೊರಗೆ ಇರುವುದೇ ಕಷ್ಟ. ಹೀಗಾಗಿ ನಮ್ಮ ಪಕ್ಷಕ್ಕೆ ಬರ್ತಾರೆ. ಚುನಾವಣೆ ಮೊದಲು ಸವದಿಯವರು ಪಕ್ಷಕ್ಕೆ ಬಂದರೆ ಒಳ್ಳೆಯದಾಗುತ್ತದೆ. ಅವರೂ ಸಹ ಪಕ್ಷಕ್ಕೆ ಬರಲು ಒಲವು ತೋರಿಸಬಹುದು ಅನಿಸುತ್ತದೆ. ಅವರು ಬರುವವರೆಗೂ ಪಾಸಿಟಿವ್ ಇದಾರೆ ಅಂತಾನೇ ಹೇಳ್ತಾ ಹೋಗೋದು ಎಂದು ಅಣ್ಣಾಸಾಹೇಬ್ ಜೊಲ್ಲೆ ಹೇಳಿದರು.
ಗೌರವಯುತವಾಗಿ ಬರಮಾಡಿಕೊಳ್ತೇವೆ
ಲಕ್ಷ್ಮಣ ಸವದಿ ಬಿಜೆಪಿ ಸೇರ್ಪಡೆಯಾಗುತ್ತಾರೆ ಎಂಬ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ ಮಾಜಿ ಸಂಸದ ರಮೇಶ್ ಕತ್ತಿ, ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರು ಎಂಟು ತಿಂಗಳಿಂದ ಅಲ್ಲಿದ್ದರು. ಅವರ ಮನಸ್ಸು ಬಿಜೆಪಿಯಲ್ಲಿತ್ತು. ದೈಹಿಕವಾಗಿ ಅಲ್ಲಿದ್ದರು. ಅವರನ್ನು ವಾಪಸ್ ಕರೆತಂದಿದ್ದಕ್ಕದೆ ರಾಷ್ಟ್ರೀಯ ಮತ್ತು ರಾಜ್ಯಾಧ್ಯಕ್ಷರಿಗೆ ಅಭಿನಂದನೆ ಹೇಳುತ್ತೇನೆ. ಲಕ್ಷ್ಮಣ ಸವದಿಯವರು ಬಿಜೆಪಿಗೆ ಬರುವ ಕುರಿತು ಈಗಾಗಲೇ ರಾಷ್ಟ್ರೀಯ ಮಟ್ಟದಲ್ಲಿ, ರಾಜ್ಯ ಮಟ್ಟದಲ್ಲಿ ಚರ್ಚೆ ಪ್ರಾರಂಭ ಆಗಿದೆ. ನಮ್ಮನ್ನೂ ಕೂಡ ವರಿಷ್ಠರು ಕರೆದು ಮಾತನಾಡಿಸಿ ಅಭಿಪ್ರಾಯ ಕೇಳಿದ್ದಾರೆ ಎಂದು ಹೇಳಿದರು.
ಲಕ್ಷ್ಮಣ ಸವದಿ ಪಕ್ಷಕ್ಕೆ ಬಂದರೆ ಹೆಚ್ಚಿನ ಶಕ್ತಿ ಬರುತ್ತದೆ. ಸವದಿಯ ಅವರನ್ನು ಕರೆತರುವ ಚರ್ಚೆಯಲ್ಲಿ ನಾನು ಕೂಡ ಒಬ್ಬ. ಸವದಿ ಅವರಿಗೆ ಸ್ಥಾನಮಾನ ಕೊಡುವ ವಿಚಾರಕ್ಕೆ ಸಂಬಂಧಪಟ್ಟಂತೆ ವರಿಷ್ಠರು ನಿರ್ಣಯ ಮಾಡುತ್ತಾರೆ. ಇನ್ನು ಸ್ಥಾನಮಾನಕ್ಕಾಗಿ ಯಾರೂ ಬರುವುದಿಲ್ಲ. ಕಾಂಗ್ರೆಸ್‌ಗೆ ಹೋದಾಗ ಏನು ಸ್ಥಾನಮಾನ ಕೇಳಿ ಹೋಗಿದ್ದರು? ಅಲ್ಲದೆ, ಅವರು ಸಹ ಏನು ಕೊಟ್ಟರು? ರಾಜ್ಯ ಮತ್ತು ರಾಷ್ಟ್ರೀಯ ವರಿಷ್ಠರು ಹೇಳಿದಂತೆ ಗೌರವಯುತವಾಗಿ ಅವರನ್ನು ಬರಮಾಡಿಕೊಳ್ಳುತ್ತೇವೆ ಎಂದು ರಮೇಶ್ ಕತ್ತಿ ಹೇಳಿದ್ದಾರೆ.
ಇದನ್ನೂ ಓದಿ: HD Kumaraswamy: ಬಿಜೆಪಿಯಲ್ಲಿ ಜೆಡಿಎಸ್ ವಿಲೀನ ಮಾಡಿದ ಎಚ್‌ಡಿಕೆ; ಡಿ.ಕೆ. ಶಿವಕುಮಾರ್
ಲಕ್ಷ್ಮಣ್ ಸವದಿ ಪಕ್ಷ ಸೇರ್ಪಡೆ ಫಿಕ್ಸ್?
ಈಗಾಗಲೇ ಸ್ಥಳೀಯ ನಾಯಕರ ಅಭಿಪ್ರಾಯವನ್ನು ಬಿಜೆಪಿ ವರಿಷ್ಠರು ಸಂಗ್ರಹಿಸಿದ್ದಾರೆ ಎಂದು ಉಭಯ ನಾಯಕರು ಹೇಳಿಕೆ ಕೊಟ್ಟಿದ್ದಾರೆ. ಇದರ ನಡುವೆ ಸವದಿ ಮನೆಯಲ್ಲಿ ಲಂಚ್ ಮೀಟಿಂಗ್ ಅನ್ನು ಸಹ ಮಾಡಿ ಮಾತುಕತೆ ನಡೆಸಲಾಗಿದೆ. ಈ ಎಲ್ಲ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಲಕ್ಷ್ಮಣ ಸವದಿಯನ್ನು ಬಿಜೆಪಿಗೆ ಕರೆತರುವ ವಿಚಾರ ಅಂತಿಮ ಹಂತಕ್ಕೆ ಬಂದಿದೆ ಎಂದೇ ಹೇಳಲಾಗುತ್ತಿದೆ.