Site icon Vistara News

KS Eshwarappa: ಡಿ.ಕೆ. ಸುರೇಶ್‌ಗೆ ಗುಂಡಿಕ್ಕಿ ಎಂದ ಈಶ್ವರಪ್ಪ ಮೇಲೆ ಲೀಗಲ್ ಆ್ಯಕ್ಷನ್: ಸಿಎಂ ಸಿದ್ದರಾಮಯ್ಯ

KS Eshwarappa Cm Siddaramaiah and DK Suresh

ಬೆಂಗಳೂರು: ಸಂಸದ ಡಿ.ಕೆ.ಸುರೇಶ್ (DK Suresh) ಹಾಗೂ ಶಾಸಕ ವಿನಯ್ ಕುಲಕರ್ಣಿ (Vinay Kulakarni) ರಾಷ್ಟ್ರದ್ರೋಹಿಗಳಾಗಿದ್ದು, ಅವರನ್ನು ಗುಂಡಿಕ್ಕಿ ಕೊಲ್ಲಿ ಎಂಬ ಬಿಜೆಪಿ ಮಾಜಿ ಸಚಿವ ಕೆ.ಎಸ್.‌ ಈಶ್ವರಪ್ಪ (KS Eshwarappa) ಹೇಳಿಕೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.‌ ಈ ಹೇಳಿಕೆ ಬಗ್ಗೆ ಕಾಂಗ್ರೆಸ್ ಕೆಂಡವಾಗಿದೆ. ಈಗ ಈ ಬಗ್ಗೆ ಸಿಎಂ ಸಿದ್ದರಾಮಯ್ಯ (CM Siddaramaiah) ಪ್ರತಿಕ್ರಿಯೆ ನೀಡಿದ್ದು, ಈಶ್ವರಪ್ಪ ಮೇಲೆ ಲೀಗಲ್ ಆ್ಯಕ್ಷನ್ ತೆಗೆದುಕೊಳ್ಳುತ್ತೇವೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ಚಿತ್ರದುರ್ಗದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಡಿ.ಕೆ ಸುರೇಶ್ ಅವರನ್ನು ಗುಂಡಿಕ್ಕಿ ಕೊಲ್ಲಿ ಎಂದು ಕೆ.ಎಸ್.‌ ಈಶ್ವರಪ್ಪ ಹೇಳುತ್ತಾರೆ. ಒಬ್ಬ ಸಂಸದರನ್ನು ಕೊಲ್ಲಿ ಎಂದು ಹೇಳುವುದು ಸರಿಯೇ? ಇಂಥವರನ್ನು ರಾಜಕೀಯ ಧುರೀಣರು ಅಂತ ಹೇಳೋಕೆ ಆಗುತ್ತಾ? ಈಶ್ವರಪ್ಪ ಮೇಲೆ ಲೀಗಲ್ ಆ್ಯಕ್ಷನ್ ತೆಗೆದುಕೊಳ್ಳುತ್ತೇವೆ ಎಂದು ಹೇಳಿದ್ದಾರೆ.

ಕೆ.ಎಸ್. ಈಶ್ವರಪ್ಪ ಅವರಿಗೆ ಕಡಿಬಡಿ ಅನ್ನೋದು ಗೊತ್ತು.‌ ಇದು ಬಿಟ್ಟರೆ ಅವರಿಗೆ ಏನೂ ಗೊತ್ತಿಲ್ಲ. ಅವರ ಮೇಲೆ ಕಾನೂನಾತ್ಮಕವಾಗಿ ಕ್ರಮವನ್ನು ತೆಗೆದುಕೊಳ್ಳುತ್ತೇವೆ. ಆರ್‌ಎಸ್‌ಎಸ್ ಟ್ರೈನಿಂಗ್ ಆಗಿದೆ ಅಂತಾರೆ. ಈಶ್ವರಪ್ಪ ಅವರಿಗೆ ಅಲ್ಲಿ ಇದೇನಾ ಟ್ರೈನಿಂಗ್ ಆಗಿರೋದು? ಅವರ ಮೇಲೆ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ಕೆ.ಎಸ್.‌ ಈಶ್ವರಪ್ಪ ಹೇಳಿದ್ದೇನು?

ದಾವಣಗೆರೆಯಲ್ಲಿ ಗುರುವಾರ ನಡೆದಿದ್ದ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷರ ಪದಗ್ರಹಣ ಸಮಾರಂಭದಲ್ಲಿ ಮಾತನಾಡಿದ್ದ ಕೆ.ಎಸ್. ಈಶ್ವರಪ್ಪ, “ಸಂಸದ ಡಿ.ಕೆ.ಸುರೇಶ್ ಹಾಗೂ ಶಾಸಕ ವಿನಯ್ ಕುಲಕರ್ಣಿ ರಾಷ್ಟ್ರದ್ರೋಹಿಗಳು. ಇವರಂತೆ ದೇಶ ವಿಭಜನೆಯ ಹೇಳಿಕೆ ನೀಡುವವರನ್ನು ಗುಂಡಿಕ್ಕಿ ಕೊಲ್ಲುವ ಕಾನೂನು ಜಾರಿಗೆ ತರುವಂತೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಒತ್ತಾಯಿಸುತ್ತೇನೆ” ಎಂದು ಹೇಳಿದ್ದರು. ಇದೀಗ ವ್ಯಾಪಕ ಟೀಕೆಗೆ ಗುರಿಯಾಗಿದೆ.

ಕಾಂಟ್ರ್ಯಾಕ್ಟರ್‌ಗಳ‌ ಸಾವಿಗೆ ಕಾರಣರಾದವರನ್ನು ಏನು ಮಾಡಬೇಕು?: ರಾಮಲಿಂಗಾ ರೆಡ್ಡಿ

ಹಾಗಾದರೆ ಕಾಂಟ್ರ್ಯಾಕ್ಟರ್‌ಗಳ‌ ಸಾವಿಗೆ ಕಾರಣರಾದವರನ್ನು ಏನು ಮಾಡಬೇಕು? ಬಿಜೆಪಿಯವರಿಗೆ ಮಾಡೋಕೆ‌ ಏನೂ ಇಲ್ಲ. ಸುಳ್ಳು ಹೇಳೋದೇ ಅವರಿಗೆ ಒಂದು ಕೆಲಸವಾಗಿದೆ ಎಂದು ಕಲಬುರಗಿಯಲ್ಲಿ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಹೇಳಿದ್ದಾರೆ.

ನಾಳೆ ಪ್ರತಿಕ್ರಿಯೆ ಕೊಡ್ತೇನೆ: ಡಿ.ಕೆ. ಸುರೇಶ್

ತಮ್ಮನ್ನು ಗುಂಡಿಟ್ಟು ಕೊಲ್ಲುವ ಬಗ್ಗೆ ಮಾಜಿ ಸಚಿವ ಕೆ.ಎಸ್.‌ ಈಶ್ವರಪ್ಪ ನೀಡಿರುವ ಹೇಳಿಕೆ ಬಗ್ಗೆ ಮಾಧ್ಯಮದವರು ನೀಡಿದ ಪ್ರಶ್ನೆಗೆ ಉತ್ತರಿಸಿದ ಡಿ.ಕೆ. ಸುರೇಶ್‌, ಈ ಬಗ್ಗೆ ಈಗ ಏನೂ ಹೇಳುವುದಿಲ್ಲ. ನಾಳೆ ಪ್ರತಿಕ್ರಿಯೆ ಕೊಡುತ್ತೇನೆ ಎಂದು ಹೇಳಿದರು.

ಯಾರಾದರೂ ದೂರು ಕೊಟ್ಟರೆ ಎಫ್ಐಆರ್: ಗೃಹ ಸಚಿವ ಡಾ. ಜಿ‌. ಪರಮೇಶ್ವರ್

ಬೆಂಗಳೂರಿನಲ್ಲಿ ಗೃಹ ಸಚಿವ ಡಾ. ಜಿ‌. ಪರಮೇಶ್ವರ್ ಮಾತನಾಡಿ, ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್‌ ಶಾ ಅವರಿಗೆ ಹೇಳಿ ಕಾನೂನು ಜಾರಿ ಮಾಡಲಿ. ಒಂದು ವೇಳೆ ಈ ಕಾನೂನು ಜಾರಿಯಾದರೆ ನಮ್ಮ ರಾಜ್ಯಕ್ಕೆ ಮಾತ್ರವಲ್ಲ, ಇಡೀ ದೇಶಕ್ಕೆ ಅನ್ವಯ ಆಗುತ್ತದೆ. ಅವರು ಕಾನೂನು ಜಾರಿ ಮಾಡಲಿ. ಈ ಬಗ್ಗೆ ಪದೇ ಪದೆ ಹೇಳ್ತಾ ಇರ್ತಾರೆ. ಆದರೆ, ಈಗ ಇವರ ಹೇಳಿಕೆಗೆ ಕಾನೂನು ಪ್ರಕಾರ ಏನು ಕ್ರಮ ತೆಗೆದುಕೊಳ್ಳಬೇಕೋ ಅದನ್ನು ತೆಗೆದುಕೊಳ್ಳುತ್ತೇವೆ. ಈಶ್ವರಪ್ಪ ಹೇಳಿಕೆಗೆ ಕಾನೂನು ಚೌಕಟ್ಟಿನಲ್ಲಿ ಕ್ರಮ ತೆಗೆದುಕೊಳ್ಳಬೇಕು. ಯಾರಾದರೂ ದೂರು ಕೊಟ್ಟರೆ ಎಫ್ಐಆರ್ ಮಾಡಲಾಗುವುದು. ಯಾವ ಉದ್ದೇಶಕ್ಕೆ ಹೇಳಿದ್ದಾರೆ ಎಂಬುದನ್ನು ತನಿಖೆ ಮಾಡಲಾಗುತ್ತದೆ. ಯಾವ ಕಾನೂನು ಅನ್ವಯ ಆಗುತ್ತದೆ ಎಂಬುದನ್ನು ಪೊಲೀಸರು ನಿರ್ಣಯ ಮಾಡುತ್ತಾರೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: PM Narendra Modi: ಮೋದಿಯದ್ದು ಅಮೃತಕಾಲ, ಕಾಂಗ್ರೆಸ್‌ನದ್ದು ವಿನಾಶಕಾಲ ಎಂದ ಬಿಜೆಪಿ

ಮಾತು ವಾಪಸ್‌ ಪಡೆಯದಿದ್ದರೆ 24 ಗಂಟೆಯಲ್ಲಿ ಕ್ರಮ: ಎಚ್.ಕೆ. ಪಾಟೀಲ್‌ ಎಚ್ಚರಿಕೆ

ಕೆ.ಎಸ್. ಈಶ್ವರಪ್ಪ ಹೇಳಿಕೆ ಬಗ್ಗೆ ಕಾನೂನು ಸಚಿವ ಎಚ್ ಕೆ ಪಾಟೀಲ್ ಗರಂ ಆಗಿ ಪ್ರತಿಕ್ರಿಯೆ ನೀಡಿದ್ದು, ಒಮ್ಮಿಂದೊಮ್ಮೆಲೆ ಪ್ರಚಾರಕ್ಕೆ ಬರಬೇಕು ಎಂದು ಇಂಥ ಪ್ರಚೋದನಕಾರಿ ಮಾತುಗಳನ್ನು ಹೇಳುತ್ತಾರೆ. ಒಮ್ಮಿಂದೊಮ್ಮೆಲೆ ಹೀರೋ ಆಗಿಬಿಡುತ್ತೇವೆ ಎನ್ನುವ ಕಲ್ಪನಾ ಲೋಕದಲ್ಲಿ ಇರುತ್ತಾರೆ ಅವರು. ಬಹಳ ದೊಡ್ಡ ಪ್ರಮಾದಗಳನ್ನು ಮಾಡ್ತಾ ಇದ್ದಾರೆ. ರಾಜಕಾರಣದಲ್ಲಿ 40 50 ವರ್ಷ ಇರುವಂಥವರಿಂದ ಬರುವ ಈ ರೀತಿಯ ಮಾತುಗಳು ಬಹಳ ದುಷ್ಪರಿಣಾಮವನ್ನು ಬೀರುತ್ತವೆ. 24 ಗಂಟೆಯೊಳಗೆ ಈಶ್ವರಪ್ಪ ತಮ್ಮ ಮಾತನ್ನು ವಾಪಸ್ ಪಡೆಯಬೇಕು. ಇಲ್ಲದಿದ್ದರೆ 24 ಗಂಟೆ ಬಳಿಕ ಏನು ಕ್ರಮ ಎಂದು ಹೇಳುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.

Exit mobile version