ಬೆಂಗಳೂರು: ಇದುವರೆಗೆ ಕಾಂಗ್ರೆಸ್‌ನೊಳಗೆ ನಡೆಯುತ್ತಿದ್ದ ಲಿಂಗಾಯತ ಅಧಿಕಾರಿಗಳ ಕಡೆಗಣನೆ (Negligence of Lingayat leaders) ವಿವಾದಕ್ಕೆ ಈಗ ಮಾಜಿ ಸಿಎಂ, ರಾಜ್ಯದ ಪ್ರಬಲ ಲಿಂಗಾಯತ ನಾಯಕ ಬಿ.ಎಸ್. ಯಡಿಯೂರಪ್ಪ (BS Yediyurappa) ಎಂಟ್ರಿ ಕೊಟ್ಟಿದ್ದಾರೆ. ಅಧಿಕಾರಿ ವರ್ಗ ಶಾಮನೂರು ಶಿವಶಂಕರಪ್ಪ ಅವರ ಬಳಿ ದೂರುವ ಮುನ್ನವೇ ಮಾಜಿ ಸಿಎಂ ಯಡಿಯೂರಪ್ಪ ಅವರ ಮುಂದೆ ದೂರು ಹೇಳಿಕೊಂಡಿದೆ ಎಂದು ಹೇಳಲಾಗಿದೆ. ಇದನ್ನು ಗಂಭೀರವಾಗಿ ಪರಿಗಣಿಸಿದ ಯಡಿಯೂರಪ್ಪ ಅವರು ಈ ಹಿಂದೆಯೇ ಸರ್ಕಾರಕ್ಕೆ ಎಚ್ಚರಿಕೆ ಕೊಟ್ಟಿದ್ದರು ಎನ್ನಲಾಗಿದೆ.
ಈ ಬೆಳವಣಿಗೆಯು ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಬಳಿಕ ಲಿಂಗಾಯತ ಸಮುದಾಯದ ಆಡಳಿತ ವರ್ಗ ಮತ್ತು ಒಟ್ಟಾರೆ ಸಮುದಾಯ ಕಡೆಗಣನೆಗೆ ಒಳಗಾಗಿದ್ದು ನಿಜವಾ ಎಂಬ ಗಂಭೀರ ಪ್ರಶ್ನೆಯೂ ಎದ್ದು ನಿಂತಿದೆ.
ನೌಕರ ವರ್ಗದ ಕೆಲವರು ತಮಗೆ ಆಗುತ್ತಿರುವ ಅನ್ಯಾಯದ ಬಗ್ಗೆ ಲಿಂಗಾಯತ ಸಮುದಾಯ ವರಿಷ್ಠ ನಾಯಕರಾದ ಬಿ.ಎಸ್. ಯಡಿಯೂರಪ್ಪ ಅವರ ಜತೆ ಸಮಸ್ಯೆಯನ್ನು ಹೇಳಿಕೊಂಡಿತ್ತು ಎನ್ನಲಾಗಿದೆ. ಈ ವಿಚಾರವನ್ನು ಅವರು ಲಿಂಗಾಯತ ನೌಕರರ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಕಾರ್ಯಕ್ರಮದಲ್ಲಿ ಪ್ರಸ್ತಾಪ ಮಾಡಿ ಅಂದೇ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದರು ಎನ್ನಲಾಗಿದೆ.
ಅಧಿಕಾರಿ ವರ್ಗವನ್ನು ಕಡೆಗಣಿಸಬೇಡಿ ಎಂದು ಲಿಂಗಾಯತ ಸಮಾಜದಿಂದ ಬಂದು ಸರ್ಕಾರವನ್ನು ಪ್ರತಿನಿಧಿಸುವ ನಾಯಕರಿಗೆ ಮಾಜಿ ಸಿಎಂ ಯಡಿಯೂರಪ್ಪ ಅವರು ಸಲಹೆ ನೀಡಿದ್ದರು ಎನ್ನಲಾಗಿದೆ. ಕೆಳ ಹಂತದಿಂದ ಪದೋನ್ನತಿ ಪಡೆದು ಬಂದವರಿಗೆ ಸೂಕ್ತ ಸ್ಥಾನಮಾನ ಕೊಡುವಂತೆ ಸಿಎಂಗೆ ಒತ್ತಡ ತರುವಂತೆಯೂ ಬಿಎಸ್‌ವೈ ಸಲಹೆ ನೀಡಿದ್ದಾರೆನ್ನಲಾಗಿದೆ.
ಕಾಂಗ್ರೆಸ್‌ನ ಲಿಂಗಾಯತ ನಾಯಕರಾದ ಎಂ.ಬಿ. ಪಾಟೀಲ್, ಶರಣ ಪ್ರಕಾಶ್ ಪಾಟೀಲ್, ಈಶ್ವರ್ ಖಂಡ್ರೆ ಮೊದಲಾದವರು ಇದ್ದ ಸಭೆಯಲ್ಲಿ ಈ ಒತ್ತಾಯವನ್ನು ಮಾಡಿದ್ದರು ಬಿಎಸ್ ಯಡಿಯೂರಪ್ಪ.
ಬಿಎಸ್‌ವೈ ಹೇಳಿಕೆ ಬಳಿಕ ಶಾಮನೂರು ಸಿಡಿಲು
ನಿಜವೆಂದರೆ ಬಿಎಸ್‌ವೈ ಅವರು ಹೇಳಿಕೆ ನೀಡಿದ ಬಳಿಕವೇ ಶ್ಯಾಮನೂರು ಶಿವಶಂಕರಪ್ಪ ಹೇಳಿಕೆ ನೀಡಿದ್ದಾರೆ. ಲಿಂಗಾಯತ ಸಮುದಾಯದ ಆಡಳಿತ ವರ್ಗವನ್ನು ಸರ್ಕಾರ ಕಡೆಗಣಿಸುತ್ತಿದೆ ಎಂದು ಅವರು ಹೇಳಿದ್ದರು. ಇದಕ್ಕೆ ಪ್ರತಿಯಾಗಿ ಸಿಎಂ ಸಿದ್ದರಾಮಯ್ಯ ಅವರ ಆಪ್ತರು ಅಂಕಿಅಂಶಗಳನ್ನ ಬಿಡುಗಡೆ ಮಾಡಿದ್ದರು. ಅದರೆ ಇನ್ನೂ ನನ್ನ ಹೇಳಿಕೆಗೆ ಬದ್ಧ ಎಂದು ಶ್ಯಾಮನೂರು ಶಿವಶಂಕರಪ್ಪ ಹೇಳುತ್ತಿದ್ದಾರೆ. ಹೀಗಾಗಿ ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಲೇಬೇಕಾದ ಅನಿವಾರ್ಯತೆಗೆ ಸಿಲುಕಿಕೊಂಡಿದೆ.
ಲೋಪಗಳಿದ್ದರೆ ಸರಿ ಮಾಡೋಣ ಎಂದ ರಾಮಲಿಂಗಾ ರೆಡ್ಡಿ
ʻʻಲಿಂಗಾಯತ ಸಮುದಾಯ ಈ ಬಾರಿ ಕಾಂಗ್ರೆಸ್‌ಗೆ ಹೆಚ್ಚು ಮತ ನೀಡಿದೆ ಎನ್ನುವುದು ನಿಜ. ಅದೇ ರೀತಿ ಒಕ್ಕಲಿಗರು, ಬ್ರಾಹ್ಮಣರು, ಜೈನರು, ಬೌದ್ಧರು, ಹಿಂದುಳಿದ ವರ್ಗದವರು ಎಲ್ಲರೂ ಕೊಟ್ಟಿದ್ದಾರೆ. ಹೀಗಾಗಿಯೇ ಅಧಿಕಾರಕ್ಕೆ ಬಂದಿದ್ದೇವೆʼʼ ಎಂದು ಹೇಳಿರುವ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರು, ಸರ್ಕಾರದಲ್ಲಿ ಅಧಿಕಾರಿಗಳ ಕಡೆಗಣನೆಯನ್ನು ನಿರಾಕರಿಸಿದರು.
ʻʻಶಾಮನೂರು ಅವರು ತುಂಬಾ ಹಿರಿಯರಿದ್ದಾರೆ. ಅವರ ಜೊತೆ ಸಿಎಂ ಮಾತನಾಡುತ್ತಾರೆ. ಏನಾದರೂ ಲೋಪ ದೋಷಗಳಿದ್ದರೆ ಸರಿಪಡಿಸಿಕೊಳ್ಳೋಣ. ಶಾಮನೂರು ಅವರಿಗೆ ನೋಟಿಸ್ ಕೊಡೋದು ಅದೆಲ್ಲಾ ಇಲ್ಲʼʼ ಎಂದರು.
ಯಾರು ಎಷ್ಟು ವೋಟ್ ಹಾಕಿದ್ದಾರೋ ಗೊತ್ತಿಲ್ಲ ಎಂದ ಡಿಕೆಶಿ
ಈ ನಡುವೆ, ಲಿಂಗಾಯತರು 20% ಓಟು ಹಾಕಿದ್ದಾರೆ, 7 ಸಚಿವರನ್ನು ಮಾಡಿದ್ದೇವೆ ಎಂಬ ಎಂಎಲ್‌ಸಿ ಪ್ರಕಾಶ್ ರಾಥೋಡ್ ಹೇಳಿಕೆಗೆ ಪ್ರತಿಕ್ರಿಯಿಸಿರುವ ಡಿಸಿಎಂ ಡಿಕೆ ಶಿವಕುಮಾರ್ ಅವರು, ʻʻʻಅದು ಸೀಕ್ರೆಟ್ ಬ್ಯಾಲೆಟ್. ಯಾರು ಎಷ್ಟು ವೋಟ್ ಹಾಕಿದ್ದಾರೆ ಅನ್ನೋದು ಹೇಳಲು ಸಾಧ್ಯವಿಲ್ಲ. ರಾಜ್ಯದಲ್ಲಿ ಎಲ್ಲಾ ಜನಾಂಗದವರು ನಮ್ಮ ಪಕ್ಷವನ್ನು ಅಧಿಕಾರಕ್ಕೆ ತಂದಿದ್ದಾರೆ. ಎಲ್ಲರೂ ಸೇರಿಯೇ 136 ಸ್ಥಾನಗಳನ್ನು ನೀಡಿದ್ದಾರೆʼʼ ಎಂದರು.