Site icon Vistara News

Lingayat CM : ಲಿಂಗಾಯತರಿಗೆ 7 ಸಚಿವ ಸ್ಥಾನ ಕೊಟ್ಟಿದ್ದಕ್ಕೆ ಹಲವು ಸಮುದಾಯಕ್ಕೆ ಸಿಗದ ಮಂತ್ರಿಗಿರಿ: ಗುಡುಗಿದ ಸಿಎಂ ಆಪ್ತ

Shamanur shivashankarappa and prakash rathod

ಬೆಂಗಳೂರು: ರಾಜ್ಯ ಕಾಂಗ್ರೆಸ್‌ನಲ್ಲಿ ಈಗ ಲಿಂಗಾಯತರ ಅವಗಣನೆ (Neglecting Lingayats) ಆಗುತ್ತಿದೆ. ಹೀಗಾಗಿ ಲಿಂಗಾಯತರು ಸಿಎಂ (Lingayat CM Demdand) ಆಗಬೇಕು. ಅಲ್ಲದೆ, ಈ ಸರ್ಕಾರದಲ್ಲಿ ಲಿಂಗಾಯತ ಅಧಿಕಾರಿಗಳ ಕಡೆಗಣನೆ ಆಗಿದೆ ಎಂಬ ಲಿಂಗಾಯತ ಸಮುದಾಯದ (Lingayat community) ಹಿರಿಯ ನಾಯಕ, 92 ವರ್ಷದ ಶಾಮನೂರು ಶಿವಶಂಕರಪ್ಪ (Shamanuru Shivashankarappa) ಅವರ ಮಾತಿಗೆ ರಾಜ್ಯ ಕಾಂಗ್ರೆಸ್‌ ನಾಯಕರಲ್ಲಿ ಅಸಮಾಧಾನ ಹೊಗೆಯಾಡುತ್ತಲೇ ಇದೆ. ಈಗ ಸಿಎಂ ಸಿದ್ದರಾಮಯ್ಯ ಆಪ್ತ, ವಿಧಾನ ಪರಿಷತ್ ಸದಸ್ಯ ಪ್ರಕಾಶ್ ರಾಠೋಡ್ (MLC Prakash Rathod) ಅವರು ಶಾಮನೂರು ವಿರುದ್ಧ ಗುಡುಗಿದ್ದಾರೆ. ಅಲ್ಲದೆ, ಏಳು ಮಂದಿ ಲಿಂಗಾಯತರಿಗೆ ಮಂತ್ರಿಗಿರಿ ಕೊಟ್ಟಿದ್ದರಿಂದ ಉಳಿದ ಸಮುದಾಯದವರಿಗೆ ಅನ್ಯಾಯವಾಗಿದೆ ಎಂದು ಆಕ್ರೋಶವನ್ನು ಹೊರಹಾಕಿದ್ದಾರೆ.

ಪ್ರಕಾಶ್ ರಾಠೋಡ್ ಅವರು ಶುಕ್ರವಾರ (ಅಕ್ಟೋಬರ್‌ 6) ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿದ್ದು, ಶಾಮನೂರು ಶಿವಶಂಕರಪ್ಪ ವಿರುದ್ಧ ನೇರವಾಗಿ ಹರಿಹಾಯ್ದಿದ್ದಾರೆ. ಹಿರಿಯ ಶಾಸಕರಾಗಿ ಅವರು ಈ ರೀತಿ ಮಾತನಾಡಬಾರದು. ಒಂದು ಸಮುದಾಯದ ಕೆಲ ನೌಕರರ ಪರವಾಗಿ ನಿಲ್ಲಬಾರದಿತ್ತು. ಮುಸ್ಲಿಂ ಸಮುದಾಯದಿಂದ (Muslim community) ಶೇ. 80ರಷ್ಟು ಮತ ಕಾಂಗ್ರೆಸ್‌ಗೆ ಬಂದಿದೆ. ಲಿಂಗಾಯತರಿಂದ ಶೇಕಡಾ 20ರಷ್ಟು ಮತ ಮಾತ್ರ ಬಂದಿದೆ. ಆದರೂ ಆ ಸಮುದಾಯದ ಏಳು ಜನ‌ ಸಚಿವರನ್ನು ಆಯ್ಕೆ ಮಾಡಲಾಗಿದೆ. ಇದರಿಂದಾಗಿ ಹಲವು ಸಮುದಾಯಗಳಿಗೆ ಸಚಿವ ಸ್ಥಾನ ಸಿಕ್ಕಿಲ್ಲ ಎಂದು ತಿರುಗೇಟು ನೀಡಿದ್ದಾರೆ.

ಇದನ್ನೂ ಓದಿ: OBC Reservation : ಒಬಿಸಿ ಮೀಸಲಾತಿಯಲ್ಲಿ ಸಣ್ಣ ಸಮುದಾಯಕ್ಕೆ ಅನ್ಯಾಯ: ನ್ಯಾ. ಭಕ್ತವತ್ಸಲ ಅಸಮಾಧಾನ

ಪತ್ರದ ಸಾರಾಂಶ ಏನು?

ಸಮೀಕ್ಷೆಯೊಂದರ ಪ್ರಕಾರ ಕಾಂಗ್ರೆಸ್ ಪರವಾಗಿ ಅತ್ಯಧಿಕ ಅಂದರೆ ಶೇಕಡಾ 88ರಷ್ಟು ಮತ ಚಲಾಯಿಸಿದವರು ಮುಸ್ಲಿಮರು. ಅದಕ್ಕೆ ಹೋಲಿಸಿದರೆ ಲಿಂಗಾಯತರ ಕಡೆಯಿಂದ ಕಾಂಗ್ರೆಸ್‌ಗೆ ಬಂದಿರುವ ಮತಗಳು ಕೇವಲ ಶೇಕಡಾ 20ರಷ್ಟು ಮಾತ್ರ ಇಷ್ಟಿದ್ದರೂ ರಾಜ್ಯ ಸಂಪುಟದಲ್ಲಿ ಲಿಂಗಾಯತರಿಗೆ 7 ಸ್ಥಾನಗಳನ್ನು ನೀಡಲಾಗಿದೆ. ಮುಸ್ಲಿಂ ಸಮುದಾಯವರಿಗೆ ಕೇವಲ 2 ಸ್ಥಾನಗಳನ್ನು ಮಾತ್ರ ನೀಡಲಾಗಿದೆ. ಲಂಬಾಣಿ ಸಮುದಾಯವು ಶೇಕಡಾ 80ರಷ್ಟು ಮತಗಳನ್ನು ಕಾಂಗ್ರೆಸ್‌ ಪಕ್ಷಕ್ಕೆ ನೀಡಿ ಹಲವಾರು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷ ಗೆಲ್ಲಲು ಪ್ರಮುಖ ಪಾತ್ರ ವಹಿಸಿದೆ. ಆದರೂ ಲಂಬಾಣಿ ಸಮುದಾಯದವರಿಗೆ ಮಂತ್ರಿ ಸ್ಥಾನ ಸಿಕ್ಕಿಲ್ಲ. ಉಪ್ಪಾರ, ಬಲಜಿಗ ಹಾಗೂ ಯಾದವ ಸಮುದಾಯಕ್ಕೂ ಸಹ ಮಂತ್ರಿ ಸ್ಥಾನ ನೀಡಿರುವುದಿಲ್ಲ. ಈ ಎಲ್ಲ ಸಮುದಾಯದ ಮುಖಂಡರು ಪಕ್ಷದ ಒಳಗಡೆ ಶಿಸ್ತಿನಿಂದ ತಮ್ಮ ಬೇಡಿಕೆಯನ್ನು ಮುಖ್ಯಮಂತ್ರಿಗಳಿಗೆ, ಕೆಪಿಸಿಸಿ ಅಧ್ಯಕ್ಷರಿಗೆ ಮತ್ತು ಎಐಸಿಸಿ ಮುಖಂಡರಿಗೆ ಮನವಿ ಮಾಡಿರುತ್ತಾರೆ.

ದಾವಣಗೆರೆ ಜಿಲ್ಲೆಯ ಎಲ್ಲ ವಿಧಾನ ಸಭಾ ಕ್ಷೇತ್ರಗಳಲ್ಲಿ ಅಲ್ಪಸಂಖ್ಯಾತರ ಮತಗಳು ಶೇಕಡಾ 40ರಷ್ಟಿದ್ದು, ಪರಿಶಿಷ್ಟ ಜಾತಿ ಮತ್ತು ಪಂಗಡಗಳ’ ಸುಮಾರು ಶೇಕಡಾ 20ರಷ್ಟು ಮತಗಳು ಮತ್ತು ಇತರೆ ಹಿಂದುಳಿದ ವರ್ಗಗಳ ಶೇಕಡಾ 15ರಷ್ಟು ಮತಗಳಿಂದ ಕಾಂಗ್ರೆಸಿಗೆ 6 ಶಾಸಕರು ಚುನಾಯಿತರಾದರು. ಹಿರಿಯ ನಾಯಕರಾದ ಶಿವಶಂಕರಪ್ಪನವರು ಎಲ್ಲ ವರ್ಗಗಳ ಹಿತಾಸಕ್ತಿಗಳ ಕುರಿತು ಮತ್ತು ಎಲ್ಲರಿಗೂ ಸಾಮಾಜಿಕ ನ್ಯಾಯ ಒದಗಿಸುವ ಕುರಿತು ಮಾತನಾಡಬೇಕಿತ್ತು ಎಂದು ನಾನು ಭಾವಿಸುತ್ತೇನೆ ಎಂದು ಪ್ರಕಾಶ್ ರಾಠೋಡ್ ಹೇಳಿದ್ದಾರೆ.

ಈ ಬಗ್ಗೆ ವಿಸ್ತಾರ ನ್ಯೂಸ್‌ಗೆ ಪ್ರತಿಕ್ರಿಯೆ ನೀಡಿರುವ ಪ್ರಕಾಶ್ ರಾಠೋಡ್, ಇಂದು ಪತ್ರ ಬರೆದಿದ್ದೇನೆ. ಲಿಂಗಾಯತ ಸಮುದಾಯಕ್ಕೆ 20% ಕೊಟ್ಟಿದ್ದಾರೆ. ಏಳು ಸಚಿವ ಸ್ಥಾನ ಕೊಟ್ಟಿದ್ದಾರೆ ಅಂತಲ್ಲ. ಒಂದು ಸರ್ವೇಯಲ್ಲಿ ಉಲ್ಲೇಖ ಆಗಿದೆ ಅಂತ ನಾನು ಹೇಳಿದ್ದೇನೆ. ಈ ಬಾರಿ ಲಿಂಗಾಯತ ಸಮುದಾಯ ಕಾಂಗ್ರೆಸ್ ಪಕ್ಷಕ್ಕೆ ಆಶೀರ್ವಾದ ಮಾಡಿದೆ. ಮುಸ್ಲಿಂ ಸಮುದಾಯದ ಕೂಡ ಡೊಡ್ಡ ಪ್ರಮಾಣದಲ್ಲಿ ಆಶೀರ್ವಾದ ಮಾಡಿದೆ. ಎಲ್ಲ ಸಮುದಾಯದವರು ಆಶೀರ್ವಾದ ಮಾಡಿದ್ದಾರೆ. ಎಲ್ಲರ ಆಶೀರ್ವಾದದಿಂದ ಸರ್ಕಾರ ಮಾಡಲು ಸಹಾಯ ಆಗಿದೆ. ಒಂದು ಸಮುದಾಯ ಸಂಪೂರ್ಣ ಮತ ಹಾಕಿದರೆ ಸರ್ಕಾರ ಬರಲ್ಲ. ಎಲ್ಲ ಸಮುದಾಯದ ಮತದಿಂದ ಸರ್ಕಾರ ಸಾಧ್ಯ. ಲಿಂಗಾಯತರ ಜತೆಗೆ ಇತರೆ ಸಮುದಾಯಗಳಿಗೂ ಅವಕಾಶ ಸಿಗಬೇಕು ಅಂತ ನನ್ನ ಅಭಿಪ್ರಾಯ ಎಂದು ಹೇಳಿದ್ದಾರೆ.

ಇದನ್ನೂ ಓದಿ: OBC Reservation : ಈಗ ಒಪ್ಪಿರುವ ವರದಿಯಿಂದ ಲಿಂಗಾಯತ, ಒಕ್ಕಲಿಗರಿಗೆ ಹೆಚ್ಚು ಲಾಭ: ನ್ಯಾ. ಭಕ್ತವತ್ಸಲ

ಲೋಕಸಭೆಗೆ ಸಿದ್ಧರಾಗೋಣ

ಕಾಂಗ್ರೆಸ್ ಪಕ್ಷ 135 ಕ್ಷೇತ್ರದಲ್ಲಿ ಗೆಲುವು ಪಡೆಯಿತು. ದೇಶಕ್ಕೆ ಒಂದು ಸಂದೇಶ ಹೋಗಿದೆ. ಸಿದ್ದರಾಮಯ್ಯ ಸಿಎಂ‌ ಆಗಿ, ಶಿವಕುಮಾರ್ ಡಿಸಿಎಂ ಆಗಿ ಅನೇಕ ಯೋಜನೆ ನೀಡುತ್ತಿದ್ದಾರೆ. ಇಂತಹ ಒಳ್ಳೆಯ ಸನ್ನಿವೇಶ ಸೃಷ್ಟಿಯಾಗಿದೆ. ಈ ಸಂದರ್ಭದಲ್ಲಿ ಲೋಕಸಭಾ ಚುನಾವಣೆ ಎದುರಾಗುತ್ತಿದೆ. ಎಲ್ಲರೂ ಒಗ್ಗಟ್ಟಿನ ಸಂದೇಶ ನೀಡಬೇಕು. 28 ಲೋಕಸಭಾ ಕ್ಷೇತ್ರ ಗೆಲ್ಲುವ ಸಂದೇಶ ನೀಡಬೇಕು. ಅದಕ್ಕಾಗಿ ನಾವು ಸಿದ್ಧರಾಗಬೇಕು. ಅದು ಬಿಟ್ಟು ಬೇರೆ ರೀತಿಯ ಸಂದೇಶ ಹೋಗಬಾರದು. ನಾನು ಸಣ್ಣ ಸಮುದಾಯದಿಂದ ಬಂದವನು. ನನ್ನಂತವನಿಗೆ ಅವಕಾಶ ಸಿಕ್ಕಿದೆ. ಶಾಮನೂರು ಶಿವಶಂಕರಪ್ಪ ಅವರು ಹಿರಿಯರು. ಅವರು ಎಲ್ಲರನ್ನೂ ಒಗ್ಗಟ್ಟಾಗಿ ಕರೆದುಕೊಂಡು ಹೋಗಬೇಕು. ಅವರ ಮಾರ್ಗದರ್ಶನ ನಮ್ಮೆಲ್ಲರಿಗೆ, ಪಕ್ಷಕ್ಕೆ ಬೇಕಿದೆ ಎಂದು ಪ್ರಕಾಶ್ ರಾಠೋಡ್ ಹೇಳಿದ್ದಾರೆ.

Exit mobile version