Site icon Vistara News

Lingayat CM: ಲಿಂಗಾಯತ ಲಡಾಯಿ; ವಿನಯ ಕುಲಕರ್ಣಿ ಶಾಮನೂರು ಪರ ; ಪುತ್ರ ಮಲ್ಲಿಕಾರ್ಜುನ್‌ ಅಪಸ್ವರ

Shamanuru Shivashankarappa Vinay Kulkarni Mallikarjun

ಬೆಂಗಳೂರು: ಹಿರಿಯ ನಾಯಕ ಶಾಮನೂರು ಶಿವಶಂಕರಪ್ಪ (Shamanuru Shivashankarappa) ಅವರು ಹಚ್ಚಿದ ಲಿಂಗಾಯತ ಅವಗಣನೆ (Lingayat CM) ಬೆಂಕಿ ಇನ್ನೂ ಸಿಡಿಯುತ್ತಲೇ ಇದೆ. ಕೆಲವು ನಾಯಕರು ಲಿಂಗಾಯತ ಅಧಿಕಾರಿಗಳ ಅವಗಣನೆ (Neglecting Lingayat officials) ಹೇಳಿಕೆ ಸರಿ ಎನ್ನುತ್ತಿದ್ದರೆ ಇನ್ನು ಕೆಲವರು ತಪ್ಪು ಮಾಹಿತಿಯಿಂದ ಶಾಮನೂರು ಮಾತನಾಡಿದ್ದಾರೆ ಅನ್ನುತ್ತಿದ್ದಾರೆ. ಲಿಂಗಾಯತ ಸಮುದಾಯದ ಹಿರಿಯ ನಾಯಕರಲ್ಲಿ ಒಬ್ಬರಾದ ವಿನಯ ಕುಲಕರ್ಣಿ ಅವರು ಶಾಮನೂರು ಪರವಾಗಿ ಮಾತನಾಡಿದ್ದಾರೆ. ಅಚ್ಚರಿ ಎಂಬಂತೆ ಶಾಮನೂರು ಅವರ ಪುತ್ರ ಮಲ್ಲಿಕಾರ್ಜುನ್‌ ಅವರು ಅಧಿಕಾರಿಗಳಿಗೆ ಸಮಸ್ಯೆ ಆಗಿಲ್ಲ ಅಂದಿದ್ದಾರೆ.

ಶಾಮನೂರು ಹೇಳಿಕೆ ಸತ್ಯವೇ ಇರಬಹುದು.. ಆದರೆ..: ವಿನಯ ಕುಲಕರ್ಣಿ

ಲಿಂಗಾಯತ ಸಮಾಜದ ಹಿರಿಯ ನಾಯಕರಾದ ವಿನಯ ಕುಲಕರ್ಣಿ ಅವರು, ಶಾಮನೂರು ಶಿವಶಂಕರಪ್ಪ ಅವರು ಹೇಳಿದ ಮಾತು ಸರಿ ಇರಬಹುದು. ಅವರು ಹೇಳಿದ್ದಾರೆ ಎಂದ ಮೇಲೆ ಸತ್ಯವಾಗಿಯೇ ಇರುತ್ತದೆ ಎಂದಿದ್ದಾರೆ. ಆದರೆ, ಅವರು ಅದನ್ನು ಮಾಧ್ಯಮಗಳ ಮೂಲಕ ಬಹಿರಂಗವಾಗಿ ಹೇಳುವುದು ಬೇಕಿರಲಿಲ್ಲ ಎಂದಿದ್ದಾರೆ.

ʻʻಇದನ್ನೆಲ್ಲ ಸಿಎಂಗೆ ಹೇಳಿ ಇದನ್ನು ಸರಿಪಡಿಸುವ ತಾಕತ್ತು ನಮಗೆಲ್ಲ ಇದೆ. ನನ್ನ ಬಳಿಯೂ ಎರಡು ಮೂರು ಅಧಿಕಾರಿಗಳು ಬಂದಿದ್ದರು. ನಾನೇ ಸಿಎಂ ಬಳಿ ಹೇಳಿ ಕೆಲಸ ಮಾಡಿಸಿಕೊಟ್ಟೆʼʼ ಎಂದು ವಿನಯ ಕುಲಕರ್ಣಿ ಹೇಳಿದರು.

Shamanuru Shivashankarappa Siddaramaiah Lingayat CM

ʻʻಸಿಎಂ ನಮ್ಮ ಹೊರಗಿನವರಲ್ಲ, ನಮ್ಮದೇ ಕುಟುಂಬ. ಒಂದು ಸಮಾಜದಿಂದ ಯಾರೂ ಸಿಎಂ ಆಗುವುದಿಲ್ಲ. ಒಂದು ಸಮಾಜದಿಂದ ಯಾರೂ ಶಾಸಕರಾಗುವುದಿಲ್ಲ. ಎಲ್ಲರೂ ಸೇರಿ ಗೆಲ್ಲಿಸಿರುತ್ತಾರೆ. ಅಧಿಕಾರಿಗಳು ಅಥವಾ ರಾಜಕಾರಣಿಗಳಿಗೆ ಸಮಸ್ಯೆ ಆಗುತ್ತಿದ್ದರೆ ಅಂತವರು ನಮ್ಮ ಗಮನಕ್ಕೆ ತರಲಿ. ಸಿಎಂ ಬಳಿ ಮಾತಾಡೋದಕ್ಕೆ ನಮಗೇನೂ ಸಮಸ್ಯೆ ಇಲ್ಲ. ನಮ್ಮ ನಮ್ಮ ಒಳಗಡೆ ಇದೆಲ್ಲ ಸರಿಪಡಿಸಿಕೊಳ್ಳುತ್ತೇವೆʼʼ ಎಂದು ವಿನಯ ಕುಲಕರ್ಣಿ ಹೇಳಿದರು.

ʻʻಲಿಂಗಾಯತರು ಕಾಂಗ್ರೆಸ್ ಗೆ ಓಟು ಹಾಕಿಲ್ಲ ಎನ್ನೋರು ಮೂರ್ಖರು. ಮಾತಾಡಿ ಮಾತಾಡಿಯೇ ಇಷ್ಟು ವರ್ಷ ಲಿಂಗಾಯತರು ಕಾಂಗ್ರೆಸ್ ನಿಂದ ದೂರವಾಗಿದ್ದರುʼʼ ಎಂದು ಕೆಲವರ ಮಾತಿಗೆ ಆಕ್ರೋಶ ವ್ಯಕ್ತಪಡಿಸಿದರು.

ಲಿಂಗಾಯತ ಅಧಿಕಾರಿಗಳಿಗೆ ಸಮಸ್ಯೆ ಆಗಿಲ್ಲ ಎಂದ ಎಸ್‌ಎಸ್‌ ಮಲ್ಲಿಕಾರ್ಜುನ್‌

ಈ ನಡುವೆ, ಶಾಮನೂರು ಶಿವಶಂಕರಪ್ಪ ಅವರ ಪುತ್ರ ಎಸ್‌.ಎಸ್‌. ಮಲ್ಲಿಕಾರ್ಜುನ ಅವರು ಲಿಂಗಾಯತ ಅಧಿಕಾರಿಗಳಿಗೆ ಸಮಸ್ಯೆ ಆಗಿಲ್ಲ ಎಂದರು.

ʻʻಶಾಮನೂರು ಶಿವಶಂಕರಪ್ಪ ಅವರು ಹೇಳಿದ್ದನ್ನು ಅವರಿಗೇ ಕೇಳಿ. ಸಿಎಂ ಮಾತಾನಾಡ್ತೀನಿ ಅಂದಿದ್ದಾರೆ. ಅವರವರೇ ಮಾತಾಡ್ತಾರೆ. ಅವರ ವೈಯಕ್ತಿಕ ವಿಚಾರ ಏನೂ ಅಂತ ಗೊತ್ತಿಲ್ಲ. ತಂದೆಯವರ ಜೊತೆಗೆ ನಾನು ಮಾತನಾಡಿಲ್ಲʼʼ ಎಂದರು. ʻʻಇದು ಮುಗಿದು ಹೋದ ಅಧ್ಯಾಯ, ಮುಗಿದು ಹೋದ ಕಥೆ. ಸಿಎಂ – ಶಾಮನೂರು ಮಾತಾಡಿಕೊಳ್ತಾರೆʼʼ ಎಂದು ಹೇಳಿದರು.

ಶಾಮನೂರಿಗೆ ಮಾಹಿತಿ ಕೊರತೆ ಎಂದ ಗುಂಡೂರಾವ್‌

ʻʻಶಾಮನೂರು ಶಿವಶಂಕರಪ್ಪ ಪಕ್ಷರ ಹಿರಿಯ ನಾಯಕರು. ಅವರಿಗೆ ಮಾಹಿತಿ ಕೊರತೆ ಇದೆ. ನಮ್ಮ ಸರ್ಕಾರ ಎಲ್ಲರನ್ನೂ ಒಟ್ಟಿಗೆ ತೆಗೆದುಕೊಂಡು ಹೋಗುತ್ತಿದೆ. ಯಾವುದೇ ಒಂದು ಜಾತಿಗೆ ಸೀಮಿತವಾಗದೆ ಒಟ್ಟಿಗೆ ಹೋಗುತ್ತಿದ್ದೇವೆ. ಪಕ್ಷ ಹಾಗೂ ಸರ್ಕಾರದ ಹಂತದಲ್ಲಿ ಎಲ್ಲಾ ಸಮುದಾಯವರಿಗೂ ಆದ್ಯತೆ ನೀಡಲಾಗಿದೆ. ಆದರೆ ಅವರು ಯಾವ ದೃಷ್ಟಿಯಿಂದ ಹೇಳಿದ್ದಾರೋ ಗೊತ್ತಿಲ್ಲʼʼ ಎಂದು ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ಹೇಳಿದರು.

ನ್ಯೂನತೆ ಇದ್ದರೆ ಸರಿ ಮಾಡ್ತೇವೆ ಎಂದ ಈಶ್ವರ ಖಂಡ್ರೆ

ʻʻಶಾಮನೂರು ನಮ್ಮ ಸಮಾಜದ ಉತ್ಕೃಷ್ಟ ನಾಯಕರು. ಅವರೊಂದಿಗೆ ಸಿಎಂ ಮಾತನಾಡ್ತಾರೆ. ನಾನೂ ಕೂಡ ಶಾಮನೂರು ಶಿವಶಂಕರಪ್ಪ ಜೊತೆಗೆ ಮಾತನಾಡ್ತೇನೆ. ನಮ್ಮ ಸರ್ಕಾರ ಎಲ್ಲ ಸಮುದಾಯಗಳನ್ನು ಜೊತೆಗೆ ತೆಗೆದುಕೊಂಡು ಹೋಗುತ್ತೇನೆ. ಏನಾದರೂ ನ್ಯೂನತೆ ಇದ್ದರೆ ಸರ್ಕಾರ ಅದನ್ನು ಸರಿಪಡಿಸುತ್ತದೆʼʼ ಎಂದು ಸಚಿವರೂ ಆಗಿರುವ ವೀರಶೈವ ಮಹಾಸಭಾ ಪ್ರಧಾನ ಕಾರ್ಯದರ್ಶಿ ಈಶ್ವರ್ ಖಂಡ್ರೆ ಹೇಳಿದ್ದಾರೆ.

ʻʻನಾನೊಬ್ಬ ಸಚಿವ, ನನ್ನ ಎಲ್ಲ ಸಮುದಾಯದ ಅಧಿಕಾರಿಗಳೂ ಭೇಟಿ ಆಗ್ತಾರೆ. ಈ ವಿಚಾರ, ಆ ವಿಚಾರ ಅಂತೇನೂ ಇರಲ್ಲ. ಸಚಿವನಾಗಿ ಎಲ್ಲರನ್ನೂ ಒಟ್ಟಿಗೆ ತೆಗೆದುಕೊಂಡು ಹೋಗ್ತೇವೆ. ನಾನು ಸಚಿವನೂ ಹೌದು, ವೀರಶೈವ ಮಹಾಸಭಾ ಪ್ರಧಾನ ಕಾರ್ಯದರ್ಶಿಯೂ ಹೌದು. ಸಮನ್ವಯ ಸಾಧಿಸುವ ಜವಾಬ್ದಾರಿ ಇದೆ. ಅದನ್ನು ಮಾಡ್ತಾ ಹೋಗುತ್ತೇನೆ. ಎರಡೂ ಜವಾಬ್ದಾರಿ ನಿಭಾಯಿಸುತ್ತೇನೆʼʼ ಎಂದರು ಈಶ್ವರ ಖಂಡ್ರೆ.

ನನಗೆ ಅದು ಸರಿ ಇದೆ ಅನಿಸ್ತಿಲ್ಲ ಎಂದ ವಿಜಯಾನಂದ ಕಾಶಪ್ಪನವರ್‌

ʻʻಶಾಮನೂರು ಶಿವಶಂಕರಪ್ಪ ಅವರು ಹಿರಿಯ ನಾಯಕರು. ಅವರ ಅನಿಸಿಕೆಯನ್ನು ಹೇಳಿರಬಹುದು. ಆದರೆ ಆ ರೀತಿ ಆಗಿದೆ ಅಂತಾ ಅನ್ನಿಸ್ತಿಲ್ಲ. ಎಲ್ಲಿ‌ ಏನಾಗಿದೆ ಅನ್ನೋದನ್ನು ಅವರೇ ಹೇಳಬೇಕುʼʼ ಎಂದು ಶಾಸಕ ವಿಜಯಾನಂದ ಕಾಶಪ್ಪನವರ್‌ ಹೇಳಿದರು.

ʻʻರಾಜ್ಯದಲ್ಲಿ ನಮ್ಮದೇ ಸರ್ಕಾರ ಇದೆ. ಅವರು ನೇರವಾಗಿ ಸಿಎಂ, ಡಿಸಿಎಂ ಭೇಟಿ ಮಾಡಿ ಹೇಳಬಹುದಾಗಿತ್ತು. ಆದರೆ, ಹೀಗೆ ಬಹಿರಂಗವಾಗಿ ಹೇಳಿರೋದು ಯಾಕೋ ಗೊತ್ತಿಲ್ಲʼʼ ಎಂದರು.

ಇದನ್ನೂ ಓದಿ: Lingayat CM : ರಾಜ್ಯದಲ್ಲಿ 3 ಲಿಂಗಾಯತ ಡಿಸಿ, 7 ಎಸ್ಪಿ ಇದಾರೆ; ಶಾಮನೂರು ಹೇಳಿಕೆ 100% ತಪ್ಪು ಎಂದ ರಾಯರೆಡ್ಡಿ

ಜಾತಿ ಆಧಾರದಲ್ಲಿ ಅಧಿಕಾರಿಗಳ ನೇಮಕ ಕಷ್ಟ ಎಂದ ತಂಗಡಗಿ

ʻʻಮಂತ್ರಿಗಳ ಸ್ಥಾನ, ಸೀಟು ಹಂಚಿಕೆ ಜಾತಿ ಮೇಲೆ ಮಾಡಬಹುದು. ಆದರೆ ಅಧಿಕಾರಿಗಳನ್ನು ಜಾತಿ ಆಧಾರದಲ್ಲಿ ನೇಮಕ ಮಾಡುವುದಿಲ್ಲ. ಅಧಿಕಾರಿಗಳನ್ನು ಮೆರಿಟ್ ಆಧಾರದಲ್ಲಿ ಪೋಸ್ಟಿಂಗ್ ಮಾಡಲಾಗುತ್ತದೆ. ಶಾಮನೂರು ಹಿರಿಯರು. ಅವರು ಹಾಗೆ ಹೇಳಬಾರದಿತ್ತು. ಸಿಎಂ, ಡಿಸಿಎಂ ಅವರ ಜೊತೆ ಮಾತಾಡ್ತಾರೆʼʼ ಎಂದು ಸಚಿವ ಶಿವರಾಜ್ ತಂಗಡಗಿ ಹೇಳಿದ್ದಾರೆ.

Exit mobile version